Karnataka Politics: ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ಹೋಗಿದ್ದೇಕೆ?; ಆ ಗುಟ್ಟು ಬಹಿರಂಗ ಮಾಡಲ್ಲ ಎಂದ ಡಿ.ಕೆ.ಶಿವಕುಮಾರ್
DK Shivakumar: ಕೆಲ ಶಾಸಕರು ದೆಹಲಿಗೆ ತೆರಳಿದ್ದು, ನಿಮ್ಮನ್ನು ಸಿಎಂ ಮಾಡಲು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್ ಅವರು, “ಸಚಿವ ಸ್ಥಾನದ ಆಕಾಂಕ್ಷೆ ಇರುವವರು ಹೋಗಿದ್ದಾರೆ, ನನ್ನನ್ನು ಸಿಎಂ ಮಾಡುವ ಪ್ರಯತ್ನದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅವರಿಗೆ ಕರೆ ಮಾಡಿಲ್ಲ, ಅವರನ್ನು ಕಳುಹಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕನಕಪುರಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ. -
ಕನಕಪುರ, ನ.25: “ನಾನು ಆತ್ಮಸಾಕ್ಷಿಯನ್ನು ನಂಬಿದ್ದೇನೆ. ಆತ್ಮಸಾಕ್ಷಿಗೆ ತಕ್ಕಂತೆ ನಾವು ಕೆಲಸ ಮಾಡಬೇಕು. ಪಕ್ಷಕ್ಕೆ ಮುಜುಗರ ತರಲು, ಪಕ್ಷವನ್ನು ದುರ್ಬಲಗೊಳಿಸಲು ನನಗೆ ಇಷ್ಟವಿಲ್ಲ. ಪಕ್ಷ ಹಾಗೂ ಕಾರ್ಯಕರ್ತರು ಇದ್ದರೆ ನಾವು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತಿಳಿಸಿದರು. ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.
ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ತೆರಳಿದ್ದು, ರಾಹುಲ್ ಗಾಂಧಿ ಅವರೊಂದಿಗೆ ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆ ನಡೆಸಲಿದ್ದಾರೆಯೇ ಎಂದು ಕೇಳಿದಾಗ, “ಈ ವಿಚಾರ ನನಗೆ ಗೊತ್ತಿಲ್ಲ. ಇದು ನಮ್ಮ ಐದಾರು ಜನರ ನಡುವಿನ ಗುಟ್ಟಿನ ವಿಚಾರ. ಇದನ್ನು ನಾನು ಬಹಿರಂಗ ಮಾಡುವುದಿಲ್ಲ. ಸಿಎಂ ಹಿರಿಯ ನಾಯಕರು, ನಮ್ಮ ಪಕ್ಷದ ಆಸ್ತಿ. ಅವರು ಸಿಎಂ ಆಗಿ ಏಳೂವರೆ ವರ್ಷಗಳ ಕಾಲ ಅಧಿಕಾರ ನಡೆಸಿದ್ದಾರೆ. ಮುಂದಿನ ಬಜೆಟ್ ಅನ್ನು ಅವರೇ ಮಂಡಿಸುವುದಾಗಿ ಹೇಳಿದ್ದಾರೆ. ಬಹಳ ಸಂತೋಷ. ಅವರು ವಿರೋಧ ಪಕ್ಷದ ನಾಯಕರಾಗಿ ಶ್ರಮಿಸಿದ್ದಾರೆ. ಪಕ್ಷ ಕಟ್ಟಿದ್ದಾರೆ. ನಾವೆಲ್ಲರೂ ಸೇರಿ 2028 ಹಾಗೂ 2029ರ ಚುನಾವಣೆ ಗುರಿಯತ್ತ ಗಮನ ಹರಿಸಬೇಕು” ಎಂದು ತಿಳಿಸಿದರು.
ನನ್ನ ಕಷ್ಟಕಾಲದಲ್ಲಿ ಜನರು ಮಾಡಿದ್ದ ಪ್ರಾರ್ಥನೆ ಮರೆಯುವುದಿಲ್ಲ:
ನೀವು ಸಿಎಂ ಆಗಬೇಕು ಎಂದು ಜನರು ಪೂಜೆ ಮಾಡುತ್ತಿದ್ದಾರಲ್ಲಾ ಎಂದಾಗ, “ನನಗೆ ಅಧಿಕಾರ ಸಿಗಲಿ ಎಂದು ಈಗ ಪೂಜೆ ಮಾಡುತ್ತಿರುವುದಕ್ಕಿಂತ, ನಾನು ಜೈಲಿಗೆ ಹೋದಾಗ ನನ್ನ ತಾಯಂದಿರು, ಯುವಕರು, ಹಿರಿಯರು ದೇವಾಲಯದ ಅರ್ಚಕರು ಮಾಡಿದ ಪ್ರಾರ್ಥನೆಯನ್ನು ಮರೆಯಲು ಸಾಧ್ಯವಿಲ್ಲ. ಬಿಜೆಪಿ ಅವಧಿಯಲ್ಲಿ ನಾನು ಜೈಲಿಂದ ಬಿಡುಗಡೆ ಆದಾಗ ಪೊಲೀಸರ ಬೆದರಿಕೆಗೂ ಹಿಂಜರಿಯದೇ ನನ್ನನ್ನು ಜನ ಸ್ವಾಗತಿಸಿದ್ದರು.
ಪರಪ್ಪನ ಅಗ್ರಹಾರ ಜೈಲಿಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ ನೀಡಿದ್ದು ಯಾಕೆ?
ನಾನು ಜೈಲಲ್ಲಿ ಇದ್ದಾಗ ಕರವೇ ನಾರಾಯಣ ಗೌಡರಿಗೆ ಪ್ರತಿಭಟನೆ ನಡೆಸದಂತೆ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಬೆದರಿಕೆ ಹಾಕಿದ್ದರು. ಕೆಲವು ಸ್ವಾಮೀಜಿಗಳು ಬಂದರು, ಕೆಲವರು ಬರಲಿಲ್ಲ. ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಬೇರೆ ಹೇಳಿಕೆ ಕೊಟ್ಟರು. ಅನೇಕರು ನಮ್ಮ ಮನೆಗೆ ಬಂದು ನನ್ನ ಪತ್ನಿ ಹಾಗೂ ಮಕ್ಕಳ ಜೊತೆ ಮಾತನಾಡಿ ಧೈರ್ಯ ತುಂಬಿದ್ದರು. ಅಂದು ಜನ ಹರಕೆ ಹೊತ್ತು ಪ್ರಾರ್ಥಿಸಿದ್ದರು. ಆಗ ಕಟ್ಟಿಕೊಂಡ ಹರಕೆ ಮುಗಿಸಲು ಇನ್ನೂ ನನಗೆ ಆಗುತ್ತಿಲ್ಲ. ಅನೇಕರು ನಾನು ಬಿಡುಗಡೆಯಾಗುವವರೆಗೂ ಕಾಲಿಗೆ ಚಪ್ಪಲಿ ಹಾಕಿರಲಿಲ್ಲ. ನಾನು ಇಂದು ಡಿಸಿಎಂ ಆಗಿದ್ದು, ಪಕ್ಷದ ಅಧ್ಯಕ್ಷನಾಗಿದ್ದೇನೆ. ಕಷ್ಟಕಾಲದಲ್ಲಿದ್ದಾಗ ಮಾಡಿದ ಪ್ರಾರ್ಥನೆ, ಆಗ ಅವರು ನನಗೆ ಆತ್ಮಸ್ಥೈರ್ಯ ತುಂಬಿದ್ದು ನನಗೆ ಬಹಳ ವಿಶೇಷ” ಎಂದು ತಿಳಿಸಿದರು.
ನಿಮ್ಮನ್ನು ಸಿಎಂ ಸ್ಥಾನದಲ್ಲಿ ನೋಡಬೇಕು ಎಂದು ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲೂ ಜನ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಅಲ್ಲವೇ ಎಂದು ಕೇಳಿದಾಗ, “ನಾನು ಚುನಾವಣೆ ಸಂದರ್ಭದಲ್ಲಿ ಮಹದೇವಪ್ಪ ಅವರ ಕ್ಷೇತ್ರ, ಮಂಡ್ಯ ಸೇರಿದಂತೆ ಎಲ್ಲಾ ಕಡೆಗಳಲ್ಲಿ ನನ್ನ ಮುಖ ನೋಡಿ ಮತ ಹಾಕಿ ಎಂದೂ ಕೇಳಿದ್ದೇನೆ. ಜನ ನಮ್ಮ ಸಾಮೂಹಿಕ ನಾಯಕತ್ವಕ್ಕೆ ಮತ ಹಾಕಿದ್ದಾರೆ. ನನ್ನೊಬ್ಬನಿಗಾಗಿ ಮತ ಹಾಕಿದ್ದಾರೆ ಎಂದು ನಾನು ಹೇಳುವುದಿಲ್ಲ. 224 ಕ್ಷೇತ್ರಗಳಲ್ಲಿ ನಮಗಿಂತ ನಮ್ಮ ಕಾರ್ಯಕರ್ತರು ಹೆಚ್ಚು ಶ್ರಮ ಹಾಕಿದ್ದಾರೆ” ಎಂದು ತಿಳಿಸಿದರು.
ನನಗಾಗಿ ಶ್ರಮಿಸುವ ಕಾರ್ಯಕರ್ತರ ಚುನಾವಣೆಯಲ್ಲಿ ಮತ ಹಾಕುವುದು ನನ್ನ ಕರ್ತವ್ಯ
ಅನೇಕ ಕೆಲಸಗಳ ಮಧ್ಯೆ ಕಾರ್ಯಕರ್ತರ ಚುನಾವಣೆಗೆ ಬಂದಿದ್ದೀರಿ ಎಂದು ಕೇಳಿದಾಗ, “ಕಾರ್ಯಕರ್ತರು ಎಂದರೆ ನಾವು. ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿದ್ದಾಗ ಇದೇ ಚುನಾವಣೆಗೆ ನಾನು ಹಾಗೂ ಶ್ರೀಕಂಠಯ್ಯ ಅವರು ಚುನಾವಣೆಗೆ ಸ್ಪರ್ಧಿಸಿದ್ದೆವು. ಉಳಿದಂತೆ ಜನತಾದಳದಿಂದ ಸ್ಪರ್ಧಿಸಿದ್ದರು. ನನ್ನ ರಾಜಕೀಯ ಬದುಕಿನ ಮೊದಲ ಚುನಾವಣೆ ಅದಾಗಿತ್ತು. ಕನಕಪುರದಲ್ಲಿ ಈ ಚುನಾವಣೆ ಗೆದ್ದು ನಿರ್ದೇಶಕನಾಗಿ ಆಯ್ಕೆಯಾಗಿದ್ದೆ. ಆಗ ಆಸ್ಕರ್ ಫರ್ನಾಂಡಿಸ್ ಅವರು ಇದೇ ಕಟ್ಟಡದ ಕೋಣೆಯಲ್ಲಿ ಒಂದು ತಿಂಗಳು ಇದ್ದು, ಚುನಾವಣೆ ಮಾಡಿದ್ದರು. ಇದು ಕಾರ್ಯಕರ್ತರ ಚುನಾವಣೆ. ಕಾರ್ಯಕರ್ತರು ನನ್ನ ಚುನಾವಣೆ ಮಾಡುವಾಗ, ನಾನು ಅವರ ಚುನಾವಣೆಗೆ ಬಂದು ಮತ ಹಾಕದಿದ್ದರೆ ನನ್ನಿಂದ ಕರ್ತವ್ಯ ಲೋಪವಾಗುತ್ತದೆ. ಕಾರ್ಯಕರ್ತರು ಬಲಿಷ್ಠವಾಗಿದ್ದರೆ ಮಾತ್ರ ನಾವು ಬಲಿಷ್ಠವಾಗುತ್ತೇವೆ ಎಂದು ಹೇಳಿದರು.
ಚುನಾವಣೆಯಲ್ಲಿ ರಾಜಿ ಮಾಡಿಕೊಳ್ಳಿ ಎಂದು ಕೇಳಿದರು. ನಾವೇ ಚುನಾವಣೆ ಆಗಲಿ, ಕಾರ್ಯಕರ್ತರಿಗೆ ಚುನಾವಣೆ ಅನುಭವವಾಗಲಿ ಎಂದು ಹೇಳಿದ್ದೇವೆ. ನಾವು ಸಂಸತ್ ಚುನಾವಣೆ ವೇಳೆ ಯಾಮಾರಿದೆವು, ಎಷ್ಟೋ ಬೂತ್ ಗಳಿಗೆ ಏಜೆಂಟ್ ಗಳು ಇರಲಿಲ್ಲ. ಒಳೇಟು ಯಾವ ರೀತಿ ಬಿತ್ತು ಎಂದು ತಿಳಿಯಲಿಲ್ಲ. ನಾವು ನಮ್ಮ ತಪ್ಪನ್ನು ತಿದ್ದುಕೊಳ್ಳುತ್ತೇವೆ. ರಾಜಕಾರಣದಲ್ಲಿ ನಮ್ಮ ವೈರಿ ಯಾರು ಎಂದು ತಿಳಿಯಬೇಕು. ಈ ಚುನಾವಣೆಯಲ್ಲಿ ನಮ್ಮ ಪರ ಯಾರು ನಿಂತಿದ್ದಾರೆ, ವಿರುದ್ಧ ಯಾರು ನಿಂತಿದ್ದಾರೆ ಎಂದು ತಿಳಿಯುತ್ತದೆ. ಹೀಗಾಗಿ ಚುನಾವಣೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಪಕ್ಷ ಸಂಘಟನೆಗೆ ಇಂತಹ ಚುನಾವಣೆಗಳು ಮುಖ್ಯವೇ ಎಂದು ಕೇಳಿದಾಗ, “ಪಕ್ಷಕ್ಕೆ ಮೂಲ ಸ್ವರೂಪ ಇಲ್ಲವಾದರೆ ಯಾವ ಪಕ್ಷವೂ ಇರಲು ಸಾಧ್ಯವಿಲ್ಲ. ಇದು ನಮ್ಮ ಮೂಲ. ಸೊಸೈಟಿ, ಹಾಲಿನ ಒಕ್ಕೂಟ, ಪಿಎಲ್ ಡಿ, ಮುನ್ಸಿಪಾಲಿಟಿ, ಪಂಚಾಯ್ತಿಗಳು ನಮ್ಮ ಆಸ್ತಿಗಳಿದ್ದಂತೆ. ಇಲ್ಲಿರುವುದು 300 ಚಿಲ್ಲರೆ ಮತಗಳು, ಆದರೂ 300 ನಾಯಕರು ಕಾರ್ಯಕರ್ತರ ಗೆಲುವಿಗೆ ಬಂದಿದ್ದಾರೆ. ಹೀಗಾಗಿ ಎಷ್ಟೇ ಕೆಲಸದ ಒತ್ತಡ ಇದ್ದರೂ ಬಂದು ಮತ ಹಾಕುತ್ತಿದ್ದೇನೆ. ನಾವು ಬರಲಿಲ್ಲ ಅಂದರೆ, ನಾಯಕರೇ ಬಂದು ಮತ ಹಾಕಿಲ್ಲ, ನಾವು ಯಾಕೆ ಹಾಕಬೇಕು ಎಂದು ಹಳ್ಳಿಗಳಲ್ಲಿ ಮರ್ಯಾದೆ ತೆಗೆಯುತ್ತಾರೆ” ಎಂದರು.
ಸಚಿವ ಸ್ಥಾನ ಆಕಾಂಕ್ಷಿಗಳು ದೆಹಲಿಗೆ ಹೋಗಿದ್ದಾರೆ:
ಕೆಲ ಶಾಸಕರು ದೆಹಲಿಗೆ ತೆರಳಿದ್ದು, ನಿಮ್ಮನ್ನು ಸಿಎಂ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಳಿದಾಗ, “ಸಚಿವ ಸ್ಥಾನದ ಆಕಾಂಕ್ಷೆ ಇರುವವರು ಹೋಗಿದ್ದಾರೆ, ನನ್ನನ್ನು ಸಿಎಂ ಮಾಡುವ ಪ್ರಯತ್ನದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅವರಿಗೆ ಕರೆ ಮಾಡಿಲ್ಲ, ಅವರನ್ನು ಕಳುಹಿಸಿಲ್ಲ. ಯಾಕೆ ಹೋದಿರಿ ಎಂದು ಪ್ರಶ್ನೆ ಮಾಡುವುದಿಲ್ಲ” ಎಂದರು.
ಗಾಳ ಹಾಕಿ ಮೀನು ಹಿಡಿಯುವುದು ಹೇಗೆಂದು ನನಗೆ ಗೊತ್ತು: ಡಿ.ಕೆ. ಶಿವಕುಮಾರ್
ಅಧಿಕಾರ ಹಂಚಿಕೆ ಒಪ್ಪಂದ ಆಗಿತ್ತೇ ಎಂದು ಕೇಳಿದಾಗ, “ನಾನು ಆ ಬಗ್ಗೆ ಯಾಕೆ ಮಾತನಾಡಲಿ, ನೀವುಗಳೇ (ಮಾಧ್ಯಮಗಳು) ಏನೇನೋ ಬರೆಯುತ್ತಿದ್ದೀರಿ” ಎಂದು ತಿಳಿಸಿದರು.
ಅಧಿಕಾರ ಹಂಚಿಕೆ ವಿಚಾರವಾಗಿ ಬಸವರಾಜ ರಾಯರೆಡ್ಡಿ, ಸದಾನಂದ ಗೌಡರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಯಾರ ಹೇಳಿಕೆಗೂ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಅವರ ವಕ್ತಾರನಲ್ಲ” ಎಂದು ತಿಳಿಸಿದರು.