ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karnataka Drought: ಕೇಂದ್ರ ಬರ ಅಧ್ಯಯನ ತಂಡದ ಜತೆ ಸಿಎಂ ಮಹತ್ವದ ಸಭೆ; ರಾಜ್ಯದ ವಾಸ್ತವ ಸ್ಥಿತಿ ಮನವರಿಕೆ

ಮುಂಗಾರು 2026 ರ ಅವಧಿಗೆ ಬರ ಪರಿಸ್ಥಿತಿಯಿಂದಾದ ನಷ್ಟ ಹಾಗೂ ಪರಿಹಾರಕ್ಕಾಗಿ ಮೊದಲ ಹಾಗೂ ಎರಡನೇ ಪ್ರಸ್ತಾವನೆ ಮೂಲಕ ಒಟ್ಟಾರೆ 177 ತಾಲ್ಲೂಕುಗಳಿಗೆ 7142.64 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಳಿದ ತಾಲೂಕುಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪ್ರಸ್ತಾವನೆಯನ್ನು ಅಕ್ಟೋಬರ್ ಎರಡನೇ ವಾರದಲ್ಲಿ ಸಲ್ಲಿಸಲಾಗುವುದು ಎಂದು‌ ಸಭೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕೇಂದ್ರ ಬರ ಅಧ್ಯಯನ ತಂಡದ ಜತೆ ಸಿಎಂ ಡಿ.ಕೆ.ಶಿವಕುಮಾರ್‌ ಸಭೆ

-

Prabhakara R
Prabhakara R Oct 3, 2026 5:08 PM

ಬೆಂಗಳೂರು: ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಕೇಂದ್ರದ ಬರ ನಿರ್ವಹಣೆಯ ಅಂತರ್-ಸಚಿವಾಲಯ ತಂಡದೊಂದಿಗೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ (CM DK Shivakumar) ಸಭೆ ನಡೆಸಿದರು. ಈ ವೇಳೆ ರಾಜ್ಯದಲ್ಲಿನ ಬರ ಪರಿಸ್ಥಿತಿಯ (Karnataka Drought) ಬಗ್ಗೆ ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಡಲಾಗಿದೆ.

ರಾಜ್ಯದಲ್ಲಿ ಒಟ್ಟು 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮೊದಲ ಹಂತದಲ್ಲಿ 101, ಎರಡನೇ ಹಂತದಲ್ಲಿ 23, ಮೂರನೇ ಹಂತದಲ್ಲಿ 53 ಹಾಗೂ ನಾಲ್ಕನೇ ಹಂತದಲ್ಲಿ 40 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಐದನೇ ಹಂತದ ಪರಿಶೀಲನೆ ಪ್ರಗತಿಯಲ್ಲಿದೆ. ಬರ ನಿರ್ವಹಣೆ ಕೈಪಿಡಿ 2020 ರ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆ ಮಾಡಲಾಗಿದೆ.

ಮುಂಗಾರು 2026 ರ ಅವಧಿಗೆ ಬರ ಪರಿಸ್ಥಿತಿಯಿಂದಾದ ನಷ್ಟ ಹಾಗೂ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೊದಲ ಹಾಗೂ ಎರಡನೇ ಪ್ರಸ್ತಾವನೆ ಮೂಲಕ ಒಟ್ಟಾರೆ 177 ತಾಲ್ಲೂಕುಗಳಿಗೆ 7142.64 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಳಿದ ತಾಲೂಕುಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪ್ರಸ್ತಾವನೆಯನ್ನು ಅಕ್ಟೋಬರ್ ಎರಡನೇ ವಾರದಲ್ಲಿ ಸಲ್ಲಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಮುಂಗಾರಿನಲ್ಲಿ ಶೇ. 35 ರಷ್ಟು ಮಳೆ ಕೊರತೆ

ರಾಜ್ಯವು 2001 ರಿಂದ 2025 ರ ನಡುವೆ 16 ವರ್ಷ ಬರ ಪರಿಸ್ಥಿತಿಯನ್ನು ಎದುರಿಸಿದೆ. ರಾಜ್ಯದ ಒಟ್ಟಾರೆ ಮಳೆಯ ಶೇ.74 ಕ್ಕೂ ಹೆಚ್ಚು ಮಳೆ ನೈಋತ್ಯ ಮುಂಗಾರಿನ ಅವಧಿಯಲ್ಲಿ ಆಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಮಳೆ ದತ್ತಾಂಶ ವೈಜ್ಞಾನಿಕವಾಗಿ ಸಂಗ್ರಹಿಸಲಾಗುತ್ತಿದೆ. ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 6605 ಸೌರ ವಿದ್ಯುತ್ ಚಾಲಿತ ಜಿಪಿಆರ್ಎಸ್ ಆಧಾರಿತ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಿವೆ.

ರಾಜ್ಯದಲ್ಲಿ ಜೂನ್ 1 ರಿಂದ ಸೆಪ್ಟೆಂಬರ್ 30 ರ ಅವಧಿಯಲ್ಲಿ ಒಟ್ಟಾರೆ ಶೇ. 35 ರಷ್ಟು ಮಳೆ ಕೊರತೆಯಾಗಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಶೇ.41, ಉತ್ತರ ಒಳನಾಡಿನಲ್ಲಿ ಶೇ.42, ಮಲೆನಾಡಿನಲ್ಲಿ ಶೇ.38 ಹಾಗೂ ಕರಾವಳಿ ಭಾಗದಲ್ಲಿ ಶೇ.28 ರಷ್ಟು ಮಳೆ ಕೊರತೆ ಇದೆ. ಸಾಮಾನ್ಯವಾಗಿ ಹೆಚ್ಚು ಮಳೆ ಬೀಳುವ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿಯೂ ಈ ಬಾರಿ ಮಳೆ ಕೊರತೆಯಾಗಿದ್ದು, ಅಚ್ಚುಕಟ್ಟು ಪ್ರದೇಶಗಳಲ್ಲಿ ನೀರಿನ ಒಳಹರಿವು, ನೀರಿನ ಲಭ್ಯತೆಯಲ್ಲಿಯೂ ಕೊರತೆಯಾಗಿದೆ.

ಮಳೆ ಕೊರತೆಯಿಂದ ನೀರಾವರಿ, ಕೃಷಿ ಹಾಗೂ ತೋಟಗಾರಿಕೆಯ ಮೇಲೆ ಇದರ ಪರಿಣಾಮವಾಗಿದೆ. ರಾಜ್ಯದ 240 ರಲ್ಲಿ 237 ತಾಲೂಕುಗಳಲ್ಲಿ ಕನಿಷ್ಠ ಮೂರು ವಾರಗಳ ಕಾಲ ಸತತವಾಗಿ ಮಳೆಯಾಗಿಲ್ಲ. 88 ತಾಲೂಕುಗಳಲ್ಲಿ ಕನಿಷ್ಠ 3 ವಾರ, 120 ತಾಲೂಕುಗಳಲ್ಲಿ 4-6 ವಾರ, 22 ತಾಲೂಕುಗಳಲ್ಲಿ 7-10 ವಾರಗಳ ಕಾಲ ಸತತವಾಗಿ ಮಳೆಯಾಗಿಲ್ಲ. ರಾಜ್ಯದಲ್ಲಿ 2026ರ ಮುಂಗಾರು ಹಂಗಾಮಿನಲ್ಲಿ 84.10 ಲಕ್ಷ ಹೆಕ್ಟೇರ್ ಗಳ ಗುರಿಗೆ 69.57 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಂದರೆ ಶೇ.83 ರಷ್ಟು ಬಿತ್ತನೆಯಾಗಿದೆ.

ಪ್ರಮುಖ ಜಲಾಶಯಗಳಲ್ಲಿ ಕಳೆದ 10 ವರ್ಷಗಳಲ್ಲೇ ಕಡಿಮೆ ನೀರು

ರಾಜ್ಯದ 13 ಪ್ರಮುಖ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ (Live storage) 529 ಟಿಎಂಸಿ ಅಂದರೆ, ಅವುಗಳ ಪೂರ್ಣ ಸಾಮರ್ಥ್ಯದ ಶೇ.65 ಮಾತ್ರ ಭರ್ತಿ. ಜಲವಿದ್ಯುತ್ ಯೋಜನೆಗಳ ಜಲಾಶಯಗಳಲ್ಲಿ ಶೇ.54, ಕಾವೇರಿ ಅಚ್ಚುಕಟ್ಟು ಪ್ರದೇಶದ ಜಲಾಶಯಗಳಲ್ಲಿ ಶೇ.47 ಹಾಗೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಜಲಾಶಯಗಳಲ್ಲಿ ಶೇ.78 ನೀರು ಸಂಗ್ರಹವಿದೆ.

ರಾಜ್ಯದ ಎಲ್ಲ ಪ್ರಮುಖ ಜಲಾಶಯಗಳಲ್ಲಿ 2026 ರ ಒಳಹರಿವು ಕಳೆದ ಹತ್ತು ವರ್ಷಗಳ ಸರಾಸರಿಗಿಂತ ಕಡಿಮೆಯಾಗಿದೆ. ಸಣ್ಣ ನೀರಾವರಿ ಕೆರೆಗಳ ಪೈಕಿ ಶೇ.58 ಕ್ಕೂ ಹೆಚ್ಚು ಕೆರೆಗಳಲ್ಲಿ ಶೇ.30 ಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ. ಶೇ. 75 ರಷ್ಟು ಸಣ್ಣ ನೀರಾವರಿ ಕೆರೆಗಳಲ್ಲಿ ಶೇ. 50 ಕ್ಕಿಂತ ಕಡಿಮೆ ಹಾಗೂ ಶೇ. 25 ರಷ್ಟು ಕೆರೆಗಳಲ್ಲಿ ಶೇ. 50 ಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿದೆ. ಶೇ.30 ಕ್ಕಿಂತ ಕಡಿಮೆ ನೀರು ಸಂಗ್ರಹವಾಗಿರುವ ಕೆರೆಗಳ ಸಂಖ್ಯೆಯು 2025 ರಲ್ಲಿ 885ರಷ್ಟಿದ್ದು, 2026ರಲ್ಲಿ 2,224ಕ್ಕೆ ಏರಿದೆ. 2025 ಕ್ಕೆ ಹೋಲಿಸಿದರೆ, 200 ತಾಲ್ಲೂಕುಗಳಲ್ಲಿ ಈ ವರ್ಷ ಅಂತರ್ಜಲ ಮಟ್ಟ ಕುಸಿತವಾಗಿದೆ.

2016-2025 ರ ದಶಕದ ಸರಾಸರಿಗೆ ಹೋಲಿಸಿದರೆ, 153 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಕಳೆದ 10 ವರ್ಷಗಳಲ್ಲೇ ಅತಿ ಹೆಚ್ಚು ಅಂದರೆ 37.50 ಲಕ್ಷ ರೈತರು 28.48 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡಿದ್ದಾರೆ.

ರಾಜ್ಯದಲ್ಲಿ 101 ತಾಲೂಕುಗಳಲ್ಲಿ ಒಟ್ಟು 19.52 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಾಗೂ 76 ತಾಲೂಕುಗಳಲ್ಲಿ 26.08 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಅಂದಾಜಿಸಲಾಗಿದೆ. NDRF ಮಾನದಂಡಗಳ ಪ್ರಕಾರ 101 ತಾಲೂಕುಗಳಲ್ಲಿ 2017.26 ಕೋಟಿ ರೂ. ಹಾಗೂ 76 ತಾಲೂಕುಗಳಲ್ಲಿ 2918.34 ಕೋಟಿ ರೂ. ಆಗಿದೆ.

30 ವಾರಗಳಿಗಾಗುವಷ್ಟು ಮೇವು ಲಭ್ಯ

ರಾಜ್ಯದಲ್ಲಿ ಒಟ್ಟಾರೆಯಾಗಿ 30 ವಾರಗಳಿಗಾಗುವಷ್ಟು ಮೇವು ಲಭ್ಯವಿದೆ. ರಾಜ್ಯದಲ್ಲಿ ಹಾಲು ಉತ್ಪಾದನೆ ಜೂನ್ ತಿಂಗಳಿನಲ್ಲಿ ದಿನಕ್ಕೆ 115.58 ಲಕ್ಷ ಕೆಜಿ ಇದ್ದು, ಸೆಪ್ಟೆಂಬರ್ ನಲ್ಲಿ ದಿನಕ್ಕೆ 108.09 ಲಕ್ಷ ಕೆಜಿಗೆ ಇಳಿಕೆಯಾಗಿದೆ. SDRF ಅಡಿ ಮೇವಿನ ಮಿನಿಕಿಟ್ ಪೂರೈಕೆಗೆ 25 ಕೋಟಿ ಮಂಜೂರು ಮಾಡಲಾಗಿದೆ. ನೀರಾವರಿ ಸೌಲಭ್ಯವಿರುವ ರೈತರಿಗೆ 4.72 ಲಕ್ಷ ಮಿನಿಕಿಟ್ ಗಳನ್ನು ಪೂರೈಸಲಾಗಿದೆ.

ರಾಜ್ಯದಲ್ಲಿ 110 ತಾಲೂಕುಗಳ 548 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, 225 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಹಾಗೂ 636 ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆಯುವ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

ನಗರ ಪ್ರದೇಶಗಳಲ್ಲಿ ಏಳು ಜಿಲ್ಲೆಗಳ 15 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, 81 ವಾರ್ಡ್ ಗಳಲ್ಲಿ ಟ್ಯಾಂಕರುಗಳ ಮುಖಾಂತರ ಹಾಗೂ 21 ವಾರ್ಡ್ ಗಳಲ್ಲಿ ಕೊಳವೆ ಬಾವಿ ಮುಖಾಂತರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.