Waqf Amendment Bill: ಸಂಸತ್ತಿನಲ್ಲಿ ಅಂಗೀಕಾರಗೊಂಡ ವಕ್ಫ್ ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದೆ ಕಾಂಗ್ರೆಸ್
Waqf Amendment Bill: ಸಂಸತ್ತಿನ ಎರಡೂ ಮನೆಗಳಲ್ಲಿ ಅಂಗೀಕಾರಗೊಂಡಿರುವ ವಕ್ಫ್ (ತಿದ್ದುಪಡಿ) ಮಸೂದೆ 2025ರ ವಿರುದ್ಧ ಶೀಘ್ರದಲ್ಲಿಯೇ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಕಾಂಗ್ರೆಸ್ ಶುಕ್ರವಾರ ಹೇಳಿದೆ. ಮಸೂದೆ ಅಂಗೀಕಾರಗೊಂಡಿದ್ದು, ಭಾರತೀಯ ಸಂವಿಧಾನದ ಮೇಲೆ ನರೇಂದ್ರ ಮೋದಿ ಸರ್ಕಾರದ ದಾಳಿ" ಎಂದು ಕರೆದಿರುವ ಕಾಂಗೆಸ್ ರಾಷ್ಟ್ರೀಯ ವಕ್ತಾರ ಜೈರಾಂ ರಮೇಶ್, ಈ ಮಸೂದೆಯ ವಿರುದ್ಧ ಕಾಂಗ್ರೆಸ್ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ.


ನವದೆಹಲಿ: ಸಂಸತ್ತಿನ ಎರಡೂ ಮನೆಗಳಲ್ಲಿ ಅಂಗೀಕಾರಗೊಂಡಿರುವ ವಕ್ಫ್ (ತಿದ್ದುಪಡಿ) ಮಸೂದೆ(Waqf (Amendment) Bill) 2025ರ ವಿರುದ್ಧ ಶೀಘ್ರದಲ್ಲಿಯೇ ಸುಪ್ರೀಂ ಕೋರ್ಟ್(Supreme Court) ಮೊರೆ ಹೋಗುವುದಾಗಿ ಕಾಂಗ್ರೆಸ್ ಶುಕ್ರವಾರ ಹೇಳಿದೆ. “ಮಸೂದೆ ಅಂಗೀಕಾರಗೊಂಡಿದ್ದು, ಭಾರತೀಯ ಸಂವಿಧಾನದ ಮೇಲೆ ನರೇಂದ್ರ ಮೋದಿ ಸರ್ಕಾರದ ದಾಳಿ" ಎಂದು ಕರೆದಿರುವ ಕಾಂಗೆಸ್ ರಾಷ್ಟ್ರೀಯ ವಕ್ತಾರ ಜೈರಾಮ್ ರಮೇಶ್(Congress leader Jairam Ramesh), ಈ ಮಸೂದೆಯ ವಿರುದ್ಧ ಕಾಂಗ್ರೆಸ್(Congress Party) ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಈವರೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನು ತಿದ್ದುಪಡಿಗಳನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ ಕುರಿತು ಮಾಹಿತಿ ನೀಡಿರುವ ಅವರು, "ಸಿಎಎ, 2019 ಕಾಯ್ದೆಯನ್ನು ಕಾಂಗ್ರೆಸ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಇದರ ವಿಚಾರಣೆ ನಡೆಯುತ್ತಿದೆ.
2005ರ ಆರ್‌ಟಿಐ ಕಾಯ್ದೆಗೆ 2019ರಲ್ಲಿ ಕೇಂದ್ರ ತಂದಿರುವ ತಿದ್ದುಪಡಿಯನ್ನು ಕೂಡಾ ಕಾಂಗ್ರೆಸ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಚುನಾವಣಾ ನಿಯಮಗಳ ನಡವಳಿಕೆ (2024) ತಿದ್ದುಪಡಿಗಳ ಸಿಂಧುತ್ವ, ಪೂಜಾ ಸ್ಥಳಗಳ ಕಾಯ್ದೆ, 1991 ತಿದ್ದುಪಡಿಗಳ ವಿರುದ್ಧ ಕಾಂಗ್ರೆಸ್ ಈಗಾಗಲೇ ಸುಪ್ರೀಂ ಕೋರ್ಟ್ ಕದ ತಟ್ಟಿದೆ” ಎಂದರು.
ಈಗ, ವಕ್ಫ್ (ತಿದ್ದುಪಡಿ) ಮಸೂದೆ, 2024 ರ ಸಾಂವಿಧಾನಿಕತೆಯನ್ನು ಕಾಂಗ್ರೆಸ್ ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿದೆ ಎಂದ ಜೈರಾಮ್ ರಮೇಶ್, ಭಾರತದ ಸಂವಿಧಾನ ಒಳಗೊಂಡಿರುವ ತತ್ವಗಳು, ನಿಬಂಧನೆಗಳು ಮೇಲೆ ಮೋದಿ ಸರ್ಕಾರ ನಡೆಸುತ್ತಿರುವ ಎಲ್ಲಾ ದಾಳಿಗಳನ್ನು ಸಮರ್ಥವಾಗಿ ಎದುರಿಸುವ ವಿಶ್ವಾಸವನ್ನು ನಾವು ಹೊಂದಿದ್ದೇವೆ ಎಂದು ಅವರು ಹೇಳಿದರು.
The INC's challenge of the CAA, 2019 is being heard in the Supreme Court.
— Jairam Ramesh (@Jairam_Ramesh) April 4, 2025
The INC's challenge of the 2019 amendments to the RTI Act, 2005 is being heard in the Supreme Court.
The INC’s challenge to the validity of the amendments to the Conduct of Election Rules (2024) is being…
ಕೇವಲ ಕಾಂಗ್ರೆಸ್ ಮಾತ್ರವಲ್ಲದೆ ಇನ್ನೂ ಹಲವು ವಿರೋಧ ಪಕ್ಷಗಳು ಕೂಡಾ ವಕ್ಫ್ ಮಸೂದೆಯ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಘೋಷಿಸಿವೆ. ಅಸ್ತಿತ್ವದಲ್ಲಿರುವ 1995ರ ವಕ್ಫ್ ಕಾಯ್ದೆ, ವಕ್ಫ್ ಆಸ್ತಿಗಳನ್ನು ರಕ್ಷಿಸಲು ಈಗಾಗಲೇ ಬಲವಾದ ಕಾನೂನುಗಳನ್ನು ಹೊಂದಿದೆ. ಇದಕ್ಕೆ ತಿದ್ದುಪಡಿಗಳ ಅಗತ್ಯವಿಲ್ಲ. ಕೆಲವು ಮೈತ್ರಿ ಪಕ್ಷಗಳ ಸಹಾಯದಿಂದ ಮಸೂದೆಯನ್ನು ಈ ರೀತಿ ಅಂಗೀಕರಿಸುವುದು ಭಾರತದ ಸಂವಿಧಾನದ ಮೇಲಿನ ದಾಳಿ ಮತ್ತು ಧಾರ್ಮಿಕ ಸಾಮರಸ್ಯವನ್ನು ಹಾಳುಮಾಡುವ ಕೃತ್ಯವಾಗಿದೆ. ಇದನ್ನು ನಾವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದೇವೆ ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರು ವಿಧಾನಸಭೆಯಲ್ಲಿಯೇ ಘೋಷಿಸಿದ್ದಾರೆ.
ಇದರೊಂದಿಗೆ, ವಕ್ಫ್ (ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿ ಅಂಕಿತ ಬಿದ್ದ ಮರುಕ್ಷಣವೇ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB)ಯು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ ಎಂದು ಮಂಡಳಿಯ ವಕ್ತಾರ ಸೈಯದ್ ಖಾಸಿಂ ರಸೂಲ್ ಇಲ್ಯಾಸ್ ಹೇಳಿದ್ದಾರೆ.
ಉಭಯ ಸದನಗಳಲ್ಲಿ ಮಸೂದೆ ಅಂಗೀಕಾರ:
ವಕ್ಫ್ ತಿದ್ದುಪಡಿ ಮಸೂದೆಯನ್ನು ಸುಮಾರು 13 ಗಂಟೆಗಳ ಚರ್ಚೆಯ ನಂತರ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. ಇದಕ್ಕೂ ಮುನ್ನ, ಈ ಮಸೂದೆಯನ್ನು ಹಲವು ಗಂಟೆಗಳ ಚರ್ಚೆಯ ನಂತರ ಲೋಕಸಭೆಯಲ್ಲಿಯೂ ಅಂಗೀಕರಿಸಲಾಗಿತ್ತು. ಈ ಚರ್ಚೆಯಲ್ಲಿ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗಿದ್ದು, ಅವು ಮಸೂದೆಯನ್ನು "ಮುಸ್ಲಿಂ ವಿರೋಧಿ" ಮತ್ತು "ಅಸಂವಿಧಾನಿಕ" ಎಂದು ಕರೆದಿವೆ. ಸರ್ಕಾರವು ಈ ತಿದ್ದುಪಡಿಗಳನ್ನು ಸಮರ್ಥಿಸಿಕೊಂಡಿದ್ದು, ಇದೊಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಯೋಜನವಾಗಲಿರುವ "ಐತಿಹಾಸಿಕ ಸುಧಾರಣೆ"ಯಾಗಲಿದೆ ಎಂದಿದೆ.