ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಗೆ (Microfinance Torture) ಕಡಿವಾಣ ಹಾಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಸುಗ್ರೀವಾಜ್ಞೆ (ordinance) ಹೊರಡಿಸಿ, ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರ ಅಂಕಿತಕ್ಕೆ ಕಳುಹಿಸಿತ್ತು. ಆದರೆ, ಇದೀಗ ರಾಜ್ಯಪಾಲರು ಹಲವು ಸ್ಪಷ್ಟನೆಯನ್ನು ಕೇಳಿ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ಸಹಿ ಹಾಕದೇ ವಾಪಸ್ ಕಳುಹಿಸಿದ್ದಾರೆ. ಸುಗ್ರೀವಾಜ್ಞೆಯಲ್ಲಿ ಸಾಲ ಪಡೆದವರ ರಕ್ಷಣೆಗೆ ಮಾತ್ರವೇ ಗಮನ ಹರಿಸಲಾಗಿದೆ. ಸಹಜ ನ್ಯಾಯದಡಿಯಲ್ಲಿ ಸಾಲ ಕೊಟ್ಟವರಿಗೆ ರಕ್ಷಣೆ ಕಾಣಿಸುತ್ತಿಲ್ಲ. ಸುದೀರ್ಘ ಅವಧಿಯಲ್ಲಿ ಇದು ಮಾರಕವಾಗಲಿದೆ ಎಂದು ರಾಜ್ಯಪಾಲರು ಸುಗ್ರೀವಾಜ್ಞೆಗೆ ಅಸಮ್ಮತಿ ಸೂಚಿಸಿದ್ದು, ಹಲವು ಸ್ಪಷ್ಟನೆ ಕೇಳಿ ಸುಗ್ರೀವಾಜ್ಞೆ ವಾಪಸ್ ಕಳುಹಿಸಿದ್ದಾರೆ.
ಸುಗ್ರೀವಾಜ್ಞೆ ತಿರಸ್ಕರಿಸಲು ಗವರ್ನರ್ ಕಚೇರಿ ಹಲವು ಕಾರಣಗಳನ್ನು ಉಲ್ಲೇಖಿಸಿದೆ. ನಿಯಮ ಉಲ್ಲಂಘಿಸುವ ಫೈನಾನ್ಸ್ ಸಂಸ್ಥೆಗಳಿಗೆ 10 ವರ್ಷಗಳ ಶಿಕ್ಷೆ ಮತ್ತು 5 ಲಕ್ಷ ದಂಡ ಅತಿಯಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಬಳಸಬಹುದಿತ್ತು. ಈ ಸುಗ್ರೀವಾಜ್ಞೆ ಮೈಕ್ರೋಫೈನಾನ್ಸ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ ಮತ್ತು ಇದು ಬಡವರ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣಗಳನ್ನು ನೀಡಿ, ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ತಿರಸ್ಕರಿಸಿದ್ದಾರೆ.
ಸುಗ್ರೀವಾಜ್ಞೆಯಲ್ಲಿ ಸಾಲ ಪಡೆದವರ ರಕ್ಷಣೆಗೆ ಮಾತ್ರವೇ ಸರ್ಕಾರ ಹರಿಸಿದೆ. ಸಹಜ ನ್ಯಾಯದ ಅಡಿಯಲ್ಲಿ ಸಾಲ ಕೊಟ್ಟವರಿಗೆ ರಕ್ಷಣೆ ಕಾಣಿಸುತ್ತಿಲ್ಲ. ಸುದೀರ್ಘ ಅವಧಿಯಲ್ಲಿ ಇದು ಮಾರಕವಾಗಲಿದೆ. ಮೈಕ್ರೋಫೈನಾನ್ಸ್ ಸಂಸ್ಥೆಗಳು 3 ಲಕ್ಷ ರೂ.ಗಿಂತ ಜಾಸ್ತಿ ಸಾಲ ಕೊಡುವುದಿಲ್ಲ. ನೀವು 5 ಲಕ್ಷ ದಂಡ ಹೇಗೆ ಹಾಕುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಸಾಲ ಪಡೆಯುವವನ ಬಳಿ ಏನೂ ದಾಖಲೆ ತೆಗೆದುಕೊಳ್ಳಬಾರದು ಎಂದು ಹೇಳಿದ್ದೀರಾ? ಆದರೆ, ಇದು ಸರ್ಕಾರಿ ಸಂಸ್ಥೆಗಳ ಸಾಲದ ವೇಳೆ ಅನುಸರಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ರಾಜ್ಯಪಾಲರು ಪ್ರಶ್ನೆ ಮಾಡಿದ್ದಾರೆ.
ಬಜೆಟ್ ಅಧಿವೇಶನದ ಹತ್ತಿರವಾಗ್ತಿರುವಾಗ ಸದನದಲ್ಲಿ ಸಾದಕಬಾಧಕ ಚರ್ಚಿಸಿ. ಈಗ ಇರುವ ಕಾನೂನುಗಳಲ್ಲೇ ಪೊಲೀಸರು ಸರಿಯಾದ ಕ್ರಮಕೈಗೊಳ್ಳುತ್ತಿಲ್ಲ. ಪೊಲೀಸರು ಸರಿಯಾದ ಕ್ರಮಕೈಗೊಳ್ಳದೇ ಇರೋದಕ್ಕೆ ಮತ್ತೊಂದು ಕಾನೂನಿನ ಅಗತ್ಯತೆ ಕಾಣುತ್ತಿಲ್ಲ ಎಂದು ರಾಜ್ಯಪಾಲರು ಸುಗ್ರೀವಾಜ್ಞೆ ವಾಪಸ್ ಕಳುಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ| BS Yediyurappa: ಪೋಕ್ಸೋ ಕೇಸ್‌ನಲ್ಲಿ ಬಿಎಸ್ ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು, ಬಂಧನ ಭೀತಿಯಿಂದ ಪಾರು
ಮೈಕ್ರೋ ಫೈನಾನ್ಸ್ ಕಿರುಕುಳದಿಂದ 30 ಜನ ಆತ್ಮಹತ್ಯೆ
ಮೈಸೂರು: ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ 1 ಲಕ್ಷ ಜನರು ಗ್ರಾಮಗಳನ್ನು ತೊರೆದಿದ್ದು, 30 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಮಂಡ್ಯದ ಕೊನ್ನಾಪುರ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ತಾಯಿ ಮತ್ತು ಮಗನ ಮನೆಗೆ ಗುರುವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸುಗ್ರೀವಾಜ್ಞೆ ತರುತ್ತೇವೆಂದು ಹೇಳಿ ಒಂದು ತಿಂಗಳು ಕಳೆದಿದೆ. ಮಂಡ್ಯ ಜಿಲ್ಲೆಯಲ್ಲಿ ದಲಿತರ ಪ್ರದೇಶದಲ್ಲಿ 6 ಮಂದಿ ಊರು ಬಿಟ್ಟು ಹೋಗಿದ್ದಾರೆ. ರಾಜ್ಯದಲ್ಲಿ ಲಕ್ಷಾಂತರ ಜನರು ಗ್ರಾಮ ತೊರೆದಿದ್ದಾರೆ. 30 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರ್ಕಾರ ಸುಗ್ರೀವಾಜ್ಞೆ ತರಲಿಲ್ಲ ಎಂದರೆ, ಈ ಸಾವುಗಳು ನಿಲ್ಲುವುದಿಲ್ಲ ಎಂದು ಹೇಳಿದರು.
ಕೊನ್ನಾಪುರದಲ್ಲಿ ತಾಯಿ ಪ್ರೇಮಾ ಮತ್ತು ಮಗ ರಂಜಿತ್ ಮೈಕ್ರೋ ಫೈನಾನ್ಸ್‌ನ ಸಾಲ ತೀರಿಸಲಾಗದೆ ಕೊನ್ನಾಪುರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡವರ ಪರ ಎಂದು ಹೇಳುವ ಸಿಎಂ ಸಿದ್ದರಾಮಯ್ಯನವರಿಗೆ ಕಣ್ಣಿಲ್ಲ. ಕೊನ್ನಾಪುರ ಗ್ರಾಮದಲ್ಲಿ ಚಾಮುಂಡೇಶ್ವರಿ, ನವಚೇತನ, ಸೂರ್ಯೋದಯ, ಯುನಿಟಿ, ಪ್ರಗತಿ ಸೇರಿದಂತೆ 24 ಮೈಕ್ರೋ ಫೈನಾನ್ಸ್‌ಗಳು ಈ ಹಳ್ಳಿಗೆ ಬಂದು ವರ್ಷಕ್ಕೆ ಶೇ.12 ರಂತೆ ಸಾಲ ನೀಡಿವೆ. ಒಬ್ಬರಿಗೆ 9 ಜನರು ಶ್ಯೂರಿಟಿ ನೀಡಿದ್ದಾರೆ.
ಒಬ್ಬರು ಸಾಲ ಮರುಪಾವತಿ ಮಾಡಿಲ್ಲವೆಂದರೆ ಉಳಿದವರು ಹೊಣೆಯಾಗುತ್ತಾರೆ. ಸಾಲ ಕಟ್ಟದೆ ಮಾನ ಹೋದಾಗ ನೊಂದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪೊಲೀಸರು ಕೂಡ ಇಲ್ಲಿ ಮೈಕ್ರೋ ಫೈನಾನ್ಸ್‌ಗೆ ಬೆಂಬಲ ನೀಡಿದ್ದಾರೆ. ಮನೆ ವಶಕ್ಕೆ ಪಡೆಯುವ ಸಮಯದಲ್ಲಿ ಪೊಲೀಸರು ಕುಟುಂಬದ ಸದಸ್ಯರನ್ನು ಎಳೆದು ಹೊರಗೆ ಹಾಕಿದ್ದಾರೆ ಎಂದು ವ್ಯಕ್ತಪಡಿಸಿದರು.
ಮಂಡ್ಯದಲ್ಲಿ 60 ಮೈಕ್ರೋ ಫೈನಾನ್ಸ್‌ಗಳಿದ್ದು, ಕೇವಲ 18 ಮಾತ್ರ ಅಧಿಕೃತವಾಗಿವೆ. ಉಳಿದವುಗಳಲ್ಲಿ ರೌಡಿಗಳಿದ್ದಾರೆ. ತಹಶೀಲ್ದಾರ್ ಹಾಗೂ ಪೊಲೀಸರು ಎಲ್ಲಾ ಹಳ್ಳಿಗೂ ಹೋಗಿ ಕ್ರಮ ಕೈಗೊಳ್ಳಬೇಕಿತ್ತು. ಈ ಸಾವುಗಳಿಗೆ ನ್ಯಾಯ ನೀಡಲು ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಮಾಡಬೇಕು. ಅನಧಿಕೃತ ಮೈಕ್ರೋ ಫೈನಾನ್ಸ್‌ಗಳನ್ನು ಪತ್ತೆ ಮಾಡಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.