JDS silver jubilee celebration: ಜೆಡಿಎಸ್ ರಜತ ಮಹೋತ್ಸವ; ಪಕ್ಷದ ಚಿನ್ಹೆಯುಳ್ಳ ಬೆಳ್ಳಿ ನಾಣ್ಯ ಲೋಕಾರ್ಪಣೆ ಮಾಡಿದ ಎಚ್.ಡಿ.ದೇವೇಗೌಡ
HD Deve Gowda: ಜೆಡಿಎಸ್ ಪಕ್ಷದ 25 ವರ್ಷಗಳ ರಜತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಬೆಳ್ಳಿ ನಾಣ್ಯ ಮತ್ತು ವಾಟ್ಸ್‌ಆ್ಯಪ್ ಲೈನ್ ನಂಬರ್ ಅನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಲೋಕಾರ್ಪಣೆ ಮಾಡಿದರು.
ಬೆಂಗಳೂರಿನಲ್ಲಿ ಜೆಡಿಎಸ್ ರಜತ ಮಹೋತ್ಸವ ನಡೆಯಿತು. -
ಬೆಂಗಳೂರು, ನ.22: ಜೆಡಿಎಸ್ ಪಕ್ಷದ 25 ವರ್ಷಗಳ ರಜತ ಮಹೋತ್ಸವ ಸಂಭ್ರಮಾಚರಣೆ (JDS silver jubilee celebration) ಅಂಗವಾಗಿ ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಬೆಳ್ಳಿ ನಾಣ್ಯ ಮತ್ತು ವಾಟ್ಸ್‌ಆ್ಯಪ್ ಲೈನ್ ನಂಬರ್ ಅನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Deve Gowda) ಅವರು ಲೋಕಾರ್ಪಣೆ ಮಾಡಿದರು. ರಾಷ್ಟ್ರೀಯ ಮಂಡಳಿ ಸಭೆ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ನಂತರ ಶನಿವಾರ ನಡೆದ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಎಚ್.ಡಿ. ದೇವೇಗೌಡರ ಜತೆಗೆ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy), ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸೇರಿದಂತೆ ಪಕ್ಷದ ನಾಯಕರು, ಜಿಲ್ಲಾಧ್ಯಕ್ಷರು, ವಿವಿಧ ರಾಜ್ಯ ಘಟಕಗಳ ಅಧ್ಯಕ್ಷರು ಭಾಗಿಯಾಗಿದ್ದರು.
ಇದೇ ವೇಳೆ ರಜತ ಮಹೋತ್ಸವದ ಮುಖ್ಯ ಆಕರ್ಷಣೆಯಾಗಿ ಪಕ್ಷದ ಚಿನ್ಹೆ ತೆನೆ ಹೊತ್ತ ರೈತ ಮಹಿಳೆ, ಎಚ್.ಡಿ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಚಿತ್ರಗಳು ಇರುವ ಬೆಳ್ಳಿ ನಾಣ್ಯವನ್ನು ಲೋಕಾರ್ಪಣೆ ಮಾಡಲಾಯಿತು. ಬಳಿಕ ಮಾಜಿ ಪ್ರಧಾನಿಗಳು ವಾಟ್ಸ್‌ಆ್ಯಪ್ ಲೈನ್ ನಂಬರ್ 9964002028 ಅನ್ನು ಬಿಡುಗಡೆ ಮಾಡಿದರು.
ಎರಡು ನಿರ್ಣಯಗಳ ಅಂಗೀಕಾರ
ಜೆಡಿಎಸ್ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ರೈತರ ಪರವಾಗಿ ಹಾಗೂ ಪಕ್ಷ ಸಂಘಟನೆ ಮಾಡುವ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮುಖ್ಯವಾಗಿ ಪ್ರಾಕೃತಿಕ ವಿಕೋಪಗಳಿಂದ ತತ್ತರಿಸಿರುವ ಸಾರ್ವಜನಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವಾಗಬೇಕು. ನೆರೆಯಿಂದ ಆಸ್ತಿ, ಬೆಳೆ ಕಳೆದುಕೊಂಡಿರುವವರಿಗೆ ಸೂಕ್ತ ಪರಿಹಾರ ಕೊಡಬೇಕು. ರೈತ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ ಖರೀದಿ ಮಾಡಬೇಕು ಎಂಬ ನಿರ್ಣಯವನ್ನು ಅಂಗಿಕರಿಸಲಾಯಿತು. ಜತೆಗೆ ರಾಷ್ಟ್ರ ಮತ್ತು ರಾಜ್ಯದಲ್ಲಿ ಪಕ್ಷವನ್ನು ಬಲಿಷ್ಠವಾಗಿ ತಳಮಟ್ಟದಿಂದ ಕಟ್ಟುವ ಬಗ್ಗೆ ಕೂಡ ನಿರ್ಣಯ ಕೈಗೊಳ್ಳಲಾಯಿತು.
ಇದನ್ನೂ ಓದಿ | ರಾಜ್ಯ ಸರ್ಕಾರ ಶಾಲೆಗಳನ್ನು ಮುಚ್ಚುತ್ತಿದೆ, ಮಠಗಳು ಉತ್ತಮವಾಗಿ ನಡೆಸುತ್ತಿವೆ: ಎಚ್ಡಿಕೆ
ಈ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಕೋರ್ ಕಮೀಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಸದ ಮಲ್ಲೇಶ್ ಬಾಬು ಹಾಗೂ ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಇತರರು ಪಾಲ್ಗೊಂಡಿದ್ದರು.