ಯಾರೂ ಜೈಲಿಗೆ ಕಳಿಸಲು ನೋಡುತ್ತಿಲ್ಲ, ಅನುಕಂಪ ಗಿಟ್ಟಿಸಿಕೊಳ್ಳೋ ಯತ್ನ: ಸಿಎಂ ಡಿಕೆಶಿ ಹೇಳಿಕೆಗೆ ಜೋಶಿ ತಿರುಗೇಟು
Pralhad Joshi: ಯಾರೇ ಆಗಲಿ ಅಪರಾಧ ಮಾಡಿದವರು ಮಾತ್ರ ಜೈಲಿಗೆ ಹೋಗುತ್ತಾರೆ. ಹಾಗಾದರೆ ಸಿಎಂ ಡಿ.ಕೆ. ಶಿವಕುಮಾರ್ ಏನು ತಪ್ಪು ಮಾಡಿದ್ದಾರಾ? ಭ್ರಷ್ಟಾಚಾರ ಎಸಗಿದ್ದಾರಾ? ವಿನಾಕಾರಣ ಅವರಿಗೇಕೆ ಜೈಲಿಗೆ ಹೋಗುವ ಭಯ? ಈಗೇಕೆ ಆ ಮಾತನಾಡುತ್ತಿದ್ದೀರಿ? ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ). -
ಬೆಂಗಳೂರು, ಜು.16: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM DK Shivakumar) ಅವರನ್ನು ಯಾರೂ ಜೈಲಿಗೆ ಕಳಿಸುತ್ತಿಲ್ಲ. ಪ್ರಾಮಾಣಿಕರಾಗಿದ್ದರೆ ಅವರಿಗೇಕೆ ಅದರ ಭಯ? ಜನರ ಸಿಂಪತಿ ಗಿಟ್ಟಿಸಿಕೊಳ್ಳಲು ನೋಡುತ್ತಿದ್ದಾರವರು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ ಡಿಕೆಶಿ ಅವರ ʼನನ್ನನ್ನು ಜೈಲಿಗೆ ಕಳಿಸಲು ನೋಡುತ್ತಿದ್ದಾರೆʼ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ ಇದೆಲ್ಲಾ ಅನುಕಂಪ ಗಿಟ್ಟಿಸಿಕೊಳ್ಳುವ ಒಂದು ಪ್ರಯತ್ನ ಎಂದು ಟೀಕಿಸಿದರು.
ಯಾರೇ ಆಗಲಿ ಅಪರಾಧ ಮಾಡಿದವರು ಮಾತ್ರ ಜೈಲಿಗೆ ಹೋಗುತ್ತಾರೆ. ಹಾಗಾದರೆ ಸಿಎಂ ಡಿ.ಕೆ. ಶಿವಕುಮಾರ್ ಏನು ತಪ್ಪು ಮಾಡಿದ್ದಾರಾ? ಭ್ರಷ್ಟಾಚಾರ ಎಸಗಿದ್ದಾರಾ? ವಿನಾಕಾರಣ ಅವರಿಗೇಕೆ ಜೈಲಿಗೆ ಹೋಗುವ ಭಯ? ಈಗೇಕೆ ಆ ಮಾತನಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ಯಾರೂ ಜೈಲಿಗೆ ಕಳಿಸುತ್ತಿಲ್ಲ
ಭ್ರಷ್ಟಾಚಾರ ಮತ್ತು ತಪ್ಪು ಮಾಡಿದ ಯಾರೇ ಆಗಲಿ ಜೈಲಿಗೆ ಹೋಗುತ್ತಾರೆ. ನಾವೇನೂ ಅವರನ್ನು ಜೈಲಿಗೆ ಕಳಿಸಲು ನೋಡುತ್ತಿಲ್ಲ. ಅವರು ತಪ್ಪು ಮಾಡಿ, ಭ್ರಷ್ಟಾಚಾರ ಎಸಗಿ ಜೈಲಿಗೆ ಹೋದರೆ ಯಾರೂ ಏನೂ ಮಾಡಲಾಗುವುದಿಲ್ಲ ಎಂದು ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯರಿಗೆ ಇರದಿದ್ದ ಟೌನ್‌ಶಿಪ್ ಆಸಕ್ತಿ ನಿಮಗೇಕೆ?
ಸಿದ್ದರಾಮಯ್ಯ ಅವರಿಗೆ ಇರದಿದ್ದ ʼಬಿಡದಿ ಟೌನ್ಶಿಪ್ʼ ಆಸಕ್ತಿ ನಿಮಗೇಕೆ? ಅಂದರೆ ಇದರಲ್ಲೇನೋ ಡೀಲ್ ಆಗಿದೆ ಎಂಬ ಸಂಶಯ ಬರುತ್ತದೆ ಅಲ್ಲವೇ? ಈ ಬಗ್ಗೆ ಏಕೆ ಉತ್ತರಿಸುತ್ತಿಲ್ಲ? ಮಾಜಿ ಪ್ರಧಾನಿ ದೇವೇಗೌಡರ ಆರೋಪಕ್ಕೆ ಸ್ಪಷ್ಟನೆ ಕೊಡುವುದನ್ನು ಬಿಟ್ಟು ಅವರ ಮೇಲೇಕೆ ರೇಗಾಡುತ್ತಿದ್ದೀರಿ? ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಬಲವಂತದಿಂದ ರೈತರ ಭೂಮಿ ಕಿತ್ತುಕೊಂಡು ಟೌನ್‌ಶಿಪ್ ನಿರ್ಮಿಸುವ ಬದಲು ಮೊದಲು ರೈತರ ಮನವೊಲಿಸಬೇಕಿತ್ತು. ಬಿಡದಿ ವಿಚಾರದಲ್ಲಿ ಅನೇಕರು ನಾನಾ ಸಲಹೆ ಕೊಟ್ಟರೂ ಸ್ವೀಕರಿಸದೆ ಸಿಎಂ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಜೋಶಿ ಆರೋಪಿಸಿದರು.
ವಿಪಕ್ಷ ನಾಯಕ ರಾಹುಲ್ ಗಾಂಧಿ ಎಲ್ಲಿ?
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ 25 ದಿನಗಳಿಂದ ಎಲ್ಲಿದ್ದಾರೆ? ಈ ಬಗ್ಗೆ ಕಾಂಗ್ರೆಸ್ ನಾಯಕರು ಜನತೆಗೆ ತಿಳಿಸಲಿ. ನಾವೆಲ್ಲೇ ಹೋದರು ಹೇಳುತ್ತೇವೆ. ಅವರೇಕೆ ಹಾಗೆ ಹೇಳುತ್ತಿಲ್ಲ? ವಿಪಕ್ಷ ನಾಯಕರಾಗಿರುವ ಅವರಿಗೆ ಜವಾಬ್ದಾರಿ ಇಲ್ಲವೇ? ರಾಜ್ಯದಲ್ಲಿ ಅರೆಬರೆ ಸಚಿವ ಸಂಪುಟ ರಚಿಸಿ ಅರ್ಧಾಡಳಿತಕ್ಕೆ ನಾಂದಿ ಹಾಡಿದಂತಿದೆ ಎಂದು ಟೀಕಿಸಿದರು.
ಬರದ ವಿಚಾರದಲ್ಲಿ ರಾಜಕೀಯ ಸರಿಯಲ್ಲ
ಬರದ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುವುದು ಸರಿಯಲ್ಲ. ಬರ ಅಧ್ಯಯನಕ್ಕಾಗಿ ಕೇಂದ್ರಕ್ಕೆ ಪತ್ರ ಬರೆಯುವ ಮುನ್ನ ಬರ ಅಧ್ಯಯನ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಬೇಕು ಎಂದರು. ರಾಜ್ಯದಲ್ಲಿ ಎಲ್ಲೆಲ್ಲಿ ಮಳೆಯಾಗಿದೆ? ಎಲ್ಲೆಲ್ಲಿ ಬರ ಸಮಸ್ಯೆ ಎದುರಾಗಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ಮೊದಲು ಅಧ್ಯಯನ ಮಾಡಿ ಕೇಂದ್ರಕ್ಕೆ ಸಲ್ಲಿಸಬೇಕು. ಅದು ಬಿಟ್ಟು ವಿನಾಕಾರಣ ರಾಜಕೀಯ ಮಾಡುವುದು ಸಲ್ಲದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಟಿ ಬೀಸಿದರು.