ಬೆಂಗಳೂರು: ಹಾರೋಹಳ್ಳಿ, ಕನಕಪುರ ಕೃತಜ್ಞತೆ ಸಮರ್ಪಣಾ ಪ್ರವಾಸ ಸಂದರ್ಭದಲ್ಲಿ ಜೀರೋ ಟ್ರಾಫಿಕ್‌ನಿಂದ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಸಿಎಂ ಡಿ.ಕೆ.ಶಿವಕುಮಾರ್ (CM DK Shivakumar) ಅವರು ವಿಧಾನಸೌಧ ಬಳಿಯ ಡಾ. ಬಿ.ಆರ್.ಅಂಬೇಡ್ಕರ್ ಮೆಟ್ರೋ ನಿಲ್ದಾಣದ ಬಳಿಯಿಂದ ಕನಕಪುರ ರಸ್ತೆಯ ಕೊನೆ ನಿಲ್ದಾಣ ಸಿಲ್ಕ್ ಇನ್ಸ್ಟಿಟ್ಯೂಟ್‌ವರೆಗೆ ಮೆಟ್ರೋ ರೈಲಿನಲ್ಲಿ (Namma Metro) ಭಾನುವಾರ ಪ್ರಯಾಣ ಮಾಡಿದರು.

ಪ್ರಯಾಣದ ವೇಳೆ ಸಾರ್ವಜನಿಕರ ಕುಶಲ ವಿಚಾರಿಸಿದರು. ಯುವಕ, ಯುವತಿಯರು ಸೇರಿದಂತೆ ಪ್ರಯಾಣಿಕರು ಸಿಎಂ ಜತೆ ಸೆಲ್ಫಿ ತೆಗೆದುಕೊಂಡರು. ಸಿಎಂ ಅವರು ಪ್ರಯಾಣಿಕರ ಮೆಟ್ರೊ ಪ್ರಯಾಣದ ಅನುಭವ ಆಲಿಸಿದರು.
ದೂರದೃಷ್ಟಿಯ ಯೋಜನೆಗಳಲ್ಲೇ ಬೆಂಗಳೂರಿನ ಭವಿಷ್ಯ ಅಡಗಿದೆ: ಸಿಎಂ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಎಂ ಅವರು, ಇಂದು ನನ್ನೂರು ಕನಕಪುರಕ್ಕೆ ಹೋಗುವಾಗ, ನಮ್ಮ ಮೆಟ್ರೋದಲ್ಲಿ ಸಾರ್ವಜನಿಕರೊಂದಿಗೆ ಪ್ರಯಾಣಿಸುವ ಅವಕಾಶ ಸಿಕ್ಕಿತು. ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ಬೆಂಗಳೂರಿನ ನಾಗರಿಕರ ಮುಖದಲ್ಲಿನ ನೆಮ್ಮದಿಯನ್ನು ಕಂಡಾಗ, ಸುರಕ್ಷಿತ, ಜನಸ್ನೇಹಿ ಹಾಗೂ ಕೈಗೆಟುಕುವ ಸಾರ್ವಜನಿಕ ಸಾರಿಗೆ ನಮ್ಮ ಕರ್ನಾಟಕದ ಜನತೆಗೆ ಎಷ್ಟು ಮುಖ್ಯ ಎಂಬುದು ಮತ್ತೊಮ್ಮೆ ಮನವರಿಕೆಯಾಯಿತು ಎಂದು ಹೇಳಿದ್ದಾರೆ.

ಬೆಂಗಳೂರು ನಮ್ಮೆಲ್ಲರ ಹೆಮ್ಮೆ. ಪ್ರತಿಯೊಬ್ಬ ನಾಗರಿಕನ ದೈನಂದಿನ ಬದುಕನ್ನು ಸುಗಮಗೊಳಿಸಿ, ಇಡೀ ನಗರವನ್ನು ಬೆಸೆಯುವಂತಹ ದೂರದೃಷ್ಟಿಯುಳ್ಳ ಯೋಜನೆಗಳಲ್ಲೇ ನಮ್ಮ ಬೆಂಗಳೂರಿನ ಭವಿಷ್ಯ ಅಡಗಿದೆ. ಈ ನಿಟ್ಟಿನಲ್ಲಿ ನಮ್ಮ ಮೆಟ್ರೋ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದ್ದಾರೆ.

ಮಹಿಳಾ ಸಚಿವರೇ ಇಲ್ಲದ ಸಂಪುಟ; ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾದರೂ ಏನು?
ಪ್ರಯಾಣದ ಉದ್ದಕ್ಕೂ ಪ್ರೀತಿಯಿಂದ ಮಾತನಾಡಿಸಿ, ಶುಭ ಹಾರೈಸಿದ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು. ಸಾರ್ವಜನಿಕ ಸೇವೆ ಎಂದರೆ ಕೇವಲ ಅಧಿಕಾರವಲ್ಲ, ಅದು ಜನರ ಆಶೋತ್ತರಗಳಿಗೆ ಕಿವಿಯಾಗುವುದು, ಸದಾ ಕಲಿಯುವುದು ಮತ್ತು ಜನರೊಂದಿಗೆ ಸದಾ ಸಂಪರ್ಕದಲ್ಲಿರುವುದು ಎಂಬುದನ್ನು ಇಂದಿನ ಒಡನಾಟ ನನಗೆ ಮತ್ತೊಮ್ಮೆ ನೆನಪಿಸಿಕೊಟ್ಟಿದೆ. ಬನ್ನಿ, ನಾವೆಲ್ಲರೂ ಕೈಜೋಡಿಸಿ ಇನ್ನಷ್ಟು ಸಮೃದ್ಧ, ಬಲಿಷ್ಠ ಮತ್ತು ಜನಸ್ನೇಹಿ ಕರ್ನಾಟಕವನ್ನು ಕಟ್ಟೋಣ ಎಂದು ಕರೆ ನೀಡಿದ್ದಾರೆ.