ಬೆಳಗಾವಿ, ಫೆ.13: ಸುಮಾರು 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪಕ್ಷವು (Congress Party) ಈ ದೇಶದಲ್ಲಿ ಬಡತನ ನಿರ್ಮೂಲನೆ ಮಾಡುವುದಾಗಿ ಹೇಳಿತ್ತು. ಆದರೆ ಲಜ್ಜೆಗೆಟ್ಟ ಕಾಂಗ್ರೆಸ್ ಪಕ್ಷವು ಈ ದೇಶದಲ್ಲಿ ಬಡವರನ್ನು ನಿರ್ಮೂಲನೆ ಮಾಡಿದರೇ ಹೊರತು ಬಡವರ ಬಡತನ ನಿರ್ಮೂಲನೆ ಮಾಡಲು ಇವರಿಂದ ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ಆರೋಪಿಸಿದ್ದಾರೆ.
ವಿಬಿ ಜಿ ರಾಮ್ ಜಿ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಅವರು, ಕಳೆದ ಎರಡೂವರೆ ವರ್ಷದಲ್ಲಿ ಒಂದಾದರೂ ಹೊಸ ಅಭಿವೃದ್ಧಿ ಯೋಜನೆ ನೀಡಲು ಇವರಿಂದ ಸಾಧ್ಯವಾಗಿದೆಯೇ ಎಂದು ಪ್ರಶ್ನಿಸಿದರು. ಗೃಹಲಕ್ಷ್ಮಿಯಡಿ 2 ಸಾವಿರ ಕೊಡುವುದಾಗಿ ಬೆನ್ನು ತಟ್ಟಿಕೊಳ್ಳುತ್ತಾರೆ. ಮತ್ತೊಂದೆಡೆ ಗೃಹಲಕ್ಷ್ಮಿ ಯೋಜನೆಗೆ ಹಣ ಕ್ರೋಡೀಕರಿಸಲು ಸಾಧ್ಯವಾಗದೇ ರಾಜ್ಯದಲ್ಲಿ ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ವ್ಯವಹಾರದ ಗುರಿ ನೀಡಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ 500 ಮೀಟರ್‌ಗೆ ಒಂದು ಮೆಡಿಕಲ್ ಶಾಪ್ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ; ಆದರೆ, 500 ಮೀಟರಿಗೆ ಒಂದು ಹೆಂಡದಂಗಡಿ ಸಿಗುತ್ತಿದೆ. ರಾಜ್ಯದ ದಿನಸಿ ಅಂಗಡಿಗಳಲ್ಲಿ ಹೆಂಡ ಮಾರಾಟ ಮಾಡುತ್ತಿರುವುದು ಈ ನಾಲಾಯಕ್ ಕಾಂಗ್ರೆಸ್ ಸರ್ಕಾರದ ಸಾಧನೆ. ಗೃಹಲಕ್ಷ್ಮಿಯಡಿ 2 ಸಾವಿರ ಕೊಟ್ಟು ಅದೇ ಮನೆಯಿಂದ ಹೆಂಡದ ಮೂಲಕ 10 ಸಾವಿರ ಕಿತ್ತುಕೊಳ್ಳುವುದೇ ಈ ಸರ್ಕಾರದ ಸಾಧನೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷಿಸುವುದು ಹೇಗೆ?
ಶಾಸಕರಿಗೆ ಅನುದಾನ ಕೊಡುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ; ಮುಖ್ಯಮಂತ್ರಿಗಳಿಗೆ ಇಲ್ಲ. ಮುಖ್ಯಮಂತ್ರಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಆಡಳಿತ ಪಕ್ಷದ ಶಾಸಕರಿಗೆ ವಿದೇಶ ಪ್ರವಾಸದ ಭಾಗ್ಯ ಕಲ್ಪಿಸಿದ್ದಾರೆ. ಇಂಥ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರದಿಂದ ಈ ರಾಜ್ಯದ ಅಭಿವೃದ್ಧಿ ಅಪೇಕ್ಷೆ ಪಡಲು ಸಾಧ್ಯವೇ ಇಲ್ಲ ಎಂದು ಟೀಕಿಸಿದರು.
ವಿಕಸಿತ ಭಾರತ ಜಿ ರಾಮ್ ಜಿ ಒಂದು ಹೊಸ ಕಾಯ್ದೆಯನ್ನು ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಹಿಂದೆ ಕೂಲಿಗಾಗಿ ಕಾಳು ಎಂದಿತ್ತು. ನಂತರ ಉದ್ಯೋಗ ಖಾತರಿ, ಮನ್‍ರೇಗಾ ಆಗಿತ್ತು. ಇವತ್ತು ಕೇಂದ್ರ ಸರ್ಕಾರ, ನರೇಂದ್ರ ಮೋದಿ ಅವರು ಅದಕ್ಕೆ ಒಂದು ಹೊಸ ರೂಪ ಕೊಟ್ಟು, ಸಾಕಷ್ಟು ಸುಧಾರಣೆಗಳನ್ನು ತಂದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಅದನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಸಹಜವಾಗಿ ಕಾಂಗ್ರೆಸ್ಸಿನವರು ಟೀಕೆ ಮಾಡುವುದಲ್ಲದೇ, ಜಾಹೀರಾತು ಕೊಡುತ್ತಿದ್ದಾರೆ. ಮೊನ್ನೆ ನಡೆದ ಅಧಿವೇಶನದಲ್ಲಿ ವಿಬಿ ಜಿ ರಾಮ್ ಜಿ ವಿರುದ್ಧ ನಿರ್ಣಯವನ್ನೂ ಅನುಮೋದಿಸಿದ್ದಾರೆ ಎಂದು ದೂರಿದರು.
ಎಲ್ಲ ಯೋಜನೆಗೂ ಕಲ್ಲು ಹಾಕುವ ಕೆಲಸ
ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರವು ಕಳೆದ ಎರಡೂವರೆ ವರ್ಷದಲ್ಲಿ ಕೇಂದ್ರ ಸರ್ಕಾರದ ಯಾವ ಯೋಜನೆಯನ್ನು ಸ್ವಾಗತ ಮಾಡಿದೆ ಎಂದು ಪ್ರಶ್ನಿಸಿದರು. ಪ್ರಧಾನಮಂತ್ರಿಗಳು ಈ ದೇಶವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಲು ಹೊಸ ಶಿಕ್ಷಣ ನೀತಿ ತಂದರು. ಅದಕ್ಕೂ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿಗಳು ಕಲ್ಲು ಹಾಕುವ ಕೆಲಸ ಮಾಡಿದರು. ಕಿಸಾನ್ ಸಮ್ಮಾನ್ ಯೋಜನೆಯಡಿ ಮೋದಿ ಅವರು ರೈತರ ಖಾತೆಗೆ 6 ಸಾವಿರ ರೂ. ಹಾಕುತ್ತಿದ್ದರು. ದೇಶದಲ್ಲಿ ಯಾವುದೇ ಮುಖ್ಯಮಂತ್ರಿಗಳು ಮಾಡದ ರೀತಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ 4 ಸಾವಿರ ಕೊಡುತ್ತಿದ್ದರು; ಅದಕ್ಕೂ ಕಲ್ಲು ಹಾಕಿದ್ದಾರೆ ಎಂದು ದೂರಿದರು.
ಬಸವರಾಜ ಬೊಮ್ಮಾಯಿ ಅವರು ಜಾರಿಗೊಳಿಸಿದ ರೈತ ವಿದ್ಯಾನಿಧಿಯನ್ನೂ ನಿಲ್ಲಿಸಿದ್ದಾರೆ. ಮೋದಿ ಅವರು ಒಂದು ದೇಶ ಒಂದು ಚುನಾವಣೆ ಅನುಷ್ಠಾನಕ್ಕೆ ಮುಂದಾದರೆ ಅದಕ್ಕೂ ವಿರೋಧದ ಮಾತುಗಳನ್ನು ಕಾಂಗ್ರೆಸ್ಸಿನವರು ಆಡಿದ್ದಾರೆ. ವಕ್ಫ್ ವಿಚಾರದಲ್ಲಿ ಈ ರಾಜ್ಯದಲ್ಲಿ ರೈತರ ಜಮೀನು ಹೊಡೆದುಕೊಳ್ಳುವ ವಕ್ಫ್ ಕಾಯ್ದೆಗೆ ತಿದ್ದುಪಡಿಯನ್ನು ನರೇಂದ್ರ ಮೋದಿ ಅವರು ತಂದರೆ, ಮೊಸರಲ್ಲಿ ಕಲ್ಲು ಹುಡುಕಿದ ಕಾಂಗ್ರೆಸ್ಸಿನವರು ಅದನ್ನೂ ವಿರೋಧಿಸಿದ್ದರು ಎಂದು ತಿಳಿಸಿದರು.
ರಾಜ್ಯ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ಖಂಡನೀಯ: ಬಸವರಾಜ ಬೊಮ್ಮಾಯಿ
ಕಾಂಗ್ರೆಸ್ಸೇತರ ಪಕ್ಷವೆಂಬ ಅಲರ್ಜಿ
ಈ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರದಲ್ಲಿ ಒಂದು ಕಾಂಗ್ರೆಸ್ಸೇತರ ಪಕ್ಷ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವುದೇ ಇವರ ಅಲರ್ಜಿಗೆ ಕಾರಣ. ಕಾಂಗ್ರೆಸ್ಸೇತರ ಪಕ್ಷ, ಬಿಜೆಪಿ ಕಳೆದ 3 ಚುನಾವಣೆಗಳಲ್ಲಿ ಸತತವಾಗಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರವು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಲ್ಲಿ ಒಬ್ಬ ಹಿಂದುಳಿದ ವರ್ಗದ ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದಾರೆ. ಭಾರತ ದೇಶವನ್ನು ಜಗತ್ತಿನ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಂತೆ ಮಾಡಿದ್ದನ್ನು ಸಹಿಸಿಕೊಳ್ಳಲು ಕಾಂಗ್ರೆಸ್ಸಿನ ಅಯೋಗ್ಯರಿಗೆ ಆಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಟೀಕಿಸಿದರು.