ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಜಕೀಯ ಎಂಬುದು ಸಾಧ್ಯತೆಗಳ ಕಲೆ, ಇಲ್ಲಿ ಎಲ್ಲವೂ ಸಾಧ್ಯ: ಡಿ.ಕೆ.ಶಿವಕುಮಾರ್‌

DK Shivakumar: ಸಿಎಂ ಸಿದ್ದರಾಮಯ್ಯ ಅವರು ಸೇರಿದಂತೆ 139 ಶಾಸಕರೂ ನನ್ನ ಬಲ. ಸಿದ್ದರಾಮಯ್ಯ ಅವರು 100% ನನ್ನ ಜತೆಗಿದ್ದಾರೆ. ಇದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ. ನಾವಿಬ್ಬರೂ ಪರಸ್ಪರ ಕೈಜೋಡಿಸಿ, ಜತೆಯಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ, ಮುಂದೆಯೂ ಕೆಲಸ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)

ಬೆಂಗಳೂರು, ಫೆ.2: ರಾಜಕೀಯದಲ್ಲಿ ಎಲ್ಲವೂ ಸಾಧ್ಯ. ರಾಜಕೀಯ ಎಂಬುದು ಸಾಧ್ಯತೆಗಳ ಕಲೆ. ಇಲ್ಲಿ ಎಲ್ಲವೂ ಸಾಧ್ಯ. One man with Courage makes a majority ಎಂಬುದನ್ನು ನಾನು ನಂಬಿದ್ದೇನೆ. ದೃಢವಾದ ನಿಲುವು, ಸಂಕಲ್ಪ ಹೊಂದಿದ್ದರೆ, ಒಬ್ಬನೇ ಸಾಕು. ಆತನ ಜತೆ 140 ಜನರೂ ಇರುತ್ತಾರೆ, ಇನ್ನೂ ಜಾಸ್ತಿನೂ ಆಗುತ್ತಾರೆ. ನೋಡೋಣ 2028ರಲ್ಲಿ ಏನಾಗುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರ ನೀಡುವಾಗ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಅವರು ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪಿಸಿದಾಗ ಡಿಸಿಎಂ ಡಿ.ಕೆ. ಶಿವಕುಮಾರ್‌ ಉತ್ತರ ನೀಡಿದರು.

ಕಳೆದ ಒಂದು ತಿಂಗಳಿಂದ ಡಿ.ಕೆ. ಶಿವಕುಮಾರ್ ಅವರ ಮಾತು, ಟ್ವೀಟ್‌ಗಳು ನೂರು ಅರ್ಥ ಬರುವಂತಿದ್ದು, ಎಲ್ಲರೂ ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ಅಶೋಕ್ ಹೇಳಿದರು. ಆಗ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟನೆ ನೀಡಿದರು.

ರಾಜಕೀಯದಲ್ಲಿ ಏಳು ಬೀಳು ಸಹಜ

ಅಶೋಕ್ ಅವರೇ, ನೀವು ಹಿರಿಯ ರಾಜಕಾರಣಿ. ಯಾರು ಏನಾದರೂ ಮಾತನಾಡಲಿ, ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ವಿದ್ಯಾರ್ಥಿ ನಾಯಕನಿಂದ ಬೆಳೆದು ಬಂದವನು. ನನ್ನದೇ ಆದ ಮೌಲ್ಯಗಳನ್ನು ಪಾಲಿಸಿಕೊಂಡು, ಉಳಿಸಿಕೊಂಡು ಬಂದಿದ್ದೇನೆ. ಪಕ್ಷ ನನಗೆ ಚಿಕ್ಕ ವಯಸ್ಸಿಗೆ ಟಿಕೆಟ್ ಕೊಟ್ಟಿದ್ದು, ಇಲ್ಲಿಯವರೆಗೂ ಬೆಳೆದಿದ್ದೇನೆ. ರಾಜಕೀಯದಲ್ಲಿ ಏಳು ಬೀಳು ಸಹಜ. ನಾನು ಎಂತೆಂಥಹವರ ಏಳು ಬೀಳು ನೋಡಿದ್ದೇನೆ. ನಾನು ಬಿದ್ದಿದ್ದೇನೆ, ಎದ್ದಿದ್ದೇನೆ, ಜೈಲುವಾಸ ಎಲ್ಲವನ್ನೂ ಅನುಭವಿಸಿದ್ದೇನೆ. ಇನ್ನು ಒಂದು ತಿಂಗಳು ಕಳೆದರೆ ನಾನು ಪಕ್ಷದ ಅಧ್ಯಕ್ಷನಾಗಿ ಆರು ವರ್ಷ ಪೂರ್ಣಗೊಳ್ಳುತ್ತದೆ ಎಂದರು.

ನಾವು ನುಡಿದಂತೆ ನಡೆಯುತ್ತಿದ್ದೇವೆ

ಸಿಎಂ ಸಿದ್ದರಾಮಯ್ಯ ಅವರು ಸೇರಿದಂತೆ 139 ಶಾಸಕರೂ ನನ್ನ ಬಲ. ಸಿದ್ದರಾಮಯ್ಯ ಅವರು 100% ನನ್ನ ಜತೆಗಿದ್ದಾರೆ. ಇದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ. ನಾವಿಬ್ಬರೂ ಪರಸ್ಪರ ಕೈಜೋಡಿಸಿ, ಜತೆಯಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ, ಮುಂದೆಯೂ ಕೆಲಸ ಮಾಡುತ್ತೇವೆ. ನಾವು ಜನಕ್ಕೆ ಮಾತು ಕೊಟ್ಟಿದ್ದು, ಆ ಮಾತನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತೇವೆ. ನಾವು ನುಡಿದಂತೆ ನಡೆಯುತ್ತಿದ್ದೇವೆ, ಮುಂದೆಯೂ ನಡೆಯುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಬೇಡ. ಅವರ ಕಷ್ಟಕಾಲದಲ್ಲಿ ನಾನು ನಿಂತಿದ್ದೇನೆ, ಮುಂದೆಯೂ ನಿಲ್ಲುತ್ತೇನೆ. ಅವರು ಕೂಡ ಕಷ್ಟ ಕಾಲದಲ್ಲಿ ನನ್ನ ಜತೆ ನಿಲ್ಲಲಿದ್ದಾರೆ ಎಂದು ಹೇಳಿದರು.

ನಿಮ್ಮ ಟ್ವೀಟ್ ಅರ್ಥವೇನು ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್ ಮತ್ತೆ ಕೇಳಿದಾಗ, ʼನೀವು ಟ್ವೀಟ್ ಅನ್ನು ಯಾವ ರೀತಿ ಅರ್ಥ ಮಾಡಿಕೊಳ್ಳುತ್ತೀರಿ ಎಂಬುದು ನಿಮಗೆ ಬಿಟ್ಟ ವಿಚಾರʼ ಎಂದು ಹೇಳಿದರು.

ಅಕ್ರಮ ಬಾಂಗ್ಲಾ ವಲಸಿಗರನ್ನು ರಾಜ್ಯದಿಂದ ಹೊರ ಕಳುಹಿಸುತ್ತೇವೆ: ಸಿಎಂ ಸಿದ್ದರಾಮಯ್ಯ

ನೀವು ಯಾವ ವಿಚಾರಕ್ಕೆ ತಾಳ್ಮೆ ಬಗ್ಗೆ ಮಾತನಾಡಿದ್ದೀರಿ ಎಂದಾಗ, ʼಯಾರ‍್ಯಾರೋ ಮಾತನಾಡುವುದಕ್ಕೆ ನಾನು ಉತ್ತರ ನೀಡಲು ಆಗುವುದಿಲ್ಲ. ನಮ್ಮ ಪಕ್ಷದಲ್ಲಿ ಹಾಗೂ ನಿಮ್ಮ (ಬಿಜೆಪಿ) ಪಕ್ಷದಲ್ಲಿ ಸಂಖ್ಯಾಬಲಕ್ಕಿಂತ ಪಕ್ಷವೇ ತೀರ್ಮಾನ ಮಾಡುತ್ತದೆ. ನಿಮ್ಮ ಸರ್ಕಾರದಲ್ಲಿ ಎಷ್ಟೋ ಸಿಎಂ ಬದಲಾದರು, ಸಚಿವ ಸಂಪುಟಗಳೇ ಬದಲಾದವು. ಹೀಗಾಗಿ ನಿಮ್ಮ ಮಾತಿಗೆ ನಾನು ಜಗ್ಗುವುದಿಲ್ಲ, ನೀವು ಸುಮ್ಮನೇ ತಲೆಕೆಡಿಸಿಕೊಳ್ಳಬೇಡಿʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.