BY Vijayendra: ಕಳಚಿ ಬಿದ್ದ ಸಿದ್ದರಾಮಯ್ಯನವರ ಮುಖವಾಡ: ವಿಜಯೇಂದ್ರ ಆರೋಪ
BY Vijayendra: ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದ ಬಳಿಕ ಆನೆ ನಡೆದಿದ್ದೇ ದಾರಿ ಎಂಬಂತೆ ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಕಪಟ ಸಮಾಜವಾದಿ ಮುಖವಾಡ ಈ ಅಧಿಕಾರಾವಧಿಯಲ್ಲಿ ಕಳಚಿ ಬಿದ್ದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ.

ಬೆಂಗಳೂರು: ದರಿದ್ರ- ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಿರಂತರವಾಗಿ ಇರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದ್ದಾರೆ. ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಜನರ ವಿಶ್ವಾಸ ಮತ್ತು ಆಶೀರ್ವಾದ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಎಲ್ಲವನ್ನೂ ಗಾಳಿಗೆ ತೂರಿ ರೈತರು, ಬಡವರು, ಜನಸಾಮಾನ್ಯರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ನಿರಂತರ ಹೋರಾಟ ಮಾಡುವ ಮೂಲಕ ಈ ಸರ್ಕಾರಕ್ಕೆ ತಕ್ಕ ಶಾಸ್ತಿ ಮಾಡಲಿದೆ ಎಂದು ಅವರು ತಿಳಿಸಿದರು.
ಜನರ ಒಳಿತಿಗಾಗಿ ಈ ಸರ್ಕಾರ ಬಂದಿಲ್ಲ
ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದ ಬಳಿಕ ಆನೆ ನಡೆದಿದ್ದೇ ದಾರಿ ಎಂಬಂತೆ ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಕಪಟ ಸಮಾಜವಾದಿ ಮುಖವಾಡ ಈ ಅಧಿಕಾರಾವಧಿಯಲ್ಲಿ ಕಳಚಿ ಬಿದ್ದಿದೆ ಎಂದು ಬಿ.ವೈ. ವಿಜಯೇಂದ್ರ ಆರೋಪಿಸಿದರು. ಹಿಂದೆ ಬಿಜೆಪಿ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡಿದ್ದರೂ ಸಹ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ಸಿಗರು ಸಾಕಷ್ಟು ಅಪಪ್ರಚಾರ ಮಾಡಿದರು. ಜನರ ಒಳಿತಿಗಾಗಿ ಈ ಸರ್ಕಾರ ಬಂದಿಲ್ಲ. ಜನರ ಒಳಿತಿಗಾಗಿ ಅಧಿಕಾರ ಪಡೆದಿದ್ದರೆ ಇಂಥ ದರಿದ್ರ ಸರ್ಕಾರವನ್ನು ಜನತೆ ನೋಡಬೇಕಿರಲಿಲ್ಲ ಎಂದು ದೂರಿದರು.
ಹೈಕಮಾಂಡ್ ಅಥವಾ ಗಾಂಧಿ ಕುಟುಂಬಕ್ಕೆ ಕರ್ನಾಟಕ ರಾಜ್ಯವನ್ನು ಅಡ ಇಡಲು ಮತ್ತು ಚುನಾವಣೆ ವೇಳೆ ಎಟಿಎಂ ಆಗಿ ಪರಿವರ್ತಿಸಲು ಕಾಂಗ್ರೆಸ್ಸಿಗೆ ಇಲ್ಲಿ ಸರ್ಕಾರ ಬೇಕಿದೆ ಎಂದು ಅವರು ಟೀಕಿಸಿದರು.
ಜನಜಾಗೃತಿ ಮೂಡಿಸಲು ಜನಾಕ್ರೋಶ ಯಾತ್ರೆ
ರಾಜ್ಯದಲ್ಲಿ ತೀವ್ರ ಬೆಲೆ ಏರಿಕೆ ಮತ್ತು ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ. 4 ಮೀಸಲಾತಿ, ಪರಿಶಿಷ್ಟ ಜಾತಿ, ಜನಾಂಗದ ಅಭ್ಯುದಯಕ್ಕೆ ಮೀಸಲಿಟ್ಟ ಎಸ್‍ಇಪಿ, ಟಿಎಸ್‍ಪಿ ಹಣ ದುರ್ಬಳಕೆ- ಇವೆಲ್ಲವನ್ನೂ ರಾಜ್ಯದ ಜನತೆ ಮುಂದೆ ತೆಗೆದುಕೊಂಡು ಹೋಗುತ್ತೇವೆ. ನಿನ್ನೆ ಆರಂಭವಾದ ಅಹೋರಾತ್ರಿ ಧರಣಿಯ ಹೋರಾಟವು ಏ.7ರಿಂದ ಪ್ರಾರಂಭವಾಗುವ ಜನಾಕ್ರೋಶ ಯಾತ್ರೆ ಮೂಲಕ ರಾಜ್ಯದ ಪ್ರತಿ ಜಿಲ್ಲೆಗೆ ತಲುಪಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ಹಗಲುದರೋಡೆಯನ್ನು ಜನರಿಗೆ ಮನದಟ್ಟು ಮಾಡುತ್ತೇವೆ. ಜನರ ಹಣ ಲೂಟಿ ಮಾಡಿ, ಜನರಿಗೆ ಬರೆ ಎಳೆದು ಅಧಿಕಾರ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ದೋಖಾಗಳನ್ನು ಜನರ ಮುಂದಿಡಲಿದ್ದೇವೆ. ಈ ಸರ್ಕಾರದ ನೈಜ ಮುಖವಾಡವನ್ನು ತಿಳಿಸುವ ಕೆಲಸವನ್ನು ಮುಂದಿನ ಒಂದು ತಿಂಗಳು ಮಾಡಲಿದ್ದೇವೆ ಎಂದರು.
ಈ ಸುದ್ದಿಯನ್ನೂ ಓದಿ | Government Office Timings: ರಾಜ್ಯದಲ್ಲಿ ಭಾರಿ ಬಿಸಿಲು; ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ
ವಕ್ಫ್ ಹಗರಣದಲ್ಲಿ ಕಾಂಗ್ರೆಸ್ಸಿನ ಅನೇಕ ಮುಖಂಡರ ಹೆಸರು
ಕಾಂಗ್ರೆಸ್ಸಿಗರು ವಕ್ಫ್ ಹೆಸರು ಹೇಳಿ ಲಕ್ಷಾಂತರ ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದವರು. ಇದಕ್ಕೆ ಕರ್ನಾಟಕವೇ ತಾಜಾ ಉದಾಹರಣೆ. ಈ ಹಗರಣದಲ್ಲಿ ಕಾಂಗ್ರೆಸ್ಸಿನ ಅನೇಕ ಮುಖಂಡರ ಹೆಸರು ಕೂಡ ಈ ಹಿಂದೆಯೂ ಕೇಳಿಬಂದಿತ್ತು. ಹಾಗಾಗಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ಸಿನವರು ಸಹಜವಾಗಿಯೇ ವಿರೋಧಿಸುತ್ತಾರೆ ಎಂದು ಆರೋಪಿಸಿದರು.