ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನನ್ನನ್ನು ಬಂಧಿಸಿದರೂ ಹೆದರಲ್ಲ, ರಾಷ್ಟ್ರಧ್ವಜ ಹಾರಿಸಿಯೇ ತೀರುತ್ತೇವೆ: ಅರೆಸ್ಟ್‌ಗೂ ಮೊದಲು ಅಭಿಜೀತ್ ದೀಪ್ಕೆ ಹೇಳಿದ್ದೇನು?

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರು ರಾಷ್ಟ್ರಧ್ವಜ ಹಾರಿಸಲು ಜೈಲಿಗೆ ಹೋಗಲೂ ಸಿದ್ಧ ಎಂದು ಹೇಳಿದ್ದಾರೆ. ದೆಹಲಿ ಪೊಲೀಸರು ತಮ್ಮನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎಂದು ಆರೋಪಿಸಿರುವ ಅವರು, ಇಂದು ದೆಹಲಿ ಮತ್ತು ಮುಂಬೈನಲ್ಲಿ ನಡೆಯಲಿರುವ ‘ಲಹರಾ ದೋ ತಿರಂಗಾ’ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯ ಸೆಂಟ್ರಲ್ ಪಾರ್ಕ್‌ನಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಪೊಲೀಸರು ನಿರ್ಬಂಧಗಳನ್ನು ವಿಧಿಸಿದ್ದಾರೆ.

ಅಭಿಜೀತ್‌ ದೀಪ್ಕೆ

ನವದೆಹಲಿ: ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ 'ಲೆಹ್ರಾ ದೋ ತಿರಂಗಾ' ಪ್ರತಿಭಟನಾ ಮೆರವಣಿಗೆಗೆ ಮುನ್ನವೇ ಅಭಿಜಿತ್‌ ದೀಪ್ಕೆ ಬಂಧನವಾಗಿದೆ. ಅದಕ್ಕೂ ಮುನ್ನ ದೀಪ್ಕೆ ಪತ್ರಿಗೋಷ್ಠಿ ನಡೆಸಿ ಮಾತನಾಡಿದ್ದರು. ರಾಷ್ಟ್ರಧ್ವಜ (National Flag) ಹಾರಿಸುವುದಕ್ಕಾಗಿ ಜೈಲಿಗೆ ಹೋಗಬೇಕಾದರೂ ಸಿದ್ಧ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ (Abhijeet Dipke) ಹೇಳಿದ್ದಾರೆ. ದೆಹಲಿ ಪೊಲೀಸರು ಶೀಘ್ರದಲ್ಲೇ ತಮ್ಮನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎಂದು ಆರೋಪಿಸಿದ್ದರು. ಗುಪ್ತಚರ ಇಲಾಖೆ ಸಿಬ್ಬಂದಿ ತಮ್ಮ ಮೇಲೆ ನಿಗಾ ಇರಿಸಿದ್ದು, ನಂಬರ್ ಪ್ಲೇಟ್ ಇಲ್ಲದ ವಾಹನಗಳು ತಮ್ಮನ್ನು ಹಿಂಬಾಲಿಸುತ್ತಿವೆ ಎಂದು ದೂರಿದ್ದರು.

ಇಂದು ದೆಹಲಿ ಮತ್ತು ಮುಂಬೈನಲ್ಲಿ ನಡೆಯಲಿರುವ ‘ಲಹರಾ ದೋ ತಿರಂಗಾ’ (Lehra Do Tiranga) ಪ್ರತಿಭಟನೆಗೆ ಮುನ್ನ, ಗುರುವಾರ ತಡರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ ದೀಪ್ಕೆ, ಯಾವುದೇ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ತಿಳಿಸಿದ್ದರು.

“ದೆಹಲಿ ಪೊಲೀಸರು ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ನನ್ನನ್ನು ವಶಕ್ಕೆ ಪಡೆಯಬಹುದು. ಆದರೆ ಇದರಿಂದ ನಾವು ಹೆದರುವುದಿಲ್ಲ. ಶಾಂತಿಯುತವಾಗಿ ತೆರಳಿ ತ್ರಿವರ್ಣ ಧ್ವಜವನ್ನು ಹಾರಿಸುತ್ತೇವೆ. ಈ ದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಜೈಲಿಗೆ ಹೋಗಬೇಕಾದರೆ ಅದಕ್ಕೂ ನಾವು ಸಿದ್ಧ,” ಎಂದು ಅವರು ಹೇಳಿದ್ದರು.

ತಮ್ಮ ಪಕ್ಷದ ಸಹೋದ್ಯೋಗಿಗಳಾದ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರ ಬಂಧನವನ್ನು ಉಲ್ಲೇಖಿಸಿದ ದೀಪ್ಕೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಿ, ಸ್ವತಂತ್ರ ಮತ್ತು ನಿಷ್ಪಕ್ಷಪಾತ ರೀತಿಯಲ್ಲಿ ಹೊಸ ಚುನಾವಣಾ ಆಯುಕ್ತರನ್ನು ನೇಮಿಸಬೇಕೆಂದು ತಮ್ಮ ಪಕ್ಷ ಒತ್ತಾಯಿಸುತ್ತಿದೆ ಎಂದಿದ್ದಾರೆ.

“ನಾವು ಆಡಳಿತವನ್ನು ಬದಲಾಯಿಸಬೇಕೆಂದು ಹೇಳುತ್ತಿಲ್ಲ. ಚುನಾವಣಾ ಆಯುಕ್ತರ ಮಾತನ್ನೇ ಕೇಳದ ಮುಖ್ಯ ಚುನಾವಣಾ ಆಯುಕ್ತರನ್ನು ಬದಲಾಯಿಸಿ ಎಂದು ಕೇಳುತ್ತಿದ್ದೇವೆ. ಇದರಲ್ಲಿ ಅಪರಾಧವೇನಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.

ದೆಹಲಿಯ ಸೆಂಟ್ರಲ್ ಪಾರ್ಕ್‌ನಲ್ಲಿ ಪ್ರತಿಭಟನೆಗೆ ಕರೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆಸಲು ಸಿಜೆಪಿ ಕರೆ ನೀಡಿದೆ. ಇಂದು ಸಂಜೆ 5 ಗಂಟೆಗೆ ದೆಹಲಿಯ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಪಕ್ಷವು ಬೆಂಬಲಿಗರು ಮತ್ತು ಸಾರ್ವಜನಿಕರಿಗೆ ಆಹ್ವಾನ ನೀಡಿದೆ.

ಪ್ರತಿಭಟನೆಯ ಹಿನ್ನೆಲೆಯಲ್ಲಿ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಅಕ್ಟೋಬರ್ 16 ಮತ್ತು 17ರಂದು ಸೆಂಟ್ರಲ್ ಪಾರ್ಕ್ ಮುಚ್ಚುವುದಾಗಿ ಘೋಷಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ದೀಪ್ಕೆ, “ನಾಳೆ ನಾವು 100 ಸ್ಥಳಗಳಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತೇವೆ ಎಂದು ಹೇಳಿದರೆ, ಆ 100 ಸ್ಥಳಗಳನ್ನೂ ಮುಚ್ಚುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.

ಕನ್ನಾಟ್ ಪ್ಲೇಸ್ ಪ್ರದೇಶದಲ್ಲಿ ಸುಮಾರು 6,000 ದೆಹಲಿ ಪೊಲೀಸ್ ಮತ್ತು ಅರೆಸೈನಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಪ್ರತಿಭಟನೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಣೆ

ಕೇಂದ್ರ ದೆಹಲಿಯಲ್ಲಿ ಪ್ರತಿಭಟನೆ ನಡೆಸದಂತೆ ತಡೆಯಲು ದೆಹಲಿ ಹೈಕೋರ್ಟ್ ನಿರಾಕರಿಸಿದ್ದು, ಪ್ರತಿಭಟನೆಯನ್ನು ನಿಯಂತ್ರಿಸುವುದಾಗಿ ಪೊಲೀಸರು ನೀಡಿದ ಭರವಸೆಯನ್ನು ದಾಖಲಿಸಿಕೊಂಡಿದೆ.

ಜ್ಞಾನೇಶ್ ಕುಮಾರ್‌ ರಕ್ಷಣೆಗಾಗಿ ದೇಶದ ಜನರ ವಿರುದ್ಧ ಮೋದಿ, ಶಾ ನಿಂತಿದ್ದಾರೆ; ಪ್ರಧಾನಿ ವಿರುದ್ಧ ಕಿಡಿಕಾರಿದ ಅಭಿಜೀತ್ ದೀಪ್ಕೆ ಆರೋಪ

ಇದರ ಬೆನ್ನಲ್ಲೇ, ಗುರುವಾರ ಸಂಜೆ ಪೊಲೀಸರು ಸಾರ್ವಜನಿಕರಿಗೆ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮನವಿ ಮಾಡಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ಕನ್ನಾಟ್ ಪ್ಲೇಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರ್ಬಂಧಾಜ್ಞೆಗಳು ಜಾರಿಯಲ್ಲಿವೆ ಎಂದು ತಿಳಿಸಿದ್ದಾರೆ.

ಸೆಂಟ್ರಲ್ ಪಾರ್ಕ್‌ನಲ್ಲಿ ಸೂಕ್ತ ಸ್ಥಳದಲ್ಲಿ ರಾಷ್ಟ್ರಧ್ವಜ ಹಿಡಿದು ರಾಷ್ಟ್ರಗೀತೆ ಹಾಡಲು ಕೇವಲ 11 ಮಂದಿಯ ಗುಂಪಿಗೆ ಮಾತ್ರ ಅವಕಾಶ ನೀಡಬಹುದು ಎಂದು ಪೊಲೀಸರು ಹೇಳಿದ್ದಾರೆ.

ಮುಂಬೈನ ಆಜಾದ್ ಮೈದಾನದಲ್ಲೂ ಪ್ರತಿಭಟನೆ

ಬಂಧನದಲ್ಲಿರುವ ಪಕ್ಷದ ಮುಖಂಡರಾದ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರಿಗೆ ಬೆಂಬಲ ಸೂಚಿಸಲು ಮುಂಬೈನ ಆಜಾದ್ ಮೈದಾನದಲ್ಲೂ ಇಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪ್ರತಿಭಟನೆ ನಡೆಸಲು ಸಿಜೆಪಿ ಕರೆ ನೀಡಿದೆ.

ಆಜಾದ್ ಮೈದಾನವು ಅಧಿಕೃತ ಪ್ರತಿಭಟನಾ ಸ್ಥಳವಾಗಿರುವುದರಿಂದ ಮುಂಬೈ ಪೊಲೀಸರು ಪ್ರತಿಭಟನೆಗೆ ಅನುಮತಿ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದ ಆರೋಪದ ಹಿನ್ನೆಲೆಯಲ್ಲಿ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರನ್ನು ಬುಧವಾರ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.