ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನದಿ, ಕಾಡು, ಬೆಟ್ಟಗಳ ನಡುವೆ ಮತಗಟ್ಟೆ: ಎಲ್ಲರಿಗೂ ಮತದಾನದ ಹಕ್ಕು ಒದಗಿಸಲು ಚುನಾವಣಾ ಆಯೋಗದ ಸಾಹಸ

ಭಾರತೀಯ ಚುನಾವಣಾ ಆಯೋಗವು ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. “ಯಾವ ಮತದಾರನು ಹಿಂದೆ ಉಳಿಯಬಾರದು” ಎಂಬ ಉದ್ದೇಶದೊಂದಿಗೆ ಅರಣ್ಯ, ಗುಡ್ಡ ಮತ್ತು ನದಿ ಪ್ರದೇಶಗಳಲ್ಲೂ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಮತದಾನ ಏಪ್ರಿಲ್ 9ರಿಂದ ಆರಂಭವಾಗಿ ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ.

ಮತದಾನದ ಹಕ್ಕು ಒದಗಿಸಲು ಚುನಾವಣಾ ಆಯೋಗದ ಸಾಹಸ

ಸಾಂದರ್ಭಿಕ ಚಿತ್ರ -

Profile
Sushmitha Jain Mar 16, 2026 9:03 PM

ನವದೆಹಲಿ, ಮಾ. 16: ಭಾರತೀಯ ಚುನಾವಣಾ ಆಯೋಗವು (Election Commission of India) ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಐದು ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿಯ ಚುನಾವಣೆಯಲ್ಲಿ ʼಯಾವುದೇ ಮತದಾರನು ಹಿಂದೆ ಉಳಿಯಬಾರದುʼ ಎಂಬ ದೃಢ ಸಂಕಲ್ಪದೊಂದಿಗೆ ಆಯೋಗವು ದೇಶಾದ್ಯಂತ ಸುಮಾರು 2.15 ಲಕ್ಷಕ್ಕೂ ಅಧಿಕ ಮತಗಟ್ಟೆಗಳನ್ನು ಸ್ಥಾಪಿಸಲು ಮುಂದಾಗಿದೆ.

ದಟ್ಟವಾದ ಅರಣ್ಯ, ಹರಿಯುವ ನದಿ ಮತ್ತು ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಮತದಾರರನ್ನು ತಲುಪಲು ಚುನಾವಣಾ ಸಿಬ್ಬಂದಿ ಅತ್ಯಂತ ಸವಾಲಿನ ಪ್ರಯಾಣವನ್ನು ಆರಂಭಿಸಿದ್ದಾರೆ. ಅಸ್ಸಾಂನ ಮಜುಲಿ ದ್ವೀಪದಿಂದ 50-60 ಕಿಲೋ ಮೀಟರ್ ದೂರದಲ್ಲಿರುವ ಧನೇಖಾನಾ ಮತಗಟ್ಟೆಯನ್ನು ತಲುಪಲು ಅಧಿಕಾರಿಗಳು ಬ್ರಹ್ಮಪುತ್ರ ನದಿಯನ್ನು ಫೆರಿ ಮೂಲಕ ದಾಟಿ, ನಂತರ ರಸ್ತೆ ಹಾಗೂ ಟ್ರ್ಯಾಕ್ಟರ್‌ಗಳನ್ನು ಅವಲಂಬಿಸಬೇಕಾಗಿದೆ. ಈ ಮತಗಟ್ಟೆಯು ಕೇವಲ 248 ಮತದಾರರಿಗಾಗಿ ಇಷ್ಟೆಲ್ಲ ಸವಾಲುಗಳನ್ನು ಎದುರಿಸಿ ಸಜ್ಜುಗೊಂಡಿದೆ.

ಇನ್ನು ಕೇರಳದ ಇಡುಕ್ಕಿ ಜಿಲ್ಲೆಯ ಬುಡಕಟ್ಟು ಪ್ರದೇಶವಾದ ಎಡಮಲಕುಡಿಯಲ್ಲಿರುವ ಮತಗಟ್ಟೆಯನ್ನು ತಲುಪಲು ಸಿಬ್ಬಂದಿ ಮೊದಲು 30 ಕಿಲೋ ಮೀಟರ್ ಕಠಿಣ ಆಫ್-ರೋಡ್ ಹಾದಿಯಲ್ಲಿ ವಿಶೇಷ ವಾಹನಗಳಲ್ಲಿ ಸಂಚರಿಸಿ, ನಂತರ ಸುಮಾರು 8 ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲೇ ಬೆಟ್ಟದ ಹಾದಿಯಲ್ಲಿ ಸಾಗಬೇಕಿದೆ.

ಕೇರಳ ವಿಧಾನಸಭಾ ಚುನಾವಣೆ; ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಪಶ್ಚಿಮ ಬಂಗಾಳದ ಅಲಿಪುರ್ದುವಾರ್ ಜಿಲ್ಲೆಯಲ್ಲಿ ಪರಿಸ್ಥಿತಿ ಇನ್ನೂ ಭಿನ್ನವಾಗಿದ್ದು, ಇಲ್ಲಿನ ಅಧಿಕಾರಿಗಳು ಬಕ್ಸಾ ಟೈಗರ್ ರಿಸರ್ವ್‌ನ ದಟ್ಟ ಅರಣ್ಯದೊಳಗೆ ಮತಯಂತ್ರಗಳನ್ನು ಹೊತ್ತುಕೊಂಡು ಚಾರಣ ಮಾಡಬೇಕಾಗಿದೆ. ಅರಣ್ಯದ ಆಳದಲ್ಲಿ ವಾಸಿಸುವ ಬುಡಕಟ್ಟು ಜನರ ಮತದಾನಕ್ಕಾಗಿ ಇಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ತಮಿಳುನಾಡಿನ ಥೇಣಿ ಜಿಲ್ಲೆಯ ವರುಸನಾಡ್ ಬೆಟ್ಟಗಳಲ್ಲಿರುವ ವೆಳ್ಳಿಮಲೈ ಎಂಬಲ್ಲಿ ಕೇವಲ ಐದು ಮತದಾರರಿಗಾಗಿ ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು, ಈ ಐವರ ಹಕ್ಕನ್ನು ರಕ್ಷಿಸಲು ಅಧಿಕಾರಿಗಳು ಮೂರು ಗಂಟೆಗಳ ಕಾಲ ಗುಡ್ಡಗಾಡು ಪ್ರದೇಶದಲ್ಲಿ ಸಂಚರಿಸಲಿದ್ದಾರೆ. ಇದು ನಮ್ಮ ಪ್ರಜಾಪ್ರಭುತ್ವದ ಶಕ್ತಿಯನ್ನು ಎತ್ತಿ ತೋರಿಸುತ್ತದೆ.

ಅಸ್ಸಾಂ, ಕೇರಳ ಮತ್ತು ಪುದುಚೇರಿಗಳಲ್ಲಿ ಏಪ್ರಿಲ್ 9ರಂದು ಮತದಾನ ನಡೆಯಲಿದೆ. ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಚುನಾವಣೆ ನಡೆಯಲಿದ್ದರೆ, ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ಎರಡು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಪುದುಚೇರಿಯ ಐತಿಹಾಸಿಕ ವಿ.ಒ. ಚಿದಂಬರಂ ಪಿಳ್ಳೈ ಶಾಲೆಯಂತಹ ಹಳೆಯ ಕಟ್ಟಡಗಳಲ್ಲೂ ಮತಗಟ್ಟೆಗಳನ್ನು ಸ್ಥಾಪಿಸಿರುವುದು ವಿಶೇಷ. ಈ ಎಲ್ಲ ರಾಜ್ಯಗಳ ಚುನಾವಣಾ ಫಲಿತಾಂಶವು ಮೇ 4ರಂದು ಪ್ರಕಟವಾಗಲಿದೆ. ಚುನಾವಣಾ ಆಯೋಗದ ಈ ಅದ್ಭುತ ಶ್ರಮವು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಜನರಿಟ್ಟಿರುವ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.