ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಾನೂನುಬಾಹಿರವಾಗಿ 31 ನಿವೇಶನ ಪಡೆದುಕೊಂಡ ಕಾಂಗ್ರೆಸ್ ಪಕ್ಷ: ಛಲವಾದಿ ನಾರಾಯಣಸ್ವಾಮಿ ಆರೋಪ

Chalavadi Narayanaswamy: ಕಾಂಗ್ರೆಸ್ ಪಕ್ಷವು ಕಂದಾಯ ಇಲಾಖೆಯಿಂದ 5 ನಿವೇಶನಗಳು, ಪುರಸಭೆ- ಸ್ಥಳೀಯ ಸಂಸ್ಥೆಗಳಿಂದ 26 ನಿವೇಶನಗಳನ್ನು ಭೂಕಬಳಿಕೆ ಮಾಡಿದೆ. ಭೂಕಬಳಿಕೆಯಲ್ಲಿ ಸರ್ಕಾರವೇ ನಿರತವಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ.

ಬೆಂಗಳೂರು, ಫೆ.17: ಕಾಂಗ್ರೆಸ್ ಸರ್ಕಾರವು (Karnataka Congress Government) ಬಡವರಿಗೆ ಮನೆ ಕೊಡಬೇಕು, ಭೂರಹಿತರಿಗೆ ಭೂಮಿ ಕೊಡಬೇಕಿತ್ತು. ಆದರೆ, ಈ ಕೆಲಸವನ್ನು ಮಾಡುತ್ತಿಲ್ಲ. ತಾನೇ ಭೂಮಿ ಕಬಳಿಸುವ ಕೆಲಸ ಮಾಡುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆರೋಪಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.

ಭೂಕಬಳಿಕೆಯಲ್ಲಿ ಸರ್ಕಾರವೇ ನಿರತವಾಗಿದೆ. ಸರ್ಕಾರವು ತಾಲೂಕು, ಜಿಲ್ಲೆ, ಮಂಡಲ, ಪಂಚಾಯಿತಿ- ಹೀಗೆ ಎಲ್ಲ ಕಡೆ ನಿವೇಶನ ಪಡೆಯಲು ಅದಕ್ಕೆ ಅಧಿಕಾರ ಇಲ್ಲ. ಕಾನೂನು ಉಲ್ಲಂಘಿಸಿ ಅದು ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕೆ ಲೀಸ್‍ಗೆ ಮುಧೋಳದಲ್ಲಿ ನಿವೇಶನ ಪಡೆಯಲು ಮುಂದಾಗಿತ್ತು. ಆದರೆ, ಇಲಾಖೆಯು ಅದನ್ನು ತಿರಸ್ಕರಿಸಿತ್ತು ಎಂದು ದೂರಿದರು.

ಚಿಕ್ಕಬಳ್ಳಾಪುರದಲ್ಲಿ ಒಂದು ಸಿಎ ನಿವೇಶನವನ್ನು ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕೆ ಪಡೆಯಲು ಮುಂದಾಗಿತ್ತು. 3,404 ಚದರ ಮೀಟರ್‌ನ 4 ಕೋಟಿ 8 ಲಕ್ಷ 51,120 ರೂ. ಬೆಲೆಯ ನಿವೇಶನ ಇದಾಗಿದೆ. ಇದನ್ನು ಅವರು ತಮಗೆ ಪಡೆದುಕೊಂಡಿದ್ದಾರೆ. ಅವರದೇ ಪೆನ್, ಅವರದೇ ಪುಸ್ತಕ, ಅವರದೇ ಅಧಿಕಾರ, ಅವರೇ ಬರಕೊಳ್ಳುವುದು, 20 ಲಕ್ಷ 42,556 ರೂ.ಗೆ ಇದನ್ನು ಪಡೆದಿದ್ದಾರೆ. ಕೇವಲ ಶೇ. 5 ಮೌಲ್ಯಕ್ಕೆ ಇದನ್ನು ತೆಗೆದುಕೊಂಡಿದ್ದಾಗಿ ದೂರಿದರು. ತುಮಕೂರು, ಗ್ರಾಮಾಂತರ ಜಿಲ್ಲೆ, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ- ಹೀಗೆ ಎಲ್ಲ ಜಿಲ್ಲೆಗಳಲ್ಲಿ ನಿವೇಶನವನ್ನು ತೆಗೆದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.

ಬಾದಾಮಿಯಲ್ಲಿ 613 ಚದರ ಮೀಟರ್‌ನ ನಿವೇಶನಕ್ಕೆ 24 ಲಕ್ಷದ 52 ಸಾವಿರ ಮೌಲ್ಯದ ಬದಲಾಗಿ 1 ಲಕ್ಷ 22 ಸಾವಿರಕ್ಕೆ ಪಡೆದಿದ್ದಾರೆ. ಇದು ಕೂಡ ಶೇ. 5ರಷ್ಟಿದೆ. ಕೊಪ್ಪಳದಲ್ಲಿ 1 ಕೋಟಿ 31 ಲಕ್ಷದ 31,975 ರೂ. ಬದಲು 6,56,598 ರೂ. ಗೆ ಅಂದರೆ ಶೇ. 5 ದರಕ್ಕೆ ಪಡೆದಿದ್ದಾರೆ. ಚನ್ನರಾಯಪಟ್ಟಣದಲ್ಲಿ 1.36 ಲಕ್ಷಕ್ಕೆ ತೆಗೆದುಕೊಂಡಿದ್ದಾರೆ. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 1 ಕೋಟಿ 45 ಲಕ್ಷ 78 ಸಾವಿರದ ನಿವೇಶನವನ್ನು 7 ಲಕ್ಷ 28 ಸಾವಿರಕ್ಕೆ ಬರೆದುಕೊಂಡಿದ್ದಾರೆ. ಗೌರಬಿದನೂರಿನಲ್ಲಿ 90 ಲಕ್ಷ 80,900 ರೂ ಬೆಲೆಯ ನಿವೇಶನವನ್ನು 4 ಲಕ್ಷ 54 ಸಾವಿರಕ್ಕೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕ ಸೌಕರ್ಯಕ್ಕಾಗಿ ಇರುವ ನಿವೇಶನಗಳಿವು ಎಂದು ಹೇಳಿದರು.

ಕಾಂಗ್ರೆಸ್ ಎಂದರೆ 3 ಸಿ: ಕೈ ಪಕ್ಷಕ್ಕೆ ಹೊಸ ವ್ಯಾಖ್ಯಾನ ನೀಡಿದ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ

ಮಾನ್ವಿಯಲ್ಲಿ 37 ಲಕ್ಷ 87,500 ರೂ. ನಿವೇಶನವನ್ನು 1 ಲಕ್ಷ 89 ಸಾವಿರ, ಶಹಾಪುರದಲ್ಲಿ 95 ಲಕ್ಷ 71,144 ರೂ. ಸೈಟನ್ನು 4 ಲಕ್ಷ 78 ಸಾವಿರ ಅಂದರೆ ಕೇವಲ ಶೇ.5 ಮೌಲ್ಯಕ್ಕೆ ಪಡೆದಿದ್ದು, ಬಸವಕಲ್ಯಾಣದಲ್ಲಿ ಹಾಗೇ ಮಾಡಿದ್ದಾರೆ. ಅಲ್ಲಿ ದರ ವಿಧಿಸಿಲ್ಲ. ಲಿಂಗಸುಗೂರಿನಲ್ಲಿ 46 ಲಕ್ಷ 99,200 ರೂ. ದನ್ನು 2 ಲಕ್ಷ 34ಕ್ಕೆ ಬರೆದುಕೊಂಡಿದ್ದಾರೆ. ತುಮಕೂರು ಪಾಲಿಕೆ ವ್ಯಾಪ್ತಿಯಲ್ಲಿ 1 ಕೋಟಿ 70 ಸಾವಿರದ ನಿವೇಶನವನ್ನು 8 ಲಕ್ಷ 50 ಸಾವಿರಕ್ಕೆ ಬರೆದುಕೊಂಡಿದ್ದಾರೆ ಎಂದು ದೂರಿದರು.

ಹುಬ್ಬಳ್ಳಿ- ಧಾರವಾಡದಲ್ಲಿ ನಿವೇಶನಕ್ಕೆ ದರ ಹಾಕಿಲ್ಲ. ನಾಗರಿಕ ಸೌಲಭ್ಯ ನಿವೇಶನಗಳನ್ನು ಕಾಂಗ್ರೆಸ್ ಭವನ ಟ್ರಸ್ಟಿಗೆ ಮಂಜೂರು ಮಾಡಲು ಅವಕಾಶ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಇದನ್ನು ಸಚಿವ ಸಂಪುಟದ ಮುಂದೆ ಮಂಡಿಸಿ, ಅಲ್ಲಿ ಅನುಮೋದನೆ ಕೊಟ್ಟು ಸದ್ರಿ ನಾಗರಿಕ ಸೌಲಭ್ಯ ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂದು ದಾಖಲೆಗಳನ್ನು ಓದಿ ಹೇಳಿದರು. ಇದು ಬೈರತಿ ಸುರೇಶ್ ಅವರು ಕೊಟ್ಟ ವರದಿ ಎಂದು ಹೇಳಿದರು.

ಅಧಿಕಾರಿಗಳು ಇದರ ಮಂಜೂರಾತಿ ಕಾನೂನುಬಾಹಿರ ಎಂದು ತಿಳಿಸಿದ್ದರು. ಆದರೂ, ಸರ್ಕಾರದ ಸಚಿವ ಸಂಪುಟದ ಸಭೆಯಲ್ಲಿ ಮಂಡಿಸಿ ವಿಶೇಷವಾದ ಅನುಮೋದನೆ ಕೊಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ, ತುಮಕೂರು, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಕಂದಾಯ ಇಲಾಖೆಯಲ್ಲೂ ಇದೇ ರೀತಿ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಕಂದಾಯ ಇಲಾಖೆಯಿಂದ 5 ನಿವೇಶನಗಳು, ಪುರಸಭೆ- ಸ್ಥಳೀಯ ಸಂಸ್ಥೆಗಳಿಂದ 26 ನಿವೇಶನಗಳನ್ನು ಭೂಕಬಳಿಕೆ ಮಾಡಿದೆ ಎಂದು ಆರೋಪಿಸಿದರು.

ನಿವೇಶನ ವಾಪಸ್ ಪಡೆಯಲು ಆಗ್ರಹ

ಇವೆಲ್ಲವೂ ಸರ್ಕಾರಿ ದಾಖಲೆಗಳು, ನಾವ್ಯಾರೂ ಸೃಷ್ಟಿಸಿದ್ದಲ್ಲ. ಅವರಿಂದ ಪಡೆದ ದಾಖಲೆಗಳಿವು ಎಂದು ಪ್ರದರ್ಶಿಸಿದರು. ಕಾನೂನು ಇಲಾಖೆ ಇದನ್ನು ಪರಿಶೀಲಿಸಲಿ. ಈ ಎಲ್ಲ ನಿವೇಶನಗಳನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿಗಳು ಭೂಕಬಳಿಕೆ ಮಾಡಿ ಮುಡಾದಲ್ಲಿ ಸಿಕ್ಕಿ ಬಿದ್ದಿದ್ದರು. ಅವರು ಜೈಲಿಗೆ ಹೋಗುವುದು ಗ್ಯಾರಂಟಿ ಆದಾಗ ನಿವೇಶನಗಳನ್ನು ವಾಪಸ್ ಕೊಟ್ಟಿದ್ದರು ಎಂದು ಆರೋಪಿಸಿದ ಅವರು, ಈ ಭೂಕಬಳಿಕೆಯಿಂದ ನೀವು ಜೈಲಿಗೆ ಹೋಗುವ ಪರಿಸ್ಥಿತಿ ಬರಲಿದೆ. ಅದರಿಂದ ತಪ್ಪಿಸಿಕೊಳ್ಳಲು ಕೂಡಲೇ ನಿವೇಶನಗಳನ್ನು ವಾಪಸ್ ಕೊಡಿ ಎಂದು ಒತ್ತಾಯಿಸಿದರು. ವಾಪಸ್ ಕೊಡದೇ ಇದ್ದರೆ ಕೋರ್ಟ್ ಮೊರೆ ಹೋಗಲೂ ಸಿದ್ಧ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.

ಅಧಿಕಾರ ದುರುಪಯೋಗ, ದೊಡ್ಡ ಲೋಪ

ಬಿಜೆಪಿ, ಅನೇಕ ಕಡೆಗಳಲ್ಲಿ ಖಾಸಗಿಯಾಗಿ ಜಾಗ ಖರೀದಿಸಿ ಕಚೇರಿ ನಿರ್ಮಿಸಿದೆ. ಅದು ಸರ್ಕಾರಿ ಭೂಮಿಯನ್ನು ತೆಗೆದುಕೊಂಡಿಲ್ಲ. ರಾಜಕೀಯ ಪಕ್ಷಗಳು ಒಂದು ನಿವೇಶನ ಪಡೆಯಲು ಅವಕಾಶ ಇದೆ. ಇವರು ಅಧಿಕಾರ ದುರುಪಯೋಗ ಪಡಿಸಿಕೊಂಡು ತಾಲೂಕು, ಮಂಡಲಗಳಲ್ಲಿ, ಜಿಲ್ಲೆಗಳಲ್ಲಿ ಈ ರೀತಿ ಲೂಟಿ ಹೊಡೆದು ಸರ್ಕಾರಿ ಜಮೀನುಗಳನ್ನು ಪಡೆದುದು ಸರಿಯಲ್ಲ. ಇದು ಕಾನೂನಿನ ದೊಡ್ಡ ಲೋಪ. ಇದರ ವಿರುದ್ಧ ನಮ್ಮ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ, ವರ್ಗಗಳಿಗೆ ಕಾಂಗ್ರೆಸ್ ಸರ್ಕಾರದ ದ್ರೋಹ

ಎಸ್‍ಇಪಿ, ಟಿಎಸ್‍ಪಿ ವಿಚಾರದಲ್ಲಿ ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಮ್ಮ ಹೋರಾಟ ನಡೆದಿದೆ. ಈ ಕಾಯ್ದೆಯನ್ನು ತಂದಿದ್ದು ಸಿದ್ದರಾಮಯ್ಯನವರೇ. ಇದೊಂದು ವಿಶೇಷ ಕಾರ್ಯಕ್ರಮ. ಹಣ ಪೋಲಾಗಬಾರದು. ಅನ್ಯ ಉದ್ದೇಶಕ್ಕೆ ಬಳಸಬಾರದೆಂದು ಕಾಯ್ದೆ ತಂದಿದ್ದರು. ನಮ್ಮ ಸರ್ಕಾರ ಇದ್ದಾಗ 7 ಡಿ ತೆಗೆಯಲು ಮುಂದಾಗಿದ್ದೆವು. ಕಾಂಗ್ರೆಸ್ ಪಕ್ಷ 7 ಡಿ ತೆಗೆದು 7 ಸಿ ಕೆಳಗಡೆ ಹಣ ಅನ್ಯ ಉದ್ದೇಶ, ಅನ್ಯ ಇಲಾಖೆಗೆ ನೀಡುತ್ತಿದ್ದಾರೆ. 3 ವರ್ಷಗಳಲ್ಲಿ 39 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗಾಗಿ ಬಳಸಿದ್ದಾರೆ. ಪರಿಶಿಷ್ಟ ಜಾತಿ, ವರ್ಗಗಳಿಗೆ ಕಾಂಗ್ರೆಸ್ ಸರ್ಕಾರ ದ್ರೋಹ, ಅನ್ಯಾಯ, ವಂಚನೆ ಮಾಡಿದೆ ಎಂದು ಅವರು ಆರೋಪಿಸಿದರು.

ಈ ಕುರಿತು ಮೊನ್ನೆ ಕೂಡ ಪತ್ರ ಬರೆದಿದ್ದೇನೆ. ಈ ಬಾರಿಯಾದರೂ ಆ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಬಾರದೆಂದು ಆಗ್ರಹ ಪಡಿಸಿದ್ದೇನೆ ಎಂದ ಅವರು, ಬಜೆಟ್ ಸಭೆ ನಿನ್ನೆ ನಡೆದಿದ್ದು, ಪ್ರಿಯಾಂಕ್ ಖರ್ಗೆ ಸೇರಿ ಯಾರೂ ಇದರ ಕುರಿತು ಮಾತನಾಡಿಲ್ಲ. ಅವರಿಗೆ ದಲಿತತ್ವವೇ ಗೊತ್ತಿಲ್ಲ. ದಲಿತರ ಹೆಸರಿನಲ್ಲಿ ಸಚಿವರಾಗಿದ್ದಾರೆ. ಅಪ್ಪನ ನೆರಳಿನಲ್ಲಿ ಮಂತ್ರಿಯಾಗಿದ್ದು, ಬೊಗಳೆ ಭಾಷಣ ಬಿಟ್ಟರೆ ಬೇರೇನೂ ಇಲ್ಲ ಎಂದು ಟೀಕಿಸಿದರು.

ಬಾಗೇಪಲ್ಲಿ ಕಾಂಗ್ರೆಸ್‌ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆಯ್ಕೆ ಅಸಿಂಧು; ಹೈಕೋರ್ಟ್ ಆದೇಶ

ಕೆ.ಎಚ್. ಮುನಿಯಪ್ಪ, ತಿಮ್ಮಾಪುರ, ಡಾ. ಪರಮೇಶ್ವರ್, ಮಹದೇವಪ್ಪ- ಎಲ್ಲರೂ ಸೇರಿ ದಲಿತರಿಗೆ ವಂಚಿಸಿದ್ದಾರೆ. ದಲಿತರಿಗೆ ಅನ್ಯಾಯ ಆದರೂ ಮಾತನಾಡಲಾಗದ ಪರಿಸ್ಥಿತಿ ಸಚಿವರಿಗೆ ಇದೆ. ಇವರಿಗೆ ಅಧಿಕಾರ ಮುಖ್ಯವೇ ಹೊರತು ಸಮುದಾಯ ಮುಖ್ಯವಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ದೂರಿದರು.‌ ಈ ವೇಳೆ ರಾಜ್ಯ ವಕ್ತಾರರಾದ ಡಾ. ನರೇಂದ್ರ ರಂಗಪ್ಪ, ಮೋಹನ್ ವಿಶ್ವ, ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಉಪಸ್ಥಿತರಿದ್ದರು.