ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karnataka drought: ಬರ ಹಿನ್ನೆಲೆ ರೈತರ ಸಾಲ ವಸೂಲಿ ಮುಂದೂಡಿಕೆ; ಬ್ಯಾಂಕ್‌ ನೋಟಿಸ್‌ಗೆ ಆತಂಕಪಡಬೇಕಿಲ್ಲ ಎಂದ ಡಿಸಿಎಂ

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರ ಸಾಲ ವಸೂಲಿ ವಿಚಾರದಲ್ಲಿಯೂ ಸರ್ಕಾರ ಕ್ರಮ ಕೈಗೊಂಡಿದೆ. ಸಾಲ ವಸೂಲಿಯನ್ನು ಮುಂದೂಡುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದ್ದು, ಸಾಲಗಳನ್ನು ಮರುಹೊಂದಿಕೆ ಮತ್ತು ಮರುಹಣಕಾಸು ಮಾಡುವ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರು ತಿಳಿಸಿದ್ದಾರೆ.

ಬರ ಪರಿಸ್ಥಿತಿಯ ಹಿನ್ನೆಲೆ ರೈತರ ಸಾಲ ವಸೂಲಿ ಮುಂದೂಡಿಕೆ: ಡಿಸಿಎಂ

-

Prabhakara R
Prabhakara R Oct 7, 2026 4:37 PM

ಬಳ್ಳಾರಿ: ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಸುಮಾರು 75 ವರ್ಷಗಳ ಬಳಿಕ ಕರ್ನಾಟಕ ಇಂತಹ ಭೀಕರ ಬರ (Karnataka drought) ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರಾಜ್ಯದ ಶೇ.90ರಷ್ಟು ಬೆಳೆ ಹಾನಿಯಾಗಿದೆ. ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರನ್ನು ಉಳಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಅವರ ನೆರವಿಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಬಳ್ಳಾರಿ ತಾಲೂಕಿನ ಬರಪೀಡಿತ ಹಲಕುಂದಿ ಗ್ರಾಮದಲ್ಲಿ ತೊಗರಿ ಬಿತ್ತನೆ ಮಾಡಿರುವ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರ ಸಾಲ ವಸೂಲಿ ವಿಚಾರದಲ್ಲಿಯೂ ಸರ್ಕಾರ ಕ್ರಮ ಕೈಗೊಂಡಿದೆ. ಸಾಲ ವಸೂಲಿಯನ್ನು ಮುಂದೂಡುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದ್ದು, ಸಾಲಗಳನ್ನು ಮರುಹೊಂದಿಕೆ ಮತ್ತು ಮರುಹಣಕಾಸು ಮಾಡುವ ಕ್ರಮಕ್ಕೆ ಸೂಚಿಸಲಾಗಿದೆ.

ಬ್ಯಾಂಕ್‌ಗಳು ನೋಟಿಸ್ ನೀಡುತ್ತಿರುವ ಬಗ್ಗೆ ರೈತರು ಆತಂಕಪಡಬೇಕಿಲ್ಲ. ಸಾಲ ವಸೂಲಿಯನ್ನು ಮುಂದೂಡಲು ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೂ ಈ ಸಂಬಂಧ ಸೂಚನೆ ನೀಡಲಾಗುತ್ತಿದೆ ಎಂದು ಹೇಳಿದರು.

ಪ್ರಸ್ತುತ ರೈತರಿಗೆ ತಕ್ಷಣದ ಆರ್ಥಿಕ ನೆರವು ನೀಡುವುದು ಹಾಗೂ ಸಾಲ ವಸೂಲಿಯನ್ನು ಮುಂದೂಡುವುದು ಸೇರಿದಂತೆ ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿ ಇನ್ನಷ್ಟು ನೆರವು ನೀಡಲಾಗುವುದು.

ರೈತನನ್ನು ಉಳಿಸುವುದು ಮೊದಲ ಕೆಲಸ

ಯಾವುದೇ ದೊಡ್ಡ ಯೋಜನೆ ಅಥವಾ ಕಾರ್ಯಕ್ರಮ ಜಾರಿಗೆ ತಂದಾಗ ಹಣಕಾಸಿನ ಹೊರೆ ಸಹಜ. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಪ್ರತಿವರ್ಷ ಸುಮಾರು ₹52,000 ಕೋಟಿ ವೆಚ್ಚ ಮಾಡುತ್ತಿದ್ದರೂ ಅವುಗಳನ್ನು ನಿಲ್ಲಿಸಿಲ್ಲ. ಹಣಕಾಸಿನ ಲಭ್ಯತೆಯನ್ನು ನೋಡಿಕೊಂಡು ಯಾವ ಕೆಲಸವನ್ನು ಮೊದಲು ಮಾಡಬೇಕು, ಯಾವುದನ್ನು ನಂತರ ಮಾಡಬೇಕು ಎಂಬುದನ್ನು ಆದ್ಯತೆ ಮೇರೆಗೆ ನಿರ್ಧರಿಸುತ್ತೇವೆ. ಈಗ ನಮಗೆ ರೈತನೇ ಮೊದಲ ಆದ್ಯತೆ. ರಸ್ತೆ ಕಾಮಗಾರಿ ಸೇರಿದಂತೆ ಉಳಿದ ಕೆಲಸಗಳು ನಂತರವಾದರೂ ಆಗಬಹುದು. ರೈತನನ್ನು ಉಳಿಸುವುದು ಮೊದಲ ಕೆಲಸ.

ಸರ್ಕಾರದ ಕೆಲಸ ಎಲ್ಲಿಯೂ ನಿಂತಿಲ್ಲ. ಜಿಲ್ಲಾಡಳಿತ ತನ್ನ ಕೆಲಸ ಮಾಡುತ್ತಿದೆ ಹಾಗೂ ಸರ್ಕಾರ ಕೇಂದ್ರ ಮಟ್ಟದಿಂದ ಪರಿಸ್ಥಿತಿಯನ್ನು ಮಾನಿಟರ್ ಮಾಡುತ್ತಿದೆ. ಜಿಲ್ಲಾ ಉಸ್ತುವಾರಿ ವ್ಯವಸ್ಥೆಯಲ್ಲಿ ಒಂದೆರಡು ತಿಂಗಳು ಅಥವಾ ಕೆಲವು ತಿಂಗಳು ಅಂತರ ಉಂಟಾದರೂ ಆಡಳಿತದ ಕೆಲಸ ನಿಲ್ಲುವುದಿಲ್ಲ. ಅಗತ್ಯ ಕ್ರಮಗಳನ್ನು ಶೀಘ್ರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇನ್ನೂ 10ರಿಂದ 15 ತಾಲೂಕು ಬರಪೀಡಿತ ಪ್ರದೇಶಗಳ ಪಟ್ಟಿಗೆ

ರಾಜ್ಯದ ಸುಮಾರು 240 ತಾಲೂಕುಗಳ ಪೈಕಿ ಕರಾವಳಿ ಭಾಗದ ಕೆಲವೇ ತಾಲೂಕುಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ತಾಲೂಕುಗಳಲ್ಲಿಯೂ ಬರದ ಪರಿಣಾಮ ಗೋಚರಿಸುತ್ತಿದೆ. ಈಗಾಗಲೇ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಇನ್ನೂ 23 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್‌ ನಡೆಯುತ್ತಿದೆ. ಅವುಗಳಲ್ಲಿ ಸುಮಾರು 10ರಿಂದ 15 ತಾಲೂಕುಗಳು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರುವ ಸಾಧ್ಯತೆಯಿದೆ.

ರಾಜ್ಯದ ರೈತರು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಹಲವೆಡೆ ರೈತರು ಮೊದಲು ತೊಗರಿ ಬಿತ್ತಿದ್ದು, ಅದು ಮಳೆಯ ಕೊರತೆಯಿಂದ ಹಾನಿಗೊಳಗಾದ ಬಳಿಕ ಸ್ವಲ್ಪ ಮಳೆ ಬಂದಾಗ ಮತ್ತೆ ಜೋಳ ಸೇರಿದಂತೆ ಪರ್ಯಾಯ ಬೆಳೆ ಬಿತ್ತಿದ್ದಾರೆ. ಆದರೆ ಆ ಬೆಳೆಯೂ ಉಳಿದಿಲ್ಲ. ಪರಿಣಾಮ ರೈತನ ಕೈಗೆ ಯಾವುದೇ ಬೆಳೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದಲ್ಲಿ ಶೇ.90ರಷ್ಟು ಬೆಳೆ ಹಾನಿ

ಕರ್ನಾಟಕದಲ್ಲಿ ಸುಮಾರು ಶೇ.90ರಷ್ಟು ಬೆಳೆ ಹಾನಿಯಾಗಿದೆ. ಮಳೆಯಾಶ್ರಿತ ಪ್ರದೇಶಗಳಷ್ಟೇ ಅಲ್ಲದೆ ನೀರಾವರಿ ಪ್ರದೇಶಗಳಲ್ಲಿಯೂ ಸಂಕಷ್ಟವಿದೆ. ಮಹಾರಾಷ್ಟ್ರ ಭಾಗದಲ್ಲಿ ಮಳೆಯಾದ ಪರಿಣಾಮ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಗೆ ಸ್ವಲ್ಪ ನೀರು ಬಂದಿದೆ. ಅದೇ ರೀತಿ ಕೆಆರ್‌ಎಸ್, ಹಾರಂಗಿ ಹಾಗೂ ಕಬಿನಿ ಭಾಗಗಳಲ್ಲಿಯೂ ಒಂದಿಷ್ಟು ಮಳೆಯಾಗಿದೆ. ಲಭ್ಯವಿದ್ದ ನೀರಿನ ಒಂದು ಭಾಗವನ್ನು ತಮಿಳುನಾಡಿಗೆ ಬಿಡಬೇಕಾದ ಪರಿಸ್ಥಿತಿಯೂ ಎದುರಾಗಿದೆ.

ಬಳ್ಳಾರಿ, ವಿಜಯನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬರದ ಪರಿಣಾಮ ಹೆಚ್ಚು ತೀವ್ರವಾಗಿದೆ. ಕೇಂದ್ರ ಸರ್ಕಾರದ ತಂಡ ರಾಜ್ಯಕ್ಕೆ ಭೇಟಿ ನೀಡಿದಾಗಲೂ ಈ ಭಾಗದ ಗಂಭೀರ ಪರಿಸ್ಥಿತಿಯನ್ನು ಪರಿಶೀಲಿಸಿದೆ.

ಬರದಿಂದ ಬೆಳೆ ಮಾತ್ರವಲ್ಲದೆ ಕುಡಿಯುವ ನೀರಿನ ಸಮಸ್ಯೆಯೂ ತೀವ್ರವಾಗುತ್ತಿದೆ. ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಕುಡಿಯುವ ನೀರು ಸೇರಿದಂತೆ ತುರ್ತು ಬರ ಪರಿಹಾರ ಕಾಮಗಾರಿಗಳಿಗಾಗಿ ಹಣ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಲಭ್ಯವಿರುವ ಅನುದಾನವನ್ನು ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಂಡು ರೈತರು ಮತ್ತು ಸಾರ್ವಜನಿಕರ ನೆರವಿಗೆ ಬರಬೇಕೆಂದು ಸೂಚಿಸಲಾಗಿದೆ. ಸರ್ಕಾರ ರೈತರ ಹಾಗೂ ಜನರ ನೆರವಿಗೆ ಬರಬೇಕು. ನಮಗೆ ಎಷ್ಟು ಸಾಧ್ಯವೋ ಅಷ್ಟು ನೆರವು ನೀಡಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.

ಕೇಂದ್ರದ ಪಾಲು ಇನ್ನೂ ಬಂದಿಲ್ಲ; ಮೊದಲ ಕಂತಿನ ಪರಿಹಾರ ಬಿಡುಗಡೆಗೆ ಕ್ರಮ

ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಒಂದು ಹೆಕ್ಟೇರ್‌ಗೆ ₹8,500 ಪರಿಹಾರ ನೀಡುವ ವ್ಯವಸ್ಥೆ ಇದೆ. ಆದರೆ ಕೇಂದ್ರದಿಂದ ಇದುವರೆಗೆ ಯಾವುದೇ ಹಣ ಬಿಡುಗಡೆಯಾಗಿಲ್ಲ. ಆದರೂ ಕೇಂದ್ರದ ಹಣಕ್ಕಾಗಿ ಕಾಯದೆ ರಾಜ್ಯ ಸರ್ಕಾರ ತನ್ನ ಪಾಲಿನಿಂದ ರೈತರಿಗೆ ಮೊದಲ ಕಂತಾಗಿ ₹2,500 ನೀಡಲು ಕ್ರಮ ಕೈಗೊಂಡಿದೆ. ಈ ಕುರಿತು ಸರ್ಕಾರದ ಆದೇಶ ಈಗಾಗಲೇ ಹೊರಬಂದಿದ್ದು, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣ ಹಣ ಬಿಡುಗಡೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ರೈತರಿಗೆ ಇನ್ನಷ್ಟು ನೆರವು ನೀಡಲಾಗುವುದು ಎಂದು ಡಿಸಿಎಂ ತಿಳಿಸಿದರು.

ಕೇಂದ್ರದಿಂದ ಒಂದು ಪೈಸೆಯೂ ಬಂದಿಲ್ಲ ಎಂದು ಅವರನ್ನು ದೂಷಿಸುತ್ತಾ ಕುಳಿತುಕೊಳ್ಳುವುದಿಲ್ಲ. ನಮ್ಮಿಂದ ಸಾಧ್ಯವಾದ ನೆರವನ್ನು ನಾವು ನೀಡುತ್ತೇವೆ. ರೈತನನ್ನು ಸಂಕಷ್ಟದಲ್ಲಿ ಕೈಬಿಡುವುದಿಲ್ಲ.

ವಿದ್ಯುತ್ ಸಬ್ಸಿಡಿ ಮತ್ತು ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನವೂ ರೈತ ಕುಟುಂಬಗಳಿಗೆ ದೊರೆಯುತ್ತಿದೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳಿಂದ ಒಂದು ಕುಟುಂಬಕ್ಕೆ ಕನಿಷ್ಠ ₹60,000ರಿಂದ ₹70,000ವರೆಗೆ ಪ್ರಯೋಜನ ದೊರೆಯುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ರೈತನ ಬದುಕು ಉಳಿಯಬೇಕು. ಅದಕ್ಕೆ ಅಗತ್ಯವಿರುವ ನೆರವು ನೀಡಲಾಗುವುದು.

ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಎರಡು ಮೆಮೊರಾಂಡಮ್‌ಗಳನ್ನು ಸಲ್ಲಿಸಿದೆ. ಅವುಗಳಲ್ಲಿ 177 ತಾಲೂಕುಗಳಿಗೆ ಸಂಬಂಧಿಸಿದಂತೆ ಒಟ್ಟು ಸುಮಾರು ₹46,000 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಆದರೆ ನಷ್ಟದ ಸಂಪೂರ್ಣ ಮೊತ್ತವನ್ನು ಕೇಂದ್ರ ಸರ್ಕಾರದಿಂದ ಪರಿಹಾರವಾಗಿ ಪಡೆಯಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎನ್‌ಡಿಆರ್‌ಎಫ್ (NDRF) ಮಾರ್ಗಸೂಚಿಗಳ ಪ್ರಕಾರ ಲೆಕ್ಕಾಚಾರ ಮಾಡಿ ಸುಮಾರು ₹11,000ರಿಂದ ₹11,500 ಕೋಟಿ ನೆರವು ಕೋರಲಾಗಿದೆ.

₹11,000 ಕೋಟಿ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ

ನಾವು ₹46,000 ಕೋಟಿ ನಷ್ಟವಾಗಿದೆ ಎಂದು ಹೇಳಿದ್ದೇವೆ. ಆದರೆ ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಎಷ್ಟು ಕೇಳಲು ಅವಕಾಶವಿದೆಯೋ ಅಷ್ಟನ್ನೇ ಕೇಳಬೇಕು. ಅದಕ್ಕಾಗಿ ಸುಮಾರು ₹11,000 ಕೋಟಿ ಪರಿಹಾರಕ್ಕೆ ಮನವಿ ಮಾಡಿದ್ದೇವೆ.

ಕೇಂದ್ರ ಸರ್ಕಾರ ಈಗಾಗಲೇ ತಂಡಗಳನ್ನು ರಾಜ್ಯಕ್ಕೆ ಕಳುಹಿಸಿದ್ದು, ಅವು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ತಂಡಗಳು ಕೇಂದ್ರಕ್ಕೆ ವರದಿ ಸಲ್ಲಿಸಿದ ಬಳಿಕ ಎಷ್ಟು ಅನುದಾನ ನೀಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಕೇಂದ್ರ ತಂಡಗಳು ಪ್ರತಿಯೊಂದು ಸ್ಥಳಕ್ಕೂ ತಂಡ ತೆರಳಬೇಕೆಂಬ ನಿಯಮವಿಲ್ಲ. ತಂಡಗಳು ಆಯ್ದ ಪ್ರದೇಶಗಳಲ್ಲಿ ಮಾದರಿ ಪರಿಶೀಲನೆ ನಡೆಸುತ್ತವೆ.

ಕೇಂದ್ರ ಸರ್ಕಾರದ ಬಳಿಯೂ ಉಪಗ್ರಹ ಆಧಾರಿತ ದತ್ತಾಂಶವಿದ್ದು, ಬೆಳೆ ಹಾಗೂ ಬರ ಪರಿಸ್ಥಿತಿಯ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ರಾಜ್ಯಕ್ಕೆ ಮೂರು ಕೇಂದ್ರ ತಂಡಗಳು ಬಂದಿದ್ದು, ಬರ ಹೆಚ್ಚು ಮತ್ತು ಕಡಿಮೆ ಇರುವ ಜಿಲ್ಲೆಗಳ ಕುರಿತು ರಾಜ್ಯ ಸರ್ಕಾರವೇ ಅವರಿಗೆ ಮಾಹಿತಿ ನೀಡಿದೆ.

Cabinet Meeting: ನೈಸರ್ಗಿಕ ವಿಕೋಪಗಳು, ತುರ್ತು ಪರಿಸ್ಥಿತಿ ಎದುರಿಸಲು ಸ್ವಯಂಸೇವಕರಿಗೆ ‘ಎಮರ್ಜೆನ್ಸಿ ರೆಸ್ಪಾಂಡರ್ ಕಿಟ್ʼ; ಸಂಪುಟ ಒಪ್ಪಿಗೆ

2023ರ ಬರ ಸಂದರ್ಭದಲ್ಲಿ ಸುಮಾರು ₹49,000 ಕೋಟಿ ನಷ್ಟವಾಗಿತ್ತು. ರಾಜ್ಯ ಸರ್ಕಾರ ಸುಮಾರು ₹18,000 ಕೋಟಿ ನೆರವು ಕೋರಿದ್ದರೂ ಆರಂಭದಲ್ಲಿ ಕೇಂದ್ರದಿಂದ ಯಾವುದೇ ಹಣ ಬಿಡುಗಡೆಯಾಗಿರಲಿಲ್ಲ. ಬಳಿಕ ರಾಜ್ಯ ಸರ್ಕಾರ ನ್ಯಾಯಾಲಯದ ಮೊರೆ ಹೋದ ನಂತರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಸುಮಾರು ₹3,500 ಕೋಟಿ ಬಿಡುಗಡೆಯಾಯಿತು ಎಂದು ಹೇಳಿದರು.