ಹೊಸ ವರ್ಷದಿಂದ ಗೃಹೋಪಯೋಗಿ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಸ್ಟಾರ್ ರೇಟಿಂಗ್ ಕಡ್ಡಾಯ
Energy Efficiency Star Ratings: ಮನೆಯಲ್ಲಿ ಬಳಕೆಯಾಗುವ ಟಿವಿ, ರೆಫ್ರಿಜರೇಟರ್, ಎಲ್‌ಪಿಜಿ ಗ್ಯಾಸ್ ಸ್ಟೌವ್‌ಗಳು, ಎಸಿ ಸೇರಿದಂತೆ ಗೃಹೋಪಯೋಗಿ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಜನವರಿ 1ರಿಂದ ಸ್ಟಾರ್ ರೇಟಿಂಗ್ ಕಡ್ಡಾಯಗೊಳಿಸಲಾಗಿದೆ. ಇಂಧನ ದಕ್ಷತೆಯನ್ನು ಖಾತ್ರಿ ಪಡಿಸಿಕೊಳ್ಳಲು ಇಂಧನ ದಕ್ಷತೆಯ ಬ್ಯೂರೋ (ಬಿಇಇ) ಈ ಅಧಿಸೂಚನೆ ಹೊರಡಿಸಿದೆ.
(ಸಂಗ್ರಹ ಚಿತ್ರ) -
ನವದೆಹಲಿ: ಟಿವಿ (TV), ರೆಫ್ರಿಜರೇಟರ್‌ಗಳು (refrigerator), ಎಲ್‌ಪಿಜಿ (LPG) ಗ್ಯಾಸ್ ಸ್ಟೌವ್‌ಗಳು, ಎಸಿ ಸೇರಿದಂತೆ ಹಲವಾರು ಉಪಕರಣಗಳ ಮೇಲೆ ಇಂಧನ ದಕ್ಷತೆಯ (energy efficiency) ನಕ್ಷತ್ರ ಲೇಬಲಿಂಗ್ (Star labelling) ಅನ್ನು ಎನರ್ಜಿ ಎಫಿಷಿಯೆನ್ಸಿ ಬ್ಯೂರೋ (Bureau of Energy Efficiency) ಕಡ್ಡಾಯಗೊಳಿಸಿದೆ. ಬ್ಯುರೋ ಹೊರಡಿಸಿರುವ ಗೆಜೆಟ್ ಅಧಿಸೂಚನೆಯ ಪ್ರಕಾರ ಈ ಹಿಂದೆ ಸ್ಟಾರ್ ರೇಟಿಂಗ್ ಸ್ವಯಂ ಪ್ರೇರಿತವಾಗಿತ್ತು. ಆದರೆ ಇನ್ನು ಮುಂದೆ ಇದು ಡೀಪ್ ಫ್ರೀಜರ್‌ಗಳು, ವಿತರಣಾ ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಗ್ರಿಡ್ ಸಂಪರ್ಕಿತ ಸೌರ ಇನ್ವರ್ಟರ್‌ಗಳಿಗೂ ಇಂಧನ ದಕ್ಷತೆಯ ನಕ್ಷತ್ರ ಲೇಬಲಿಂಗ್ ಕಡ್ಡಾಯವಾಗಿದೆ ಎಂದು ತಿಳಿಸಿದೆ.
ಜನವರಿ 1ರಿಂದ ಜಾರಿಯಾಗುವಂತೆ ರೆಫ್ರಿಜರೇಟರ್‌ಗಳು, ಟೆಲಿವಿಷನ್‌ಗಳು, ಎಲ್‌ಪಿಜಿ ಗ್ಯಾಸ್ ಸ್ಟೌವ್‌ಗಳ ಮೇಲೆ ಇಂಧನ ದಕ್ಷತೆಯ ನಕ್ಷತ್ರ ಲೇಬಲಿಂಗ್ ಕಡ್ಡಾಯವಾಗಿದೆ. ಇದಕ್ಕೂ ಮೊದಲು ಫ್ರಾಸ್ಟ್-ಫ್ರೀ ರೆಫ್ರಿಜರೇಟರ್‌ಗಳು, ಡೈರೆಕ್ಟ್ ಕೂಲ್ ರೆಫ್ರಿಜರೇಟರ್‌ಗಳು, ಡೀಪ್ ಫ್ರೀಜರ್‌ಗಳು, ಆರ್‌ಎಸಿ (ಕ್ಯಾಸೆಟ್, ಫ್ಲೋರ್ ಸ್ಟ್ಯಾಂಡಿಂಗ್ ಟವರ್, ಸೀಲಿಂಗ್, ಕಾರ್ನರ್ ಎಸಿ), ಕಲರ್ ಟೆಲಿವಿಷನ್‌ಗಳು ಮತ್ತು ಅಲ್ಟ್ರಾ-ಹೈ ಡೆಫಿನಿಷನ್ ಟೆಲಿವಿಷನ್‌ಗಳಂತಹ ವಸ್ತುಗಳ ಮೇಲೆ ನಕ್ಷತ್ರ ಲೇಬಲ್ ಮಾಡುವುದು ಸ್ವಯಂಪ್ರೇರಿತವಾಗಿತ್ತು. ಸ್ಟಾರ್ ಲೇಬಲಿಂಗ್‌ಗಾಗಿ ಕಡ್ಡಾಯ ಉಪಕರಣಗಳ ಪಟ್ಟಿಯನ್ನು ಕಾಲಕಾಲಕ್ಕೆ ನವೀಕರಿಸಲಾಗುತ್ತದೆ ಎಂದು ಬ್ಯುರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಸ ವರ್ಷಕ್ಕೆ ಬಿಗ್ ಶಾಕ್; ಫೆಬ್ರವರಿ 1ರಿಂದ ದುಬಾರಿಯಾಗಲಿದೆ ಸಿಗರೇಟ್, ಬೀಡಿ, ಪಾನ್ ಮಸಾಲ
2025ರ ಜುಲೈ ತಿಂಗಳಲ್ಲಿ ಪರಿಚಯಿಸಲಾಗಿದ್ದ ಈ ಸ್ಟಾರ್ ರೇಟಿಂಗ್ ಕರಡು ಪಾಲುದಾರರಿಂದ ಸ್ವೀಕರಿಸಿದ ಪ್ರತಿಕ್ರಿಯೆಯನ್ನು ಆಧರಿಸಿವೆ. ಈ ಹಿಂದೆ ಕೊಠಡಿಯ ಹವಾನಿಯಂತ್ರಣಗಳು, ವಿದ್ಯುತ್ ಸೀಲಿಂಗ್ ಮಾದರಿಯ ಫ್ಯಾನ್‌ಗಳು, ಸ್ಟೇಷನರಿ ಸ್ಟೋರೇಜ್ ಮಾದರಿಯ ವಿದ್ಯುತ್ ವಾಟರ್ ಹೀಟರ್, ವಾಷಿಂಗ್ ಮೆಷಿನ್ ಮತ್ತು ಟ್ಯೂಬ್ಯುಲರ್ ಫ್ಲೋರೊಸೆಂಟ್ ದೀಪಗಳು ಮತ್ತು ಸ್ವಯಂ-ಬ್ಯಾಲಸ್ಟೆಡ್ ಎಲ್‌ಇಡಿ ದೀಪಗಳ ಮೇಲೆ ಈ ಸ್ಟಾರ್ ಲೇಬಲ್ ಕಡ್ಡಾಯವಾಗಿತ್ತು. ಆದರೆ ಇದೀಗ ಇದಕ್ಕೆ ಇನ್ನಷ್ಟು ಕೆಲವು ಉಪಕರಣಗಳನ್ನು ಸೇರಿಸಲಾಗಿದೆ ಎದು ಅವರು ಹೇಳಿದ್ದಾರೆ.
ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವ ಸಲುವಾಗಿ ವ್ಯಾಪಕ ಶ್ರೇಣಿಯ ವಿದ್ಯುತ್ ಉಪಕರಣಗಳಿಗೆ ನಕ್ಷತ್ರ ಲೇಬಲಿಂಗ್ ಕಡ್ಡಾಯಗೊಳಿಸಲಿದೆ. ಸ್ಟಾರ್ ಲೇಬಲಿಂಗ್ ಈಗಾಗಲೇ ಕಡ್ಡಾಯವಾಗಿದ್ದರೂ, ಇಂಧನ ಕಾರ್ಯಕ್ಷಮತೆಯ ಮಾನದಂಡಗಳನ್ನು ಮತ್ತಷ್ಟು ಬಿಗಿಗೊಳಿಸಲು ದಕ್ಷತೆಯ ಮಾನದಂಡಗಳನ್ನು ನವೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಜನವರಿ 1ರಿಂದ ಸ್ಟಾರ್ ರೇಟಿಂಗ್ ಕಡ್ಡಾಯವಾಗಿರುವುದರಿಂದ ಬಳಕೆದಾರರು ಹೆಚ್ಚು ವಿದ್ಯುತ್ ಉಳಿಸುವ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ಗೃಹೋಪಯೋಗಿ ವಸ್ತುಗಳ ಬೆಲೆ ಶೇ. 5-10ರಷ್ಟು ಏರಿಕೆಯಾಗಬಹುದು. ಹೆಚ್ಚು ಸ್ಟಾರ್ ರೇಟಿಂಗ್ ಇರುವ ಉಪಕರಣಗಳು ವಿದ್ಯುತ್ ಉಳಿತಾಯ ಮಾಡುವಲ್ಲಿ ಸಹಾಯ ಮಾಡುತ್ತವೆ. ಇದು ದೀರ್ಘಾವಧಿಯಲ್ಲಿ ಪ್ರಯೋಜನಕಾರಿಯೂ ಆಗಿದೆ. ಸ್ಟಾರ್ ರೇಟಿಂಗ್ ಕಡ್ಡಾಯಗೊಳಿಸಿರುವುದರ ಮುಖ್ಯ ಉದ್ದೇಶ ದೇಶದಲ್ಲಿ ಶಕ್ತಿ ದಕ್ಷತೆಯನ್ನು ಹೆಚ್ಚಿಸುವುದಾಗಿದೆ ಎಂದು ಅವರು ತಿಳಿಸಿದ್ದಾರೆ.