ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

KN Rajanna: ಸಚಿವ ಸತೀಶ್‌ ಜಾರಕಿಹೊಳಿ ಮೇಲೆ ಇ.ಡಿ ದಾಳಿ ರಾಜಕೀಯ ಪ್ರೇರಿತ: ಕೆ.ಎನ್. ರಾಜಣ್ಣ

KN Rajanna: ಕೇಂದ್ರ ಸರ್ಕಾರವು ಎಲ್ಲಾ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸತೀಶ ಜಾರಕಿಹೊಳಿ ಅವರ ಬೆಳೆಯುತ್ತಿರುವ ಜನಪ್ರಿಯತೆಯನ್ನು ಕುಗ್ಗಿಸಲು ಈ ರೀತಿಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಶಾಸಕ ಕೆ.ಎನ್‌. ರಾಜಣ್ಣ ಆರೋಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಶಾಸಕ ಕೆ.ಎನ್‌. ರಾಜಣ್ಣ ಮತ್ತು ಸಚಿವ ಸತೀಶ ಜಾರಕಿಹೊಳಿ (ಸಂಗ್ರಹ ಚಿತ್ರ)

ತುಮಕೂರು, ಸೆ.12: ಸಚಿವ ಸತೀಶ್‌ ಜಾರಕಿಹೊಳಿ ಅವರು ವ್ಯವಹಾರದಲ್ಲಿ ಶ್ರೇಷ್ಠ ವ್ಯಕ್ತಿಯಾಗಿದ್ದು, ಯಾವುದೇ ವಿಚಾರದಲ್ಲಿ ತಪ್ಪು ಮಾಡುವುದಿಲ್ಲ. ಕಳೆದ ನಾಲ್ಕು ದಶಕಗಳಿಂದ ಅವರನ್ನು ಬಲ್ಲೆವು, ಅವರು ಅತ್ಯಂತ ಸಂಭಾವಿತ ವ್ಯಕ್ತಿ ಎಂದು ಶಾಸಕ ಕೆ.ಎನ್‌. ರಾಜಣ್ಣ (KN Rajanna) ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ನಗರದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಇ.ಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಸಚಿವರ ಸರ್ಕಾರಿ ಬಂಗಲೆಗೆ ತೆರಳಿ ತನಿಖೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿದರು.

"ಸಚಿವರದ್ದು ವಾರ್ಷಿಕ 2,000 ಕೋಟಿಗೂ ಅಧಿಕ ವ್ಯವಹಾರವಿದೆ. ಇಂತಹವರ ಮನೆಯಲ್ಲಿ 2 ಕೋಟಿ ಹಣ ಸಿಕ್ಕರೆ ಅದೇನು ದೊಡ್ಡದೇ? ಇದು ಸಂಪೂರ್ಣವಾಗಿ ರಾಜಕೀಯ ಪ್ರೇರಿತ ದಾಳಿಯಾಗಿದೆ" ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ

ಕೇಂದ್ರ ಸರ್ಕಾರವು ಎಲ್ಲಾ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸತೀಶ್ ಜಾರಕಿಹೊಳಿ ಅವರ ಬೆಳೆಯುತ್ತಿರುವ ಜನಪ್ರಿಯತೆಯನ್ನು ಕುಗ್ಗಿಸಲು ಈ ರೀತಿಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. "ನಾವೆಲ್ಲರೂ ಶೂದ್ರರು, ಶೂದ್ರರಿಗೆ ಬುದ್ಧಿ ಕಡಿಮೆ ಎಂದು ಟಾರ್ಗೆಟ್ ಮಾಡುತ್ತಾರೆ" ಎಂದು ದೂರಿದರು. ಇನ್ನು ನಾಲ್ಕೈದು ಸಚಿವರ ಮೇಲೆ ದಾಳಿ ನಡೆಯಬಹುದು ಎಂಬ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಇದರ ಹಿಂದೆ ಯಾರದ್ದಾದರೂ ಕೈವಾಡ ಇರಬಹುದು ಎಂದು ಕಿಡಿಕಾರಿದರು.

ಸಚಿವರನ್ನು ಭೇಟಿ ಮಾಡಲು ತೆರಳಿದ್ದಾಗಿ ತಿಳಿಸಿದ ಅವರು, ಕುಟುಂಬ ಮತ್ತು ಅಭಿಮಾನಿಗಳ ಜತೆಗೆ ಮಾತನಾಡಿ ಸತೀಶ ಅವರ ಜತೆಗೆ ದೃಢವಾಗಿ ನಿಲ್ಲುವ ಭರವಸೆ ನೀಡಿರುವುದಾಗಿ ತಿಳಿಸಿದರು.

ಅಪೆಕ್ಸ್‌ ಬ್ಯಾಂಕ್‌ ಆಕಾಂಕ್ಷಿಯಲ್ಲ

ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಸ್ಥಾನದ ಎರಡನೇ ಅವಧಿಗೆ ತಾನು ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ ಶಾಸಕ ಕೆ.ಎನ್‌. ರಾಜಣ್ಣ, "ಅಧಿಕಾರ ಬರುತ್ತದೆ, ಹೋಗುತ್ತದೆ. ಅದೇನು ನಮ್ಮಪ್ಪನ ಆಸ್ತಿ ಅಲ್ಲ. ಈಗ ಆಯ್ಕೆ ಆಗಿರುವವರು ನನಗಿಂತ ಸಮರ್ಥರು, ಅವರಿಗೆ ಒಳ್ಳೆಯದಾಗಲಿ. ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ" ಎಂದರು.‌

ದೇಶದ ಹಿತಾಸಕ್ತಿ ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಕಾಂಗ್ರೆಸ್‌ ತೊರೆಯುವುದಿಲ್ಲ

ತಾವು ಜೆಡಿಎಸ್‌ ಅಥವಾ ಬಿಜೆಪಿಗೆ ಸೇರಲಿದ್ದಾರೆ ಎಂಬ ವಾದ ತಳ್ಳಿಹಾಕಿದ ಶಾಸಕ ಕೆ.ಎನ್‌. ರಾಜಣ್ಣ, "ನಾನು ಯಾವ ಪಕ್ಷಕ್ಕೂ ಹೋಗುವುದಿಲ್ಲ. ಮುಂದಿನ ಚುನಾವಣೆಗೆ ಸ್ಪರ್ಧಿಸುವುದೋ ಇಲ್ಲವೋ ಎಂಬ ಗೊಂದಲದಲ್ಲಿದ್ದೇನೆ. ಒಂದು ವೇಳೆ ಸ್ಪರ್ಧಿಸುವುದಾದರೆ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸುವೆ. ಎಲ್ಲಾ ಜಾತಿಯ ನಾಯಕರಿಗೂ ಗೌರವ ಕೊಡುವ ಪಕ್ಷ ಕಾಂಗ್ರೆಸ್" ಎಂದು ಸ್ಪಷ್ಟಪಡಿಸಿದರು.