CM Siddaramaiah: ಜಿಬಿಎ ಸಭೆಗೆ ಗೈರಾದ ಬಿಜೆಪಿಯವರು ಬೆಂಗಳೂರು ಅಭಿವೃದ್ಧಿಯ ವಿರೋಧಿಗಳು: ಸಿಎಂ ಸಿದ್ದರಾಮಯ್ಯ
Greater Bengaluru Authority: ಬೆಂಗಳೂರು ಬೃಹತ್ ಆಗಿ ಬೆಳೆದಿದ್ದು, ಇಲ್ಲಿನ ಜನರಿಗೆ ಉತ್ತಮ ಆಡಳಿತ, ಸೌಲಭ್ಯಗಳನ್ನು ನೀಡಲು ನಗರವನ್ನು ವಿಭಜಿಸಲೇಬೇಕೆಂಬ ನಿಲುವನ್ನು ಪ್ರಥಮವಾಗಿ ಬಿಜೆಪಿಯವರೇ ಹೊಂದಿದ್ದರು. ಆದರೆ ಈಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

-

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (Greater Bengaluru Authority) ಸಭೆಗೆ ಹಾಜರಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದಾಗಿದ್ದರೂ, ಗೈರಾಗುವ ಮೂಲಕ ಬಿಜೆಪಿಯವರು ಬೆಂಗಳೂರಿನ ಅಭಿವೃದ್ಧಿಯ ವಿರೋಧಿಗಳೆಂದು ನಿರೂಪಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಟೀಕಿಸಿದರು. ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಜಿಬಿಎ ಸಭೆಗೆ ಬಿಜೆಪಿಯವರು ಗೈರಾಗಿದ್ದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿದ ಸಿಎಂ, ಬಿಜೆಪಿಗರಿಗೆ ಬೆಂಗಳೂರಿನ ಬಗ್ಗೆ ಕಳಕಳಿಯಿದ್ದರೆ ಜಿಬಿಎ ಸಭೆಗೆ ಗೈರಾಗುತ್ತಿರಲಿಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂಬುದು ಪ್ರಜಾಪ್ರಭುತ್ವದ ವೇದಿಕೆ. ಆಡಳಿತ ವಿಕೇಂದ್ರೀಕರಣಕ್ಕೆ ಬಿಜೆಪಿಯವರು ವಿರೋಧ ವ್ಯಕ್ತಪಡಿಸುತ್ತಾರೆ ಎಂದು ತಿಳಿಯುತ್ತದೆ. ಬೆಂಗಳೂರು ಬೃಹತ್ ಆಗಿ ಬೆಳೆದಿದ್ದು, ಇಲ್ಲಿನ ಜನರಿಗೆ ಉತ್ತಮ ಆಡಳಿತ, ಸೌಲಭ್ಯಗಳನ್ನು ನೀಡಲು ನಗರವನ್ನು ವಿಭಜಿಸಲೇಬೇಕೆಂಬ ನಿಲುವನ್ನು ಪ್ರಥಮವಾಗಿ ಬಿಜೆಪಿಯವರೇ ಹೊಂದಿದ್ದರು. ಆದರೆ ಈಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯವರು ಪುನಃ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿ ಬಗ್ಗೆ ಸಿದ್ದರಾಮಯ್ಯ ಅವರ ಹೇಳಿಕೆ:
ಬಿಜೆಪಿ ನಾಯಕರಿಗೆ ಬೆಂಗಳೂರು ಅಭಿವೃದ್ಧಿಯ ಬಗ್ಗೆ ನೈಜ ಕಳಕಳಿ ಇದ್ದರೆ ಅವರು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆಯಲ್ಲಿ ಪಾಲ್ಗೊಂಡು, ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆದರೆ ಸಭೆಯನ್ನು ಬಹಿಷ್ಕರಿಸಿ ತಾವು ಅಧಿಕಾರ ವಿಕೇಂದ್ರೀಕರಣದ ವಿರೋಧಿಗಳು ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ.
— Siddaramaiah (@siddaramaiah) October 11, 2025
ಈ ಹಿಂದೆ ಬೆಂಗಳೂರು… pic.twitter.com/crPRZKStCT
ಈ ಸುದ್ದಿಯನ್ನೂ ಓದಿ | CM Siddaramaiah: ಬೆಂಗಳೂರಿಗರಿಗೆ ಗುಡ್‌ನ್ಯೂಸ್; ಟ್ರಾಫಿಕ್ ಕಿರಿಕಿರಿಗೆ ಶೀಘ್ರದಲ್ಲೇ ಸಿಗಲಿದೆ ಮುಕ್ತಿ
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ:
ಸುಗಮ ಆಡಳಿತ, ಸಮರ್ಪಕ ಅಭಿವೃದ್ಧಿಗಾಗಿ ಜಿಬಿಎ ಅಸ್ತಿತ್ವಕ್ಕೆ: ಸಿಎಂ
ಬೆಂಗಳೂರು: ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಸಮಸ್ತ ಜನರಿಗೆ ಸುಗಮ ಆಡಳಿತ, ಸಮರ್ಪಕ ಅಭಿವೃದ್ಧಿಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದು ಐದು ಕಾರ್ಪೋರೇಷನ್‌ಗಳು ರಚನೆಯಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೊದಲ ಸಭೆಯಲ್ಲಿ ಆರಂಭಿಕ ಮಾತುಗಳಲ್ಲಿ GBA ರಚನೆ ಹಿಂದಿನ ಉದ್ದೇಶಗಳನ್ನು ಪ್ರಸ್ತಾಪಿಸಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಬೆಂಗಳೂರಿನ ಜನಸಂಖ್ಯೆ 1.40 ಕೋಟಿ ತಲುಪಿದೆ. ಒಂದು ಕಾರ್ಪೋರೇಷನ್‌ನಿಂದ ಇಷ್ಟು ದೊಡ್ಡ ನಗರದ ಸಮರ್ಪಕ ಅಭಿವೃದ್ಧಿ ಬಹಳ ದೊಡ್ಡ ಸವಾಲಿನದ್ದು. ಈ ಚರ್ಚೆ ಹಲವು ವರ್ಷಗಳಿಂದ ಇದ್ದೇ ಇದೆ. ಒಂದಕ್ಕಿಂತ ಹೆಚ್ಚು ಕಾರ್ಪೋರೇಷನ್‌ಗಳಿದ್ದರೆ ಅಭಿವೃದ್ಧಿ ಸಾಧ್ಯ ಎನ್ನುವ ಕಾರಣಕ್ಕೆ ಈ ಬಗ್ಗೆ ವರದಿ ಕೊಡಲು ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೇ ಸಮಿತಿ ರಚಿಸಲಾಗಿತ್ತು. ನಂತರ ಬಂದ ಸರ್ಕಾರಗಳು ಈ ದಿಕ್ಕಿನಲ್ಲಿ ಗಮನ ಹರಿಸಲೇ ಇಲ್ಲ. ಹೀಗಾಗಿ ನಮ್ಮ ಸರ್ಕಾರವೇ ಪುನಃ ಅಧಿಕಾರಕ್ಕೆ ಬಂದ ಬಳಿಕ ಸಮಿತಿಯನ್ನು ಪುನರ್ ರಚಿಸಲಾಯಿತು. ಈ ಸಮಿತಿ ವರದಿಯಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದು 5 ನಗರ ಪಾಲಿಕೆಗಳ ರಚನೆಯಾಗಿವೆ ಎಂದರು.
ಸುಗಮ ಕಸ ವಿಲೇವಾರಿ ಆಗಬೇಕು. ಪಾಲಿಕೆಗಳ ಆದಾಯ ಹೆಚ್ಚಳ ಆಗಬೇಕು. ಟ್ರಾಫಿಕ್ ದಟ್ಟಣೆ ನಿವಾರಣೆ ಆಗಬೇಕು. ನಗರವನ್ನು ಚೊಕ್ಕವಾಗಿಡಬೇಕು. ರಸ್ತೆ/ಚರಂಡಿ/ಫುಟ್ಪಾತ್/ಪಾರ್ಕ್‌ಗಳ ನಿರ್ಮಾಣಕ್ಕೆ ಆದ್ಯತೆ ನೀಡಿ ಮಾದರಿ ಪಾಲಿಕೆಗಳನ್ನಾಗಿ ರೂಪಿಸಬೇಕು ಎನ್ನುವ ಮಹತ್ತರ ಗುರಿ ಮತ್ತು ಉದ್ದೇಶಗಳನ್ನು ಇಟ್ಟುಕೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾರ್ಯ ನಿರ್ವಹಿಸಬೇಕು ಎಂದು ಸಿಎಂ ಸೂಚನೆ ನೀಡಿದರು.
ನಾವು ನಿರೀಕ್ಷೆ ಮಾಡಿರುವ ಈ ಗುರಿ ಮತ್ತು ಉದ್ದೇಶ ನೆರವೇರಲು BWSSB, BDA, BESCOM ಸೇರಿ ಎಲ್ಲಾ ಇಲಾಖೆಗಳು GBA ಜತೆ ಪರಸ್ಪರ ಸಹಕಾರ ಸಹಯೋಗವನ್ನು ಅತ್ಯಂತ ಕಡ್ಡಾಯವಾಗಿ ಆಚರಣೆಗೆ ತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಸೂಚನೆ ನೀಡಿದರು.
ಈ ಸುದ್ದಿಯನ್ನೂ ಓದಿ | DK Shivakumar: ಜಿಬಿಎ ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ: ಡಿ.ಕೆ. ಶಿವಕುಮಾರ್ ಸವಾಲು
ಚರ್ಚೆ-ಸಂವಾದದಿಂದ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ. ಏನೇ ವಿರೋಧಗಳಿದ್ದರೂ ಸಭೆಗೆ ಹಾಜರಾಗಿ ಚರ್ಚೆ ನಡೆಸಿ ಅಭಿವೃದ್ಧಿಗೆ ಪೂರಕವಾಗಿ ಸಹಕಾರ ನೀಡಬೇಕು. ಅಧಿಕಾರ ವಿಕೇಂದ್ರೀಕರಣವನ್ನು ವಿರೋಧಿಸುವವರು ಮತ್ತು ಬೆಂಗಳೂರಿನ ಅಭಿವೃದ್ಧಿ ಒಲ್ಲದವರು ಸಭೆಯನ್ನು ವಿರೋಧಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಕುಟುಕಿದರು.