ಮದ್ದೂರು: ಒಂದೇ ದಿನ 1146 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದೇವೆ. ಅಭಿವೃದ್ಧಿಗೆ ಹಣ ಇಲ್ಲ ಎಂದು ಸುಳ್ಳು ಎರಚುವ ಬಿಜೆಪಿಗೆ ಇದು ನಮ್ಮ ಸರ್ಕಾರದ ಸವಾಲು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah ) ಹೇಳಿದರು. ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 1146 ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ, ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ, ಮಾತನಾಡಿದ ಅವರು, ಕಾವೇರಿ ಅಭಿವೃದ್ಧಿ ನಿಗಮ ಒಂದರಲ್ಲೇ ಎರಡು ವರ್ಷದಲ್ಲಿ 560 ಕೋಟಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ನಾಲ್ಕು ವರ್ಷ ಬಿಜೆಪಿ ಸರ್ಕಾರ ಮದ್ದೂರಿನಲ್ಲಿ ಏನು ಮಾಡಿದೆ ಎನ್ನುವುದನ್ನು ಜನತೆಗೆ ತೋರಿಸಿ ಎಂದು ಸವಾಲೆಸೆದರು.
ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಮಂಡ್ಯ ಸಕ್ಕರೆ ಕಾರ್ಖಾನೆಯ ವಿದ್ಯುತ್ ಬಿಲ್ ಚುಕ್ತಾ ಮಾಡಿದ್ದು ನಾವು, ಕಾರ್ಖಾನೆಯ ಪುನಶ್ಚೇತನಕ್ಕೆ 52 ಕೋಟಿ ರೂಪಾಯಿ ಕೊಟ್ಟಿದ್ದು ನಾವು. ಹಾಲು ಉತ್ಪಾದಕರ ಸಂಘದ ಮನವಿಗೆ ಸ್ಪಂದಿಸಿ ಹಾಲು ಉತ್ಪಾದಕರಿಗೆ ಲೀಟರ್‌ಗೆ 5 ರೂ ಸಹಾಯಧನ ಒದಗಿಸಿದ್ದು ನಾವು. ಈಗ ಮತ್ತೆ ಮಂಡ್ಯ ಸಕ್ಕರೆ ಕಾರ್ಖಾನೆಗೆ 10 ಕೋಟಿ ರೂ. ಕೊಟ್ಟಿರುವುದು ನಮ್ಮ ಸರ್ಕಾರ. ಮಂಡ್ಯ ಕೃಷಿ ವಿವಿ ಆರಂಭಿಸಿ, ಅಗತ್ಯ ಅನುದಾನ ಕೊಟ್ಟಿರುವುದು ನಾವು. ಇದು ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸರ್ಕಾರದ ಬದ್ಧತೆ ಎಂದು ತಿಳಿಸಿದರು.
ಮಂಡ್ಯ ನಗರದಲ್ಲಿ 100 ಅಡಿ ರಸ್ತೆ ಮಾಡಲು ಶಾಸಕ ಉದಯ್ ಅವರ ಬೇಡಿಕೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಘೋಷಿಸಿದ ಮುಖ್ಯಮಂತ್ರಿಗಳು, ಶಾಸಕ ಉದಯ್ ಅವರದ್ದು ಕಡಿಮೆ ಮಾತು, ಹೆಚ್ಚು ಕೆಲಸ ಮಾಡುತ್ತಾರೆ ಎಂದು ಹೇಳಿದರು.
ರಾಜ್ಯದ ಪಾಲಿನ ಗೊಬ್ಬರವನ್ನೂ ಕೇಂದ್ರ ಕೊಡುತ್ತಿಲ್ಲ
ರಾಜ್ಯಕ್ಕೆ ಕೊಡಬೇಕಾದಷ್ಟು ಗೊಬ್ಬರ ಕೊಡದೆ ಕೇಂದ್ರ ಸರ್ಕಾರ ರಾಜ್ಯದ ರೈತರ ವಿರೋಧಿಯಾಗಿದೆ. ನಮ್ಮ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಅಗತ್ಯ ಗೊಬ್ಬರ ಸರಬರಾಜು ಮಾಡುವಂತೆ ಒತ್ತಾಯಿಸಿ ಒಂದು ವಾರ ಕಳೆದರೂ ಇದುವರೆಗೂ ಕೊಟ್ಟಿಲ್ಲ. ಬಿಜೆಪಿ ಸಂಸದರು ಮತ್ತು ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ಕೇಂದ್ರದ ಜತೆ ಮಾತನಾಡಿ ಗೊಬ್ಬರ ಕೊಡಿಸಲಿ ಎಂದು ಸವಾಲು ಹಾಕಿದರು.
ಈ ಸುದ್ದಿಯನ್ನೂ ಓದಿ | Intelligence Bureau Recruitment 2025: ಗುಪ್ತಚರ ಇಲಾಖೆಯಲ್ಲಿದೆ ಬರೋಬ್ಬರಿ 3,717 ಹುದ್ದೆ; ಹೀಗೆ ಅಪ್ಲೈ ಮಾಡಿ
ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಸಚಿವರುಗಳಾದ ಎಚ್.ಸಿ. ಮಹದೇವಪ್ಪ, ಪಿರಿಯಾಪಟ್ಟಣ ವೆಂಕಟೇಶ್, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ರಹೀಂ ಖಾನ್, ಶಾಸಕರುಗಳಾದ ರವಿ ಗಣಿಗ, ದಿನೇಶ್ ಗೂಳೀಗೌಡ ಸೇರಿ ಹಲವು ಪ್ರಮುಖರು ಮುಖ್ಯ ಅತಿಥಿಗಳಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಉದಯ್ ಅಧ್ಯಕ್ಷತೆ ವಹಿಸಿದ್ದರು.