ಬೆಂಗಳೂರು, ನ.11: ಕಾಂಗ್ರೆಸ್ ಸರ್ಕಾರವು ಯಾವುದಕ್ಕೆ ಬೆಲೆ ಏರಿಸಿಲ್ಲ ಎಂದು ಹುಡುಕುವುದೇ ಕಷ್ಟವಾಗಿದೆ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಟೀಕಿಸಿದ್ದಾರೆ. ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಬಿಜೆಪಿ ರಾಜ್ಯ ಘಟಕದ ವತಿಯಿಂದ ಗುರುವಾರ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಜನಾಕ್ರೋಶಕ್ಕೆ ಸ್ಪಂದಿಸಿ ಬಿಜೆಪಿ ಹೋರಾಟಕ್ಕೆ ಮುಂದಾಗಿದೆ ಎಂದು ತಿಳಿಸಿದರು.
ಇಂದು ಮದಕರಿ ನಾಯಕನ ಆಸ್ಥಾನವನ್ನು ರಕ್ಷಿಸಿದ ವೀರ ವನಿತೆ ಓಬವ್ವರ ಜನ್ಮ ದಿನಾಚರಣೆ. ಅವರಿಗೆ- ಮಹಿಳೆಯರಿಗೆ ಗೌರವ ಸಲ್ಲುವಂತೆ ಮಾಡಿದವರು ಬಸವರಾಜ ಬೊಮ್ಮಾಯಿಯವರು ಎಂದು ವಿವರಿಸಿದರು.
ಹಾಲು, ನೀರಿನ ದರ ಹೆಚ್ಚಳ, ಬಸ್ ಟಿಕೆಟ್ ದರ ಏರಿಸಿದ್ದಾರೆ. ವಿದ್ಯುತ್ ದರವೂ ಏರಲಿದೆ ಎಂದು ಎಚ್ಚರಿಸಿದರು. ಜನರ ಮೇಲೆ ಹೊರೆ ಹಾಕಿ ಇನ್ನೊಂದು ವರ್ಷ ಕಳೆಯುವ ಚಿಂತನೆಯಲ್ಲಿ ಈ ಸರ್ಕಾರ ಇದೆ ಎಂದು ದೂರಿದರು.
ಚುನಾವಣೆಗೆ ಮೊದಲು ಮತ ಭಿಕ್ಷೆ ಬೇಡಿದ್ದರು. ಈಗ ಎಲ್ಲಕ್ಕೂ ಕತ್ತರಿ ಹಾಕಿದ್ದಾರೆ ಎಂದು ಟೀಕಿಸಿದರು. ಈಗ ಮೋದಿ ಅವರು ಕೊಡುವ ಅಕ್ಕಿಯನ್ನಷ್ಟೇ ಕೊಡುತ್ತಿದ್ದಾರೆ ಎಂದು ದೂರಿದ ಅವರು, ಇವರದು ಗ್ಯಾರಂಟಿ ಚೋರಿ ಎಂದು ಟೀಕಿಸಿದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸಿನವರು ಮತ ಕೇಳಲು ಹೋದಾಗ ಹುಶಾರಾಗಿರಬೇಕು ಎಂದು ವ್ಯಂಗ್ಯವಾಡಿದರು. 300, 400, 700, 2 ಸಾವಿರ- ಹೀಗೆ ಗ್ಯಾರಂಟಿ ಹಣ ಜಮಾ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇವರದು ಚಾಕು, ಚೂರಿ ಸಂಸ್ಕೃತಿ
ಚೂರಿ ಕಳಿಸುತ್ತಾರೆ. ಕಾಂಗ್ರೆಸ್ಸಿನ ಸಂಸ್ಕೃತಿಯೇ ಚಾಕು, ಚೂರಿ ಸಂಸ್ಕೃತಿ ಎಂದು ಟೀಕಿಸಿದರು. 2028ರಲ್ಲಿ ರಾಜ್ಯದ ಜನರು ಮನಸ್ಸು ಮಾಡಿದರೆ ಇವರನ್ನು ಅರಬ್ಬಿ ಸಮುದ್ರದಲ್ಲಿ ಹುಡುಕಿದರೂ ಸಿಗುವುದಿಲ್ಲ ಎಂದು ಎಚ್ಚರಿಸಿದರು. ವಿದ್ಯಾವಂತರ ಹೆಚ್ಚಳದಿಂದ ಕಾಂಗ್ರೆಸ್ಸಿನ ಮನೆ ಬಾಗಿಲು ಹಾಕುವಂತಾಗಿದೆ ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.