ಮಹಿಳಾ ಸಚಿವರೇ ಇಲ್ಲದ ಸಂಪುಟ; ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾದರೂ ಏನು?
ಹೊಸದಾಗಿ ರಚನೆಯಾದ ತಮ್ಮ ಸಚಿವ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆಯ ಬಗ್ಗೆ ಟೀಕೆಗಳು ವ್ಯಕ್ತವಾದ ನಡುವೆಯೇ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಕುರಿತು ಮಾತನಾಡಿದ್ದಾರೆ. ಸಚಿವಾಲಯದಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು, ಮುಂದಿನ ದಿನಗಳಲ್ಲಿ ಅವಕಾಶಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು: ಹೊಸದಾಗಿ ರಚನೆಯಾದ ತಮ್ಮ ಸಚಿವ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆಯ ಬಗ್ಗೆ ಟೀಕೆಗಳು ವ್ಯಕ್ತವಾದ ನಡುವೆಯೇ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಈ ಕುರಿತು ಮಾತನಾಡಿದ್ದಾರೆ. ಸಚಿವಾಲಯದಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು, ಮುಂದಿನ ದಿನಗಳಲ್ಲಿ ಅವಕಾಶಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಬಹಳಷ್ಟು ಹುದ್ದೆಗಳು ಖಾಲಿ ಇವೆ. ಕಳೆದ ಬಾರಿಯೂ ಸಹ, ಮೊದಲ ಸುತ್ತಿನಲ್ಲಿ ಮಹಿಳೆಯರು ಇರಲಿಲ್ಲ ಎಂದು ಮಾಧ್ಯಮದೊಂದಿಗೆ ಮಾತನಾಡುವಾಗ ಅವರು ಹೇಳಿದ್ದಾರೆ.
ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸದ್ಯ 13 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಹಿಳೆಯರಿಗೆ ಮೊದಲ ಸುತ್ತಿನಲ್ಲಿ ಅವಕಾಶ ನೀಡದಿದ್ದಕ್ಕಾಗಿ ಬಿಜೆಪಿ ಟೀಕಿಸಿತ್ತು. ಈ ಕುರಿತು ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. "ನಾವು ದೇಶದಲ್ಲೇ ಒಂದು ಮಾದರಿಯನ್ನು ಸ್ಥಾಪಿಸಿದ್ದೇವೆ" ಎಂದು ಹೇಳಿದ್ದಾರೆ.
ಬಿಜೆಪಿ ಟೀಕೆಯ ಹೊರತಾಗಿಯೂ ಪಕ್ಷದೊಳಗೇ ಕೆಲ ಅಸಮಧಾನಗಳು ಎದ್ದಿವೆ. ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವಾ ಅವರು ಹೊಸ ಸಚಿವ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆಯ ಬಗ್ಗೆ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ. "ಕರ್ನಾಟಕ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು. ಅವರು ಮತ್ತು ಅವರ ತಂಡಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಇಂದು ಪ್ರಮಾಣವಚನ ಸ್ವೀಕರಿಸಿದ ಕರ್ನಾಟಕದ ಹೊಸ ಸಚಿವ ಸಂಪುಟದಲ್ಲಿ ಕನಿಷ್ಠ ಒಬ್ಬ ಕಾಂಗ್ರೆಸ್ ಮಹಿಳೆಯನ್ನಾದರೂ ನೋಡಲು ನಾನು ಇಷ್ಟಪಡುತ್ತಿದ್ದೆ. ಒಬ್ಬರು ಇಲ್ಲದಿರುವುದು ತೀವ್ರ ನಿರಾಶೆ ತಂದಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಏಕೈಕ ಮಹಿಳಾ ಸಚಿವೆಯಾಗಿದ್ದರು. ಈ ಬಾರಿಯೂ ಅವರಿಗೆ ಸಿಗುವ ನಿರೀಕ್ಷೆಯಿದೆ.
ಡಿಕೆ ಶಿವಕುಮಾರ್ ಸಂಪುಟ ಸೇರಲು ಕೈ ನಾಯಕರ ಕಸರತ್ತು; ಸಚಿವ ಸ್ಥಾನ ಯಾರಿಗೆ?
ಖಾತೆ ಹಂಚಿಕೆ ಕುರಿತು ರಾಮಲಿಂಗಾರೆಡ್ಡಿ ಆಕ್ರೋಶ
ರಾಜ್ಯ ಸಚಿವ ಸಂಪುಟ ಖಾತೆ ಹಂಚಿಕೆ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಜಲಸಂಪನ್ಮೂಲ ಖಾತೆ ನೀಡಿರುವುದಕ್ಕೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡದಿದ್ರೆ ರಾಜೀನಾಮೆ ಪತ್ರ ಕಳುಹಿಸುವುದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ನೇರವಾಗಿ ಹೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.