ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ಬಿಜೆಪಿಗೆ (BJP) ಅಪಾರ ಪ್ರಮಾಣದಲ್ಲಿ ದೇಣಿಗೆ (donation) ಬಂದಿದ್ದು, ಕಾಂಗ್ರೆಸ್ (Congress) ದೇಣಿಗೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. 2024- 25ರ ಹಣಕಾಸು ವರ್ಷದಲ್ಲಿ (financial year) ಪಡೆದ ದೇಣಿಗೆಗಳ ವರದಿಯನ್ನು ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ (election commission) ಸಲ್ಲಿಸಿದ್ದು, ಇದರ ಅಂಕಿ ಅಂಶಗಳ ಆಧಾರದ ಮೇಲೆ ದೇಶದ ಅತೀ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿ 6,654.93 ಕೋಟಿ ರೂ. ದೇಣಿಗೆ ಪಡೆದಿರುವುದು ತಿಳಿದು ಬಂದಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 68 ರಷ್ಟು ಹೆಚ್ಚಳವಾಗಿರುವುದನ್ನು ತೋರಿಸಿದೆ.
ಸದಸ್ಯತ್ವದ ದೃಷ್ಟಿಯಿಂದ ದೇಶದ ಅತಿದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿ ಕಳೆದ ಹಣಕಾಸು ವರ್ಷದಲ್ಲಿ ಪಡೆದ ದೇಣಿಗೆಗಳ ವರದಿಯನ್ನು ಗಡುವಿಗೆ ಎರಡು ದಿನಗಳ ಮೊದಲೇ ಸಲ್ಲಿಸಿದೆ. ಈ ವರದಿಯಲ್ಲಿ 20,000 ರೂ. ಗಿಂತ ಹೆಚ್ಚಿನ ದೇಣಿಗೆಗಳನ್ನು ಪಡೆದಿರುವ ವಿವರಗಳನ್ನು ಮಾತ್ರ ಒದಗಿಸಲಾಗಿದೆ.
ಬೆಂಗಳೂರು, ಮುಂಬೈಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ನೇರ ವಿಮಾನ ಸೇವೆ ನಿಲ್ಲಿಸಲಿದೆ ಏರ್ ಇಂಡಿಯಾ; ಕಾರಣವೇನು?
2024ರ ಏಪ್ರಿಲ್ 1ರಿಂದ 2025ರ ಮಾರ್ಚ್ 30 ನಡುವೆ ಬಿಜೆಪಿಯು 6,654.93 ಕೋಟಿ ರೂ. ದೇಣಿಗೆ ಸ್ವೀಕರಿಸಿದೆ. ಈ ಅವಧಿಯಲ್ಲಿ ಅರುಣಾಚಲ ಪ್ರದೇಶ, ಸಿಕ್ಕಿಂ, ಆಂಧ್ರಪ್ರದೇಶ, ಒಡಿಶಾ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ದೆಹಲಿಗೆ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ನಡೆದಿತ್ತು. ಇದರ ಹಿಂದಿನ ಆರ್ಥಿಕ ವರ್ಷದಲ್ಲಿ ಬಿಜೆಪಿ 3,967 ಕೋಟಿ ರೂ. ದೇಣಿಗೆ ಪಡೆದಿದ್ದು, ಈ ಬಾರಿ ಶೇ. 68 ರಷ್ಟು ಹೆಚ್ಚು ದೇಣಿಗೆಯನ್ನು ಪಡೆದಿದೆ.
ಬಿಜೆಪಿಗೆ ಬಂದಿರುವ ದೇಣಿಗೆಗಳಲ್ಲಿ ಶೇ. 40 ರಷ್ಟು ದೇಣಿಗೆಗಳು ಚುನಾವಣಾ ಟ್ರಸ್ಟ್‌ಗಳಿಂದ ಬಂದಿವೆ. ಕಂಪೆನಿಗಳು ಮತ್ತು ವ್ಯಕ್ತಿಗಳಿಂದ ಪಡೆದ ಕೊಡುಗೆಗಳನ್ನು ರಾಜಕೀಯ ಪಕ್ಷಗಳಿಗೆ ವಿತರಿಸಲು ಕಂಪೆನಿಗಳು ಚುನಾವಣಾ ಟ್ರಸ್ಟ್ ಅನ್ನು ಸ್ಥಾಪಿಸುತ್ತವೆ. ಇವುಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲಾಗುತ್ತದೆ.
ಹಲವಾರು ಬಿಜೆಪಿ ನಾಯಕರು ವೈಯಕ್ತಿಕ ದೇಣಿಗೆಗಳನ್ನು ನೀಡಿದ್ದಾರೆ. ಇದರಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ 3 ಲಕ್ಷ ರೂ., ಅಸ್ಸಾಂ ಸಚಿವ ಪಿಜುಶ್ ಹಜಾರಿಕಾ 2.75 ಲಕ್ಷ ರೂ., ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ 1 ಲಕ್ಷ ರೂ., ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ 5 ಲಕ್ಷ ರೂ., ಇಂದೋರ್ ಮೇಯರ್ ಪುಷ್ಯಮಿತ್ರ ಭಾರ್ಗವ 1 ಲಕ್ಷ ರೂ., ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ ಅವರ ಪುತ್ರ ಆಕಾಶ್ ವಿಜಯವರ್ಗಿಯ 1 ಲಕ್ಷ ರೂ. ಸೇರಿದೆ.
ಇತರ ರಾಜಕೀಯ ಪಕ್ಷಗಳಲ್ಲಿ ಕಾಂಗ್ರೆಸ್ 522.13 ಕೋಟಿ ರೂ. ಗಳನ್ನು ಪಡೆದಿದ್ದು, 2023-24ರಲ್ಲಿ ಇದು 1,129 ಕೋಟಿ ರೂ. ದೇಣಿಗೆ ಪಡೆದಿತ್ತು. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಳೆದ ವರ್ಷ 618.8 ಕೋಟಿ ರೂ. ಪಡೆದಿದ್ದು, ಈ ಬಾರಿ 184.08 ಕೋಟಿ ರೂ. ಪಡೆದಿದೆ. ಇನ್ನು ಭಾರತ ರಾಷ್ಟ್ರ ಸಮಿತಿ ಕೇವಲ 15.09 ಕೋಟಿ ರೂ.ಗಳನ್ನು ಪಡೆದಿದ್ದು, ಹಿಂದಿನ ಸಾಲಿನಲ್ಲಿ ಇದು 580 ಕೋಟಿ ರೂ. ದೇಣಿಗೆ ಪಡೆದಿತ್ತು.
Shriram Finance: ಶ್ರೀರಾಮ್ ಫೈನಾನ್ಸ್‌ನಲ್ಲಿ 39,618 ಕೋಟಿ ಹೂಡಿಕೆ ಘೋಷಿಸಿದ ಜಪಾನ್ ಬ್ಯಾಂಕ್
ಆಮ್ ಆದ್ಮಿ ಪಕ್ಷ ಕಳೆದ ವರ್ಷ 22.1 ಕೋಟಿ ರೂ. ಪಡೆದಿದ್ದು, ಈ ವರ್ಷ 39.2 ಕೋಟಿ ರೂ. ಗಳನ್ನು ಸಂಗ್ರಹಿಸಿದೆ. ತೆಲುಗು ದೇಶಂ ಪಕ್ಷ 85.2 ಕೋಟಿ ರೂ.ಗಳನ್ನು ಪಡೆದಿದ್ದು, ಹಿಂದಿನ ಸಾಲಿನಲ್ಲಿ 274 ಕೋಟಿ ರೂ. ಪಡೆದಿತ್ತು. ಬಿಜು ಜನತಾದಳ (BJD) ಈ ವರ್ಷ ಕೇವಲ 60 ಕೋಟಿ ರೂ. ಗಳನ್ನು ಪಡೆದಿದ್ದು, ಕಳೆದ ಹಣಕಾಸು ವರ್ಷದಲ್ಲಿ 246 ಕೋಟಿ ರೂ. ಗಳಿಸಿತ್ತು.
ಚುನಾವಣಾ ಬಾಂಡ್ ಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬಳಿಕ ಮೊದಲ ಬಾರಿಗೆ ಚುನಾವಣಾ ಬಾಂಡ್ ಗಳಿಲ್ಲದೆ 2024- 25ರ ಹಣಕಾಸು ವರ್ಷದಲ್ಲಿ ದೇಣಿಗೆ ಪಡೆದ ವರದಿಯನ್ನು ಸಲ್ಲಿಸಿವೆ.