Chandigarh Mayor Election : ಚಂಡೀಗಢ ಮೇಯರ್ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶ; ಗೆಲುವಿನ ನಗೆ ಬೀರಿದ ಬಿಜೆಪಿ
ಚಂಡೀಗಢ ಮೇಯರ್ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶ ಹೊರ ಬಿದ್ದಿದ್ದು, ಆಡಳಿತರೂಢ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಹರ್‌ಪ್ರೀತ್ ಕೌರ್ ಬಬ್ಲಾ ಅವರು ಜಯಗಳಿಸಿದ್ದಾರೆ.

Chandigarh Mayor Election

ಚಂಡೀಗಢ : ಮೇಯರ್ ಚುನಾವಣೆಯಲ್ಲಿ (Chandigarh Mayor Election) ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಎಎಪಿ-ಕಾಂಗ್ರೆಸ್ (AAP) ಮೈತ್ರಿಕೂಟದ 17 ಮತಗಳ ವಿರುದ್ಧ 19 ಮತಗಳನ್ನು ಗಳಿಸುವ ಮೂಲಕ ಬಿಜೆಪಿ ಗೆಲುವು ದಾಖಲಿಸಿದೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರ್‌ಪ್ರೀತ್ ಕೌರ್ ಬಬ್ಲಾ ಅವರು ಎಎಪಿಯ ಪ್ರೇಮ್ ಲತಾ ವಿರುದ್ಧ ಜಯಶಾಲಿಯಾದರು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಮುಖಭಂಗವಾದಂತಾಗಿದೆ.
ಚುನಾವಣೆಯಲ್ಲಿ ಬಿಜೆಪಿ ಮತ್ತು ಎಎಪಿ-ಕಾಂಗ್ರೆಸ್ ಮೈತ್ರಿಕೂಟದ ನಡುವೆ ಪೈಪೋಟಿ ಏರ್ಪಟ್ಟಿತ್ತು. ನಗರದ ಮುನ್ಸಿಪಲ್ ಕಾರ್ಪೊರೇಶನ್‌ನ ಅಸೆಂಬ್ಲಿ ಹಾಲ್‌ನಲ್ಲಿ ಬೆಳಿಗ್ಗೆ 11:20 ಕ್ಕೆ ಮತದಾನ ಪ್ರಾರಂಭವಾಗಿ 12:19ಕ್ಕೆ ಮುಕ್ತಾಯಗೊಂಡಿದೆ. ಮುನ್ಸಿಪಲ್ ಕಾರ್ಪೊರೇಶನ್‌ನ ಒಟ್ಟು ಸದ್ಯಸರ ಸಂಖ್ಯೆ 35 ಆಗಿದ್ದು, ಎಎಪಿ 13 ಕೌನ್ಸಿಲರ್‌ಗಳು, ಕಾಂಗ್ರೆಸ್ 6, ಬಿಜೆಪಿ 16 ಮತ್ತು ಚಂಡೀಗಢ ಎಂಪಿ 1 ಮತವನ್ನು ಹೊಂದಿತ್ತು.
ಚುನಾವಣೆಗೆ ಕೆಲವು ದಿನಗಳ ಮೊದಲು ಕಾಂಗ್ರೆಸ್ ಕೌನ್ಸಿಲರ್ ಗುರ್ಬಕ್ಸ್ ರಾವತ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಇದರಿಂದಾಗಿ 15 ಸದಸ್ಯರ ಬಲವನ್ನು ಹೊಂದಿದ್ದ ಬಿಜೆಪಿ 16 ಕ್ಕೆ ಏರಿಕೆ ಕಂಡಿದೆ. ಗುಪ್ತ ಮತದಾನದ ಮೂಲಕ ಚುನಾವಣೆಯನ್ನು ನಡೆಸಲಾಗಿದೆ. ನಾಮನಿರ್ದೇಶಿತ ಕೌನ್ಸಿಲರ್ ರಮ್ನೀಕ್ ಸಿಂಗ್ ಬೇಡಿ ಅವರನ್ನು ಸಭಾಧ್ಯಕ್ಷರನ್ನಾಗಿ ನೇಮಿಸಲಾಗಿದ್ದರೆ ನಿವೃತ್ತ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿ ಜೈಶ್ರೀ ಠಾಕೂರ್ ಅವರನ್ನು ಚುನಾವಣೆಯ ಮೇಲ್ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ಸ್ವತಂತ್ರ ವೀಕ್ಷಕರನ್ನಾಗಿ ನೇಮಿಸಿತ್ತು. ಇದರ ಹೊರತಾಗಿ ಚುನಾವಣಾ ಪ್ರಕ್ರಿಯೆಗಳನ್ನು ವಿಡಿಯೋ ಚಿತ್ರೀಕರಣ ಮಾಡುವಂತೆಯೂ ಸುಪ್ರೀಂ ತನ್ನ ಸೂಚನೆಯಲ್ಲಿ ತಿಳಿಸಿತ್ತು. ಆಯ್ಕೆಯಾದ ಮೇಯರ್ ಆಡಳಿತಾವಧಿ ಒಂದು ವರ್ಷ ಇರಲಿದೆ.
2024 ರಲ್ಲಿ ಮೇಯರ್ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಹೈ ಡ್ರಾಮಾವೇ ನಡೆದಿತ್ತು. ಒಟ್ಟು ಮುನ್ಸಿಪಲ್ ಕಾರ್ಪೊರೇಶನ್‌ನ ಒಟ್ಟು ಸದ್ಯಸರ ಸಂಖ್ಯೆ 35 ಆಗಿದ್ದು, ಬಿಜೆಪಿ 14 ಸದಸ್ಯರನ್ನು ಹೊಂದಿದ್ದು, ಆಮ್ ಆದ್ಮಿ ಪಕ್ಷ 13 ಕೌನ್ಸಿಲರ್‌ಗಳು ಹಾಗೂ ಕಾಂಗ್ರೆಸ್ 7 ಕೌನ್ಸಿಲರ್‌ಗಳನ್ನು ಹೊಂದಿದ್ದರು. ಆದರೆ ಆಪ್‌ನ 8 ಮತಗಳನ್ನು ಅಸಿಂಧು ಎಂದು ಘೋಷಿಸಲಾಗಿತ್ತು. ನಂತರ ಮಧ್ಯಪ್ರವೇಶಿಸಿದ ಸುಪ್ರೀಂ ಕೋರ್ಟ್ ಪ್ರಜಾಪ್ರಭುತ್ವದ ಕಗ್ಗೊಲೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿತ್ತು. ಮುಖ್ಯ ನ್ಯಾಯಮೂರ್ತಿ ಸಿ.ವೈ ಚಂದ್ರಚೂಡ ಅವರು ಮರು ಮತ ಎಣಿಕೆಗೆ ಆದೇಶ ನೀಡಿದ್ದರು. ಇದು ಬಿಜೆಪಿಗೆ ಭಾರಿ ಮುಖಭಂಗವಾಗಿತ್ತು.