ಹೈಕಮಾಂಡ್ ಕರೆದರೆ ಸಿದ್ದರಾಮಯ್ಯ ಜತೆ ದೆಹಲಿಗೆ ಹೋಗುತ್ತೇನೆ: ಡಿ.ಕೆ. ಶಿವಕುಮಾರ್
DK Shivakumar: ʼʼಹೈಕಮಾಂಡ್ ನಾಯಕರು ದೆಹಲಿಗೆ ಕರೆದರೆ ಹೋಗುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ವಿಧಾನಸೌಧದ ಬಳಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ʼʼಹೈಕಮಾಂಡ್ ನನ್ನನ್ನು ಹಾಗೂ ಮುಖ್ಯಮಂತ್ರಿಯನ್ನು ಕರೆದರೆ ನಾವು ಮಾತನಾಡಿಕೊಂಡು ದೆಹಲಿಗೆ ಹೋಗುತ್ತೇವೆ” ಎಂದರು.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ -
ಬೆಂಗಳೂರು, ನ. 27: ʼʼಹೈಕಮಾಂಡ್ ನಾಯಕರು ದೆಹಲಿಗೆ ಕರೆದರೆ ಹೋಗುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ವಿಧಾನಸೌಧದ ಬಳಿ ಮಾಧ್ಯಮಗಳ ಪ್ರಶ್ನೆಗೆ ಗುರುವಾರ (ನವೆಂಬರ್ 27) ಅವರು ಪ್ರತಿಕ್ರಿಯಿಸಿದರು. ಸಿಎಂ ಹಾಗೂ ಡಿಸಿಎಂ ಇಬ್ಬರನ್ನೂ ದೆಹಲಿಗೆ ಕರೆಯಿಸಿ ಚರ್ಚೆ ಮಾಡುತ್ತೇವೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge ಅವರ ಹೇಳಿಕೆ ಬಗ್ಗೆ ಕೇಳಿದಾಗ, ʼʼಹೈಕಮಾಂಡ್ ನನ್ನನ್ನು ಹಾಗೂ ಮುಖ್ಯಮಂತ್ರಿಯನ್ನು ಕರೆದರೆ ನಾವು ಮಾತನಾಡಿಕೊಂಡು ದೆಹಲಿಗೆ ಹೋಗುತ್ತೇವೆ” ಎಂದರು.
“ಇದುವರೆಗೂ ಯಾರೂ ನನ್ನನ್ನು ದೆಹಲಿಗೆ ಕರೆದಿಲ್ಲ. ಇಂದಿರಾ ಗಾಂಧಿ ಆರಂಭಿಸಿದ ಅಂಗನವಾಡಿ ಯೋಜನೆಯ 50 ವರ್ಷದ ಕಾರ್ಯಕ್ರಮವಿದೆ. ಮುಂಬೈಯಲ್ಲಿ ನನಗೆ ಖಾಸಗಿ ಕಾರ್ಯಕ್ರಮವಿದ್ದು, ಅಲ್ಲಿಗೆ ಹೋಗಿ ಇಂದೇ (ಗುರುವಾರ) ಮರಳುತ್ತೇನೆ” ಎಂದು ತಿಳಿಸಿದರು.
ಡಿ.ಕೆ. ಶಿವಕುಮಾರ್ ಜತೆ ಸತೀಶ್ ಜಾರಕಿಹೊಳಿ ರಹಸ್ಯ ಸಭೆ
ಈ ಮಧ್ಯೆ ಬುಧವಾರ ಸಿದ್ದರಾಮಯ್ಯ ಆಪ್ತ ಸತೀಶ್ ಜಾರಕಿಹೊಳಿ ಜತೆ ಡಿ.ಕೆ. ಶಿವಕುಮಾರ್ ಸಭೆ ನಡೆಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಖಾಸಗಿ ಹೋಟೆಲ್‌ನಲ್ಲಿ ನಡೆದ ಈ ಸಭೆಯನ್ನು ಇಬ್ಬರು ನಾಯಕರು ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ನಡೆದ ಸಭೆ ಎಂದು ಹೇಳಿದ್ದರು. ಈ ಭೇಟಿಯ ವೇಳೆ ಸತೀಶ್ ಜಾರಕಿಹೊಳಿ ಅವರ ಬೆಂಬಲವನ್ನು ಡಿಕೆಶಿ ಯಾಚಿಸಿದ್ದರು ಎನ್ನಲಾಗಿದೆ. ʼʼಹೈಕಮಾಂಡ್ ಮುಖ್ಯಮಂತ್ರಿ ಹುದ್ದೆ ಕೊಟ್ಟರೆ ನೀವು ಬೆಂಬಲ ನೀಡಬೇಕು, ಇದಕ್ಕೆ ಪ್ರತಿಯಾಗಿ ಸರ್ಕಾರ ಮತ್ತು ಪಕ್ಷದಲ್ಲಿ ಪ್ರಮುಖ ಹುದ್ದೆ ನೀಡುತ್ತೇನೆʼʼ ಎಂದು ಡಿಕೆಶಿ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಸತೀಶ್, ʼʼನಾವು ಸಿದ್ದರಾಮಯ್ಯ ಅವರನ್ನು ಬಿಡಲು ಆಗುವುದಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧʼʼ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೊನೆಗೂ ಅಧಿಕಾರ ಹಂಚಿಕೆ ಬಗ್ಗೆ ಮಹತ್ವದ ಅಪ್‌ಡೇಟ್ ನೀಡಿದ ಮಲ್ಲಿಕಾರ್ಜುನ ಖರ್ಗೆ
ಸೋನಿಯಾ ಗಾಂಧಿ ಮಧ್ಯ ಪ್ರವೇಶ
ಸದ್ಯ ಕಾಂಗ್ರೆಸ್‌ನಲ್ಲಿ ಮೂಡಿರುವ ಗೊಂದಲವನ್ನು ನಿವಾರಿಸಲು ಪಕ್ಷದವ ವರಿಷ್ಠೆ ಸೋನಿಯಾ ಗಾಂಧಿ ಮಧ್ಯ ಪ್ರವೇಶಿಸುವ ಸಾಧ್ಯತೆ ಇದೆ. ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಈ ವಿಚಾರದ ಕುರಿತು ರಾಹುಲ್ ಗಾಂಧಿ, ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲ ಅವರೊಂದಿಗೆ ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದಾರೆ. ಖರ್ಗೆ ಮತ್ತೊಮ್ಮೆ ದೆಹಲಿಯಲ್ಲಿ ವೇಣುಗೋಪಾಲ್ ಮತ್ತು ಸುರ್ಜೇವಾಲ ಜತೆ ಸಮಾಲೋಚನೆ ನಡೆಸಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮುಂದಿನ ನಡೆಯ ಬಗ್ಗೆ ತೀರ್ಮಾನಿಸಲಿದ್ದಾರೆ.
ಪಕ್ಷಕ್ಕೂ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಬಣಕ್ಕೂ ಸಮಸ್ಯೆಯಾಗದ ರೀತಿಯ ಸೂತ್ರವನ್ನು ಸಿದ್ಧಪಡಿಸಿ ಶುಕ್ರವಾರ (ನವೆಂಬರ್ 28) ಸೋನಿಯಾ ಗಾಂಧಿ ಅವರಿಗೆ ವಿವರಿಸಿ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ. ಆ ಬಳಿಕ ರಾಜ್ಯದ ಸಿಎಂ ಕುರ್ಚಿ ಕಾದಾಟಕ್ಕೆ ಪೂರ್ಣ ವಿರಾಮ ಬೀಳುವ ನಿರೀಕ್ಷೆ ಇದೆ. ರಾಹುಲ್ ಗಾಂಧಿ ಈಗಾಗಲೇ ಡಿಕೆಶಿ ಅವರಿಗೆ ʼʼಸ್ವಲ್ಪ ಕಾಯಿರಿ, ನಾನು ನಿಮ್ಮನ್ನು ಸಂಪರ್ಕಿಸುತ್ತೇನೆʼʼ ಎನ್ನುವ ಸಂದೇಶ ರವಾನಿಸ್ದು ಕುತೂಹಲ ಮೂಡಿಸಿದೆ.