ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

BJP Protest: ಬೆಲೆ ಏರಿಕೆ ಖಂಡಿಸಿ ಬೆಂಗಳೂರಿನಲ್ಲಿ ಬಿಜೆಪಿ ಬೃಹತ್‌ ಪ್ರತಿಭಟನೆ; ಕಾಂಗ್ರೆಸ್‌ ಸರ್ಕಾರ ದಿವಾಳಿಯಾಗಿದೆ ಎಂದು ಬಿಎಸ್‌ವೈ ವಾಗ್ದಾಳಿ

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬುಧವಾರ ಬೃಹತ್‌ ಪ್ರತಿಭಟನೆ ನಡೆಸಲಾಗಿದೆ. ಕಾಂಗ್ರೆಸ್‌ ಸರ್ಕಾರವು ಒಂದು ಕಡೆ ಉಚಿತ ಭಾಗ್ಯ ಎನ್ನುತ್ತಾ, ಇನ್ನೊಂದು ಕಡೆ ಖಚಿತ ಬೆಲೆ ಏರಿಕೆಯ ರಾಜ್ಯದ ಜನರಿಗೆ ನರಕ ತೋರಿಸುತ್ತಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

ಬೆಲೆ ಏರಿಕೆ ಖಂಡಿಸಿ ಬೆಂಗಳೂರಿನಲ್ಲಿ ಬಿಜೆಪಿ ಬೃಹತ್‌ ಪ್ರತಿಭಟನೆ

-

Prabhakara R
Prabhakara R Nov 11, 2026 5:37 PM

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಬಿಜೆಪಿ ನಾಯಕರಿಂದ ಬೃಹತ್ ಪ್ರತಿಭಟನೆ (BJP Protest) ನಡೆಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್.‌ ಯಡಿಯೂರಪ್ಪ, ಪ್ರತಿಪಕ್ಷ ನಾಯಕರಾದ ಆರ್.‌ ಅಶೋಕ್‌, ವಿಧಾನ ಪರಿಷತ್‌ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ರಾಜ್ಯ ಕಾಂಗ್ರೆಸ್‌ ಸರ್ಕಾರ ದಿವಾಳಿಯಾಗಿದೆ. ಸರ್ಕಾರಿ ಬಸ್‌ಗಳಿಗೆ ಇಂಧನ ಹಾಕುವ ಸಾಮರ್ಥ್ಯವೂ ಈ ಸರ್ಕಾರಕ್ಕಿಲ್ಲ. ಹಣ ಬಲ, ತೋಳ್ಬಲ, ಹೆಂಡದ ಬಲದ ಮೇಲಿರುವ ಈ ಸರ್ಕಾರವನ್ನು ರಾಜ್ಯದ ಜನತೆ ತಿರಸ್ಕರಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಬರುವುದು ನಿಶ್ಚಿತ ಎಂದು ಹೇಳಿದರು.

BJP Protest  (3)

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಪೆಟ್ರೋಲ್‌, ಡಿಸೇಲ್‌ ಮೇಲಿನ ತೆರಿಗೆಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ನಾಲ್ಕು ಬಾರಿ ಹೆಚ್ಚಳ ಮಾಡಿದೆ, ಸ್ಟ್ಯಾಂಪ್‌ ಡ್ಯೂಟಿ, ಆಸ್ಪತ್ರೆಯ ಸೇವಾದರವನ್ನೂ ಹೆಚ್ಚಿಸಿದ್ದ ಸರ್ಕಾರ, ಹಬ್ಬದ ಸಂಭ್ರಮದ ನಡುವೆಯೂ ಹಾಲು, ಮೊಸರು, ತುಪ್ಪದ ಮೇಲೆ ದರ ಹೆಚ್ಚಳ ಮಾಡಿದೆ. ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಹೈಕೋರ್ಟ್‌ ಕೂಡಾ ಛೀಮಾರಿ ಹಾಕಿದೆ ಎಂದು ಆಕ್ರೋಶ ಹೊರಹಾಕಿದರು.

BJP Protest  (2)

ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ಮಾತನಾಡಿ, ರಾಜ್ಯ ಕಾಂಗ್ರೆಸ್‌ ಸರ್ಕಾರ ರಾಜ್ಯದ ಪ್ರತೀ ಜನರ ಮೇಲೆ ₹1.5 ಲಕ್ಷ ಸಾಲದ ಹೊರೆ ಹೊರಿಸಿದೆ. ಈ ಸರ್ಕಾರ ಜನರ ಪಾಲಿಗೆ ಸತ್ತು ಹೋಗಿದೆ. ಬಿಜೆಪಿ ಅವಧಿಯಲ್ಲಿ ಸಾರಿಗೆ ಸಂಸ್ಥೆ ಲಾಭದಲ್ಲಿತ್ತು, ಆದರೆ ಇಂದು ನಷ್ಟದ ಹಾದಿಯಲ್ಲಿದೆ, ಬಸ್ಸುಗಳಿಗೆ ಡಿಸೇಲ್‌ ಹಾಕಲೂ ಸರ್ಕಾರದ ಬಳಿ ದುಡ್ಡಿಲ್ಲ. ಎಲ್ಲರಿಗೂ ಫ್ರೀ ಫ್ರೀ ಎಂದಿದ್ದ ಕಾಂಗ್ರೆಸ್‌ ಈಗ ಮುಂದಿನ ತಲೆಮಾರಿಗೂ ಸಾಲದ ಹೊರೆ ಹೊರಿಸಿದೆ ಎಂದು ಟೀಕಿಸಿದರು.

BJP Protest  (4)

ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಚಾರ ನಡೆಸುವುದೇ ದುಸ್ತರವಾಗಲಿದೆ. ಜನರ ಮುಂದೆ ಹೋದಲ್ಲಿ ಮುಖಭಂಗ ಅನುಭವಿಸುವುದು ನಿಶ್ಚಿತ. ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಜನಾಕ್ರೋಶ ಹೆಚ್ಚಾಗಿದೆ. ರಾಜ್ಯದ ಜನತೆ ಈ ದರಿದ್ರ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ಬೆಲೆ ಏರಿಕೆ ಮೂಲಕ ಜನರ ಮೇಲೆ ದಬ್ಬಾಳಿಕೆ: ಆರಗ ಜ್ಞಾನೇಂದ್ರ

ರಾಜ್ಯದಲ್ಲಿ ಜನರು ಬದುಕುವುದೇ ದುಸ್ತರ ಎಂಬ ಮಟ್ಟಕ್ಕೆ ಬೆಲೆ ಏರಿಕೆ ಬಂದು ಮುಟ್ಟಿದೆ. ಬೆಲೆ ಏರಿಕೆ ಮೂಲಕ ಜನರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ಅವರು ಆರೋಪಿಸಿದ್ದಾರೆ. ಹಾಲು, ಆಲ್ಕೋಹಾಲ್ ದರವನ್ನು ಹಲವು ಬಾರಿ ಏರಿಸಿದ್ದಾರೆ. ವಿದ್ಯುತ್ ಮುಟ್ಟಿದರೆ ಕರೆಂಟ್ ಹೊಡೆಯುತ್ತಿಲ್ಲ. ಬಿಲ್ ಮಾರಕ ಹೊಡೆತ ನೀಡುತ್ತಿದೆ ಎಂದು ವಿವರಿಸಿದರು. ಅವ್ಯವಹಾರ ಮಿತಿ ಮೀರಿದೆ ಎಂದು ದೂರಿದರು. ಹಾಲಿನ ಡೇರಿಗಳಲ್ಲಿ ಆಗಿರುವ ಭ್ರಷ್ಟಾಚಾರವನ್ನು ತಡೆಯಲು ಈ ಸರಕಾರಕ್ಕೆ ಆಗುತ್ತಿಲ್ಲ ಎಂದು ಟೀಕಿಸಿದರು.

ಎ ಟು ಜೆಡ್ ವಸ್ತುಗಳ ಬೆಲೆ ಏರಿಕೆ: ಎನ್.ರವಿಕುಮಾರ್

ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಮಾತನಾಡಿ, ಈ ಸರಕಾರವು ಎ ಟು ಜೆಡ್ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂದು ದೂರಿದರು. ಲೂಟಿ, ದರ್ಬಾರಿನ, ದರೋಡೆಕೋರರ ಈ ಸರಕಾರ ತೊಲಗಬೇಕು ಎಂದು ಒತ್ತಾಯಿಸಿದರು.

ಆಲ್ಕೋಹಾಲಿನಿಂದ ಆರಂಭಿಸಿ ಎಲ್ಲ ವಸ್ತುಗಳ ಬೆಲೆ ಏರಿಸಲಾಗಿದೆ. ಜಮೀನು ಖರೀದಿ, ಕಟ್ಟಡ ನಿರ್ಮಾಣ ಸಾಮಗ್ರಿ ಬೆಲೆಯನ್ನೂ ಏರಿಸಿದ್ದಾರೆ ಎಂದು ಟೀಕಿಸಿದರು. ಈ ಸರಕಾರ ಯಾವಾಗ ತೊಲಗುತ್ತದೋ ಎಂದು ಗುತ್ತಿಗೆದಾರರು ಶಾಪ ಹಾಕುತ್ತಿದ್ದಾರೆ ಎಂದು ವಿವರಿಸಿದರು. ಜನರು ರೋಸಿ ಹೋಗಿದ್ದಾರೆ. ಕೈಲಾಗದ ಗ್ಯಾರಂಟಿಗಳನ್ನು ಕೊಡಲು ಯಾರು ಹೇಳಿದರು ಎಂದು ಪ್ರಶ್ನಿಸಿದರು.

BJP Protest  (5)

ಬೆಲೆ ಏರಿಕೆ ಕಾರಣಕ್ಕಾಗಿ ಬಡವರ ಎದೆ ಡವಡವ -ಬಿ.ಶ್ರೀರಾಮುಲು

ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಮಾತನಾಡಿ, ಹೊಸ ಯೋಜನೆಗಳನ್ನು ನೀಡದ ಸರಕಾರ ಇದು. ಕ್ಯಾಬಿನೆಟ್ ಮೀಟಿಂಗ್ ಎಂದೊಡನೆ ಬೆಲೆ ಏರಿಕೆ ಕಾರಣಕ್ಕಾಗಿ ಬಡವರ ಎದೆ ಡವಡವ ಎನ್ನುವಂತಾಗಿದೆ. ಒಂದು ಕಡೆ ಗ್ಯಾರಂಟಿ ಕೊಟ್ಟು ಇನ್ನೊಂದು ಕಡೆ ಬೆಲೆ ಏರಿಕೆ ಮೂಲಕ ಕಿತ್ತುಕೊಳ್ಳುವ ಕಾಂಗ್ರೆಸ್ಸಿನ ಸರಕಾರ ಇದೆಂದು ಟೀಕಿಸಿದರು. ಇದು ಬೆಲೆ ಏರಿಕೆಯ ಸರಕಾರ ಎಂದು ದೂರಿದರು.

ಬಡವರ ರಕ್ತ ಹೀರುತ್ತಾರೆ- ಡಾ. ಉಮೇಶ್ ಜಾಧವ್

ಮಾಜಿ ಸಂಸದ ಡಾ. ಉಮೇಶ್ ಜಾಧವ್ ಅವರು ಮಾತನಾಡಿ, ಹಾಲು, ತುಪ್ಪ, ಬೆಣ್ಣೆ ದರ ಏರಿಸಿದ ಸರಕಾರವು ದೀಪಾವಳಿಯನ್ನು ಸರಿಯಾಗಿ ಅಚರಿಸದಂತೆ ನೋಡಿಕೊಂಡಿತು ಎಂದು ಆಕ್ಷೇಪಿಸಿದರು. ಬಸ್ ಪ್ರಯಾಣ ದರವನ್ನೂ ಏರಿಸಿದೆ. ಇದರಿಂದ ಬಡವರ ದುಡ್ಡಿನಿಂದ ಸರಕಾರ ನಡೆಸುವ ಪ್ರಯತ್ನ ಆಗುತ್ತಿದೆ. ಬಡವರ ರಕ್ತ ಹೀರುತ್ತಾರೆ ಎಂದು ಟೀಕಿಸಿದರು.

BJP Protest  (6)

ಜನಾಕ್ರೋಶಕ್ಕೆ ಸಿಲುಕಿದ ಸರಕಾರ -ಗೋಪಾಲಯ್ಯ

ಮಾಜಿ ಸಚಿವ ಗೋಪಾಲಯ್ಯ ಅವರು ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಯಾವುದೇ ವಸ್ತುವಿನ ದರ ಕಡಿಮೆ ಆಗಿಲ್ಲ ಎಂದು ಆರೋಪಿಸಿದರು. ಇದು ಲೂಟಿ ಸರಕಾರ ಎಂದು ದೂರಿದರು. ಬರಗಾಲವಿದೆ. ಮೇವು ಸಿಗುತ್ತಿಲ್ಲ. ಕೆರೆ ಕಟ್ಟೆಗಳಲ್ಲಿ ನೀರಿಲ್ಲ. ಸರಕಾರದ ಖಜಾನೆ ಖಾಲಿಯಾಗಿ, ಬೆಲೆ ಏರಿಕೆ ಮೂಲಕ ಸರಕಾರವು ಜನರ ಆಕ್ರೋಶಕ್ಕೆ ಬಲಿ ಆಗುತ್ತಿದೆ ಎಂದು ಟೀಕಿಸಿದರು.

ಅತ್ಯಂತ ಕೆಟ್ಟ ಸರ್ಕಾರ- ಪ್ರಮೋದ್ ಮಧ್ವರಾಜ್

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮಾತನಾಡಿ, ಇದು ರಾಜ್ಯದ ಅತ್ಯಂತ ಕೆಟ್ಟ ಸರಕಾರ ಎಂದು ಖಂಡಿಸಿದರು. ಕರ್ನಾಟಕ ಹಿಂದೆ ಆರ್ಥಿಕ ಶಿಸ್ತು, ಪ್ರಗತಿಪರ ರಾಜ್ಯವಾಗಿತ್ತು. ಈ ರಾಜ್ಯವನ್ನು ದಿವಾಳಿ ಹಂತಕ್ಕೆ ತಂದಿದ್ದಾರೆ ಎಂದು ಟೀಕಿಸಿದರು. ಸರಕಾರ ನಡೆಸಲು ಜನರ ಲೂಟಿ ಮಾಡುವ ಕಾಯಕಕ್ಕೆ ಕೈ ಹಾಕಿದ್ದಾರೆ ಎಂದು ಆಕ್ಷೇಪಿಸಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌, ಮಾಜಿ ಕೇಂದ್ರ ಸಚಿವರಾದ ಭಗವಂತ ಖೂಬಾ, ಮಾಜಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಅಶ್ವತ್ಥ್ ನಾರಾಯಣ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಬಿಜೆಪಿ ಸಂಸದರು, ಮಾಜಿ ಸಚಿವರು, ಶಾಸಕರುಗಳು, ವಿಧಾನ ಪರಿಷತ್‌ ಸದಸ್ಯರುಗಳು, ಜಿಲ್ಲಾಧ್ಯಕ್ಷರುಗಳು, ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.