CT Ravi: ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರದ ಮೂಲಕ ದೂರು ಕೊಡುತ್ತಿಲ್ಲವೇಕೆ?- ರಾಹುಲ್ ಗಾಂಧಿಗೆ ಸಿ.ಟಿ. ರವಿ ಪ್ರಶ್ನೆ
CT Ravi: ರಾಹುಲ್ ಗಾಂಧಿ ಅವರು 100ಕ್ಕೂ ಹೆಚ್ಚು ಚುನಾವಣೆಯ ನೇತೃತ್ವ ವಹಿಸಿ 8-9 ಕಡೆ ಯಶಸ್ಸು ಕಂಡಿದ್ದಾರೆ. ಸುಮಾರು ಶೇ 92ರಷ್ಟು ವೈಫಲ್ಯ ಅವರದು. ತಮ್ಮ ಚುನಾವಣಾ ವೈಫಲ್ಯವನ್ನು ಅವರು ಚುನಾವಣಾ ಆಯೋಗದ ಹೆಗಲಿಗೆ ಕಟ್ಟಲು ಹೊರಟಿದ್ದಾರಾ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.

-

ಬೆಂಗಳೂರು: ತಮ್ಮ ಮತಗಳ್ಳತನ ಆರೋಪದ ಕುರಿತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರದ ಮೂಲಕ ದೂರು ಕೊಡುತ್ತಿಲ್ಲವೇಕೆ? ಹಿಟ್ ಆಂಡ್ ರನ್ ಮಾಡುವುದೇ ಇವರ ಉದ್ದೇಶವೇ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ (CT Ravi) ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಆಳಂದದಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದ ಆರೋಪ ಕುರಿತ ಪ್ರಶ್ನೆಗೆ ಉತ್ತರಿಸಿದರು. ರಾಹುಲ್ ಗಾಂಧಿ ಅವರು 100ಕ್ಕೂ ಹೆಚ್ಚು ಚುನಾವಣೆಯ ನೇತೃತ್ವ ವಹಿಸಿ 8-9 ಕಡೆ ಯಶಸ್ಸು ಕಂಡಿದ್ದಾರೆ. ಸುಮಾರು ಶೇ 92ರಷ್ಟು ವೈಫಲ್ಯ ಅವರದು. ತಮ್ಮ ಚುನಾವಣಾ ವೈಫಲ್ಯವನ್ನು ಅವರು ಚುನಾವಣಾ ಆಯೋಗದ ಹೆಗಲಿಗೆ ಕಟ್ಟಲು ಹೊರಟಿದ್ದಾರಾ ಎಂದು ಪ್ರಶ್ನಿಸಿದರು.
ಅವರದು ಆಧಾರಸಹಿತ ಆರೋಪವಾಗಿದ್ದರೆ ಆಧಾರದ ಜತೆ ಪ್ರಮಾಣಪತ್ರದೊಂದಿಗೆ ದೂರು ಸಲ್ಲಿಸಲಿ ಎಂದು ಆಗ್ರಹಿಸಿದ ಸಿ.ಟಿ. ರವಿ ಅವರು, ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆ ಮೇಲೆ ನಂಬಿಕೆ ಇದ್ದರೆ, ಕಾನೂನುಬದ್ಧವಾಗಿ ದೂರು ಕೊಡಬೇಕು ಎಂದು ಒತ್ತಾಯಿಸಿದರು. ಅವರಿಗೆ ತಮ್ಮ ವೈಫಲ್ಯವನ್ನು ಬೇರೆಯವರ ತಲೆಗೆ ಕಟ್ಟುವ ದುರುದ್ದೇಶ ಇದ್ದಂತಿದೆ ಎಂದು ಆರೋಪಿಸಿದರು.
ಚುನಾವಣಾ ಆಯೋಗವು ದೆಹಲಿ, ಬೆಂಗಳೂರು ಕಚೇರಿ ಹೊಂದಿದ್ದು, ರಾಜ್ಯಮಟ್ಟದ ಆಡಳಿತದ ಮೇಲೆ ಅವಲಂಬಿತವಾಗಿದೆ. ಜಿಲ್ಲಾಧಿಕಾರಿ, ತಹಸೀಲ್ದಾರ್ ನೇತೃತ್ವ, ಕಂದಾಯ ಇನ್‍ಸ್ಪೆಕ್ಟರ್ ನೇತೃತ್ವ, ಬೂತ್ ಮಟ್ಟದ ಅಧಿಕಾರಿಯಾಗಿ ಬಹುತೇಕ ಶಾಲಾ ಶಿಕ್ಷಕರು, ಕಂದಾಯ ಇಲಾಖೆ, ಬಿಬಿಎಂಪಿ ನೌಕರರ ಮೇಲೆ ಅವಲಂಬಿತವಾಗಿದೆ. ಇವರ ಆರೋಪ ಯಾರ ಮೇಲೆ? ಅವರ ಮೇಲೆ ಆರೋಪವಾದರೆ, ಇವರಿಗೆ ಯಾರ ಮೇಲೂ ನಂಬಿಕೆ ಇಲ್ಲ ಎಂಬುದನ್ನು ಅದು ತೋರಿಸುತ್ತದೆ ಎಂದು ಟೀಕಿಸಿದರು.
ಈ ಸುದ್ದಿಯನ್ನೂ ಓದಿ | Pralhad Joshi: ಹೊಸ ಜಿಎಸ್‌ಟಿ; ₹2-3 ಸಾವಿರ ಕೋಟಿ ವಿದ್ಯುತ್ ಖರೀದಿ ವೆಚ್ಚ ಉಳಿಕೆ- ಪ್ರಲ್ಹಾದ್ ಜೋಶಿ
ಇವರು ಆಸ್ತಿಕರೋ ನಾಸ್ತಿಕರೋ ಗೊತ್ತಿಲ್ಲ; ಆದರೆ, ಸಾವಿರ ಬಾರಿ ಸುಳ್ಳು ಹೇಳಿದರೆ, ಆ ಸುಳ್ಳೇ ಸತ್ಯವಾಗಿ ನಿರೂಪಿತ ಆಗುತ್ತದೆ ಎಂಬ ಮಾತನ್ನು ಗೊಬೆಲ್ ಹೇಳಿದ್ದ. ಬಹುಶಃ ಇವರು ಎಲ್ಲ ದೇವರನ್ನು ಹೊರಹಾಕಿ ಗೊಬೆಲನ್ನು ದೇವರಾಗಿ ಆರಾಧಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ವ್ಯಂಗ್ಯವಾಡಿದರು.