ಬೆಂಗಳೂರು, ನ.14: ಬಿಹಾರ ಚುನಾವಣೆ ಫಲಿತಾಂಶದಲ್ಲಿ (Bihar Election 2025 Results) ಎನ್‌ಡಿಎ ಭರ್ಜರಿ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ವಿವಿಧೆಡೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಪ್ರತಿಕ್ರಿಯಿಸಿ, ಸೋಲಿನ ಶತಕದೆಡೆಗೆ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿ ಅವರಿಗೆ ಅಭಿನಂದನೆಗಳು. ಆಕಾಶದಲ್ಲಿರುವ ನಕ್ಷತ್ರಗಳನ್ನು ಎಣಿಸಿಬಿಡಬಹುದೇನೋ ಆದರೆ ರಾಹುಲ್ ಗಾಂಧಿ (Rahul Gandhi) ಅವರು ಕಾಂಗ್ರೆಸ್ ಪಕ್ಷವನ್ನ ಎಷ್ಟು ಚುನಾವಣೆಗಳಲ್ಲಿ ಸೋಲಿಸಿದ್ದಾರೆ ಎನ್ನುವುದನ್ನು ಲೆಕ್ಕ ಮಾಡುವುದು ಕಷ್ಟ ಎಂದು ವ್ಯಂಗ್ಯವಾಡಿದ್ದಾರೆ.
ಸುಶಾಸನ, ಭ್ರಷ್ಟಾಚಾರ ಮುಕ್ತ ಆಡಳಿತ, ಅಭಿವೃದ್ಧಿ ರಾಜಕಾರಣದಿಂದಾಗಿ ಜನಮನ್ನಣೆ ಗಳಿಸಿರುವ ನಿತೀಶ್ ಕುಮಾರ್ ಅವರ ನೇತೃತ್ವದ ಎನ್‌ಡಿಎ ಸರ್ಕಾರದ ಮುಂದೆ ಜಂಗಲ್ ರಾಜ್ ಕುಖ್ಯಾತಿಯ ಆರ್‌ಜೆಡಿ - ಕಾಂಗ್ರೆಸ್ ಮಹಾಘಟಬಂಧನ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ಪಕ್ಕಕ್ಕೆ ಚೆನ್ನಾಗಿ ಗೊತ್ತಿತ್ತು. ಆದ್ದರಿಂದಲೇ ರಾಹುಲ್ ಗಾಂಧಿ ಅವರು ಮುಖಭಂಗ ತಪ್ಪಿಸಿಕೊಳ್ಳಲು ವೋಟ್ ಚೋರಿ ಎಂಬ ಕಟ್ಟುಕಥೆ ಮೂಲಕ ಜನರನ್ನ ದಿಕ್ಕು ತಪ್ಪಿಸಲು ಹೊರಟರು ಎಂದು ಕಿಡಿಕಾರಿದ್ದಾರೆ.
ಬಿಹಾರದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರ ʼವೋಟ್ ಚೋರಿʼ ಪ್ರಹಸನವನ್ನು ಸಾರಾಸಗಟಾಗಿ ತಿರಸ್ಕರಿಸಿ ಪ್ರಧಾನಿ ನರೇಂದ್ರ ಮೋದಿ ( Narendra Modi) ಹಾಗೂ ನಿತೀಶ್ ಕುಮಾರ್ ಅವರ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಮತ್ತೊಮ್ಮೆ ಸ್ಪಷ್ಟ ಜನಾದೇಶ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | CM Siddaramaiah: ಬಿಹಾರ ಚುನಾವಣೆ ಫಲಿತಾಂಶ ಎಫೆಕ್ಟ್, ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಸ್ಥಾನ ಇನ್ನಷ್ಟು ಗಟ್ಟಿ!
ಹರಿಯಾಣ, ಮಹಾರಾಷ್ಟ್ರ, ಬಿಹಾರದಲ್ಲಿ ಬಂದಿರುವ ಸ್ಥಿತಿಯೇ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲೂ ಬರುವ ದಿನ ಬಹಳ ದೂರವಿಲ್ಲ. ಈಗಾಗಲೇ ಜನಮನ್ನಣೆ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷ, ಕರ್ನಾಟಕದಲ್ಲೂ ಧೂಳೀಪಟ ಆಗುವುದು ನೂರಕ್ಕೆ ನೂರು ಗ್ಯಾರಂಟಿ. ಎನ್‌ಡಿಎ ಗೆಲುವಿಗೆ ಕಾರಣೀಭೂತರಾದ ಬಿಹಾರ ಬಿಜೆಪಿ, ಜೆಡಿಯು ಸೇರಿದಂತೆ ಮೈತ್ರಿಕೂಟದ ಎಲ್ಲ ನಾಯಕರು, ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್‌ನ ಬಿಹಾರದ ಜನ ತಿರಸ್ಕರಿಸಿದ್ದಾರೆ: ಸಿ.ಟಿ.ರವಿ
ಬಿಹಾರ ಚುನಾವಣೆ ಫಲಿತಾಂಶದ ಬಗ್ಗೆ ಎಂಎಲ್‌ಸಿ ಸಿ.ಟಿ.ರವಿ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ, ಬಿಹಾರ ಚುನಾವಣಾ ಪ್ರಣಾಳಿಕೆಯಲ್ಲಿ ಸರ್ಕಾರಿ ಉದ್ಯೋಗಗಳು, ಮಾಸಿಕ ಭತ್ಯೆಗಳು, 200 ಯೂನಿಟ್ ಉಚಿತ ವಿದ್ಯುತ್ ಸೇರಿದಂತೆ ಪೂರೈಸಲು ಸಾಧ್ಯವಿಲ್ಲದ ಹಲವಾರು ಗ್ಯಾರಂಟಿಗಳನ್ನು ನೀಡಿತ್ತು. ಆದರೆ ಬಿಹಾರದ ಮತದಾರರು, ಇಂತಹವೇ ಉಚಿತ ಯೋಜನೆಗಳು ಕರ್ನಾಟಕದ ಖಜಾನೆಯನ್ನು ಹೇಗೆ ಖಾಲಿ ಮಾಡಿವೆ ಹಾಗೂ ಅಭಿವೃದ್ಧಿಗೆ ಹೇಗೆ ಬ್ರೇಕ್ ಹಾಕಿವೆ ಎನ್ನುವುದನ್ನು ಗಮನಿಸಿ, ಈ ಚುನಾವಣಾ ಆಮಿಷಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಖಾಲಿ ಭರವಸೆಗಳನ್ನೇ ಆಧಾರವಾಗಿಟ್ಟಿರುವ ಕಾಂಗ್ರೆಸ್‌ನ್ನು ತಿರಸ್ಕರಿಸಿ, ಅಭಿವೃದ್ಧಿಯನ್ನು ಆರಿಸುವ ಸ್ಪಷ್ಟ ಸಂದೇಶವನ್ನು ಮತದಾರರು ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | Bihar Election 2025 Results: ಬಿಹಾರದ ʼಮಹಾಮಾಂತ್ರಿಕʼ ನಿತೀಶ್ ಕುಮಾರ್ ಸಾಗಿ ಬಂದ ಹಾದಿಯಿದು!
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ದೂರದೃಷ್ಟಿಯ ನಾಯಕತ್ವದಡಿ ನಡೆಸಲಾದ ಸುಶಾಸನ ಮಾದರಿಯ ಆಡಳಿತ ಮತ್ತೊಮ್ಮೆ ಜನರ ವಿಶ್ವಾಸವನ್ನು ಗೆದ್ದಿದೆ. ಬಿಹಾರದಲ್ಲಿ ಎನ್‌ಡಿಎಗೆ ಭಾರೀ ಜನಬಲ ದೊರಕಿದ್ದು, ಐತಿಹಾಸಿಕ ಬಹುಮತದೊಂದಿಗೆ ಮತ್ತೆ ಎನ್‌ಡಿಎ ಸರ್ಕಾರ ರಚಿಸುವುದು ಈಗ ಖಚಿತವಾಗಿದೆ ಎಂದು ತಿಳಿಸಿದ್ದಾರೆ.