ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ (ನ.12 ಮತ್ತು 13) ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ಕಲ್ಲುಬಾಳು ಗ್ರಾಪಂ ವ್ಯಾಪ್ತಿಯಲ್ಲಿ ಮಾಂಸ ಮತ್ತು ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಆನೇಕಲ್ ತಾಲೂಕಿನ ಜಿಗಣಿಯಲ್ಲಿರುವ ವಿವೇಕಾನಂದ ಯೋಗ ಅನುಸಂಧಾನ ಸಂಸ್ಕಾರದ ವತಿಯಿಂದ ಪ್ರಶಾಂತಿ ಕುಟೀರದಲ್ಲಿ ನ.13ರಂದು ಸುವರ್ಣ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮಕ್ಕೆ ಭಾಗಿಯಾಗುತ್ತಿರುವ ಹಿನ್ನೆಲೆ ಈ ನಿರ್ಧಾರವನ್ನು ಜಿಲ್ಲಾಧಿಕಾರಿ ಕೈಗೊಂಡಿದ್ದಾರೆ.
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಹಾಗೂ ಭದ್ರತಾ ಹಿತದೃಷ್ಟಿಯಿಂದ ಜಿಗಣಿ ಹೋಬಳಿಯ ಕಲ್ಲುಬಾಳು ಗ್ರಾಪಂ ವ್ಯಾಪ್ತಿಯಲ್ಲಿ ನ.12ರ ಬೆಳಿಗ್ಗೆ 6ರಿಂದ ನ.13ರ ಸಂಜೆ 4ವರೆಗೆ ಮಾಂಸದ ಅಂಗಡಿ ಹಾಗೂ ಮದ್ಯದ ಅಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ವಿವರ ಇಲ್ಲಿದೆ
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ನಾಳೆ (ನವೆಂಬರ್ 13, ಶುಕ್ರವಾರ) ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನಮ್ಮ ಮೆಟ್ರೋದ ಬಹುನಿರೀಕ್ಷಿತ 'ಗುಲಾಬಿ ಮಾರ್ಗ' (Pink Line) ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ. ವಿ.ವಿ.ಐ.ಪಿ ಸಂಚಾರದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಬೆಂಗಳೂರು ಸಂಚಾರ ಪೊಲೀಸರು ನಗರದ ದಕ್ಷಿಣ ಭಾಗದ ಹಲವು ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕ ಸಂಚಾರ ನಿರ್ಬಂಧ ಮತ್ತು ಪರ್ಯಾಯ ಮಾರ್ಗಗಳನ್ನು ಪ್ರಕಟಿಸಿದ್ದಾರೆ.
ಎಲ್ಲೆಲ್ಲಿ ಸಂಚಾರ ನಿರ್ಬಂಧ?
ನಾಳೆ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 2:30 ರವರೆಗೆ ಈ ಕೆಳಗಿನ ಮಾರ್ಗಗಳಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ:
- ಬನ್ನೇರುಘಟ್ಟ ರಸ್ತೆ: ತಾವರೆಕೆರೆ, ಬಿಳೇಕಹಳ್ಳಿ ಮತ್ತು ಐಐಎಂಬಿ (IIMB) ಜಂಕ್ಷನ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ.
- ಜಯನಗರ ಮತ್ತು ಜೆ.ಪಿ. ನಗರ: ಮಾರೇನಹಳ್ಳಿ ಮುಖ್ಯ ರಸ್ತೆಯ 28ನೇ ಮುಖ್ಯ ರಸ್ತೆಯಿಂದ ಜಯದೇವ ಆಸ್ಪತ್ರೆ ಜಂಕ್ಷನ್ ಕಡೆಗೆ ಹಾಗೂ ಈಸ್ಟ್ ಎಂಡ್ ಮುಖ್ಯ ರಸ್ತೆಯಿಂದ ಸ್ವಾಗತ್ ಜಂಕ್ಷನ್ ಮೂಲಕ ಬನ್ನೇರುಘಟ್ಟ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಬಂದ್ ಮಾಡಲಾಗಿದೆ.
- ಆಡುಗೋಡಿ, ಹುಳಿಮಾವು ಮತ್ತು ತಲಘಟ್ಟಪುರ: ಈ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ಸಂಪರ್ಕ ರಸ್ತೆಗಳು ಹಾಗೂ ಜಿಗಣಿಯ ಪ್ರಶಾಂತಿ ಕುಟೀರದ ಸುತ್ತಮುತ್ತ ಸಂಚಾರ ವ್ಯತ್ಯಯವಾಗಲಿದೆ.
ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳು:
ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಆನೇಪಾಳ್ಯ ಮತ್ತು ಅರಕೆರೆ ಕಡೆಗೆ ಪ್ರಯಾಣಿಸುವ ವಾಹನ ಸವಾರರು ಕನಕಪುರ ಮುಖ್ಯರಸ್ತೆ, ಜಯದೇವ ಜಂಕ್ಷನ್ ಮತ್ತು ಮಡಿವಾಳ ಮಾರ್ಗಗಳ ಮೂಲಕ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ನೋ-ಫ್ಲೈ ಜೋನ್ ಘೋಷಣೆ:
ಪ್ರಧಾನಿ ಭೇಟಿಯ ಭದ್ರತಾ ದೃಷ್ಟಿಯಿಂದ ಬೆಳಿಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಹೆಲಿಪ್ಯಾಡ್ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳಗಳ ಸುತ್ತಮುತ್ತಲಿನ 1 ಕಿಲೋಮೀಟರ್ ವ್ಯಾಪ್ತಿಯನ್ನು 'ನೋ-ಫ್ಲೈ ಜೋನ್' ಎಂದು ಘೋಷಿಸಲಾಗಿದೆ. ಈ ಅವಧಿಯಲ್ಲಿ ಡ್ರೋನ್ ಹಾಗೂ ಇತರ ಯಾವುದೇ ಹಾರಾಟದ ವಸ್ತುಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ನಾಳೆ ಈ ಮಾರ್ಗಗಳಲ್ಲಿ ಪ್ರಯಾಣಿಸುವ ಮುನ್ನ ಸಂಚಾರ ಪೊಲೀಸರ ಸೂಚನೆಗಳನ್ನು ಗಮನಿಸಿ ಸಹಕರಿಸುವಂತೆ ಕೋರಲಾಗಿದೆ.