ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾಂಗ್ರೆಸ್ ಜತೆಗಿನದ್ದು 'ಬಲವಂತದ ಮದುವೆ'; ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ದೇವೇಗೌಡ ತಿರುಗೇಟು

H.D. Deve Gowda: ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ‘ಬಲವಂತದ ಮದುವೆ’ ಎಂದು ಕರೆದು ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 2018ರ ಕರ್ನಾಟಕದಲ್ಲಿನ ಮೈತ್ರಿ ಅನುಭವ ಹಿಂಸೆಯಿಂದ ಕೂಡಿತ್ತು. 2019ರಲ್ಲಿ ಕಾಂಗ್ರೆಸ್ ಕೈಬಿಟ್ಟ ಕಾರಣ ವಿಚ್ಛೇದನ ಅನಿವಾರ್ಯವಾಯಿತು ಎಂದು ಹೇಳಿದ್ದಾರೆ.

ಎಚ್.ಡಿ. ದೇವೇಗೌಡ (ಸಂಗ್ರಹ ಚಿತ್ರ)

ಬೆಂಗಳೂರು, ಮಾ. 18: ಜೆಡಿಎಸ್ (JDS) ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (H D Devegouda) ಕಾಂಗ್ರೆಸ್ (Congress) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಆ ಪಕ್ಷದೊಂದಿಗೆ 'ಬಲವಂತದ ಮದುವೆ'ಯ ಸಂಬಂಧದಲ್ಲಿದ್ದೆವು. ಆ ಸಂಬಂಧ ಹಿಂಸೆಯಿಂದ ಕೂಡಿದ್ದರಿಂದ ಅನಿವಾರ್ಯವಾಗಿ ವಿಚ್ಛೇದನ ನೀಡಬೇಕಾಯಿತು ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯಸಭೆಯಲ್ಲಿ (Rajya Sabha) ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೀಡಿದ ಹೇಳಿಕೆಗೆ ದೇವೇ ಗೌಡ ಈ ರೀತಿ ಟಾಂಗ್‌ ನೀಡಿದ್ದಾರೆ.

ರಾಜ್ಯಸಭೆಯ ನಿವೃತ್ತ ಸದಸ್ಯರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, "ನನಗೆ ಗೌಡರೊಂದಿಗೆ 54 ವರ್ಷಗಳ ಸುದೀರ್ಘ ಸಂಬಂಧವಿದೆ. ಅವರು ಮೊದಲು ನಮ್ಮನ್ನು ಪ್ರೀತಿಸಿದರು. ಆದರೆ ನಂತರ ಮೋದಿ ಸಾಹೇಬರನ್ನು ವರಿಸಿದರು" ಎಂದು ತಮಾಷೆಯಾಗಿ ಟೀಕಿಸಿದ್ದರು. ಈ ಮಾತಿಗೆ ಪ್ರಧಾನಿ ಮೋದಿ ಕೂಡ ನಕ್ಕಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ದೇವೇಗೌಡ, "ನನ್ನ ಹಳೆಯ ಗೆಳೆಯ ಖರ್ಗೆ ಮದುವೆ ಭಾಷೆಯಲ್ಲೇ ಮಾತನಾಡಿದ್ದಾರೆ. ಹಾಗಾಗಿ ನಾನೂ ಅದೇ ಭಾಷೆಯಲ್ಲಿ ಉತ್ತರಿಸುತ್ತಿದ್ದೇನೆ. ಕಾಂಗ್ರೆಸ್ ಜತೆಗಿನ ಮೈತ್ರಿ (ಮದುವೆ) ನಮಗೆ ಕಿರಿಕಿರಿ ಎನಿಸಿತ್ತುʼʼ ಎಂದರು.

ದೇವೇಗೌಡ ಅವರ ಎಕ್ಸ್‌ ಪೋಸ್ಟ್‌:



2018ರ ಘಟನೆಗಳನ್ನು ಸ್ಮರಿಸಿದ ದೇವೇ ಗೌಡ, "ಗುಲಾಂ ನಬಿ ಆಜಾದ್ ಅಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿ ಎಂದು ಪ್ರಸ್ತಾವನೆ ತಂದಾಗ, ನಾನು ಖರ್ಗೆ ಅವರನ್ನೇ ಸಿಎಂ ಮಾಡಿ ಎಂದು ಎಲ್ಲರ ಸಮ್ಮುಖದಲ್ಲಿ ಹೇಳಿದ್ದೆ. ಸಿದ್ದರಾಮಯ್ಯ ಕೂಡ ಅಲ್ಲಿದ್ದರು. ಆದರೆ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಅವರೇ ಸಿಎಂ ಆಗಬೇಕೆಂದು ಪಟ್ಟು ಹಿಡಿದರು. ಆಜಾದ್ ಅವರ ಒತ್ತಾಯಕ್ಕೆ ಮಣಿದು ಮದುವೆ ಮಾಡಿಕೊಂಡೆವು. ಆದರೆ 2019ರಲ್ಲಿ ಕಾಂಗ್ರೆಸ್ ನಮ್ಮನ್ನು ಕೈಬಿಟ್ಟಿತು. ಕಾಂಗ್ರೆಸ್ ಶಾಸಕರು ಯಾರ ಸೂಚನೆಯ ಮೇರೆಗೆ ಬಿಜೆಪಿ ಸೇರಿದರು ಎಂಬುದು ಎಲ್ಲರಿಗೂ ಗೊತ್ತು" ಎಂದು ಪರೋಕ್ಷವಾಗಿ ರಾಜ್ಯ ನಾಯಕರತ್ತ ಬೆರಳು ತೋರಿದರು.

ಬೇಡ್ತಿ-ವರದಾ ನದಿ, ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆ ಕೈಬಿಡಿ; ಡಿಸಿಎಂ ಡಿಕೆಶಿಗೆ ಮನವಿ ಸಲ್ಲಿಕೆ

"ಅಂದು ಪಕ್ಷಾಂತರಕ್ಕೆ ಪ್ರಚೋದನೆ ನೀಡಿದವರ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿದ್ದರೆ, ಇಂದು ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಇನ್ನೂ ಉತ್ತಮ ಸ್ಥಿತಿಯಲ್ಲಿರುತ್ತಿದ್ದರು. ನಾವು ಮೈತ್ರಿಯಿಂದ ಹೊರಬಂದಿಲ್ಲ, ಕಾಂಗ್ರೆಸ್ಸೇ ನಮ್ಮನ್ನು ನಡುನೀರಿನಲ್ಲಿ ಕೈಬಿಟ್ಟಿತು. ಹೀಗಾಗಿ ನಮಗೆ ವಿಚ್ಛೇದನ ನೀಡಿ ಸ್ಥಿರವಾದ ಮೈತ್ರಿಯನ್ನು ಹುಡುಕುವುದು ಅನಿವಾರ್ಯವಾಯಿತು" ಎಂದು ದೇವೇಗೌಡ ಸ್ಪಷ್ಟಪಡಿಸಿದರು.