ಬೆಂಗಳೂರು, ಜ.2: ಇಂದಿನ ವೇಗದ ಯುಗದಲ್ಲಿ ನೈತಿಕತೆ ಮತ್ತು ವೃತ್ತಿಧರ್ಮವನ್ನು ಎತ್ತಿಹಿಡಿಯುವುದು ಸವಾಲಿನ ಕೆಲಸ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ (KV Prabhakar) ಅಭಿಪ್ರಾಯಪಟ್ಟರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಚೇರಿಯಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮತ್ತು ಮಾಹಿತಿ ಆಯುಕ್ತರಾದ ಪತ್ರಕರ್ತರಿಗೆ ಸನ್ಮಾನಿಸಿ ಮಾತನಾಡಿದ ಅವರು, ಇಂದು ಇಲ್ಲಿ ಸನ್ಮಾನಿತರಾಗುತ್ತಿರುವ ಐದೂ ಮಂದಿ ಪತ್ರಕರ್ತರಿಗೆ ಮತ್ತು ಇವರನ್ನು ಸನ್ಮಾನಿಸುತ್ತಿರುವ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಾನು ಮೊದಲಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಇವರಲ್ಲಿ ಸಿದ್ದರಾಜು ಅವರು ಹಿರಿಯರಾಗಿ ನಮಗೆಲ್ಲಾ ಮಾದರಿ ಆಗಿದ್ದವರು. ಉಳಿದವರು ನನ್ನ ಸಮಕಾಲೀನರಾಗಿ ಮಾದರಿಗಳಾಗಿರುವವರು. ಹಿರಿಯ ಮತ್ತು ಮಾದರಿ ಪತ್ರಕರ್ತರನ್ನು ಸನ್ಮಾನಿಸುವುದು ಕೇವಲ ಒಂದು ಶಿಷ್ಟಾಚಾರವಲ್ಲ, ಅದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ 'ಜಾಗೃತ ಕಣ್ಣು' ಗಳಿಗೆ ಸಲ್ಲಿಸುವ ಗೌರವವಾಗಿದೆ. ಇಲ್ಲಿ ಸನ್ಮಾನಿತರಾಗುತ್ತಿರುವ ಪತ್ರಕರ್ತ ಸ್ನೇಹಿತರು ದಶಕಗಳ ಕಾಲ ಸಮಾಜದ ಏರಿಳಿತಗಳನ್ನು ಹತ್ತಿರದಿಂದ ಕಂಡಿದ್ದಾರೆ. ಗೂಗಲ್, ಜಿ-ಮೇಲ್, ವಾಟ್ಸಾಪ್‌ನಂತಹ ತಂತ್ರಜ್ಞಾನವಿಲ್ಲದ ಕಾಲದಿಂದ ಹಿಡಿದು ಅಪಾರ ತಂತ್ರಜ್ಞಾನದ ಹಾವಳಿಯ ಕಾಲಘಟ್ಟದ ಎರಡೂ ಸಂದರ್ಭಗಳ ಪತ್ರಿಕೋದ್ಯಮಕ್ಕೂ ಸಾಕ್ಷಿಯಾಗಿರುವವರು ಎಂದು ಮೆಚ್ಚುಗೆ ಸೂಚಿಸಿದರು.
ತಂತ್ರಜ್ಞಾನ ಇಲ್ಲದಿದ್ದಾಗ ಸತ್ಯವನ್ನು ಹುಡುಕಿ ಹೊರತಂದ ಇವರ ಕಾಳಜಿ, ಪರಿಶ್ರಮ, ವೃತ್ತಿಪರತೆಗೆ ಸನ್ಮಾನವು ಒಂದು ರೀತಿಯ ಮಾನ್ಯತೆ ತಂದು ಕೊಟ್ಟಿದೆ. ತಂತ್ರಜ್ಞಾನ ಇಲ್ಲದಿದ್ದಾಗಲೂ ಸತ್ಯದ ತೇರು ಎಳೆದ ಪತ್ರಕರ್ತರು, ಈಗ ತಂತ್ರಜ್ಞಾನದ ಯುಗದಲ್ಲೂ ಸತ್ಯ ಕಾಣಲು ಸಾಧ್ಯವಾಗದ ಯುವ ಪೀಳಿಗೆಗೆ ಮಾದರಿ ಮತ್ತು ಪ್ರೇರಣೆ ಆಗಿದ್ದಾರೆ ಎಂದರು.
ಇಂದಿನ ವೇಗದ ಯುಗದಲ್ಲಿ ನೈತಿಕತೆ ಮತ್ತು ವೃತ್ತಿಧರ್ಮವನ್ನು ಎತ್ತಿಹಿಡಿಯುವುದು ಸವಾಲಿನ ಕೆಲಸ. ಹಿರಿಯರನ್ನು ಗೌರವಿಸುವುದರಿಂದ, ಉದಯೋನ್ಮುಖ ಪತ್ರಕರ್ತರಿಗೆ ಮೌಲ್ಯಾಧಾರಿತ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಮತ್ತು ಸ್ಫೂರ್ತಿ ಮೂಡುತ್ತದೆ. ಈ ಅರ್ಥಪೂರ್ಣ ಕೆಲಸವನ್ನು ಕಾರ್ಯನಿರತ ಪತ್ರಕರ್ತರ ಸಂಘ ಮಾಡುತ್ತಿದೆ ಎಂದರು.
ವಿದ್ಯಾರ್ಥಿಗಳ ಸೃಜನಶೀಲತೆಗೆ ವೇದಿಕೆ; ʼವೇದಾಂತ ಮೇಕಥಾನ್' ಎರಡು ತಿಂಗಳ ವಿಶೇಷ ಕಾರ್ಯಕ್ರಮ
ಸಾಮಾಜಿಕ ಜವಾಬ್ದಾರಿಯನ್ನು ಗುರುತಿಸುವುದೂ ಜವಾಬ್ದಾರಿಯುತ ಕೆಲಸ
ಸಾಮಾಜಿಕ ಜವಾಬ್ದಾರಿಯನ್ನು ಗುರುತಿಸುವುದೂ ಜವಾಬ್ದಾರಿಯುತ ಕೆಲಸ. ಸಾಮಾಜಿಕ ಕಾಳಜಿಗಳನ್ನು ಕಾಪಾಡಿಕೊಂಡಿರುವವರನ್ನು ಗುರುತಿಸುವುದು ಮತ್ತು ಸನ್ಮಾನಿಸುವುದರಿಂದ "ಸಮಾಜವು ಪ್ರಾಮಾಣಿಕ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ" ಎಂಬ ಸಂದೇಶ ಕೊಟ್ಟಂತೆ ಆಗುತ್ತದೆ. ಇದು ಸಮಾಜದಲ್ಲಿ ಸತ್ಯವಂತರ, ಸಾಮಾಜಿಕ ಕಾಳಜಿ ಇಟ್ಟುಕೊಂಡವರ ಪರವಾಗಿ ನಿಲ್ಲುವ ಧೈರ್ಯವನ್ನು ತುಂಬುತ್ತದೆ. ಇತಿಹಾಸದ ಕೊಂಡಿಯಾಗಿ ಹಿರಿಯ ಪತ್ರಕರ್ತರು ಒಂದು ಕಾಲಘಟ್ಟದ ಜೀವಂತ ಇತಿಹಾಸವಿದ್ದಂತೆ. ಅವರನ್ನು ಸನ್ಮಾನಿಸುವ ನೆಪದಲ್ಲಿ ಅವರ ಅನುಭವದ ನುಡಿಗಳನ್ನು ದಾಖಲಿಸುವ ಕೆಲಸವನ್ನೂ ಕಾರ್ಯನಿರತ ಪತ್ರಕರ್ತರ ಸಂಘ ಮಾಡಬೇಕು ಎಂದು ಕರೆ ನೀಡಿದರು.
ವೃತ್ತಿಜೀವನದಿಂದ ನಿವೃತ್ತರಾದ ನಂತರ ಅಥವಾ ಇಳಿ ವಯಸ್ಸಿನಲ್ಲಿ ಅನೇಕ ಪತ್ರಕರ್ತರು ಆರ್ಥಿಕ ಅಥವಾ ಮಾನಸಿಕ ಏಕಾಂಗಿತನ ಅನುಭವಿಸುತ್ತಾರೆ ಎನ್ನುವುದು ನನಗೆ ಗೊತ್ತಿದೆ. ಇಂತಹ ಸಮಯದಲ್ಲಿ ಪತ್ರಕರ್ತರ ಸಂಘಗಳು, ಪ್ರೆಸ್ ಕ್ಲಬ್‌ನಂತಹ ಸಂಸ್ಥೆಗಳು ಅವರನ್ನು ಗುರುತಿಸಿ ಸನ್ಮಾನಿಸಿದರೆ, ಅವರಿಗೆ ಆತ್ಮವಿಶ್ವಾಸ ಮತ್ತು ಗೌರವಯುತ ಬದುಕು ನಡೆಸಲು ನೆರವಾಗುತ್ತದೆ ಎಂದರು.
ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ. ಈ ಸ್ತಂಭವನ್ನು ಭದ್ರವಾಗಿ ಕಟ್ಟಿದವರನ್ನು ಸನ್ಮಾನಿಸುವುದು ಎಂದರೆ ನಾವು ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸಿದಂತೆ ಎಂದು ಭಾವಿಸುತ್ತೇನೆ ಎಂದು ಹೇಳಿದರು. ಸಂಕ್ರಾಂತಿ ವೇಳೆಗೆ ಸರ್ಕಾರದ ಹೊಸ ಜಾಹಿರಾತು ನೀತಿ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಹೊಸ ವರ್ಷದಿಂದ ಗೃಹೋಪಯೋಗಿ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಸ್ಟಾರ್ ರೇಟಿಂಗ್ ಕಡ್ಡಾಯ
ರಾಜ್ಯೋತ್ಸವ ಪುರಸ್ಕೃತರಾದ ಸಿದ್ದರಾಜು, ಬಿ.ಎಂ. ಹನೀಫ್, ಶಾಂತಕುಮಾರ್ ಹಾಗೂ ಮಾಹಿತಿ ಆಯುಕ್ತರಾದ ಮಹೇಶ್ ವಾಳ್ವೇಕರ್, ವೆಂಕಟ್ ಸಿಂಗ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು. KUWJ ಅಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಮದನ್ ಗೌಡ, ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಸೇರಿ ಸಂಘದ ಮುಖಂಡರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.