ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯೋತ್ಪಾದಕ ದಾಳಿಗೆ (terror attack) ಸಂಚು ರೂಪಿಸಿದ್ದ ನಾಲ್ವರನ್ನು ದೆಹಲಿ ಪೊಲೀಸರ ವಿಶೇಷ ಘಟಕ (Delhi Police's Special Cell) ಬಂಧಿಸಿದೆ. ಈ ಕುರಿತು ಗುರುವಾರ ಮಾಹಿತಿ ನೀಡಿರುವ ಪೊಲೀಸರು, ಪಂಜಾಬ್ ಮತ್ತು ದೆಹಲಿಯಲ್ಲಿ ಬಂಧಿಸಲಾಗಿರುವ ಈ ನಾಲ್ವರು ಪಾಕಿಸ್ತಾನ (Pakistan) ಮೂಲದ ಭಯೋತ್ಪಾದಕ , ಐಎಸ್‌ಐ ಹ್ಯಾಂಡ್ಲರ್ ಶಹಜಾದ್ ಭಟ್ಟಿ (terrorist Shahzad Bhatti) ಜೊತೆ ಸಂಪರ್ಕ ಹೊಂದಿದ್ದರು. ದೇಶದ ಗಡಿಯುದ್ದಕ್ಕೂ ಇವರು ಶಹಜಾದ್ ಭಟ್ಟಿ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರು. ಇವರನ್ನು ದೆಹಲಿಯಲ್ಲಿ ಭಯೋತ್ಪಾದನಾ ಸಂಬಂಧಿತ ಚಟುವಟಿಕೆಗಳನ್ನು ನಡೆಸಲು ಸಿದ್ಧಪಡಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಬಂಧಿತರನ್ನು ಶುಭದೀಪ್ ಸಿಂಗ್ (23), ಗುರ್ಜಂತ್ ಸಿಂಗ್ (22), ಸಜನ್ ಸಿಂಗ್ (28) ಮತ್ತು ಗಗನ್‌ಪ್ರೀತ್ (24) ಎಂದು ಗುರುತಿಸಲಾಗಿದೆ. ಬಂಧಿತರಿಂದ ಎರಡು ವಿದೇಶಿ ನಿರ್ಮಿತ ಪಿಸ್ತೂಲ್‌ಗಳು, ಒಂಬತ್ತು ಲೈವ್ ಕಾರ್ಟ್ರಿಡ್ಜ್‌ಗಳು ಮತ್ತು ಐದು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅಂತ್ಯಕ್ರಿಯೆಗೆ ಇರಾನ್‌ಗೆ ತೆರಳಲಿದ್ದಾರೆ ಮೆಹಬೂಬಾ ಮುಫ್ತಿ
ಭಯೋತ್ಪಾದಕ ಚಟುವಟಿಕೆಯ ಕುರಿತು ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಆಧಾರದಲ್ಲಿ ಈ ಬಂಧನ ನಡೆದಿದೆ. ಎಸಿಪಿ ವಿವೇಕ್ ಕುಮಾರ್ ತ್ಯಾಗಿ, ಇನ್ಸ್‌ಪೆಕ್ಟರ್‌ಗಳಾದ ಸತೀಶ್ ರಾಣಾ ಮತ್ತು ಅಶೋಕ್ ನೇತೃತ್ವದಲ್ಲಿ ವಿಶೇಷ ತಂಡವು ದೆಹಲಿ ಮತ್ತು ಪಂಜಾಬ್‌ನ ಅನೇಕ ಸ್ಥಳಗಳಲ್ಲಿ ಸಂಘಟಿತ ದಾಳಿಗಳನ್ನು ನಡೆಸಿತ್ತು.
ಪಂಜಾಬ್‌ನ ಅಮೃತಸರದಲ್ಲಿ ಶುಭದೀಪ್ ಸಿಂಗ್ ನನ್ನು ಬಂಧಿಸಲಾಗಿದ್ದು, ಆತನಿಂದ ವಿದೇಶಿ ನಿರ್ಮಿತ ಪಿಸ್ತೂಲ್, ಲೈವ್ ಕಾರ್ಟ್ರಿಡ್ಜ್‌ಗಳು ಮತ್ತು ಹಲವು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಆಧಾರದಲ್ಲಿ ಪೊಲೀಸರು ಆತನ ಸಹಚರರಾದ ಗುರ್ಜಂತ್ ಸಿಂಗ್, ಸಜನ್ ಸಿಂಗ್ ನನ್ನು ಪಂಜಾಬ್‌ನ ವಿವಿಧ ಸ್ಥಳಗಳಲ್ಲಿ ಬಂಧಿಸಲಾಯಿತು. ಮತ್ತೋರ್ವ ಆರೋಪಿ ಗಗನ್‌ಪ್ರೀತ್‌ನನ್ನು ಏಪ್ರಿಲ್ 24 ರಂದು ದೆಹಲಿಯಲ್ಲಿ ಬಂಧಿಸಲಾಯಿತು.
ವಿಚಾರಣೆ ವೇಳೆ ಆತ ವಿದೇಶಿ ಫೋನ್ ಸಂಖ್ಯೆಗಳನ್ನು ಬಳಸಿ ನಿರಂತರವಾಗಿ ಐಎಸ್‌ಐ ಹ್ಯಾಂಡ್ಲರ್ ಶಹಜಾದ್ ಭಟ್ಟಿ ಜೊತೆ ಸಂಪರ್ಕದಲ್ಲಿದ್ದುದಾಗಿ ಬಹಿರಂಗಪಡಿಸಿದ್ದಾನೆ. ಇವರು ದೇಶದ ಗಡಿ ಭಾಗದಲ್ಲಿ ಡ್ರೋನ್‌ಗಳ ಮೂಲಕ ಬೀಳಿಸಿದ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಸ್ವೀಕರಿಸಿರುವುದಾಗಿ ಹೇಳಿದ್ದಾರೆ. ಅಲ್ಲದೇ ದೆಹಲಿಯ ಪೊಲೀಸ್ ಠಾಣೆಗಳು ಮತ್ತು ಧಾರ್ಮಿಕ ಸ್ಥಳಗಳ ಮೇಲೆ ನಿರಂತರ ಕಣ್ಗಾವಲು ನಡೆಸಿದ್ದ ಗಗನ್ ಪ್ರೀತ್ ಗೆ ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಸುವ ಕಾರ್ಯವನ್ನು ವಹಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಗಡಿ ಸಮೀಪದಲ್ಲಿರುವ ತರಣ್ ಜಿಲ್ಲೆಯ ನಿವಾಸಿ ಶುಭದೀಪ್ ಸಿಂಗ್ ಈ ಹಿಂದೆ ಮಾದಕ ದ್ರವ್ಯ ಸಂಬಂಧಿತ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದನು. ಆತನ ವಿರುದ್ಧ ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯ ಸಾಗಾಟದ ಆರೋಪವಿದೆ. ಇನ್ನು ಗುರ್ಜಂತ್ ಸಿಂ, ಅಲಿಯಾಸ್ ರಿಷಿ ಕೂಡ ತರಣ್ ಮೂಲದವನಾಗಿದ್ದು, ಆತನ ಸೋದರಸಂಬಂಧಿ ಸಜನ್ ಸಿಂಗ್ ಅಲಿಯಾಸ್ ಹನಿ ಅಮೃತಸರ ನಿವಾಸಿಯಾಗಿದ್ದಾನೆ. ಇವರು ಕೂಡ ಡ್ರೋನ್‌ಗಳ ಮೂಲಕ ತಲುಪಿಸಲಾದ ಶಸ್ತ್ರಾಸ್ತ್ರಗಳನ್ನು ಪಡೆದಿದ್ದಾರೆ. ಇವರ ವಿರುದ್ಧ ಮಾದಕ ದ್ರವ್ಯ ಮತ್ತು ಮನೋವಿಕೃತ ವಸ್ತುಗಳ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರ ಧ್ವಂಸ; ಭಾರತದಿಂದ ತೀವ್ರ ಖಂಡನೆ
ಪಂಜಾಬ್‌ನ ಫತೇಘರ್ ಸಾಹಿಬ್ ನಿವಾಸಿಯಾಗಿರುವ ಗಗನ್‌ಪ್ರೀತ್ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪಾಕಿಸ್ತಾನಿ ನಿರ್ವಾಹಕರೊಂದಿಗೆ ಸಂಪರ್ಕದಲ್ಲಿದ್ದನು. ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.