ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಮಾಡಿದ ರಾಕೇಶ್ ಶೆಟ್ಟಿಯನ್ನು ಬಂಧಿಸಿ: ಕುಮಾರಸ್ವಾಮಿ ಪಟ್ಟು, ಪೊಲೀಸ್ ಆಯುಕ್ತರ ಕಚೇರಿ ಬಳಿ ಜೆಡಿಎಸ್‌ ಧರಣಿ

JDS Dharna in Bengaluru: ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್ ಸಂಚಿನಲ್ಲಿ ಶಾಮೀಲಾಗಿ ಅವರ ಪದಚ್ಯುತಿಗೆ ಕಾರಣನಾದ ನೀಲಿಕಣ್ಣಿನ ಮಂತ್ರಿ ಪ್ರಿಯಾಂಕ್‌ ಖರ್ಗೆ, ಸ್ಟಿಂಗ್ ಮಾಡಿದ ಅಸಲಿ ಕಿರಾತಕನನ್ನು ಬಿಟ್ಟು ಅಮಾಯಕರ ಬೆನ್ನತ್ತಿದ ನೀವು ಗೃಹಮಂತ್ರಿ ಹುದ್ದೆಗೆ ನಾಲಾಯಕ್ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ (Sting operation) ಮಾಡಿದ ಕಿರಾತಕರನ್ನು ಎರಡು ದಿನಗಳ ಒಳಗಾಗಿ ಬಂಧಿಸಬೇಕು ಹಾಗೂ ಜೆಡಿಎಸ್ ಕಾರ್ಯಕರ್ತರು ಮತ್ತು ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುವ ಹುಡುಗರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಕೇಂದ್ರ ಸಚಿವ ಎಚ್‍.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಮುಖಂಡರು ಗುರುವಾರ ಧರಣಿ (JDS Dharna) ನಡೆಸಿದರು.

ಈ ವೇಳೆ ಮಾತನಾಡಿದ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿ ಅವರ ಚಾರಿತ್ರ್ಯಹರಣಕ್ಕೆ ಸಂಚು ಮಾಡಿದ ಪವರ್ ಟಿವಿಯ ರಾಕೇಶ್ ಶೆಟ್ಟಿ, ಆತನ ಸಹಚರ ಬಾಗೇಪಲ್ಲಿ ಪ್ರಶಾಂತ್ ಹಾಗೂ ಸ್ಟಿಂಗ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರನ್ನು ಎರಡು ದಿನಗಳ ಒಳಗಾಗಿ ಬಂಧಿಸಬೇಕು ಎಂದು ಪೊಲೀಸರಿಗೆ ಎರಡು ದಿನಗಳ ಗಡುವು ನೀಡಿದರು.

ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಅನುಮಾನ ಬಂದರೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ವಿಚಾರಣೆಗೆ ಕರೆಯುತ್ತೇವೆ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಹೇಳಿದ ಬೆನ್ನಲ್ಲೇ ಕೆಂಡಮಂಡಲರಾದ ಸಚಿವ ಕುಮಾರಸ್ವಾಮಿ ಅವರು, ನೇರವಾಗಿ ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಗೆ ಧಾವಿಸಿ ಮೆಟ್ಟಿಲ ಮೇಲೆ ಧರಣಿ ಕೂತರು.

ಗೃಹ ಸಚಿವ ಪ್ರಿಯಾಂಕ ಖರ್ಗೆ ಅತ್ಯಂತ ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ನನ್ನ ಬಗ್ಗೆ ಮತ್ತು ನನ್ನ ಆರೋಗ್ಯದ ಬಗ್ಗೆ ಅತ್ಯಂತ ಲಘುವಾಗಿ ಮಾತನಾಡಿದ್ದಾರೆ. ನನ್ನ ಕಾರ್ಯಕರ್ತರು ಮಾತ್ರವಲ್ಲದೆ ವೈಯಕ್ತಿಕವಾಗಿ ನನಗೆ ಕೂಡ ತುಂಬಾ ನೋವಾಗಿದೆ. ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಮಾಡಿದ ಕಿರಾತಕರನ್ನು ಬಂಧಿಸಲಾಗದ ಪೊಲೀಸ್ ಇಲಾಖೆ, ಜೆಡಿಎಸ್ ಕಾರ್ಯಕರ್ತರ ಮೇಲೆ ಬಿದ್ದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸ್ಟಿಂಗ್ ಮಾಡಿದ ವ್ಯಕ್ತಿಗಳನ್ನು ತಕ್ಷಣ ಬಂಧಿಸಬೇಕು. ಈ ಸರ್ಕಾರಕ್ಕೆ ಮತ್ತು ಪೊಲೀಸ್ ವ್ಯವಸ್ಥೆಗೆ ನಾನು ಎರಡು ದಿನಗಳ ಗಡುವು ನೀಡುತ್ತೇನೆ. ಈ ಅವಧಿ ಒಳಗೆ ತಪ್ಪಿತಸ್ಥರನ್ನು ಬಂಧಿಸದಿದ್ದರೆ ಮುಂದೆ ಆಗುವ ಪರಿಣಾಮಗಳಿಗೆ ನಾನು ಜವಾಬ್ದಾರಿ ಆಗುವುದಿಲ್ಲ. ಇದಕ್ಕೆ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಕೇಂದ್ರ ಸಚಿವರು ಕಟು ಎಚ್ಚರಿಕೆ ನೀಡಿದರು.

ಸ್ಟಿಂಗ್ ಆಪರೇಷನ್ ಮಾಡಿದವರಿಗೂ ಹಾಗೂ ಹಾಲಿ ಮುಖ್ಯಮಂತ್ರಿಗೂ ಇರುವ ಸಂಬಂಧ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಯಾರ ರಾಜಕೀಯ ಬೆಳವಣಿಗೆಗಾಗಿ ಈ ರಾಕೇಶ್ ಶೆಟ್ಟಿ ಅಂಡ್ ಗ್ಯಾಂಗ್ ಸ್ಟಿಂಗ್ ಆಪರೇಷನ್ ಮಾಡಿತು? ಸಿದ್ದರಾಮಯ್ಯ ಅವರ ರಾಜಕೀಯವನ್ನು ಹೇಗೆ ಹಾಳು ಮಾಡಲಾಯಿತು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಈ ಹಿನ್ನೆಲೆಯಲ್ಲಿ ಅಪರಾಧಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಸಚಿವರು ಆಗ್ರಹಪಡಿಸಿದರು.

ರಾಕೇಶ್ ಶೆಟ್ಟಿ ಮತ್ತು ಬಾಗೇಪಲ್ಲಿ ಪ್ರಶಾಂತ್:

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ನಲ್ಲಿ ನೇರವಾಗಿ ಭಾಗಿಯಾಗಿರುವ ಬಾಗೇಪಲ್ಲಿ ಪ್ರಶಾಂತ್ ಮತ್ತು ರಾಕೇಶ್ ಶೆಟ್ಟಿ ಒಟ್ಟಿಗೆ ಇರುವ ಹಾಗೂ ಬಾಗೇಪಲ್ಲಿ ಪ್ರಶಾಂತ್ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿ ವಾಲಾ ಅವರೊಂದಿಗೆ ಭಾವಚಿತ್ರ ತೆಗೆದುಕೊಂಡಿದ್ದು, ಅವೆರಡೂ ಚಿತ್ರಗಳನ್ನು ಸಚಿವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.

ರಾಕೇಶ್ ಶೆಟ್ಟಿ ಮೇಲೆ ನೂರಾರು ಪ್ರಕರಣಗಳು ದಾಖಲಾಗಿವೆ. ಸ್ಟಿಂಗ್ ಮಾಡಿ ಬ್ಲಾಕ್ ಮೇಲ್ ಮಾಡುವುದು, ಹಣ ವಸೂಲಿ, ಕೊಲೆ ಬೆದರಿಕೆ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿವೆ. ಅನೇಕ ಪ್ರಕರಣಗಳಲ್ಲಿ ಎಫ್ ಐ ಆರ್ ಗಳು ದಾಖಲಾಗಿವೆ. ಆದರೂ ಕೂಡ ಅವನು ರಾಜಾರೋಷವಾಗಿ ಹೊರಗಡೆ ಓಡಾಡಿಕೊಂಡಿದ್ದಾನೆ. ಅವನಿಗೆ ಮುಖ್ಯಮಂತ್ರಿ ಡಿಕೆಶಿಯ ಪೂರ್ಣ ಬೆಂಬಲ ಇತ್ತು, ಅವನನ್ನು ಬಳಸಿಕೊಂಡು ಈ ಮುಖ್ಯಮಂತ್ರಿ ತನ್ನ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಆರೋಪಿಸಿದರು.

ಇತ್ತೀಚೆಗೆ ನಿವೃತ್ತಿಯಾದ ಹಿರಿಯ ಐಪಿಎಸ್ ಅಧಿಕಾರಿಗೆ ರಾಕೇಶ್ ಶೆಟ್ಟಿ ಕೊಲೆ ಬೆದರಿಕೆ ಹಾಕುತ್ತಾನೆ, ನೂರಾರು ಪೊಲೀಸರನ್ನು ಬೆದರಿಸಿ ಹಫ್ತಾ ವಸೂಲಿ ಮಾಡಿದ್ದಾನೆ. ಹಿರಿಯ ಅಧಿಕಾರಿಗಳನ್ನು ಬೆದರಿಸುವುದು, ಹನಿಟ್ರ್ಯಾಪ್ ಮಾಡುವುದು ಸೇರಿದಂತೆ ಅನೇಕ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ. ಹಾಗೆಯೇ ಇವನ ಸಹಚರ ಬಾಗೇಪಲ್ಲಿ ಪ್ರಶಾಂತ್ ಕೂಡ ರೌಡಿ ಶೀಟರ್ ಆಗಿದ್ದ, ಇವನ ವಿರುದ್ಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿತ್ತು. ಆಮೇಲೆ ಪೊಲೀಸರಿಗೆ ಹೆದರಿಸಿ ಅದನ್ನು ರದ್ದು ಮಾಡಿಸಿಕೊಂಡಿದ್ದಾನೆ. ಅಧಿಕಾರಿಗಳನ್ನು ಬೆದರಿಸುವುದು, ಹಣ ವಸೂಲಿ ಮಾಡುವುದು, ಬೆದರಿಸುವುದು, ಕೊಲೆ ಬೆದರಿಕೆ ಸೇರಿ ಅನೇಕ ಕುಖ್ಯಾತ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ. ಇಂಥ ದುಷ್ಟರನ್ನು ಬಂಧಿಸದೆ ಇಷ್ಟು ದಿನ ಹೊರಗೆ ಓಡಾಡಲು ಅವಕಾಶ ಕೊಟ್ಟಿರುವ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಸಚಿವರು ಕಿಡಿಕಾರಿದರು.

ಇವರ ಆಟ ಬಹಳ ದಿನ ನಡೆಯುವುದಿಲ್ಲ. ಒಂದೂವರೆ ವರ್ಷ ಈ ಸರ್ಕಾರ ಇರುತ್ತೆ. ಆಮೇಲೆ ಇವರ ಆಟ ನಡೆಯುತ್ತದೆಯೇ ಎಂಬುದನ್ನು ನೋಡುತ್ತೇನೆ. ಪೊಲೀಸರು ಈ ಅಪರಾಧಿಗಳನ್ನು ಬಂಧಿಸಬೇಕು. ಇಲ್ಲವಾದರೆ ನಮ್ಮ ಶಕ್ತಿಯನ್ನು ತೋರಿಸುತ್ತೇನೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ರಾಕೇಶ್ ಶೆಟ್ಟಿ ಮಾಧ್ಯಮದ ಮುಸುಕಿನಲ್ಲಿ ಅಕ್ರಮಗಳನ್ನು ಎಸಗುತ್ತಿದ್ದಾನೆ. ಆದರೆ ಕೆಲ ಪ್ರಭಾವಿಗಳ ಕುಮ್ಮಕ್ಕಿನಿಂದ ಅಕ್ರಮಗಳ ಮೇಲೆ ಅಕ್ರಮಗಳನ್ನು ಎಸಗುತ್ತಿದ್ದಾನೆ. ಅವನಿಗೆ ಕಡಿವಾಣ ಹಾಕದಿದ್ದರೆ ಮಾಧ್ಯಮ ಕ್ಷೇತ್ರಕ್ಕೆ ಕಳಂಕ ಬರುತ್ತದೆ, ಸಮಾಜ ಹಾಳಾಗುತ್ತದೆ ಎಂದು ಸಚಿವರು ಹೇಳಿದರು.



ಕೃಪಾ ಆಳ್ವಾ ಎಂಬ ಮಹಿಳೆ ಯಾರು?:

ರಾಕೇಶ್ ಶೆಟ್ಟಿ ಜತೆಯಲ್ಲಿ ಹೋಗಿ ಸ್ಟಿಂಗ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಕೃಪಾ ಆಳ್ವಾ ಎನ್ನುವ ಮಹಿಳೆ ಯಾರು? ಕಾಂಗ್ರೆಸ್ ಪಕ್ಷದಲ್ಲಿ ಇವರು ಏನಾಗಿದ್ದಾರೆ? ಇವರಿಗೂ ರಾಕೇಶ್ ಶೆಟ್ಟಿಗೂ ಸಂಬಂಧ ಏನು? ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಮಾಡುವುದಕ್ಕೆ ಈ ಮಹಿಳೆ ಏಕೆ ಹೋದರು? ಯಾರು ಕಳಿಸಿದರು? ಇವರ ಹಿತಾಸಕ್ತಿ ಏನಿದೆ? ಇಡೀ ಸ್ಟಿಂಗ್ ಆಪರೇಷನ್ ಹಿಂದೆ ಇರುವ ಸ್ಟಿಂಗ್ ಸಾಮ್ರಾಟ ಯಾರು? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪೊಲೀಸ್ ಆಯುಕ್ತರ ಕಚೇರಿಯ ಮೆಟ್ಟಿಲ ಮೇಲೆಯೇ ಜೆಡಿಎಸ್ ಪಕ್ಷದ ನಾಯಕರ ಜತೆ ಧರಣಿ ಕುಳಿತಿದ್ದ ಕೇಂದ್ರ ಸಚಿವರನ್ನು ಧರಣಿ ಕೈಬಿಡುವಂತೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಮನವಿ ಮಾಡಿದರು.

ತಮ್ಮ ಆರೋಪದ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸುತ್ತೇವೆ ಹಾಗೂ ಅನವಶ್ಯಕವಾಗಿ ನಿಮ್ಮ ಪಕ್ಷದ ಕಾರ್ಯಕರ್ತರಿಗೆ, ಸಾಮಾಜಿಕ ಜಾಲತಾಣದ ಯುವಕರಿಗೆ ಕಿರುಕುಳ ನೀಡುವುದಿಲ್ಲ ಎಂದು ಪೊಲೀಸ್ ಆಯುಕ್ತರು ಭರವಸೆ ನೀಡಿದರು. ತದನಂತರ ಕೇಂದ್ರ ಸಚಿವರು ಧರಣಿಯನ್ನು ಕೈಬಿಟ್ಟರು.

ಜೆಡಿಎಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕರಾದ ಟಿ.ಎನ್.ಜವರಾಯಿ ಗೌಡರು, ಶಾಸಕಿ ಕರೆಮ್ಮ ನಾಯಕ, ಮಾಜಿ ಶಾಸಕರಾದ ಸುರೇಶ್ ಗೌಡ, ವೀರಭದ್ರಪ್ಪ ಹಾಲರವಿ, ರಾಜಾ ವೆಂಕಟಪ್ಪ ನಾಯಕ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಸೇರಿದಂತೆ ಅನೇಕ ನಾಯಕರು, ಕಾರ್ಯಕರ್ತರು ಧರಣಿಯಲ್ಲಿ ಭಾಗಿಯಾಗಿದ್ದರು.

ನಟೋರಿಯಸ್ ಸ್ಟಿಂಗ್‌ಪಿನ್‌ನನ್ನೇ ಬಂಧಿಸಲು ಯೋಗ್ಯತೆ ಇಲ್ಲ: ಪ್ರಿಯಾಂಕ್‌ ಖರ್ಗೆ ವಿರುದ್ಧ ಕಿಡಿ

ಪ್ರತಿಭಟನೆಗೂ ಮುನ್ನಾ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್ ಸಂಚಿನಲ್ಲಿ ಶಾಮೀಲಾಗಿ ಅವರ ಪದಚ್ಯುತಿಗೆ ಕಾರಣನಾದ ನೀಲಿಕಣ್ಣಿನ ಮಂತ್ರಿ ಪ್ರಿಯಾಂಕ್‌ ಖರ್ಗೆ, ಸ್ಟಿಂಗ್ ಮಾಡಿದ ಅಸಲಿ ಕಿರಾತಕನನ್ನು ಬಿಟ್ಟು ಅಮಾಯಕರ ಬೆನ್ನತ್ತಿದ ನೀವು ಗೃಹಮಂತ್ರಿ ಹುದ್ದೆಗೆ ನಾಲಾಯಕ್ ಎಂದು ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು.

ಸಿದ್ದಾರ್ಥ, ಡಾ.ಅಂಬೇಡ್ಕರ್ ಹೆಸರಿನಲ್ಲಿ ಲೂಟಿ ಮೇಲೆ ಲೂಟಿ ಮಾಡಿದ 'ಬಲಿತ ದಲಿತ'ನೇ, ನಿಮ್ಮ ಮೀಸಲು ಕ್ಷೇತ್ರವನ್ನು ದುರ್ಬಲ ದಲಿತನಿಗೆ ಬಿಟ್ಟುಕೊಟ್ಟು ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬನ್ನಿ. ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು? ಇನ್ನೆಷ್ಟು ವರ್ಷ ದಲಿತರ ಹೆಸರಿನಲ್ಲಿ ಅಧಿಕಾರ? ಅಸಲಿ ದಲಿತರಿಗೆ ಅಧಿಕಾರ ಕೊಡಿ.

ನನ್ನ ಹುಡುಗರನ್ನು ರಕ್ಷಿಸಿಕೊಳ್ಳುವುದು ನನಗೆ ಗೊತ್ತು. ಓಡುವುದು ನನ್ನ ಜಾಯಮಾನವಲ್ಲ. ನಾನು ಕೆಪಿಎಸ್ಸಿ, ಸ್ಟಿಂಗ್ ವಿಷಯ ಪ್ರಸ್ತಾಪಿಸಿದ ಕೂಡಲೇ ಎಷ್ಟು ಕಡೆ ರನ್ನಿಂಗ್ ರೇಸ್ ಮಾಡಿದ್ದೀರಿ ಎಂದು ನನಗೆ ಗೊತ್ತಿದೆ. ಅಂಗಲಾಚುವವನಲ್ಲ ಈ ಕುಮಾರಸ್ವಾಮಿ. ನಿಮ್ಮ ಪೊಲೀಸ್ ಕಮಿಷನರ್ ಬಳಿ ಏನು ಹೇಳಿದ್ದೇನೆ ಎಂಬುದನ್ನು ತಿಳಿದುಕೊಳ್ಳಿ ಎಂದರು.

ಸಿದ್ದರಾಮಯ್ಯ ಪದಚ್ಯುತಿಗೆ ಡಿಕೆಶಿ, ರಾಕೇಶ್ ಶೆಟ್ಟಿ ಸ್ಟಿಂಗ್ ಸಂಚು; ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ

ನಿಮ್ಮ ಪಕ್ಷದ ಹಿರಿಯ ನಾಯಕನನ್ನು ಸ್ಟಿಂಗ್ ಮಾಡಿದ ನಟೋರಿಯಸ್ ಸ್ಟಿಂಗ್'ಪಿನ್ ನನ್ನೇ ಬಂಧಿಸಲು ಯೋಗ್ಯತೆ ಇಲ್ಲ ನಿಮಗೆ. ಅವನು ಬಂದು ನಿಮ್ಮ ಡಿಸಿಪಿ ಮುಂದೆ ಕಾಲು ಮೇಲೆ ಕಾಲು ಹಾಕಿ ಕೂರುತ್ತಾನೆ, ನಿಮ್ಮ ಇಲಾಖೆಯ ನಿವೃತ್ತ IPS ಅಧಿಕಾರಿಗೆ ಕೊಲೆ ಬೆದರಿಕೆ ಹಾಕ್ತಾನೆ, ನಿಮ್ಮ ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಮಾಡಿ ಹಫ್ತಾ ವಸೂಲಿ ಮಾಡ್ತಾನೆ. ಅವನನ್ನು ಹಿಡಿದು ಸದೆಬಡಿಯುವುದು ಬಿಟ್ಟು ಪುಂಗಿ ಬಿಡ್ತಾ ಇದ್ದೀರಿ. ಸ್ಟಿಂಗ್ ಸಾಮ್ರಾಟನ ಸಿಂಡಿಕೇಟ್‌ನಲ್ಲಿ ನೀವು ಒಂದು ಭಾಗ ಎಂಬುದು ನನಗೆ ಗ್ಯಾರಂಟಿ ಆಗಿದೆ ಎಂದು ಕಿಡಿಕಾರಿದರು.