GBA elections: ಜಿಬಿಎ ಚುನಾವಣೆಗೆ ಮತ್ತೆ ಗಡುವು ವಿಸ್ತರಣೆ ಮಾಡಿದ ಸುಪ್ರೀಂ ಕೋರ್ಟ್
ಈ ಹಿಂದೆ ಸುಪ್ರೀಂಕೋರ್ಟ್ ಆಗಸ್ಟ್ 31ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಪೂರ್ಣಗೊಳಿಸುವಂತೆ ಆದೇಶಿಸಿತ್ತು. ಆದರೆ ಸರ್ಕಾರ ಮತ್ತೊಮ್ಮೆ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಿತ್ತು. ವಿಚಾರಣೆಯಲ್ಲಿ ಸರ್ಕಾರದ ವಾದ ಆಲಿಸಿದ ಸುಪ್ರೀಂ ಕೋರ್ಟ್, ಡಿಸೆಂಬರ್ 31ರವರೆಗೆ ಸಮಯ ನೀಡಿದೆ.
-
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯನ್ನು ನಡೆಸಲು ಸುಪ್ರೀಂ ಕೋರ್ಟ್ (Supreme Court ) ಮತ್ತೊಮ್ಮೆ ಗಡುವು ವಿಸ್ತರಿಸಿದೆ. ಈ ಹಿಂದೆ ಆಗಸ್ಟ್ 31ರೊಳಗೆ ಚುನಾವಣೆ ನಡೆಸುವಂತೆ ನೀಡಿದ್ದ ನಿರ್ದೇಶನವನ್ನು ಪರಿಷ್ಕರಿಸಿ, ಇದೀಗ 2026ರ ಡಿಸೆಂಬರ್ 31 ರೊಳಗೆ ಚುನಾವಣಾ (GBA elections) ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ಅಗತ್ಯವಿರುವ ಸಿಬ್ಬಂದಿಯನ್ನು ನಿಯೋಜಿಸಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಅರ್ಜಿಯಲ್ಲಿ, ಬೆಂಗಳೂರು ನಗರದಲ್ಲಿ ಸುಮಾರು 1.03 ಕೋಟಿ ಮತದಾರರು ಹಾಗೂ 40 ಲಕ್ಷ ಮನೆಗಳಿದ್ದು, ಮನೆಮನೆಗೆ ತೆರಳಿ ಮತದಾರರ ವಿವರ ಪರಿಶೀಲಿಸುವ ಕಾರ್ಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರತರಾಗಿದ್ದಾರೆ. ಇದೇ ವೇಳೆ ಐದು ನಗರ ಪಾಲಿಕೆಗಳ ಚುನಾವಣೆಯನ್ನು ನಡೆಸಲು ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿ ಸುಮಾರು 60 ಸಾವಿರ ಸಿಬ್ಬಂದಿ ಅಗತ್ಯವಿರುವುದರಿಂದ, ಎರಡೂ ಪ್ರಕ್ರಿಯೆಗಳನ್ನು ಏಕಕಾಲದಲ್ಲಿ ನಿರ್ವಹಿಸುವುದು ಅತ್ಯಂತ ಕಷ್ಟಕರವಾಗಿದೆ ಎಂದು ಸರ್ಕಾರ ವಾದಿಸಿತು.
ಇನ್ನೊಂದೆಡೆ, ಜಿಬಿಎ ಚುನಾವಣೆ ಯಾವುದೇ ಕಾರಣಕ್ಕೂ ಮತ್ತೆ ಮುಂದೂಡಬಾರದು ಎಂದು ಬಿಜೆಪಿ ಕೂಡ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಆಕ್ಷೇಪ ವ್ಯಕ್ತಪಡಿಸಿತ್ತು. ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್, ಎಸ್‌ಐಆರ್ ಪ್ರಕ್ರಿಯೆಯಿಂದ ಉಂಟಾಗಿರುವ ಆಡಳಿತಾತ್ಮಕ ಸವಾಲುಗಳನ್ನು ಪರಿಗಣಿಸಿ, 2026ರ ಡಿಸೆಂಬರ್ 31ರೊಳಗೆ ಜಿಬಿಎ ಚುನಾವಣೆ ನಡೆಸಲು ಗಡುವು ವಿಸ್ತರಣೆ ಮಾಡಿದೆ.