ಬಾಳೆಹೊನ್ನೂರು, ಡಿ.20: ದೇಶದ ಕಾಫಿಗೆ ಜಾಗತಿಕವಾಗಿ ಬಹು ದೊಡ್ಡ ಪ್ರಮಾಣದಲ್ಲಿ ಬೇಡಿಕೆಯಿದ್ದು, ಅನೇಕ ದೇಶಗಳು ಇಂದು ಭಾರತದೊಂದಿಗೆ ಫ್ರೀ ಟ್ರೇಡಿಂಗ್ ಅಗ್ರಿಮೆಂಟ್ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿವೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು. ಬಾಳೆಹೊನ್ನೂರು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯಲ್ಲಿ ಶನಿವಾರ ಕಾಫಿ ಮಂಡಳಿ ಹಾಗೂ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಆಯೋಜಿಸಿದ್ದ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ (ಸಿಸಿಆರ್ಐ) ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿ, ಈ ಸಂಸ್ಥೆ 100ನೇ ವರ್ಷ ಪೂರೈಸಿರುವುದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಭಾರತ ಇಂದು 4 ಲಕ್ಷ ಟನ್ ಕಾಫಿಯನ್ನು ಉತ್ಪಾದಿಸುತ್ತಿದ್ದು, ಶೇ.70ರಷ್ಟು ಕಾಫಿ ರಫ್ತು ಮಾಡುತ್ತಿದೆ. ಶೇ.30ರಷ್ಟು ಮಾತ್ರ ಸ್ಥಳೀಯವಾಗಿ ಬಳಕೆಯಾಗುತ್ತಿದೆ. ಚಿಕ್ಕಮಗಳೂರು ಕಾಫಿ, ಅರೋಕೋ ಕಾಫಿ ಸೇರಿದಂತೆ ದೇಶದೆಲ್ಲೆಡೆ ಕಾಫಿ ಬೆಳೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದು ಹೇಳಿದರು.
ಮುಂಬರುವ ಕೆಲ ವರ್ಷಗಳಲ್ಲಿ ಭಾರತದ ಕಾಫಿ ಉತ್ಪಾದನೆಯನ್ನು 4 ಲಕ್ಷ ಟನ್‌ನಿಂದ 9 ಲಕ್ಷ ಟನ್‌ಗೆ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಸಂಶೋಧನಾ ಕೇಂದ್ರಗಳೂ ಕೂಡ ಹೆಚ್ಚಿನ ಇಳುವರಿಯ ಕಾಫಿ ತಳಿ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ವಿದೇಶಗಳಿಗೆ ರಫ್ತು ಮಾಡುವಲ್ಲಿ ಉತ್ತಮ ಪ್ಯಾಕೇಜಿಂಗ್ ಹಾಗೂ ಗುಣಮಟ್ಟದ ಕಾಫಿಗೆ ಆದ್ಯತೆ ನೀಡಬೇಕಿದೆ ಎಂದು ಅಭಿಪ್ರಾಯಿಸಿದರು.
ಇಂದು ಉತ್ಪಾದನಾ ವಲಯ ಮತ್ತು ರಫ್ತು ವಲಯದಲ್ಲಿ ಭಾರತ ಛಾಪು ಮೂಡಿಸುತ್ತಿದ್ದು, ಭಾರತದೊಂದಿಗೆ ಅನೇಕ ದೇಶಗಳು ತಾವಾಗೇ ಮುಂದೆ ಬಂದು ಫ್ರೀ ಟ್ರೇಡ್ ಅಗ್ರಿಮೆಂಟ್ ಮಾಡಿಕೊಳ್ಳುತ್ತಿವೆ. ಯುರೋಪಿಯನ್ ರಾಷ್ಟ್ರಗಳು ಸಹ ಮುಂದೆ ಬಂದಿವೆ. ನಿನ್ನೆ ಕ್ಯಾಬಿನೆಟ್ ಅಲ್ಲಿ ಫ್ರೀ ಟ್ರೇಡ್ ಅಗ್ರಿಮೆಂಟ್ ಆಗಿದೆ ಎಂದು ಸಚಿವ ಜೋಶಿ ಮಾಹಿತಿ ನೀಡಿದರು.
ಭಾರತದ ಕಾಫಿಗೆ ಜಾಗತಿಕ ಮನ್ನಣೆ
ಕರ್ನಾಟಕದ ಕಾಫಿ ಒಳಗೊಂಡಂತೆ ʼಭಾರತದ ಕಾಫಿʼ ಜಾಗತಿಕವಾಗಿ ಹೆಸರು ಮಾಡುತ್ತಿದ್ದು, ವಿದೇಶಗಳಿಗೆ ಹೆಚ್ಚು ಹೆಚ್ಚು ರಫ್ತು ಮಾಡುವ ನಿಟ್ಟಿನಲ್ಲಿ ಗುಣಮಟ್ಟದೊಂದಿಗೆ ಹೊಸ ಹೊಸ ಮಾರುಕಟ್ಟೆಗಳನ್ನು ಕಂಡುಕೊಳ್ಳಲು ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ವಿಶ್ವದ ಮಾರುಕಟ್ಟೆಗಳನ್ನು ಅಧ್ಯಯನ ಮಾಡುವ ಮೂಲಕ ಹೆಚ್ಚು ರಾಷ್ಟ್ರಗಳಿಗೆ ಭಾರತದ ಕಾಫಿ ರಫ್ತಾಗುವಂತೆ ನೋಡಿಕೊಳ್ಳಬೇಕಿದೆ ಎಂದರು.
ಭಾರತ ಇಂದು ಜಗತ್ತಿನ 7ನೇ ಅತಿದೊಡ್ಡ ಕಾಫಿ ಉತ್ಪಾದಕ ರಾಷ್ಟ್ರವಾಗುವ ಜತೆಗೆ 5ನೇ ಪ್ರಮುಖ ರಫ್ತು ದೇಶವಾಗಿದೆ. 2024-25ರಲ್ಲಿ 3.63 ಲಕ್ಷ ಟನ್ ಉತ್ಪಾದನೆಯಾಗಿದ್ದು, ಶೇ.70ರಷ್ಟು ರಫ್ತು ಮಾಡಿದ್ದೇವೆ. ಬಾಬಾ ಬುಡನ್‌ನ 7 ಪ್ಲ್ಯಾಂಟೇಶನ್ ನಿಂದ ಶುರುವಾದ ಕಾಫಿ ಇಂದು ಬಹುದೊಡ್ಡ ಇಂಡಸ್ಟ್ರಿಯಾಗಿ ಬೆಳೆದಿದೆ ಎಂದು ಹೇಳಿದರು.
ಕಾಫಿ, ಗೋದಿ, ಟೊಮೆಟೊದಂತಹ ಹಲವು ಬೆಳೆಗಳು ಮೂಲತಃ ಭಾರತದ್ದಲ್ಲದಿದ್ದರೂ ಯಾವುದೋ ಕಾಲದಲ್ಲಿ ದೇಶಕ್ಕೆ ಬಂದು ನಮ್ಮ ಆಹಾರ ಪದ್ಧತಿಯಲ್ಲಿ ಹಾಸು ಹೊಕ್ಕಿದೆ. 18ನೇ ಶತಮಾನದಲ್ಲಿ ವಾಣಿಜ್ಯಿಕವಾಗಿ ಶುರುವಾದ ಕಾಫಿ ಪ್ಲಾಂಟೇಷನ್ ಇಂದು ಜಾಗತಿಕವಾಗಿ ಗುರುತಿಸಿಕೊಂಡಿದೆ ಎಂದರು.
Pralhad Joshi: ಆಲಮಟ್ಟಿ-ಕುಷ್ಟಗಿ ನೂತನ ರೈಲು ಮಾರ್ಗಕ್ಕೆ ಶೀಘ್ರ ಡಿಪಿಆರ್: ಪ್ರಲ್ಹಾದ್ ಜೋಶಿ
ಭಾರತ ಜಾಗತಿಕ ಶಕ್ತಿ
ಭಾರತ ಇಂದು ಜಾಗತಿಕ ಮಟ್ಟದಲ್ಲಿ ಒಂದು ಶಕ್ತಿಯಾಗಿ ಬೆಳೆಯುತ್ತಿದೆ. GST ಶೇ.18ರಿಂದ 5ಕ್ಕೆ ಇಳಿದಿದ್ದರಿಂದ ಉತ್ಪಾದನಾ ವಲಯ ಮತ್ತು ರಫ್ತು ವಲಯಕ್ಕೆ ಮತ್ತಷ್ಟು ಬಲ ಬಂದಿದೆ. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುತ್ತಿದ್ದು, ಕಳೆದ 10 ವರ್ಷದಲ್ಲಿ ಭಾರತದ ವ್ಯಾಪಾರ-ವಹಿವಾಟು ಬಹುತೇಕ ದುಪ್ಟಟ್ಟಾಗಿದೆ ಎಂದು ಹೇಳಿದರು.
ಭಾರತ ಸೌರ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿದ್ದರ ಪರಿಣಾಮ ₹12 ಇದ್ದ ವಿದ್ಯುತ್ ದರ ₹2.10ಗೆ ಇಳಿದಿದೆ. ವಿದ್ಯುತ್ ಉತ್ಪಾದನೆ, ಪೂರೈಕೆಯನ್ನು ವ್ಯವಸ್ಥಿತವಾಗಿ ನಿಭಾಯಿಸಿದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಎಲ್ಲೆಡೆ ವಿದ್ಯುತ್ ಪೂರೈಸಬಹುದು ಎಂದು ಜೋಶಿ ಅಭಿಪ್ರಾಯಿಸಿದರು.
ಯಾವುದೇ ಉತ್ಪನ್ನದಲ್ಲಿ ಗುಣಮಟ್ಟ ಉಳಿಸಿಕೊಂಡರೆ ಜಾಗತಿಕ ಬೇಡಿಕೆ ಸಹ ಹೆಚ್ಚುತ್ತಿದೆ. ಇದಕ್ಕೆ ನಮ್ಮ ಮೊಬೈಲ್ ಉತ್ಪಾದನೆ, ರಫ್ತುವೇ ನಿದರ್ಶನ. ಜಾಗತಿಕವಾಗಿ ಮೊಬೈಲ್ ಮಾರುಕಟ್ಟೆಯಲ್ಲಿ ಭಾರತ ಶೇ.30ರಷ್ಟು ಪಾಲು ಹೊಂದಿದೆ. 2 ಉತ್ಪಾದನಾ ಘಟಕ ಇದ್ದದ್ದು ಈಗ 300 ದಾಟಿದೆ ಉದಾಹರಣೆ ಸಹಿತ ವಿವರಿಸಿದರು.
ಭಾರತದಲ್ಲಿ 10 ವರ್ಷಕ್ಕೂ ಮೊದಲು 90 ಸಾವಿರ ಕಿ.ಮೀ. ಹೆದ್ದಾರಿಯಿತ್ತು. ಅದೀಗ 1.55 ಲಕ್ಷ ಕಿ.ಮೀ.ಗೆ ಹೆಚ್ಚಿದೆ. ಕರ್ನಾಟಕದಲ್ಲೇ 3,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ ಎಂದು ಹೇಳಿದರು.
ಭಾರತವಿಂದು ʼಗ್ರೀನ್ ಕಾರಿಡಾರ್ʼ ಮಾಡುತ್ತಿದೆ. ರಾಜ್ಯದಲ್ಲಿ ಪವನ ವಿದ್ಯುತ್ ಉತ್ಪಾದನೆಯಲ್ಲಿ ಒಳ್ಳೇ ಕೆಲಸ ಆಗಿದೆ. ಇದಕ್ಕಾಗಿ ರಾಜ್ಯ ಇಂಧನ ಸಚಿವ ಜಾರ್ಜ್ ಅವರಿಗೆ ಪ್ರಶಸ್ತಿ ಕೊಟ್ಟಿದ್ದೇವೆ. ಅದರಂತೆ ರಾಜ್ಯ ಸರ್ಕಾರ ಪ್ರಧಾನಮಂತ್ರಿ ಕುಸುಮ್ ಯೋಜನೆ ಅನುಷ್ಠಾನಕ್ಕೆ ಪ್ರಮುಖ ಆದ್ಯತೆ ನೀಡಬೇಕಿದೆ ಎಂದು ಸಲಹೆ ನೀಡಿದರು.
ಸಿಸಿಆರ್‌ಐ ಶತಮಾನೋತ್ಸವದ ಹೆಮ್ಮೆ
1925ರಲ್ಲಿ ಪ್ರಾರಂಭವಾದ ಸಿಸಿಆರ್‌ಐ ಭಾರತೀಯ ಕಾಫಿ ಕ್ಷೇತ್ರದ ವೈಜ್ಞಾನಿಕ ಸಂಶೋಧನೆಗೆ ಸದೃಢ ಅಡಿಪಾಯ ಹಾಕಿದ ಪ್ರತಿಷ್ಠಿತ ಸಂಸ್ಥೆಯಾಗಿದೆ. ಕಾಫಿ ಬೆಳೆಯ ಸುಧಾರಿತ ಜಾತಿಗಳ ಅಭಿವೃದ್ಧಿ, ರೋಗ–ಕೀಟ ನಿಯಂತ್ರಣ, ಮಣ್ಣಿನ ಆರೋಗ್ಯ, ಬೆಳೆ ಉತ್ಪಾದಕತೆ ಹೆಚ್ಚಳ ಹಾಗೂ ಗುಣಮಟ್ಟ ಸುಧಾರಣೆ ಕ್ಷೇತ್ರಗಳಲ್ಲಿ ಈ ಸಂಸ್ಥೆ ಕಳೆದೊಂದು ಶತಮಾನದಿಂದ ನಿರಂತರ ಸಂಶೋಧನಾ ಸೇವೆ ಸಲ್ಲಿಸುತ್ತಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಹೆಮ್ಮೆ ವ್ಯಕ್ತಪಡಿಸಿದರು.
Pralhad Joshi: ಸೌರಶಕ್ತಿಗೆ 3ನೇ ಅತಿದೊಡ್ಡ ಕೊಡುಗೆದಾರ ರಾಷ್ಟ್ರ ಭಾರತ: ಪ್ರಲ್ಹಾದ್ ಜೋಶಿ
ಇದೇ ವೇಳೆ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆಯಿಂದ ರೋಗ ನಿರೋಧಕ ಮತ್ತು ಹೆಚ್ಚಿನ ಇಳುವರಿ ನೀಡುವ ಎರಡು ಹೊಸ ಕಾಫಿ ತಳಿಗಳನ್ನು ಬಿಡುಗಡೆ ಮಾಡಲಾಯಿತು. ರಾಜ್ಯ ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನಸಭೆ ಸದಸ್ಯ ಟಿ.ಡಿ. ರಾಜೇಗೌಡ, ಶಾಸಕರಾದ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಕೇಂದ್ರ ವಾಣಿಜ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ (ಪ್ಲಾಂಟೇಶನ್) ನಿತಿನ್ ಕುಮಾರ್ ಯಾದವ್, ಬೆಂಗಳೂರು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಉಪಸ್ಥಿತರಿದ್ದರು.