ಬೆಂಗಳೂರು, ಜು.16: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ʼಒಂದು ರಾಷ್ಟ್ರ, ಒಂದು ಸಮಯ' ಉಪಕ್ರಮವನ್ನು ಮುನ್ನಡೆಸುವಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ, CSIR-NPL ಮತ್ತು ISRO ದ ಗಮನಾರ್ಹ ಸಹಯೋಗವಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಶ್ಲಾಘಿಸಿದರು. ಬೆಂಗಳೂರಿನಲ್ಲಿ ಗುರುವಾರ ಇಸ್ರೋಗೆ ಭೇಟಿ ನೀಡಿದ್ದ ಸಚಿವರು, ಹೆಮ್ಮೆಯ ಇಸ್ರೋ ಸಂಸ್ಥೆ ಭಾರತದ ವೈಜ್ಞಾನಿಕ ಶ್ರೇಷ್ಠತೆ ಮತ್ತು ನಾವೀನ್ಯತೆಯ ಸಂಕೇತವಾಗಿದೆ. ಇದೀಗ ನಿಖರ, ಸುರಕ್ಷಿತ, ಸ್ಥಿತಿಸ್ಥಾಪಕ ಮತ್ತು ಸ್ಥಳೀಯ ಸಮಯ ಪ್ರಸರಣ ವ್ಯವಸ್ಥೆ ನಿರ್ಮಾಣದತ್ತ ಮಹತ್ವದ ಹೆಜ್ಜೆಯಿರಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ನವಭಾರತದ ಚೈತನ್ಯವನ್ನು ಪ್ರತಿಬಿಂಬಿಸುವಂತೆ ಇಸ್ರೋ ನಾವೀನ್ಯತೆ, ನಿಖರತೆ ಮತ್ತು ಆತ್ಮನಿರ್ಭರತೆಯತ್ತ ತನ್ನ ಅಚಲ ಬದ್ಧತೆಯನ್ನು ಪ್ರದರ್ಶಿಸುತ್ತಿದೆ ಎಂದು ಪ್ರತಿಪಾದಿಸಿದರು.
ನಿಖರ ಸಮಯ ಪ್ರೋಟೋಕಾಲ್ (PTP) ತಂತ್ರಜ್ಞಾನ ಬಳಸಿಕೊಂಡು RRSL ಬೆಂಗಳೂರು ಮತ್ತು ಚೆನ್ನೈನ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ನಡುವಿನ ಯಶಸ್ವಿ ಪರಿಕಲ್ಪನೆಯ ಪುರಾವೆಯು ಗಮನಾರ್ಹವಾಗಿದೆ. ತಾಂತ್ರಿಕವಾಗಿ ಸಬಲೀಕರಣಗೊಂಡ ಇಸ್ರೋ ಸ್ವಾವಲಂಬಿ ಮತ್ತು ವಿಶ್ವಾಸಾರ್ಹ ಭಾರತ ನಿರ್ಮಾಣಕ್ಕೆ ಅನನ್ಯ ಕೊಡುಗೆ ಕೊಡಮಾಡುತ್ತಿದೆ. ʼವಿಕಸಿತ ಭಾರತʼ ಮತ್ತು ʼಆತ್ಮನಿರ್ಭರ ಭಾರತʼ ಕಡೆಗಿನ ನಮ್ಮ ಪ್ರಯಾಣವನ್ನು ಮತ್ತಷ್ಟು ಬಲಪಡಿಸುತ್ತಿದೆ ಎಂದು ಹೇಳಿದರು.
ನಿಖರ ಮತ್ತು ಸ್ವದೇಶಿ ತಂತ್ರಜ್ಞಾನ ಆಧಾರಿತ ರಾಷ್ಟ್ರೀಯ ಸಮಯ ಹೊಂದಾಣಿಕೆ ವ್ಯವಸ್ಥೆ ಸ್ಥಾಪಿಸುವ ಆಧುನಿಕವಾಗಿ ಕೈಗೊಳ್ಳಲಾದ ʼಒಂದು ರಾಷ್ಟ್ರ, ಒಂದು ಸಮಯ' ಉಪಕ್ರಮವನ್ನು ಮುನ್ನಡೆಸುತ್ತಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಗೆ CSIR–NPL ಮತ್ತು ISRO ಸಂಸ್ಥೆಗಳ ಸಹಯೋಗ ಅಮೋಘವಾಗಿದೆ. ಇದಕ್ಕಾಗಿ ISRO, CSIR-NPL ಮತ್ತು ಎಲ್ಲಾ ಪಾಲುದಾರ ಸಂಸ್ಥೆಗಳ ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ತಾಂತ್ರಿಕ ವೃತ್ತಿಪರರನ್ನು ಅಭಿನಂದಿಸುತ್ತೇನೆ ಎಂದರು ಜೋಶಿ.
ಇಸ್ರೋಕ್ಕೆ ಭೇಟಿ ನೀಡಿದ್ದ ಸಚಿವರು, ಭಾರತದ ಬಾಹ್ಯಾಕಾಶ ಕ್ಷೇತ್ರದ ಸಾಧನೆ ಕುರಿತಂತೆ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳೊಂದಿಗೆ ಸಂವಾದ ಸಹ ನಡೆಸಿದರು. ಅತ್ಯಾಧುನಿಕ ತಂತ್ರಜ್ಞಾನ, ವಿಶ್ವ ಮಟ್ಟದ ಸೌಲಭ್ಯಗಳು ಹಾಗೂ ದೇಶದ ಭವಿಷ್ಯ ರೂಪಿಸುತ್ತಿರುವ ಇಸ್ರೋ ವಿಜ್ಞಾನಿಗಳ ಕಾರ್ಯ ಯುವ ಪೀಳಿಗೆಗೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಯಾರೂ ಜೈಲಿಗೆ ಕಳಿಸಲು ನೋಡುತ್ತಿಲ್ಲ, ಅನುಕಂಪ ಗಿಟ್ಟಿಸಿಕೊಳ್ಳೋ ಯತ್ನ: ಸಿಎಂ ಡಿಕೆಶಿ ಹೇಳಿಕೆಗೆ ಜೋಶಿ ತಿರುಗೇಟು
ಭಾರತದ ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳು ನಮ್ಮ ದೇಶದ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದರ ಜತೆಗೆ ಜಾಗತಿಕ-ವೈಜ್ಞಾನಿಕ ಸಮುದಾಯಕ್ಕೂ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.