HD Deve Gowda: ಚೆನ್ನಮ್ಮ ಅಗಲಿಕೆಯ ದುಃಖದಲ್ಲಿರುವ ತಮ್ಮ ಕುಟುಂಬಕ್ಕೆ ಧೈರ್ಯ ತುಂಬಿದವರಿಗೆ ಕೃತಜ್ಞತೆ ಸಲ್ಲಿಸಿದ ದೇವೇಗೌಡರು
Chennamma Death: ನನ್ನ ಸಹಧರ್ಮಿಣಿ ಶ್ರೀಮತಿ ಚೆನ್ನಮ್ಮ ಅವರ ಅಗಲಿಕೆಯ ನೋವಿನಲ್ಲಿದ್ದ ನಮ್ಮ ಕುಟುಂಬಕ್ಕೆ ಸಾಂತ್ವನದ ಚೈತನ್ಯಧಾರೆ ಎರೆದ ಸಮಸ್ತರಿಗೂ ಕೈ ಜೋಡಿಸಿ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಚೆನ್ನಮ್ಮ ದಂಪತಿ. -
ಬೆಂಗಳೂರು: ಪತ್ನಿ ಚೆನ್ನಮ್ಮ (Chennamma) ಅವರನ್ನು ಕಳೆದುಕೊಂಡು, ದುಃಖದಲ್ಲಿರುವ ತಾವು ಹಾಗೂ ತಮ್ಮ ಕುಟುಂಬಕ್ಕೆ ಸಾಂತ್ವನ ನುಡಿಗಳ ಮೂಲಕ ಧೈರ್ಯ ತುಂಬಿದವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (H.D. Deve Gowda) ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೃತಜ್ಞತಾ ಪತ್ರವನ್ನು ಮಾಜಿ ಪ್ರಧಾನಿಗಳು ಹಂಚಿಕೊಂಡಿದ್ದಾರೆ.
ಕೃತಜ್ಞತಾ ಪತ್ರದಲ್ಲಿ ಏನಿದೆ?
ಎಪ್ಪತ್ತೆರಡು ವರ್ಷಗಳ ಸುದೀರ್ಘಕಾಲ ನನ್ನೊಂದಿಗೆ ಹೆಜ್ಜೆಗೆ ಹೆಜ್ಜೆ ಇರಿಸಿ ನಡೆದಿದ್ದ ನನ್ನ ಸಹಧರ್ಮಿಣಿ ಶ್ರೀಮತಿ ಚೆನ್ನಮ್ಮ ಅವರು 2026ರ ಜುಲೈ 18ರಂದು ಶನಿವಾರ ಶಿವೈಕ್ಯರಾದರು. ಮನೆಯ ನಂದಾದೀಪ ನಂದಿಹೋದ ಕಷ್ಟಕರ ಸಂದರ್ಭದಲ್ಲಿ ನಮ್ಮ ದುಃಖದಲ್ಲಿ ಭಾಗಿಯಾಗಿ ಸಾಂತ್ವನದ ಚೈತನ್ಯಧಾರೆ ಎರೆದ ಸಮಸ್ತರಿಗೂ ಕೈ ಜೋಡಿಸಿ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ.
ಹಿರಿಯರ ಆಣತಿಯಂತೆ ಪತಿ-ಪತ್ನಿಯರಾಗಿ ಸಪ್ತಪದಿ ತುಳಿದು ಬಾಳಬಂಡಿ ಏರಿದ್ದ ನಾವಿಬ್ಬರು ಸುಖ-ದುಃಖದಲ್ಲಿ ಸಮಭಾಗಿಗಳಾಗಿ ಸಪ್ತದಶಕಗಳ ಕಾಲ ಜೀವನ್ಮುಖಿಗಳಾಗಿ ತುಂಬು ಜೀವನ ನಡೆಸಿದ್ದೇವೆ. ಶಾಸಕನಾಗಿ, ಪ್ರತಿಪಕ್ಷ ನಾಯಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಕೊನೆಗೆ ಪ್ರಧಾನ ಮಂತ್ರಿಯಾಗಿ ರಾಷ್ಟ್ರಸೇವೆ ಮಾಡುವ ಮಹಾಭಾಗ್ಯ ಸಿಕ್ಕಿತು. ಕೀರ್ತಿ ಪ್ರಖ್ಯಾತಿ ಎಲ್ಲವೂ ನನಗಷ್ಟೇ ಸೇರಿತು. ಅದರ ಹಿಂದಿನ ಚೈತನ್ಯಶಕ್ತಿ ಚನ್ನಮ್ಮನವರೇ ಆಗಿದ್ದರು ಎಂದರೆ ಉಪೇಕ್ಷೆ ಅಲ್ಲ. ಗಂಧದ ಕೊರಡು ತನ್ನನ್ನು ತಾನು ತೇಯ್ದುಕೊಂಡು ಪರಿಮಳ ಹೊರಸೂಸುವಂತೆ ಚನ್ನಮ್ಮನವರ ಎಣೆಯಿಲ್ಲದ ಮಮತೆ ಮತ್ತು ತ್ಯಾಗಶೀಲತೆ ನನ್ನ ಬಾಳಿಗೆ ಪರಿಪೂರ್ಣತೆ ತುಂಬಿತು.
72 ವರ್ಷಗಳ ಸುದೀರ್ಘಕಾಲ ನನ್ನೊಂದಿಗೆ ಹೆಜ್ಜೆಗೆ ಹೆಜ್ಜೆ ಇರಿಸಿ ನಡೆದಿದ್ದ ನನ್ನ ಸಹಧರ್ಮಿಣಿ ಶ್ರೀಮತಿ ಚೆನ್ನಮ್ಮ ಅವರು 2026 ಜುಲೈ 18ರಂದು ಶನಿವಾರ ಶಿವೈಕ್ಯರಾದರು. ಮನೆಯ ನಂದಾದೀಪ ನಂದಿಹೋದ ಕಷ್ಟಕರ ಸಂದರ್ಭದಲ್ಲಿ ನಮ್ಮ ದುಃಖದಲ್ಲಿ ಭಾಗಿಯಾಗಿ ಸಾಂತ್ವನದ ಚೈತನ್ಯಧಾರೆ ಎರೆದ ಸಮಸ್ತರಿಗೂ ಕೈ ಜೋಡಿಸಿ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ.🙏 pic.twitter.com/9FygY1ewtA
— H D Devegowda (@H_D_Devegowda) July 24, 2026
ರಾಜಕೀಯ ಹಿನ್ನೆಲೆಯೇ ಇಲ್ಲದ ನಮ್ಮ ಕುಟುಂಬದ ಸೊಸೆಯಾಗಿ ಬಂದ ಅವರು; ದೈವಭಕ್ತಿ, ಸಾತ್ವಿಕತೆ ಮತ್ತು ಸಾಂಪ್ರದಾಯಿಕ ನಡವಳಿಕೆಯ ಮೂಲಕ ನಮ್ಮ ಮನೆಯನ್ನು ನಂದಗೋಕುಲ ಮಾಡಿದರು. ನಿತ್ಯ ದಾಸೋಹಿಯಾಗಿ ಮನೆಯ ಅನ್ನಪೂರ್ಣೆಯಾದರು. ಮಾನವೀಯ ಮೌಲ್ಯಗಳ ಅನುಸರಣೆ ಹಾಗೂ ಶುದ್ಧ ಅಂತಃಕರಣದ ಮಾತೃಪ್ರೇಮದ ಮೂಲಕ ಎಲ್ಲರ ಪಾಲಿನ ಅಮ್ಮನಾದರು.
ಹೀಗೆ ನನ್ನ ಮನೆಯನ್ನು ಬೆಳಗಿ ಬೆಳೆಸಿದ ಶ್ರೀಮತಿ ಚೆನ್ನಮ್ಮನವರು ಶಿವನ ಪಾದ ಸೇರಿದ ಹೊತ್ತಿನಲ್ಲಿ ರಾಜ್ಯದ ಜನರು ತೋರಿದ ಅಂತಃಕರಣಪೂರ್ವಕ ಮಮತೆ, ಗೌರವಕ್ಕೆ ಪರಲೋಕದಲ್ಲಿರುವ ಅವರು, ಇಹದಲ್ಲಿರುವ ನಾನೂ ಧನ್ಯರಾಗಿದ್ದೇನೆ. ಅವರು ಕೊನೇ ಶ್ವಾಸ ಬಿಟ್ಟಾಗಿನಿಂದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ಪಾದದ ಬುಡದಲ್ಲಿ ಚಿರನಿದ್ರೆಗೆ ಜಾರುವ ಕ್ಷಣದವರೆಗೂ ಅವರ ಆತ್ಮಕ್ಕಾಗಿ ಮರುಗಿದ ಎಲ್ಲರಿಗೂ ಭಾವಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಮಾಜಿ ಪ್ರಧಾನಿಯ ಮಡದಿಯಾಗಿದ್ದರೂ ಬದುಕಿನ ಕಟ್ಟಕಡೆಯ ಕ್ಷಣದವರೆಗೂ ಸಾಮಾನ್ಯ ನಾರಿಯಾಗಿ ಬದುಕಿದ ಸಾತ್ವಿಕ ಜೀವಿ ನನ್ನ ಧರ್ಮಪತ್ನಿ, ತಮ್ಮ ವ್ಯಕ್ತಿತ್ವ, ಕರುಣೆ, ವಾತ್ಸಲ್ಯಕ್ಕೆ ರಾಜಕೀಯದ ಸೋಂಕು ಸೋಕದಂತೆ ಎಚ್ಚರ ವಹಿಸಿದ್ದ ಅವರು, ಮನುಷ್ಯ ಸಂಬಂಧಗಳಿಗೆ ಅತೀ ಹೆಚ್ಚು ಮಹತ್ವ ನೀಡುತ್ತಿದ್ದರು.
ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು, ಗೌರವಾನ್ವಿತ ಕೇಂದ್ರ ಸಚಿವರುಗಳು, ಮಾಜಿ ಮುಖ್ಯಮಂತ್ರಿಗಳು, ವಿವಿಧ ಮಠಗಳ ಪರಮಪೂಜ್ಯ ಪೀಠಾಧೀಶರು, ಮಂತ್ರಿಗಳು, ಮಾಜಿ ಮಂತ್ರಿಗಳು, ಶಾಸಕರು, ಮಾಜಿ ಶಾಸಕರು, ಮಾಧ್ಯಮ ಬಂಧುಗಳು, ಪೊಲೀಸ್ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕಲೆ, ಸಾಹಿತ್ಯ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ರಾಜ್ಯದ ಸರ್ವ ಭಾಗಗಳಿಂದ ಹರಿದುಬಂದ ಜನಸಾಗರ ನನ್ನ ಅರ್ಧಾಂಗಿಯ ಆತ್ಮಕ್ಕೆ ಚಿರಶಾಂತಿಯನ್ನು ಕೋರಿತು. ಇದಕ್ಕೆ ಪ್ರತಿಯಾಗಿ 'ಕೃತಜ್ಞತೆ ಸಲ್ಲಿಸುವೆ' ಎನ್ನುವುದು ಬಹಳ ಚಿಕ್ಕ ಮಾತಾಗುತ್ತದೆ. ಅದಕ್ಕೂ ಮೀರಿ ನಾನು ವಿನೀತನಾಗಿ ಎಲ್ಲರಿಗೂ ನಮಿಸುತ್ತೇನೆ.
ಚೆನ್ನಮ್ಮ ಸಮಾಧಿಗೆ ಹಾಲು-ತುಪ್ಪ ಸಮರ್ಪಿಸಿದ ದೇವೇಗೌಡರ ಕುಟುಂಬ
ವಿಶೇಷವಾಗಿ ನಾನು ಜನ್ಮವೆತ್ತಿದ ಹಾಸನ ಜಿಲ್ಲೆಯ ಮಹಾಜನರು ತಮ್ಮಗಳ ಅಕ್ಕರೆಯ ಅಮ್ಮ ಚೆನ್ನಮ್ಮನವರ ಬಗ್ಗೆ ತೋರಿದ ಅಭಿಮಾನ, ವಾತ್ಸಲ್ಯಕ್ಕೆ ನಾನು ಮೂಕನಾಗಿದ್ದೇನೆ. ಮತ್ತೊಮ್ಮೆ ನನ್ನ ಕುಟುಂಬದ ಜತೆ ನಿಂತು ಧೈರ್ಯ ತುಂಬಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕವಾಗಿ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಎಂದು ದೇವೇಗೌಡರು ತಿಳಿಸಿದ್ದಾರೆ.