ಬೆಂಗಳೂರು, ನ.6: ಗೃಹಲಕ್ಷ್ಮಿ ಯೋಜನೆಗೆ 86,000 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದು 1 ಲಕ್ಷ ಕೋಟಿ ಮೊತ್ತಕ್ಕೆ ತಲುಪಿದಾಗ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿಯರ ಸಮಾವೇಶ ಮಾಡಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ತಿಳಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ನಡೆದ 'ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಜತೆ ಸಂವಾದ' ಕಾರ್ಯಕ್ರಮ ಹಾಗೂ ನಂತರ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.
ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿಯ ಮಡಿಲಿಗೆ ನಾನು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರು 2000 ರೂಪಾಯಿಗಳನ್ನಿಟ್ಟು ಈ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡುವ ಶಕ್ತಿ ಕೊಡಮ್ಮ ಎಂದು ಪ್ರಾರ್ಥಿಸಿದ್ದೆವು. ಜನರು ನಮಗೆ 136 ಸೀಟುಗಳೊಂದಿಗೆ ಆಶೀರ್ವಾದ ಮಾಡಿದರು ಎಂದು ತಿಳಿಸಿದರು. ಸಚಿವರಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನೇತೃತ್ವದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಯಿತು 1.24 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಸೌಲಭ್ಯ ತಲುಪುತ್ತಿದೆ ಎಂದರು.
ಬೇರೆ ರಾಜ್ಯಗಳಲ್ಲಿ ಗ್ಯಾರಂಟಿಗಳು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ
ನಮ್ಮ ರಾಜ್ಯದಲ್ಲಿ ನಾವು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಪರಿಪೂರ್ಣವಾಗಿ ಜಾರಿಗೆ ತಂದಿದ್ದೇವೆ. ಇದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಇಂದಿರಾ ಗಾಂಧಿಯವರು ವೃದ್ಧಾಪ್ಯ ವೇತನ ಯೋಜನೆ ಜಾರಿಗೆ ತಂದರು. ಅದನ್ನು ನಿಲ್ಲಿಸಲು ಸಾಧ್ಯವಾಯಿತೇ? ಬೇರೆ ರಾಜ್ಯಗಳನ್ನು ನಮ್ಮ ಗ್ಯಾರಂಟಿ ಯೋಜನೆಯನ್ನು ಕಾಪಿ ಮಾಡಿದ್ದಾರೆ. ಆದರೆ ಪೂರ್ಣ ಪ್ರಮಾಣದಲ್ಲಿ ಯಾರೂ ಜಾರಿಗೆ ತಂದಿಲ್ಲ ಎಂದು ತಿಳಿಸಿದರು.
ಗೃಹಲಕ್ಷ್ಮಿ ದುರುಪಯೋಗ ತಡೆಯಲು ಮರು ಪರಿಶೀಲನೆ
ಇತ್ತೀಚೆಗೆ ಗೃಹಜ್ಯೋತಿ ಯೋಜನೆಯ ಕುರಿತು ಸಮೀಕ್ಷೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬಹಳ ಜನ ಯೋಜನೆಯ ಸೌಲಭ್ಯ ಬೇಡ ಎಂದರು. ಕೆಲವರು ದಾಖಲೆ ನೀಡಲು ಹಿಂಜರಿದರು ಎಂದರು. ಗೃಹಲಕ್ಷ್ಮಿ ಯೋಜನೆಯಲ್ಲೂ ದುರುಪಯೋಗ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಒಂದು ಲಕ್ಷಕ್ಕೂ ಹೆಚ್ಚು ಮೃತರ ಖಾತೆಗೆ ಹಣ ಹೋಗುತ್ತಿರುವುದು, ಇತರ ರಾಜ್ಯದ ಮಹಿಳೆಯರು ಈ ಸೌಲಭ್ಯದ ದುರುಪಯೋಗ ಪಡೆದಿರುವುದು, ಬಾಗಲಕೋಟೆಯ ಫಲಾನುಭವಿಯ ವಿವರ ಪರಿಶೀಲಿಸಿದಾಗ ಫೋನ್ ನಂಬರ್ ಒಂದು ಊರಿನದ್ದು, ಹಣ ಬೇರೆಯವರಿಗೆ ತಲುಪುತ್ತಿರುವುದು ಇಂತಹ ವ್ಯತ್ಯಾಸಗಳು ಗಮನಕ್ಕೆ ಬಂದಿವೆ. ಗೃಹಲಕ್ಷ್ಮಿ ಮೊತ್ತ ಸಾಲಕ್ಕೆ ವಜಾ ಆಗುತ್ತಿರುವ ಘಟನೆಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಫಾರಂ ಸಿದ್ಧಪಡಿಸಲಾಗಿದೆ. ಮಹಿಳೆಯರು ತಮ್ಮದೇ ದೂರವಾಣಿ ಸಂಖ್ಯೆ ನಮೂದಿಸಬೇಕು ಎಂದು ಮನವಿ ಮಾಡಿದರು.
ಗುರುವಾರದಂದು ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷಗಳಾದವು. ಆರ್ಥಿಕವಾಗಿ ಹೆಣ್ಣು ಕುಟುಂಬದ ಕಣ್ಣು ಎನ್ನುತ್ತಾರೆ. ಬಹುತೇಕ ಮಹಿಳೆಯರು ಗೃಹಲಕ್ಷ್ಮಿ ಮೊತ್ತವನ್ನು ತಮ್ಮ ಕುಟುಂಬಕ್ಕಾಗಿ, ಸಾಲ ತೀರಿಸಲು ಬಳಕೆ ಮಾಡಿಕೊಂಡಿದ್ದಾರೆ. ಕೆಲವರು ತಮಗಾಗಿ ಬಳಸಿಕೊಂಡಿದ್ದಾರೆ. ಈ ಯೋಜನೆಯ ಸದ್ಬಳಕೆಯಾಗಬೇಕು. ನೀವು ಈ ಮೊತ್ತವನ್ನು ಯಾಕೆ ಬಳಸುತ್ತಿದ್ದೀರಿ ಎಂಬ ಮಾಹಿತಿಬೇಕು ಎಂಬ ಕಾರಣಕ್ಕಾಗಿ ಈ ಸಂವಾದ ಏರ್ಪಡಿಸಲಾಗಿದೆ. ಪಂಚಾಯಿತಿ ಮಟ್ಟದಲ್ಲಿಯೂ ಗ್ಯಾರಂಟಿ ಸಮಿತಿ ರಚಿಸಲಾಗುತ್ತಿದ್ದು, ಅವರು ನಿಮ್ಮ ಸಂಪರ್ಕದಲ್ಲಿರುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮುಂದಿನ ಅಧಿವೇಶನಕ್ಕೂ ಮೊದಲೇ ಮಹಿಳೆಯೊಬ್ಬರನ್ನು ಸಚಿವರನ್ನಾಗಿ ನೇಮಕ ಮಾಡಲಾಗುವುದು. ಗೃಹಲಕ್ಷ್ಮಿ ಫಲಾನುಭವಿಗಳ ಪರಿಶೀಲನೆ ಸಂದರ್ಭದಲ್ಲಿ ಸರಿಯಾದ ಮಾಹಿತಿ ಅದರಲ್ಲೂ ವಿಶೇಷವಾಗಿ ನಿಮ್ಮದೇ ದೂರವಾಣಿ ಸಂಖ್ಯೆ ನಮೂದಿಸಿ. ನಮ್ಮ ಸಂದೇಶ ನಿಮಗೆ ತಲುಪಬೇಕು. ಗೃಹ ಲಕ್ಷ್ಮಿ ಯೋಜನೆಯ ಹಣದಿಂದ ವ್ಯವಹಾರ, ಉದ್ಯಮಗಳಲ್ಲಿ ತೊಡಗಿಸಿಕೊಂಡವರು, ಮಕ್ಕಳ ಶಿಕ್ಷಣಕ್ಕೆ ಬಳಸಿಕೊಂಡಿರುವುದು ತಿಳಿದು ಸಂತೋಷವಾಯಿತು. ವಿದ್ಯೆ ಬಹುದೊಡ್ಡ ಆಸ್ತಿ. ಆದರೆ ಈ ಮೊತ್ತವನ್ನು ಎಂದಿಗೂ ಬಡ್ಡಿ ವ್ಯವಹಾರ ಅಥವಾ ಚೀಟಿ ವ್ಯವಹಾರಕ್ಕೆ ಬಳಸಿಕೊಳ್ಳಬೇಡಿ. ನಿಮ್ಮ ಆಶೀರ್ವಾದ ಇರಲಿ. ಮತ್ತೆ ನಾವು 2028 ರಲ್ಲಿ ಅಧಿಕಾರಕ್ಕೆ ಬರುತ್ತೇವೆ. ಈ ಬಗ್ಗೆ ನಿಮ್ಮ ಪತಿ, ನಿಮ್ಮ ಗೆಳತಿಯರಿಗೂ ಅರಿವು ಮೂಡಿಸಿ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣಕಾಸಿನ ವ್ಯವಹಾರಗಳ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ, ಮೀಟರ್ ಬಡ್ಡಿ ಹಾಗೂ ಚೀಟಿ ವ್ಯವಹಾರಗಳ ಸುಳಿಗೆ ಸಿಲುಕದಂತೆ ಎಚ್ಚರಿಕೆ ನೀಡಲಾಗುವುದು ಎಂದು ಕಿವಿಮಾತು ಹೇಳಿದರು.
ಫಲಾನುಭವಿಗಳ ಬ್ಯಾಂಕ್ ಖಾತೆಗಳಿಂದ ಸಾಲದ ಹಣದ ಬಾಬ್ತು ತೆಗೆದುಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಎಲ್ಲ ವಿಚಾರಗಳ ಕುರಿತು ಪರಿಶೀಲನೆ ನಡೆಸುತ್ತಿದ್ದೇನೆ. ಫಲಾನುಭವಿಗಳ ಪೈಕಿ ಶೇ.30ರಿಂದ 35ರಷ್ಟು ಮಂದಿಯ ಬಳಿ ಬೇರೆ ಬೇರೆ ವ್ಯಕ್ತಿಗಳ ಫೋನ್ ನಂಬರ್ಗಳಿರುವುದು ಗಮನಕ್ಕೆ ಬಂದಿದೆ. ಹೀಗಾಗಿ, ಫಲಾನುಭವಿಗಳು ತಮ್ಮದೇ ಮೊಬೈಲ್ ಫೋನ್ ಬಳಸಬೇಕು. ಬೇರೆಯವರ ಫೋನ್ ನಂಬರ್ ನೀಡಬಾರದು ಎಂಬುದಾಗಿ ಮನವರಿಕೆ ಮಾಡಿಕೊಡುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳನ್ನು ಕರೆದು ಮಾತನಾಡಿಸಿ, ಸಮೀಕ್ಷೆ ನಡೆಸುವ ಮೂಲಕ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿದ್ದೇನೆ ಎಂದರು.
ದೀಪಾವಳಿ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಗೆ 36 ತಿಂಗಳು, ಅಂದರೆ ಮೂರು ವರ್ಷ ಪೂರ್ಣಗೊಂಡಿದೆ. ನಿನ್ನೆ (ಗುರುವಾರ) ಒಂದೇ ದಿನ ಸುಮಾರು 7 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇನೆ. ಫಲಾನುಭವಿಗಳಿಗೆ ಇನ್ನೂ ಏನಾದರೂ ಸಮಸ್ಯೆಗಳಿವೆಯೇ ಎಂಬುದನ್ನು ವಿಚಾರಿಸಿದ್ದೇನೆ. ಶಕ್ತಿ ಯೋಜನೆಯಿಂದ ಆಗಿರುವ ಅನುಕೂಲಗಳ ಬಗ್ಗೆಯೂ ಮಹಿಳೆಯರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಉಳಿದವರೊಂದಿಗೂ ಮಾತನಾಡಿ, ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು.
ಮೀಟರ್ ಬಡ್ಡಿ ವ್ಯವಹಾರಕ್ಕೆ ಕಡಿವಾಣ
ಮೀಟರ್ ಬಡ್ಡಿ ವ್ಯವಹಾರದಲ್ಲಿ ತೊಡಗಬಾರದು ಎಂದು ಎಚ್ಚರಿಕೆ ನೀಡುತ್ತಿರುವುದಕ್ಕೆ ಕಾರಣವೇನಿದೆ ಎಂಬ ಪ್ರಶ್ನೆಗೆ, "ಕೆಲವರು ಬೆಳಗ್ಗೆ ಮಾರುಕಟ್ಟೆಗೆ ಹೋಗುವಾಗ 2 ಸಾವಿರ ರೂಪಾಯಿ ಸಾಲ ಪಡೆದು, ಸಂಜೆ ಹಣ ಹಿಂದಿರುಗಿಸುವಾಗ ಶೇ. 10ರಷ್ಟು ನೀಡುವಂತಹ ಅತಿಯಾದ ಬಡ್ಡಿ ವ್ಯವಹಾರ ನಡೆಸುತ್ತಿದ್ದಾರೆ. ಶೇ.5-10 ರೂಪಾಯಿಗಳ ಲೆಕ್ಕದಲ್ಲಿ ಬಡ್ಡಿ ವಸೂಲಿ ಮಾಡುವ ಪದ್ಧತಿಯೂ ಇದೆ. ಇಂತಹ ವ್ಯವಹಾರಗಳಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದಲ್ಲದೆ, ಅಪರಾಧ ಪ್ರಕರಣಗಳೂ ಹೆಚ್ಚಾಗುತ್ತಿವೆ. ಆದರೆ, ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಇಂತಹ ವ್ಯವಹಾರಗಳಿಗೆ ಒಳಗಾಗದಂತೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಅಗತ್ಯಬಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.
ಚೀಟಿ ವ್ಯವಹಾರದಲ್ಲೂ ಎಚ್ಚರಿಕೆ ಅಗತ್ಯ
ಚೀಟಿ ವ್ಯವಹಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಡಿ.ಕೆ. ಶಿವಕುಮಾರ್, "ಚೀಟಿ ವ್ಯವಹಾರದಲ್ಲಿ ಹಲವು ಸಮಸ್ಯೆಗಳಿವೆ. ಕೊನೆಯಲ್ಲಿ ಹಣ ಕಟ್ಟಿದವರಿಗೆ ಹಣ ಸಿಗದೆ ಹೋಗುವ ಸಾಧ್ಯತೆಯಿದ್ದು, ನಂತರ ಕಾನೂನು ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ, ಇಂತಹ ವ್ಯವಹಾರಗಳಿಂದ ದೂರವಿರುವಂತೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಹೇಳಿದರು.