B.R.Patil: ಸಿಎಂ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದ ಬಿ.ಆರ್.ಪಾಟೀಲ್‌ಗೆ ಸಂಪುಟ ದರ್ಜೆ ಸ್ಥಾನಮಾನ
ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಅಳಂದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರನ್ನು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.

ಆದೇಶದ ಪ್ರತಿ ಮತ್ತು ಬಿ.ಆರ್.ಪಾಟೀಲ್.

ಬೆಂಗಳೂರು: ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಆಪ್ತ ಹಾಗೂ ಅಳಂದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ (B.R.Patil) ಅವರನ್ನು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಜತೆಗೆ ಬಿ.ಆರ್.ಪಾಟೀಲ್ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಬಗ್ಗೆ ಸೋಮವಾರ (ಫೆ. 17) ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರ್ದ ಅಧೀನ ಕಾರ್ಯದರ್ಶಿ ಮಲ್ಲಿನಾಥ ಅಧಿಸೂಚನೆ ಹೊರಡಿಸಿದ್ದಾರೆ.
ಆದೇಶದಲ್ಲಿ ಬಿ.ಆರ್.ಪಾಟೀಲ್ ಅವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಮತ್ತು ಇತರ ಎಲ್ಲ ಇತರ ಸೌಲಭ್ಯ ನೀಡಿರುವುದನ್ನು ಉಲ್ಲೇಖಿಸಲಾಗಿದೆ.
ಈ ಹಿಂದೆ ಬಿ.ಆರ್.ಪಾಟೀಲ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಅವರು ಇತ್ತೀಚೆಗಷ್ಟೇ ಆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಕ್ಷೇತ್ರಕ್ಕೆ ಅನುದಾನ ಸಿಗುತ್ತಿಲ್ಲ, ಅಧಿಕಾರಿಗಳು ಸರಿಯಾಗಿ ಮಾತು ಕೇಳುತ್ತಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದರು.
ರಾಜೀನಾಮೆ ನೀಡಿದ್ದು ಯಾಕೆ?
ರಾಜೀನಾಮೆ ಮೂಲಕ ಒತ್ತಡ ಹಾಕಿ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನಿರೀಕ್ಷಿಸುತ್ತಿರುವ ಸಾಧ್ಯತೆ ಇದೆ ಎನ್ನುವ ಚರ್ಚೆಗಳು ಆ ವೇಳೆ ನಡೆದಿದ್ದವು. ಇನ್ನು ಸಿಎಂ ಸಲಹೆಗಾರರಾಗಿ ಆ ಹುದ್ದೆಗೆ ಯಾವುದೇ ಮಹತ್ವ ಇಲ್ಲ. ಆ ಹುದ್ದೆಯಲ್ಲಿ ನಾಮಕಾವಸ್ಥೆಗಷ್ಟೇ. ಈ ಎಲ್ಲ ಕಾರಣಗಳಿಗೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು ಎನ್ನಲಾಗಿದೆ. ಇದೀಗ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ.
ಈ ಸುದ್ದಿಯನ್ನೂ ಓದಿ: DK Shivakumar: ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಜಮಾ ಬಗ್ಗೆ ಡಿಕೆಶಿ ಹೇಳಿದ್ದೇನು?
ಬಿ.ಆರ್.ಪಾಟೀಲ್ ಪದೇ ಪದೆ ಅಸಮಾಧಾನ ಹೊರಹಾಕುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತ ಬಂದಿದ್ದಾರೆ. ಈ ಹಿಂದೆ ಶಾಸಕರಿಗೆ ಅನುದಾನ ಸಿಗುತ್ತಿಲ್ಲ ಎಂಬ ವಿಚಾರವಾಗಿ ಬಹಿರಂಗವಾಗಿಯೇ ಅಸಮಾಧಾನವನ್ನು ಅವರು ಹೊರ ಹಾಕಿದ್ದರು. ಅದಕ್ಕೂ ಮೊದಲು ಶಾಸಕರಿಗೆ ಅನುದಾನ ಕೊರತೆ ಕುರಿತಾಗಿ ಬಿ.ಆರ್.ಪಾಟೀಲ್ ಬರೆದಿದ್ದ ಪತ್ರವೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.