ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chalavadi Narayanaswamy: ಒಳ ಮೀಸಲಾತಿಯಲ್ಲಿ ಮೋಸ, ವಂಚನೆ ಸಹಿಸುವುದಿಲ್ಲ: ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ

Internal Reservation Caste: ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿ ವಿಷಯದಲ್ಲಿ ವಿಳಂಬ ನೀತಿ ಅನುಸರಿಸಿ ದಲಿತ ಸಮುದಾಯಗಳನ್ನು ವಂಚಿಸುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಒಳ ಮೀಸಲಾತಿಯಲ್ಲಿ ಮೋಸ, ವಂಚನೆ ಸಹಿಸುವುದಿಲ್ಲ: ಛಲವಾದಿ ನಾರಾಯಣಸ್ವಾಮಿ

Profile Siddalinga Swamy Aug 14, 2025 3:30 PM

ಬೆಂಗಳೂರು: ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿ(Internal Reservation Caste) ವಿಷಯದಲ್ಲಿ ವಿಳಂಬ ನೀತಿ ಅನುಸರಿಸಿ ದಲಿತ ಸಮುದಾಯಗಳನ್ನು ವಂಚಿಸುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆರೋಪಿಸಿದ್ದಾರೆ. ವಿಧಾನಸೌಧದ ಮೊಗಸಾಲೆಯಲ್ಲಿ ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಬೀದಿ ಬೀದಿಗಳಲ್ಲಿ ಹೋರಾಟ ನಡೆಯುತ್ತಿದೆ. ಬಿಜೆಪಿ ಸರ್ಕಾರವು ಈಗಾಗಲೇ 4 ಭಾಗಗಳಾಗಿ (ಎ, ಬಿ, ಸಿ, ಡಿ) ವಿಂಗಡಿಸಿ ಎ ಗುಂಪಿಗೆ ಶೇ.6, ಬಿ- ಶೇ. 5.5, ಸಿ- 4.5 ಮತ್ತು ಡಿ ಗುಂಪಿಗೆ ಶೇ.1 ರಷ್ಟು ಮೀಸಲಾತಿ ಕೊಟ್ಟಿತ್ತು ಎಂದು ವಿವರಿಸಿದರು.

ಇದನ್ನು ಕಾಂಗ್ರೆಸ್ ಸರ್ಕಾರ ಒಪ್ಪದೇ ಕೋರ್ಟಿನ ಆದೇಶ ಬಂದು ಒಂದು ವರ್ಷವಾದರೂ ಇದುವರೆಗೂ ಮೀನಾಮೇಷ ಎಣಿಸುತ್ತಿದೆ. ಇದರಿಂದ ಬೀದಿರಂಪ ಆಗುವ ಸಂದರ್ಭ ಹೆಚ್ಚಾಗಿದೆ. ಸೌಮ್ಯವಾಗಿ ಇರುತ್ತಿದ್ದ ಪರಿಶಿಷ್ಟ ಜಾತಿಗಳು ಆಕ್ರೋಶದಿಂದ ಬೀದಿಗೆ ಬಂದು ಹೋರಾಟ ಮಾಡುವ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ಇವತ್ತು ಹುಟ್ಟು ಹಾಕಿದೆ ಎಂದು ದೂರಿದರು.

ನಾಗಮೋಹನ್‍ದಾಸ್ ಆಯೋಗ ರಚಿಸಿ 5 ಗುಂಪು ಮಾಡಿದ್ದಾರೆ. ಕೆಲವು ಗುಂಪಿಗೆ ಹೆಚ್ಚಿನ ಆದ್ಯತೆ ಕೊಡುವ ರೀತಿ ಛಲವಾದಿ ಸಮುದಾಯದ ಕೆಲವು ಜಾತಿಗಳನ್ನು ಮಾದಿಗ ಸಮುದಾಯಕ್ಕೆ ಸೇರಿಸಿದ್ದಾರೆ. ಇನ್ನೂ ಕೆಲವು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ- ಈ ಜಾತಿಗಳು ಜಾತಿಗಳಲ್ಲ; ಅದರ ಮೂಲ ಜಾತಿ ಛಲವಾದಿ ಸಮುದಾಯದ್ದು. ಈ ಜಾತಿ ಗಣತಿಯೇ ಸರಿ ಇಲ್ಲ ಎಂದು ಟೀಕಿಸಿದರು. ಶೇ. 60-65 ಗಣತಿ ಆಗಿದೆ; ಮುಂದುವರೆದು ಮಾಡಲಾಗಿಲ್ಲ ಎಂದು ಎಲ್ಲ ಪತ್ರಿಕೆ, ಮಾಧ್ಯಮಗಳಲ್ಲಿ ಬಂದಿದೆ ಎಂದರು.

ಈ ಸುದ್ದಿಯನ್ನೂ ಓದಿ | Independence Day: ಸಾರ್ವಜನಿಕರೇ, ನೀವೂ ಈಗ ರಾಜಭವನ ವೀಕ್ಷಿಸಬಹುದು!

ಈ ರೀತಿ ಗಣತಿಯಿಂದ ಸರಿಯಾದ ದತ್ತಾಂಶ ಸಿಗುವುದಿಲ್ಲ; ಹಿಂದೆ ಮಾಧುಸ್ವಾಮಿ ಸಂಪುಟ ಉಪ ಸಮಿತಿ ಜಾರಿ ಮಾಡಿದ್ದನ್ನೇ ಮುಂದುವರೆಸಬಹುದಿತ್ತು. ತಪ್ಪು ಮಾಹಿತಿ ಕೊಟ್ಟು ಬಲಗೈ ಸಮುದಾಯಕ್ಕೆ ಸಂಪೂರ್ಣ ಅನ್ಯಾಯ ಮಾಡಲಾಗಿದೆ. ಎಡಗೈ ಸಮುದಾಯಕ್ಕೆ- ಸ್ಪೃಶ್ಯ ಸಮುದಾಯಕ್ಕೆ ಎಷ್ಟು ಬೇಕಾದರೂ ಕೊಡಿ. ಆದರೆ, 5 ಗುಂಪು ಮಾಡಿದ್ದು ದೊಡ್ಡ ತಪ್ಪು ಎಂದು ಟೀಕಿಸಿದರು. ಪರಿಶಿಷ್ಟ ಜಾತಿಗಳ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿ, ಪರೆಯನ್, ಪರೆಯ ಮತ್ತು ಮುಂಡಾಳ, ಮೊಗೇರ- ಇವೆಲ್ಲವೂ ಬಲಗೈ ಸಮುದಾಯದಲ್ಲಿ ಬರಬೇಕಿತ್ತು ಎಂದು ವಿಶ್ಲೇಷಿಸಿದರು.‌ ಅವುಗಳನ್ನು ತಪ್ಪಿಸಿ ಬೇರೆ ಕಡೆ ಹಾಕಿ ಅವರಿಗೆ ಬರಬೇಕಾದ ಅಂಶಗಳನ್ನು ಮೋಸ ಮಾಡಲಾಗಿದೆ. ಇದು ಅವೈಜ್ಞಾನಿಕ ವರದಿ ಎಂದು ಆರೋಪಿಸಿದರು. ಒಂದು ವರ್ಷದಿಂದ ನೇಮಕಾತಿ, ಬಡ್ತಿ ಆಗುತ್ತಿಲ್ಲ. ಅನೇಕ ಯುವಕರು ಬೀದಿ ಬೀದಿ ಸುತ್ತುವಂತಾಗಿದೆ. ಬೇಗನೆ ಒಳಮೀಸಲಾತಿ ಕೊಡಬೇಕು ಮತ್ತು ಛಲವಾದಿ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು. ಇದರಲ್ಲಿ ಮೋಸ, ವಂಚನೆ ಆದರೆ ನಾವು ಸಹಿಸುವುದಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಎಚ್ಚರಿಸಿದರು.