ಕರ್ನಾಟಕದ ಸೂರ್ಯಕಾಂತಿ ಬೆಳೆಗಾರರ ಬೆನ್ನಿಗೆ ನಿಂತ ಕೇಂದ್ರ; ಬೆಂಬಲ ಬೆಲೆಯಲ್ಲಿ 9023 ಮೆ.ಟನ್ ಖರೀದಿಗೆ ಅಸ್ತು
Pralhad Joshi: ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರ ಮನವಿ ಮೇರೆಗೆ ಕೇಂದ್ರ ಸರ್ಕಾರ ರಾಜ್ಯದ ಸೂರ್ಯಕಾಂತಿ ಬೆಳೆಗಾರರ ಬೆನ್ನಿಗೆ ನಿಂತಿದೆ. ಸಚಿವ ಜೋಶಿ ಅವರ ಮಾರ್ಗದರ್ಶನದಂತೆ ಕೇಂದ್ರ ಕೃಷಿ ಸಚಿವಾಲಯ ಇದೀಗ ಕ್ವಿಂಟಲ್‌ಗೆ 7721 ರುಪಾಯಿ ಬೆಂಬಲ ಬೆಲೆ ಯೋಜನೆಯಲ್ಲಿ ಸೂರ್ಯಕಾಂತಿ ಖರೀದಿಗೆ ಅನುಮೋದನೆ ನೀಡಿದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (ಸಂಗ್ರಹ ಚಿತ್ರ) -
ನವದೆಹಲಿ, ಮೇ 4: ಬೆಲೆ ಕುಸಿತದಿಂದ ಕಂಗೆಟ್ಟಿದ್ದ ಕರ್ನಾಟಕದ ಸೂರ್ಯಕಾಂತಿ ಬೆಳೆಗಾರರ ನೆರವಿಗೆ ಮುಂದಾದ ಕೇಂದ್ರ ಸರ್ಕಾರ (Central Government) ಇದೀಗ ಬೆಂಬಲ ಬೆಲೆಯಲ್ಲಿ 9,023 MT ಸೂರ್ಯಕಾಂತಿ ಖರೀದಿಗೆ ಅಸ್ತು ಎಂದಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರ ಮನವಿ ಮೇರೆಗೆ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡು ರಾಜ್ಯದ ಸೂರ್ಯಕಾಂತಿ ಬೆಳೆಗಾರರ ಬೆನ್ನಿಗೆ ನಿಂತಿದೆ. ಸಚಿವ ಪ್ರಲ್ಹಾದ್ ಜೋಶಿ ಅವರ ಮಾರ್ಗದರ್ಶನದಂತೆ ಕೇಂದ್ರ ಕೃಷಿ ಸಚಿವಾಲಯ ಇದೀಗ ಕ್ವಿಂಟಲ್ ಗೆ ₹ 7721 ಬೆಂಬಲ ಬೆಲೆ ಯೋಜನೆಯಲ್ಲಿ ಸೂರ್ಯಕಾಂತಿ ಖರೀದಿಗೆ ಅನುಮೋದನೆ ನೀಡಿದೆ.
ರಾಜ್ಯದ ಪ್ರಸ್ತಾವನೆಯಂತೆ ಸೂರ್ಯಕಾಂತಿ ಬೆಳೆಗಾರರಿಗೆ ಆಸರೆಯಾಗುವಂತೆ ಸಚಿವ ಪ್ರಲ್ಹಾದ ಜೋಶಿ ಅವರು ಈ ಹಿಂದೆ ಕೇಂದ್ರ ಕೃಷಿ ಸಚಿವರು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿದ್ದರು.
ಕೃಷಿ ಸಚಿವರಿಗೆ ಜೋಶಿ ಪತ್ರ
ಸೂರ್ಯಕಾಂತಿ ಕರ್ನಾಟಕದ ಪ್ರಮುಖ ಎಣ್ಣೆ ಬೀಜಗಳಲ್ಲಿ ಒಂದಾಗಿದ್ದು, 0.59 ಲಕ್ಷ ಹೆಕ್ಟೇರ್‌ನಲ್ಲಿ 0.44 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಹೊಂದಿದೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಸರ್ಕಾರ ನಿಗದಿಪಡಿಸಿದ ₹ 7721 ಕನಿಷ್ಠ ಬೆಲೆಗಿಂತ ಕಡಿಮೆಯಿದೆ. ಹಾಗಾಗಿ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿಸಿ ರಾಜ್ಯದ ರೈತರ ನೆರವಿಗೆ ಧಾವಿಸಬೇಕೆಂದು ಸಚಿವ ಪ್ರಲ್ಹಾದ್ ಜೋಶಿ, ಕೃಷಿ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದರು.
ಮುಂದಿನ ದಿನಗಳಲ್ಲಿ ಸೂರ್ಯಕಾಂತಿ ಬೆಲೆ ಮತ್ತಷ್ಟು ಕುಸಿಯುವ ಆತಂಕವಿದೆ. ಹಾಗಾಗಿ ತಕ್ಷಣವೇ ನೆರವಾಗುವಂತೆ ಕೋರಿದ್ದರು. ಸಚಿವ ಜೋಶಿ ಅವರ ಮನವಿ ಪುರಸ್ಕರಿಸಿ ಕೇಂದ್ರ ಸರ್ಕಾರ ಇದೀಗ ರಾಜ್ಯದಿಂದ 9,023 ಮೆಟ್ರಿಕ್ ಟನ್ ಸೂರ್ಯಕಾಂತಿ ಖರೀದಿಗೆ ಅಸ್ತು ಎಂದಿದೆ.
ಕೃಷಿ ಸಚಿವರಿಂದ ಪತ್ರ
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಸಂಬಂಧ ಜೋಶಿ ಅವರಿಗೆ ಪತ್ರ ಬರೆದು ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಒತ್ತಾಸೆಯಂತೆ ಕರ್ನಾಟಕದಿಂದ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿಗೆ ಅನುಮೋದನೆ ನೀಡಿದ್ದಾಗಿ ತಿಳಿಸಿದ್ದಾರೆ.
ರೈತರಿಗೆ ಸೂಕ್ತ ಬೆಲೆ ನೀಡುವಲ್ಲಿ ಬದ್ಧ
ಪ್ರಧಾನಿ ನರೇಂದ್ರ ಮೋದಿ ಅವರು ಯಾವತ್ತೂ ರೈತರಿಗೆ ಸೂಕ್ತ ಬೆಲೆ ದೊರಕಿಸಿಕೊಡುವಲ್ಲಿ ಬದ್ಧರಾಗಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಎದುರಿಸುತ್ತಿರುವ ರೈತರಿಗೆ ಈ ಮೂಲಕ ಆಸರೆಯಾಗಿದ್ದಾರೆ ಎಂದಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಇದಕ್ಕಾಗಿ ಪ್ರಧಾನಿ ಮತ್ತು ಕೃಷಿ ಸಚಿವರಿಗೆ ಧನ್ಯವಾದ ಹೇಳಿದ್ದಾರೆ.