ಬೆಂಗಳೂರು, ಜೂ.26: ಎಸ್.ಟಿ. ಸೋಮಶೇಖರ್ ಅವರೇ, ನಿಮಗೆ ತಾಕತ್ತಿದ್ದರೆ ಮೊದಲು ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿ. ನಂತರ ನಮ್ಮ ಪಕ್ಷದ ಕುರಿತು ಮಾತನಾಡಿ ಎಂದು ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಎಸ್. ಹರೀಶ್ ಸವಾಲು ಹಾಕಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ಸೋಮಶೇಖರ್ ಅವರು 10 ಸಾರಿ ಗೆದ್ದರೂ ಸಚಿವರಾಗುತ್ತಿರಲಿಲ್ಲ. ಇವರು ನಮ್ಮ ಪಕ್ಷಕ್ಕೆ ಬಂದುದರಿಂದ ಸಚಿವರಾಗಿದ್ದಾರೆ ಎಂದು ತಿಳಿಸಿದ ಅವರು, ಕಾಂಗ್ರೆಸ್ಸಿನಲ್ಲಿ ಇನ್ನು 10 ಸಾರಿ ಗೆದ್ದರೂ ಸಚಿವರಾಗುವುದೂ ಇಲ್ಲ ಎಂದು ಹೇಳಿದರು.
ಕಳೆದ ಬಾರಿ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಪಕ್ಷ ಮತ್ತು ತಾಯಿ ಒಂದೇ ಎಂದವರು ತಾಯಿಗೂ ದ್ರೋಹ ಬಗೆದವರು ಎಂದು ಟೀಕಿಸಿದರು. ಈ ಬಾರಿ ಅವರಿಗೆ ಯಾಕೆ ಕೇಳಬೇಕಿತ್ತು? ಅವರು ಗೆದ್ದದ್ದು ಬಿಜೆಪಿ ಚಿಹ್ನೆಯಿಂದ ಎಂದು ಹೇಳಿದರು. ಅವರು ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಿದ್ದರೆ ತೋರಿಸಲಿ. ಕೆರೆ, ರಸ್ತೆ ಮತ್ತಿತರ ಎಲ್ಲ ಕೆಲಸಗಳನ್ನು ಶೋಭಾ ಕರಂದ್ಲಾಜೆ ಅವರು ಆ ಕ್ಷೇತ್ರದಿಂದ ಸಚಿವರಾಗಿದ್ದಾಗ ಮಾಡಿದ್ದಾರೆ. ಒಂದೇ ಒಂದು ಹೊಸ ಕೆಲಸ, ಅಭಿವೃದ್ಧಿ ತೋರಿಸಲು ಇವರಿಂದ ಆಗುವುದಿಲ್ಲ ಎಂದು ಕಿಡಿಕಾರಿದರು.
ನಮ್ಮ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಬರುತ್ತೇವೆ. ನೀವೂ ಧರ್ಮಸ್ಥಳಕ್ಕೆ ಬನ್ನಿ. ಅಲ್ಲಿ ಬಂದು ಪಕ್ಷ ದ್ರೋಹ ಮಾಡಿಲ್ಲವೆಂದು ಪ್ರಮಾಣ ಮಾಡಿ ಎಂದು ಸವಾಲು ಹಾಕಿದರು. ಬೇಜವಾಬ್ದಾರಿ ಮಾತು ಬಿಟ್ಟು ಕೆಲಸ ಮಾಡಿ ತೋರಿಸಿ ಎಂದು ಆಗ್ರಹಿಸಿದರು.
Bidadi township: ಬಿಡದಿಯಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಬಿಜೆಪಿ ಬಿಡಲ್ಲ; ಶೀಘ್ರದಲ್ಲೇ ಹೋರಾಟ ಎಂದ ವಿಜಯೇಂದ್ರ
ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಸಭಾ ಚುನಾವಣೆ, ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮತ ಹಾಕಿ ಇವರೇನು ಮಾತನಾಡುತ್ತಾರೆ ಎಂದು ಆಕ್ಷೇಪಿಸಿದರು. ನಮ್ಮ ಚಿಹ್ನೆಯಿಂದ ಗೆದ್ದು ಅಡ್ಡ ಮತದಾನ ಮಾಡಿದ್ದಾರೆ. ಅಡ್ಡ ಮತದಾನದಲ್ಲೂ ಇವರು ಕಾರಣವಿದ್ದಾರೆ ಎಂದು ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಎಸ್. ಹರೀಶ್ ಆರೋಪಿಸಿದರು.