ಚೆನ್ನೈ, ಆ. 17: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ (NDA government) ಅಭಿವೃದ್ಧಿ ಮಾದರಿ ಗುಜರಾತ್ ಕೇಂದ್ರಿತವಾಗುತ್ತಿದೆ (Gujarat-Centric) ಎಂದು ಮಾಜಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಹಾಗೂ ವಿ ದಿ ಲೀಡರ್ಸ್ ಸಂಘಟನೆಯ ಸಂಸ್ಥಾಪಕ ಕೆ. ಅಣ್ಣಾಮಲೈ (K. Annamalai) ಟೀಕಿಸಿದ್ದಾರೆ. ಹೂಡಿಕೆಗಳು, ತಂತ್ರಜ್ಞಾನ ಯೋಜನೆಗಳು ಮತ್ತು ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮಗಳೆಲ್ಲವೂ ಒಂದೇ ರಾಜ್ಯ ಕೇಂದ್ರೀಕೃತವಾಗಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಚೆನ್ನೈನಲ್ಲಿ ಸೋಮವಾರ ನಡೆದ ‘ಇಂಡಿಯಾ ಟುಡೇ ತಮಿಳುನಾಡು ರೌಂಡ್ ಟೇಬಲ್’ ಕಾರ್ಯಕ್ರಮದಲ್ಲಿ ಮಾತನಾಡಿದ 42 ವರ್ಷದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ಬಿಜೆಪಿಯ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ‘ದೆಹಲಿ ಕೇಂದ್ರಿತ’ವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಮಟ್ಟದ ನಾಯಕರಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಅವರು ತಮ್ಮ ರಾಜ್ಯಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ಸ್ವತಂತ್ರವಾಗಿ ಕೈಗೊಂಡು, ಅವುಗಳನ್ನು ಕಾರ್ಯರೂಪಕ್ಕೆ ತರುವ ಅವಕಾಶ ದೊರೆಯಬೇಕು ಎಂದು ಅಣ್ಣಾಮಲೈ ಹೇಳಿದರು.
ಇದೇ ವೇಳೆ, ‘ದೆಹಲಿ ಅಭಿವೃದ್ಧಿಯ ಗುಜರಾತ್ ಕೇಂದ್ರಿತ ಮಾದರಿ’ಯಲ್ಲಿ ಬದಲಾವಣೆ ಅಗತ್ಯ ಎಂದು ಅವರು ಒತ್ತಿ ಹೇಳಿದರು. ಎಲ್ಲ ಎಐ ಕಂಪನಿಗಳು, ಸೆಮಿಕಂಡಕ್ಟರ್ ಹಾಗೂ ವೇಫರ್ ಕಂಪನಿಗಳು ಗುಜರಾತ್‌ಗೆ ಹೋಗುವುದು, 2030ರ ಕಾಮನ್‌ವೆಲ್ತ್ ಗೇಮ್ಸ್, 2030ರ ವಿಶ್ವ ಪೊಲೀಸ್ ಮತ್ತು ಫೈರ್ ಗೇಮ್ಸ್ ಹಾಗೂ 2036ರ ಒಲಿಂಪಿಕ್ಸ್‌ಗಳನ್ನು ಅಹಮದಾಬಾದ್‌ಗೆ ಕೇಂದ್ರೀಕರಿಸುವುದು ಸರಿಯಾದ ಸಮಗ್ರ ಅಭಿವೃದ್ಧಿ ಮಾದರಿಯಲ್ಲ ಎಂದು ಟೀಕಿಸಿದರು.
“ಭಾರತದ ಅಭಿವೃದ್ಧಿಯ ಅವಕಾಶಗಳು ಒಂದೇ ರಾಜ್ಯದಲ್ಲಿ ಕೇಂದ್ರೀಕೃತವಾಗಲು ಸಾಧ್ಯವಿಲ್ಲ. ಇದರಲ್ಲಿ ಬದಲಾವಣೆ ಅಗತ್ಯ. ಜನರು ಇದನ್ನು ಗಮನಿಸುತ್ತಿದ್ದಾರೆ,” ಎಂದು ಅಣ್ಣಾಮಲೈ ಹೇಳಿದ್ದಾರೆ.
ಗುಜರಾತ್‌ಗೆ ದೊಡ್ಡ ಯೋಜನೆಗಳ ಕೇಂದ್ರೀಕರಣದ ಚರ್ಚೆ
ಅಣ್ಣಾಮಲೈ ಅವರ ಹೇಳಿಕೆ ದೇಶದ ಪ್ರಮುಖ ಹೂಡಿಕೆಗಳು ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳು ಗುಜರಾತ್‌ನಲ್ಲಿ ಹೆಚ್ಚಾಗಿ ನೆಲೆಗೊಳ್ಳುತ್ತಿರುವ ಕುರಿತು ನಡೆಯುತ್ತಿರುವ ರಾಜಕೀಯ ಚರ್ಚೆಯ ನಡುವೆ ಬಂದಿವೆ.
2022ರಲ್ಲಿ ವೇದಾಂತ-ಫಾಕ್ಸ್‌ಕಾನ್‌ನ ಸುಮಾರು 1.54 ಲಕ್ಷ ಕೋಟಿ ರುಪಾಯಿ ಮೌಲ್ಯದ ಸೆಮಿಕಂಡಕ್ಟರ್ ಯೋಜನೆ ಗುಜರಾತ್‌ಗೆ ಘೋಷಣೆಯಾದ ಬಳಿಕ ಮಹಾರಾಷ್ಟ್ರದಲ್ಲಿ ರಾಜಕೀಯ ವಿವಾದ ಉಂಟಾಗಿತ್ತು. ನಂತರ ವಡೋದರಾದಲ್ಲಿ ಟಾಟಾ-ಏರ್‌ಬಸ್ C-295 ವಿಮಾನ ತಯಾರಿಕಾ ಯೋಜನೆ ಘೋಷಣೆಯಾದ ಸಂದರ್ಭದಲ್ಲೂ ಇದೇ ರೀತಿಯ ರಾಜಕೀಯ ಆರೋಪ-ಪ್ರತ್ಯಾರೋಪಗಳು ನಡೆದಿದ್ದವು.
ಸೆಮಿಕಂಡಕ್ಟರ್ ಕ್ಷೇತ್ರದಲ್ಲೂ ಟಾಟಾ ಎಲೆಕ್ಟ್ರಾನಿಕ್ಸ್, ಮೈಕ್ರಾನ್ ಮತ್ತು ಸಿಜಿ ಪವರ್ ಸೇರಿ ಹಲವು ಕಂಪನಿಗಳ ಪ್ರಮುಖ ಯೋಜನೆಗಳು ಗುಜರಾತ್‌ನಲ್ಲಿ ಸ್ಥಾಪನೆಯಾಗುತ್ತಿವೆ.
ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಬದಲಾವಣೆ; ಅಮಿತ್ ಮಾಳವೀಯಗೆ ಗೇಟ್ ಪಾಸ್, ಸ್ಮೃತಿ, ವಸುಂಧರಾ ರಾಜೇ ಇನ್
ಕ್ರೀಡಾ ಕ್ಷೇತ್ರದಲ್ಲೂ ಅಹಮದಾಬಾದ್ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ತಾಣವಾಗಿ ಹೊರಹೊಮ್ಮುತ್ತಿದೆ. 2025ರ ಐಪಿಎಲ್ ಫೈನಲ್‌ನ್ನು ಕೋಲ್ಕತಾದ ಈಡನ್ ಗಾರ್ಡನ್ಸ್‌ನಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಿದ್ದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಉಂಟಾಗಿತ್ತು.
ಅಹಮದಾಬಾದ್ 2029ರ ವಿಶ್ವ ಪೊಲೀಸ್ ಮತ್ತು ಫೈರ್ ಗೇಮ್ಸ್ ಹಾಗೂ 2030ರ ಕಾಮನ್‌ವೆಲ್ತ್ ಗೇಮ್ಸ್‌ಗಳಿಗೆ ಆತಿಥ್ಯ ವಹಿಸಲು ಸಜ್ಜಾಗುತ್ತಿದೆ. ಅಲ್ಲದೆ, 2036ರ ಒಲಿಂಪಿಕ್ಸ್ ಆತಿಥ್ಯಕ್ಕಾಗಿ ಭಾರತದ ಪ್ರಸ್ತಾವನೆಯಲ್ಲಿ ಅಹಮದಾಬಾದ್‌ನ್ನು ಪ್ರಮುಖ ಸ್ಥಳವಾಗಿ ಮುಂದಿರಿಸಲಾಗಿದೆ.
ಈ ಬೆಳವಣಿಗೆಗಳು ಗುಜರಾತ್‌ಗೆ ಭಾರತದ ಪ್ರಮುಖ ಹೂಡಿಕೆಗಳು ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಪಾಲು ಸಿಗುತ್ತಿದೆ ಎಂಬ ರಾಜಕೀಯ ಚರ್ಚೆಗೆ ಕಾರಣವಾಗಿವೆ. ಇದೇ ಹಿನ್ನೆಲೆಯಲ್ಲಿ ಅಣ್ಣಾಮಲೈ ಅವರ ಟೀಕೆ ಮಹತ್ವ ಪಡೆದಿದೆ.
ವಿಜಯ್ ಸರ್ಕಾರಕ್ಕೆ ಒಂದು ವರ್ಷ ಅವಕಾಶ ನೀಡಿ: ಅಣ್ಣಾಮಲೈ
ಇದೇ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಸರ್ಕಾರದ ಬಗ್ಗೆಯೂ ಅಣ್ಣಾಮಲೈ ಮಾತನಾಡಿದರು. ಹೊಸ ಸರ್ಕಾರ ತನ್ನ ಆಡಳಿತವನ್ನು ಸ್ಥಾಪಿಸಿಕೊಳ್ಳಲು ಸಮಯ ನೀಡಬೇಕು ಎಂದು ಅವರು ಹೇಳಿದರು. ಮೊದಲ 100 ದಿನಗಳಲ್ಲಿ ಸರ್ಕಾರದಲ್ಲಿ ‘ಹೊಸ ಉಸಿರು’ ಕಂಡುಬಂದಿದ್ದು, ಭ್ರಷ್ಟಾಚಾರದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದು ತಮಗೆ ಅನಿಸುತ್ತಿದೆ ಎಂದರು.
ಮುಖ್ಯಮಂತ್ರಿಯಾಗಿ ವಿಜಯ್ ಕಠಿಣ ಪರಿಸ್ಥಿತಿಯಲ್ಲಿದ್ದಾರೆ. ಅವರಿಗೆ ಕನಿಷ್ಠ ಒಂದು ವರ್ಷ ಆಡಳಿತ ನಡೆಸಲು ಅವಕಾಶ ನೀಡಬೇಕು ಎಂದು ಅಣ್ಣಾಮಲೈ ಹೇಳಿದರು. “ಅವರ ದೃಷ್ಟಿಕೋನವನ್ನು ಮುಂದುವರಿಸಲು ಸಹಾಯ ಮಾಡುವುದು ನಮ್ಮ ಕರ್ತವ್ಯ,” ಎಂದು ಹೇಳಿದ ಅಣ್ಣಾಮಲೈ, ಸದ್ಯಕ್ಕೆ ವಿಜಯ್ ಅವರಿಗೆ ತಮ್ಮ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.