LK Advani: ಎಲ್.ಕೆ. ಅಡ್ವಾಣಿ ದೇಶಕ್ಕೆ ಸಲ್ಲಿಸಿದ ಸೇವೆ ಸ್ಮರಣೀಯ; 98ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಪ್ರಧಾನಿ ಮೋದಿ
Narendra Modi: ಬಿಜೆಪಿ ಹಿರಿಯ ಮುಖಂಡ, ಮಾಜಿ ಉಪಪ್ರಧಾನಿ, ಭಾರತ ರತ್ನ ಎಲ್.ಕೆ. ಅಡ್ವಾಣಿ ನವೆಂಬರ್ 8ರಂದು 98ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ. ದೇಶಕ್ಕಾಗಿ ಅಡ್ವಾಣಿ ನೀಡಿದ ಕೊಡುಗೆಯನ್ನು ಸ್ಮರಿಸಿದ ಮೋದಿ, ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.
ಎಲ್.ಕೆ. ಅಡ್ವಾಣಿ ಅವರನ್ನು ಭೇಟಿಯಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ. -
ದೆಹಲಿ, ನ. 8: ಭಾರತದ ಧೀಮಂತ ನಾಯಕ, ಬಿಜೆಪಿ ಮುಖಂಡ, ಮಾಜಿ ಉಪಪ್ರಧಾನಿ, ಭಾರತ ರತ್ನ ಎಲ್.ಕೆ. ಅಡ್ವಾಣಿ (LK Advani) ನವೆಂಬರ್ 8ರಂದು 98ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅಡ್ವಾಣಿ ಹುಟ್ಟುಹಬ್ಬದ ಪ್ರಯುಕ್ತ ಅವರ ನಿವಾಸಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಶುಭಾಶಯ ತಿಳಿಸಿದರು. ದೇಶಕ್ಕಾಗಿ ಅಡ್ವಾಣಿ ನೀಡಿದ ಕೊಡುಗೆಯನ್ನು ಸ್ಮರಿಸಿದ ಮೋದಿ, ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರು. ಅಡ್ವಾಣಿ ಅವರ ಭೇಟಿಯ ಅಪೂರ್ವ ಕ್ಷಣವನ್ನು ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ʼʼಅಡ್ವಾಣಿ ಅವರ ಹುಟ್ಟುಹಬ್ಬದ ಹಿನ್ನೆೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿ ಶುಭಾಶಯ ತಿಳಿಸಿದೆ. ನಮ್ಮ ರಾಷ್ಟ್ರಕ್ಕೆ ಅವರು ಸಲ್ಲಿಸಿದ ಸೇವೆ ಸ್ಮರಣೀಯ ಮತ್ತು ನಮ್ಮೆಲ್ಲರಿಗೂ ಸ್ಫೂರ್ತಿ. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಸಿಗಲಿ” ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರ ಎಕ್ಸ್ ಪೋಸ್ಟ್:
Went to Shri LK Advani Ji's residence and greeted him on the occasion of his birthday. His service to our nation is monumental and greatly motivates us all. pic.twitter.com/02Y1LvZRYR
— Narendra Modi (@narendramodi) November 8, 2025
ಈ ಸುದ್ದಿಯನ್ನೂ ಓದಿ: LK Advani: ಎಲ್.ಕೆ.ಅಡ್ವಾಣಿ ಮನೆಗೆ ಭೇಟಿ ನೀಡಿದ ಗಾಯಕ ಸೋನು ನಿಗಮ್
ಗಣ್ಯರಿಂದ ಶುಭಾಶಯ
ವಿವಿಧ ರಾಜಕೀಯ ಮುಖಂಡರು ಬಿಜೆಪಿ ಭೀಷ್ಮ ಅಡ್ವಾಣಿ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ, "ಬಿಜೆಪಿಯ ಸ್ಥಾಪಕ ಸದಸ್ಯರಾಗಿ, ಮಾಜಿ ರಾಷ್ಟ್ರೀಯ ಅಧ್ಯಕ್ಷರಾಗಿ 'ಭಾರತ ರತ್ನ' ಎಲ್.ಕೆ. ಅಡ್ವಾಣಿ ತಮ್ಮ ಇಡೀ ಜೀವನವನ್ನು ರಾಷ್ಟ್ರಕ್ಕೆ ಮುಡಿಪಾಗಿಟ್ಟಿದ್ದಾರೆ. ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸುವುದರಿಂದ ಹಿಡಿದು ಗೃಹ ಸಚಿವರಾಗಿ ದೇಶದ ಆಂತರಿಕ ಭದ್ರತೆಯನ್ನು ಹೆಚ್ಚಿಸುವವರೆಗೆ ಅವರ ಕೊಡುಗೆಗೆ ಸಾಟಿಯಿಲ್ಲ. ರಾಮ ಜನ್ಮಭೂಮಿ ಚಳವಳಿಯ ಸಮಯದಲ್ಲಿ ಅವರ ನಾಯಕತ್ವವು ಭಾರತದಾದ್ಯಂತ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಿತು" ಎಂದು ತಿಳಿಸಿದ್ದಾರೆ.
ಅಮಿತ್ ಶಾ ಅವರ ಪೋಸ್ಟ್:
भाजपा के संस्थापक सदस्य, पूर्व राष्ट्रीय अध्यक्ष और करोड़ों कार्यकर्ताओं के प्रेरणास्रोत, ‘भारत रत्न’ श्री लालकृष्ण आडवाणी जी को जन्मदिन की हार्दिक शुभकामनाएँ।
— Amit Shah (@AmitShah) November 8, 2025
आडवाणी जी ने यह बताया है कि कैसे निःस्वार्थ भाव से पूरा जीवन राष्ट्र के प्रति समर्पित किया जाता है। संगठन से लेकर सरकार…
ಮಾಜಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, "ಭಾರತೀಯ ರಾಜಕೀಯದ ಅತ್ಯುನ್ನತ ವ್ಯಕ್ತಿ, ಉಕ್ಕಿನ ಮನುಷ್ಯ ಲಾಲ್ ಕೃಷ್ಣ ಅಡ್ವಾಣಿ ಅವರ ಜನ್ಮದಿನದಂದು, ನಾನು ದೆಹಲಿಯಲ್ಲಿರುವ ಅವರ ನಿವಾಸಕ್ಕೆ ತೆರಳಿ ಶುಭಾಶಯ ತಿಳಿಸಿದ್ದೇನೆ. ಅಡ್ವಾಣಿ ಅವರ ದೇಶಭಕ್ತಿ, ಶಿಸ್ತು, ಸಮರ್ಪಣೆ ಮತ್ತು ಅಚಲ ಸಂಕಲ್ಪ ಯುವಕರಿಗೆ ಮಾದರಿ. ದೇವರು ಅವರಿಗೆ ಪರಿಪೂರ್ಣ ಆರೋಗ್ಯವನ್ನು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆʼʼ ಎಂದಿದ್ದಾರೆ. ಜತೆಗೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ.
ಈಗಿನ ಪಾಕಿಸ್ತಾನದಲ್ಲಿ ಜನನ
1927ರ ನವೆಂಬರ್ 8ರಂದು ಈಗಿನ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಎಲ್.ಕೆ. ಅಡ್ವಾಣಿ ಅವರ ಪೂರ್ಣ ಹೆಸರು ಲಾಲ್ ಕೃಷ್ಣ ಅಡ್ವಾಣಿ. ಭಾರತ-ಪಾಕಿಸ್ತಾನ ವಿಭಜನೆಯಾದಾಗ ನೋವು ಅನುಭವಿಸಿದ ಕೋಟ್ಯಂತರ ಮಂದಿಯಲ್ಲಿ ಇವರೂ ಒಬ್ಬರು. ಅಯೋಧ್ಯೆ ರಾಮಜನ್ಮ ಭೂಮಿ ಹೋರಾಟದಲ್ಲಿ ಅವರು ಮುಂಚೂಣಿಯಲ್ಲಿದ್ದರು. ಆರ್‌ಎಸ್‌ಎಸ್ ಹಿನ್ನೆಲೆಯ ಅವರು ದೇಶದಲ್ಲಿ ಬಿಜೆಪಿ ಶಕ್ತವಾಗಿ ಬೆಳೆಯಲು ಸಾಕಷ್ಟು ಕೊಡುಗೆ ನೀಡಿದ್ದಾರೆ.
ಸಂಸದರಾಗಿ 3 ದಶಕಗಳ ಕಾಲ ಸೇವೆ ಸಲ್ಲಿಸಿದ ಅಡ್ವಾಣಿ ಗೃಹ ಸಚಿವ, ಉಪ ಪ್ರಧಾನಿಯಾಗಿ(1999-2004) ತಮ್ಮದೇ ಛಾಪು ಮೂಡಿಸಿದರು. 2019ರಿಂದ ಅವರು ರಾಜಕೀಯದಿಂದ ದೂರವೇ ಉಳಿದಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ವರ್ಷ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಿದೆ.