ರಾಜ್ಯದ ಹಲವೆಡೆ ಪೆಟ್ರೋಲ್‌ನಲ್ಲಿ ನಿಗದಿತ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥನಾಲ್ ಪತ್ತೆ: ಡಾ.ಜಿ. ಪರಮೇಶ್ವರ್
Dr G Parameshwara: ನಮ್ಮ ಸರ್ಕಾರವು ಸ್ವತಂತ್ರ ಪ್ರಯೋಗಾಲಯಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪ್ರಮುಖ ತೈಲ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್‌ನಲ್ಲಿ ಶೇ.31.2ರವರೆಗೆ ಎಥನಾಲ್ ಮಿಶ್ರಣವಾಗಿರುವುದು ಕಂಡುಬಂದಿದೆ. ರಾಜ್ಯದ ಏಳು ಜಿಲ್ಲೆಗಳಿಂದ ಸಂಗ್ರಹಿಸಿದ ಪೆಟ್ರೋಲ್ ಮಾದರಿಗಳಲ್ಲಿ ನಿಗದಿತ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥನಾಲ್ ಇರುವುದು ಪತ್ತೆಯಾಗಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
-
ಬೆಂಗಳೂರು, ನ.06: ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥನಾಲ್ (E20) ಅನ್ನು ಮಿಶ್ರಣಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಎಥನಾಲ್ ಮಿಶ್ರಿತ ಪೆಟ್ರೋಲ್ ಖರೀದಿಯನ್ನು ಜನರಿಗೆ ಅನಿವಾರ್ಯವಾಗಿಸಿದೆ. ಇದರಿಂದ ವಾಹನಗಳ ಮೈಲೇಜ್ ಕಡಿಮೆಯಾಗುವುದು ಹಾಗೂ ಬಹಳ ಮುಖ್ಯವಾಗಿ ಎಥೆನಾಲ್ ಇಂಧನ ಬಳಕೆಗೆ ಹೊಂದಿಕೆಯಾಗದ ಹಳೆಯ ವಾಹನಗಳಿಗೆ ಸಮಸ್ಯೆಯಾಗುವ ಬಗ್ಗೆ ಆತಂಕಗಳಿದ್ದರೂ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಜನರ ಮೇಲೆ ಒತ್ತಾಯಪೂರ್ವಕವಾಗಿ ಹೇರಿದೆ. ಇದೀಗ ಕರ್ನಾಟಕದಲ್ಲಿ ನಮ್ಮ ಸರ್ಕಾರ ನಡೆಸಿರುವ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿರುವ ಕೆಲವು ವಿಚಾರಗಳು ವಾಹನ ಸವಾರರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ (Dr G Parameshwara) ತಿಳಿಸಿದ್ದಾರೆ.
ಇ20 ಪೆಟ್ರೋಲ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಮ್ಮ ಸರ್ಕಾರವು ಸ್ವತಂತ್ರ ಪ್ರಯೋಗಾಲಯಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪ್ರಮುಖ ತೈಲ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್‌ನಲ್ಲಿ ಶೇ.31.2ರವರೆಗೆ ಎಥನಾಲ್ ಮಿಶ್ರಣವಾಗಿರುವುದು ಕಂಡುಬಂದಿದೆ. ರಾಜ್ಯದ ಏಳು ಜಿಲ್ಲೆಗಳಿಂದ ಸಂಗ್ರಹಿಸಿದ ಪೆಟ್ರೋಲ್ ಮಾದರಿಗಳಲ್ಲಿ ನಿಗದಿತ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥನಾಲ್ ಇರುವುದು ಪತ್ತೆಯಾಗಿದೆ.
E20 ಪೆಟ್ರೋಲ್ ಬಳಕೆಯಿಂದ ಕೆಲವು ವಾಹನಗಳ ಮೈಲೇಜ್ ಕಡಿಮೆಯಾಗಬಹುದು ಎಂಬುದನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಹೀಗಿರುವಾಗ ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಶೇ.30ಕ್ಕಿಂತ ಹೆಚ್ಚಾದರೆ ಏನಾಗಬಹುದು? ಇದರಿಂದ ಹೆಚ್ಚಾಗುವ ಇಂಧನ ವೆಚ್ಚವನ್ನು ಯಾರು ಭರಿಸಬೇಕು? ವಾಹನಗಳ ಕಾರ್ಯಕ್ಷಮತೆಗೆ ತೊಂದರೆಯಾದರೆ ಅದರ ಹೊಣೆ ಯಾರು ಹೊರಬೇಕು? ಇಂತಹ ತಪ್ಪುಗಳಿಗೆ ಸಾಮಾನ್ಯ ವಾಹನ ಸವಾರರು ಬೆಲೆ ತೆರಬೇಕಾಗಿ ಬಂದಿರುವುದನ್ನು ಒಪ್ಪಲು ಸಾಧ್ಯವಿಲ್ಲ.
ಎಥನಾಲ್ ಮಿಶ್ರಣದಿಂದ ರೈತರಿಗೆ ಲಾಭವಾಗುತ್ತದೆ ಎಂದು ಹೇಳುವ ಕೇಂದ್ರ ಸರ್ಕಾರವೇ ಎಥನಾಲ್ ಖರೀದಿಗಾಗಿ ಹೊರಡಿಸಿರುವ ಹೊಸ ಟೆಂಡರ್‌ನಲ್ಲಿ ಕಬ್ಬಿನ ರಸ, ಸಕ್ಕರೆ ಪಾಕ (Sugar Syrup) ಹಾಗೂ ಬಿ-ಹೆವಿ ಮೊಲಾಸಿಸ್‌ನಿಂದ (B-heavy Molasses) ತಯಾರಿಸುವ ಎಥೆನಾಲ್ ಅನ್ನು ಹೊರಗಿಟ್ಟಿದೆ. ಇದು ಮೋದಿಯವರ ಸರ್ಕಾರದ ದ್ವಂದ್ವ ನಿಲುವು ಎಂದು ಹೇಳಿದ್ದಾರೆ.
ಕರ್ನಾಟಕದ ರೈತರು ಈಗಾಗಲೇ ತೀವ್ರ ಬರದಿಂದ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕಬ್ಬಿನಿಂದ ತಯಾರಿಸುವ ಎಥನಾಲ್‌ಗೆ ಇರುವ ಪ್ರಮುಖ ಮಾರುಕಟ್ಟೆಯ ಅವಕಾಶವನ್ನು ಕೇಂದ್ರ ಸರ್ಕಾರವೇ ಕಡಿತಗೊಳಿಸುತ್ತಿದೆ. ಮತ್ತೊಂದೆಡೆ, ನಿಗದಿಪಡಿಸಿದ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥನಾಲ್ ಮಿಶ್ರಣವಾಗಿರುವ ಪೆಟ್ರೋಲ್ ಮಾರಾಟವಾಗಲು ಅವಕಾಶ ನೀಡಲಾಗುತ್ತಿದೆ. ಹಾಗಾದರೆ ಎಥೆನಾಲ್ ಮಿಶ್ರಣದಿಂದ ರೈತರಿಗೆ ಲಾಭ ಆಗುತ್ತದೆ ಎಂದು ನೀಡಿದ್ದ ಭರವಸೆ ಏನಾಯಿತು? ವಾಹನ ಸವಾರರ ಹಿತಾಸಕ್ತಿಗೆ ರಕ್ಷಣೆ ಎಲ್ಲಿದೆ? ಇದು ರೈತರು ಮತ್ತು ಗ್ರಾಹಕರು ಇಬ್ಬರನ್ನೂ ವಂಚಿಸುವ ಕೆಲಸವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರವೇ ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥನಾಲ್ ಮಿಶ್ರಣದ ಮಿತಿಯನ್ನು ನಿಗದಿಪಡಿಸಿರುವಾಗ, ಶೇ.30ಕ್ಕಿಂತ ಹೆಚ್ಚು ಎಥನಾಲ್ ಇರುವ ಪೆಟ್ರೋಲ್ ಜನರಿಗೆ ಹೇಗೆ ಮಾರಾಟವಾಗುತ್ತಿದೆ? ಈ ತೈಲ ಕಂಪನಿಗಳ ಮೇಲೆ ನಿಗಾ ವಹಿಸುತ್ತಿರುವವರು ಯಾರು? ಇದಕ್ಕೆ ಹೊಣೆ ಯಾರು? ಎನ್ನುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ದೇಶದ ಜನತೆಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ನಡೆಸಿರುವ ಪರೀಕ್ಷೆಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ಬಗ್ಗೆ ತಕ್ಷಣ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ಪೆಟ್ರೋಲ್ ಬಂಕ್‌ನಲ್ಲಿಯೂ ಪೆಟ್ರೋಲ್‌ಗೆ ಎಷ್ಟು ಪ್ರಮಾಣದಲ್ಲಿ ಎಥನಾಲ್ ಮಿಶ್ರಣ ಮಾಡಲಾಗಿದೆ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ತಿಳಿಸಬೇಕು. ಜತೆಗೆ ಗ್ರಾಹಕರ ಹಿತಾಸಕ್ತಿ ಕಾಪಾಡಲು ಹಾಗೂ ವಾಹನಗಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.