Bengaluru Metro Pink Line: ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ನ.14ಕ್ಕೆ ವಾಣಿಜ್ಯ ಸಂಚಾರ ಆರಂಭ; ರೈಲು ವೇಳಾಪಟ್ಟಿ ಇಲ್ಲಿದೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 13 ರಂದು ನಮ್ಮ ಮೆಟ್ರೋದ ಪಿಂಕ್ ಲೈನ್ ಅನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅವರು ತಾವರೆಕೆರೆಯಿಂದ ಐಐಎಂಬಿ-ಬಿಳೇಕಹಳ್ಳಿ ನಿಲ್ದಾಣದವರೆಗೆ ಪ್ರಯಾಣಿಸಿ ಈ ಸೇವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಮಾರ್ಗ ಕಾರ್ಯಾರಂಭಗೊಂಡರೆ ಬನ್ನೇರುಘಟ್ಟ ರಸ್ತೆ, ಐಐಎಂಬಿ, ಜೆಪಿ ನಗರ ಹಾಗೂ ಜಯದೇವ ಆಸ್ಪತ್ರೆ ಭಾಗದ ಪ್ರಯಾಣಿಕರಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಸಿಗಲಿದೆ.
-
ಬೆಂಗಳೂರು: ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 13ರಂದು ಚಾಲನೆ ನೀಡಲಿದ್ದಾರೆ. ಈ ಮಾರ್ಗದಲ್ಲಿ ನವೆಂಬರ್ 14ರಂದು ವಾಣಿಜ್ಯ ಸಂಚಾರ ಆರಂಭವಾಗಲಿದೆ. ಈ ಬಗ್ಗೆ ವಿಕಾಸಸೌಧದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದ್ದಾರೆ.
'ನಮ್ಮ ಮೆಟ್ರೋ' ಪಿಂಕ್ ಲೈನ್ನ 7.5 ಕಿಲೋಮೀಟರ್ ಎತ್ತರಿಸಿದ ಮಾರ್ಗವು ಇದೇ ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿಧ್ಯುಕ್ತವಾಗಿ ಲೋಕಾರ್ಪಣೆಗೊಳ್ಳಲಿದೆ. ಕಾಳೇನ ಅಗ್ರಹಾರದಿಂದ - ತಾವರೆಕೆರೆ (ಸುದ್ದುಗುಂಟೆಪಾಳ್ಯ) ನಿಲ್ದಾಣದವರೆಗೆ ಈ ಹೊಸ ಮಾರ್ಗವು ನವೆಂಬರ್ 14ರ ಬೆಳಿಗ್ಗೆ 6 ಗಂಟೆಯಿಂದ ಸಂಪೂರ್ಣವಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಗುಲಾಬಿ ಮಾರ್ಗದ ವೇಳಾಪಟ್ಟಿ ಇಲ್ಲಿದೆ
- ತಾವರೆಕೆರೆ, ಕಾಳೇನ ಅಗ್ರಹಾರದಿಂದ ಏಕಕಾಲದಲ್ಲಿ ಮೆಟ್ರೋ ಆರಂಭ: ಪ್ರತಿದಿನ ಬೆಳಿಗ್ಗೆ 6 ಗಂಟೆಗೆ. (ಭಾನುವಾರ ಬೆಳಿಗ್ಗೆ 7ಗಂಟೆಗೆ)
- ಕೊನೆಯ ರೈಲು ಮೇಲಿನ ಎರಡೂ ನಿಲ್ದಾಣಗಳಿಂದ ಹೊರಡುವುದು: ರಾತ್ರಿ 11 ಗಂಟೆಗೆ
- ರೈಲುಗಳ ಸಂಚಾರ ಸಮಯ: ಪ್ರತಿ 8 ನಿಮಿಷಕ್ಕೊಂದು ರೈಲು
ನವೆಂಬರ್ 13ಕ್ಕೆ ಡೈರಿ ಸರ್ಕಲ್ ಬಳಿ ಕಾರ್ಯಕ್ರಮ
ನವೆಂಬರ್ 13 ರಂದು ಮಧ್ಯಾಹ್ನ 12.30ಕ್ಕೆ ಡೈರಿ ಸರ್ಕಲ್ ಬಳಿಯ ಅಗ್ನಿಶಾಮಕ ದಳದ ಆವರಣಕ್ಕೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು, ತಾವರೆಕೆರೆ ಸುದ್ದುಗುಂಟೆಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಈ ಹೊಸ 7.5 ಕಿ.ಮೀ. ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ.
ಉದ್ಘಾಟನೆಯ ನಂತರ ಪ್ರಧಾನಿಗಳು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಅದೇ ಮೆಟ್ರೋ ರೈಲಿನ ಮೂಲಕ ತಾವರೆಕೆರೆ ನಿಲ್ದಾಣದಿಂದ ಐಐಎಂಬಿ ನಿಲ್ದಾಣದವರೆಗೆ ಪ್ರಯಾಣಿಸಲಿದ್ದಾರೆ. ತದನಂತರ ಐಐಎಂಬಿ ಆಡಿಟೋರಿಯಂನಲ್ಲಿ ಆಯೋಜಿಸಲಾಗಿರುವ ಬೃಹತ್ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಗುಲಾಬಿ ಮಾರ್ಗದಲ್ಲಿನ ನಿಲ್ದಾಣಗಳು
ಸದ್ಯ ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆಗೆ ರೈಲು ಸಂಚಾರ ಆರಂಭವಾಗಲಿದೆ. ಉದ್ಘಾಟನೆಗೆ ಸಿದ್ಧವಾಗಿರುವ ಈ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ (ಹಳದಿ ಮತ್ತು ಗುಲಾಬಿ ಮಾರ್ಗಗಳ ಪ್ರಮುಖ ಇಂಟರ್ಚೇಂಜ್ ನಿಲ್ದಾಣ) ತಾವರೆಕೆರೆ ಸೇರಿ 6 ನಿಲ್ದಾಣಗಳು ಇವೆ.
5 ಮೀಸಲು ರೈಲುಗಳ ಕಾರ್ಯಾಚರಣೆ
ಆರಂಭಿಕ ಹಂತದಲ್ಲಿ ಈ ಮಾರ್ಗದಲ್ಲಿ 5 ಮೀಸಲು ರೈಲುಗಳು ಕಾರ್ಯನಿರ್ವಹಿಸಲಿದ್ದು, ಪ್ರತಿ 8 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಮುಂಬರುವ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಮತ್ತು ಸಿಗ್ನಲಿಂಗ್ ವ್ಯವಸ್ಥೆಯ ಸ್ಥಿರತೆಯನ್ನು ಗಮನಿಸಿ ಈ ಕಾಲಾವಧಿಯನ್ನು ಮತ್ತಷ್ಟು ಕಡಿಮೆ ಮಾಡುವ ಯೋಜನೆಯಿದೆ.