ಸಿದ್ದರಾಮಯ್ಯ ಪದಚ್ಯುತಿಗೆ ಡಿಕೆಶಿ, ರಾಕೇಶ್ ಶೆಟ್ಟಿ ಸ್ಟಿಂಗ್ ಸಂಚು; ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
Karnataka sting operation: ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ನನ್ನನ್ನು ಕೂಡ ಸಿಲುಕಿಸುವ ಸಂಚು ಹೂಡಲಾಗಿತ್ತು. ಸ್ಟಿಂಗ್ ಆಪರೇಷನ್ನ ಮೂಲ ಪುರುಷನನ್ನು ಕರೆಸಿ ಅವನಿಂದ ನ್ಯಾಯಾಲಯದಲ್ಲಿ 164ರ ಅಡಿಯಲ್ಲಿ ಹೇಳಿಕೆ ಕೊಡಿಸಿ ನನ್ನನ್ನೂ ಕೇಸಲ್ಲಿ ಸಿಲುಕಿಸಲು ಇವರು ಸಂಚು ಮಾಡಿದ್ದರು ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಆರೋಪಿಸಿದ್ದಾರೆ.
-
ಬೆಂಗಳೂರು, ಅಕ್ಟೋಬರ್ 15: ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಾಗೂ ಬ್ಲ್ಯಾಕ್ಮೇಲ್ ಪತ್ರಕರ್ತ ರಾಕೇಶ್ ಶೆಟ್ಟಿ ಇಬ್ಬರು ಸ್ಟಿಂಗ್ ಆಪರೇಷನ್ ಸಂಚು (Karnataka sting operation) ಮಾಡಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಗಂಭೀರ ಆರೋಪ ಮಾಡಿದರು.
ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು, ಹಾಲಿ ಮುಖ್ಯಮಂತ್ರಿ ಮತ್ತು ಒಬ್ಬ ಕೆಟ್ಟ ಪತ್ರಕರ್ತ ಹೂಡಿದ ಸಂಚಿಗೆ ಸಿದ್ದರಾಮಯ್ಯ ಬಲಿಯಾದರೂ ಎಂದು ದೂರಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಾರಿತ್ರ್ಯಹರಣ ಮಾಡಲು ರಾಜಕೀಯ ಸಂಚು ರೂಪಿಸಿದ ಡಿ.ಕೆ.ಶಿವಕುಮಾರ್ ಸಿಂಡಿಕೇಟಿನಲ್ಲಿ ಇದ್ದ ಎಲ್ಲರನ್ನು ಬಂಧಿಸಬೇಕು ಹಾಗೂ ಈ ಮುಖ್ಯಮಂತ್ರಿಯನ್ನು 'ಕರ್ನಾಟಕದ ಸ್ಟಿಂಗ್ ಸಾಮ್ರಾಟ್ ' ಎಂದು ಕರೆಯಬೇಕೆಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಕೆಳಗೆ ಇಳಿಸಲು ಇವರು ಎಲ್ಲಾ ರೀತಿಯ ಸಂಚು ರೂಪಿಸಿ ಅದನ್ನು ಕಾರ್ಯಗತ ಮಾಡುವಲ್ಲಿ ಯಶಸ್ವಿಯಾದರು. ಕಾಂಗ್ರೆಸ್ ಹೈಕಮಾಂಡ್ ಕೂಡ ಇವರ ಸಂಚಿನಿಂದ ದಾರಿ ತಪ್ಪಿತು ಎಂದು ಸಚಿವರು ಆರೋಪಿಸಿದರು.
ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ನನ್ನನ್ನು ಕೂಡ ಸಿಲುಕಿಸುವ ಸಂಚು ಹೂಡಲಾಗಿತ್ತು. ಸ್ಟಿಂಗ್ ಆಪರೇಷನ್ನ ಮೂಲ ಪುರುಷನನ್ನು ಕರೆಸಿ ಅವನಿಂದ ನ್ಯಾಯಾಲಯದಲ್ಲಿ 164ರ ಅಡಿಯಲ್ಲಿ ಹೇಳಿಕೆ ಕೊಡಿಸಿ ನನ್ನನ್ನೂ ಕೇಸಲ್ಲಿ ಸಿಲುಕಿಸಲು ಇವರು ಸಂಚು ಮಾಡಿದ್ದರು ಎಂದು ಸಚಿವರು ದೂರಿದರು.
ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಗೆ ತಾವು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯಲು ಹೋಗಬೇಡಿ, ಧೈರ್ಯವಾಗಿ ಎದುರಿಸಿ ಎಂದು ನಾನು ಮನವಿ ಮಾಡಿದ್ದೆ. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಆದೇಶ ಕೊಟ್ಟರು ಎಂಬ ಕಾರಣಕ್ಕೆ ಗೃಹಮಂತ್ರಿ ಪ್ರಿಯಾಂಕ್ ಖರ್ಗೆ ಅವರು ಸ್ಟಿಂಗ್ ಆಪರೇಷನ್ ತನಿಖೆಯನ್ನು ಚುರುಕು ಮಾಡಿದ್ದಾರೆ. ಅದರ ಭಾಗವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಮಾಡಿದ ಅಸಲಿ ಅಪರಾಧಿಗಳನ್ನು ಕರೆಸಿ ನನ್ನ ವಿರುದ್ಧ ಸ್ಟೇಟ್ ಮೆಂಟ್ ಮಾಡಿಸಲು ಹುನ್ನಾರ ನಡೆಸಿದ್ದರು ಎಂದು ಅವರು ಹೇಳಿದರು.
ನಾನೇನು ಎಚ್.ಡಿ. ರೇವಣ್ಣ ಅಲ್ಲ, ಆತನ ಹಾಗೆ ಸುಲಭವಾಗಿ ಇವರ ಸಂಚಿಗೆ ಬಲಿ ಆಗೋದಕ್ಕೆ. ಇವರಿಗೆ ಹೇಗೆ ಚೆಕ್ಮೆಟ್ ಇಡಬೇಕು ಎನ್ನುವುದು ನನಗೆ ಗೊತ್ತಿದೆ. ಅದು ತಿಳಿದೇ ಇವರು ಜೆಡಿಎಸ್ ಸಾಮಾಜಿಕ ಜಾಲ ತಾಣದ ಒಬ್ಬ ಹುಡುಗನನ್ನು ಕರೆದುಕೊಂಡು ಕಿರುಕುಳ ನೀಡಿದ್ದಾರೆ. ಇನ್ನೊಬ್ಬ ಹುಡುಗನ ಮನೆ ಬಳಿಗೆ ಹೋಗಿ ಗಲಾಟೆ ಮಾಡಿದ್ದಾರೆ. ಇದೆಲ್ಲವೂ ಗೃಹಮಂತ್ರಿಯ ಅತ್ಯುತ್ಸಾಹದ ಫಲ ಎಂದು ಎಂದು ಕೇಂದ್ರ ಸಚಿವರು ಟೀಕಿಸಿದರು.
ಸ್ಟಿಂಗ್ ಆಪರೇಷನ್ ವಿಚಾರವನ್ನು ವ್ಯವಸ್ಥಿತವಾಗಿ ನನ್ನ ತಲೆಗೆ ಕಟ್ಟಲು ಸಂಚು ಮಾಡಿದ್ದರು. ಈ ಸಂಚಿನಲ್ಲಿ ಹಾಲಿ ಮುಖ್ಯಮಂತ್ರಿ ಜತೆಗೇ ನಕಲಿ ಪತ್ರಕರ್ತ ರಾಕೇಶ್ ಶೆಟ್ಟಿ, ಅವನ ಚೇಲಾ ಬಾಗೇಪಲ್ಲಿಯ ಪ್ರಶಾಂತ್ ಎಂಬುವವನು ಸೇರಿದ್ದಾನೆ. ಅಲ್ಲದೆ ಕೃಪಾ ಆಳ್ವ ಎಂಬ ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರೊಬ್ಬರು ಸೇರಿದ್ದಾರೆ. ಮೊದಲು ಮೂವರನ್ನು ಬಂಧಿಸುವ ಬದಲು ನಮ್ಮ ಹುಡುಗರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ನ 'ಡರ್ಟಿ ಸ್ಟಿಂಗ್ ಪಾಲಿಟಿಕ್ಸ್' ! ಮಾನ್ಯ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ "ಸ್ಟಿಂಗ್ ಆಪರೇಷನ್" ಷಡ್ಯಂತ್ರ ರೂಪಿಸಲು @INCKarnataka ನಾಯಕರು ಯಾರನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ರಾಜ್ಯದ ಜನತೆ ನೋಡಲಿ. @DKShivakumarಆತ್ಯಾಪ್ತರಾಗಿರುವ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ @ ವಸೂಲಿವಾಲಾ @rssurjewala , ಸ್ಟಿಂಗ್ ಮಾಸ್ಟರ್ ರಾಕೇಶ್ ಶೆಟ್ಟಿ ಜೊತೆ ಆಪ್ತವಾಗಿ ಫೋಸ್ ಕೊಡುತ್ತಿರುವ ಈ ವ್ಯಕ್ತಿಯೇ ಬಾಗೇಪಲ್ಲಿ ಪ್ರಶಾಂತ್! ಸ್ಟಿಂಗ್ ಆಪರೇಷನ್ಗಳಿಗೆ ಕ್ಯಾಮೆರಾ ಫಿಟ್ ಮಾಡುವ ಈ "ಸ್ಟಿಂಗ್ ಅಸಿಸ್ಟೆಂಟ್" ಹಾಗೂ ಕಾಂಗ್ರೆಸ್ ನಾಯಕರನ್ನು ನಡುವಿನ ಬಾಂಧವ್ಯವೇ ಈ ಸ್ಟಿಂಗ್ ರಹಸ್ಯದ ಆಳ ಆಗಲಕ್ಕೆ ಸಾಕ್ಷಿ. ಹೇಡಿಗಳಂತೆ ಹಿಂಬಾಗಿಲಿನಿಂದ ಬಂದು, ಇಂತಹ ವ್ಯಕ್ತಿಗಳನ್ನು ಛೂ ಬಿಟ್ಟು, ಸುಳ್ಳು ಕೇಸುಗಳ ಮೂಲಕ ವಿರೋಧ ಪಕ್ಷದ ನಾಯಕರನ್ನು ಹೆದರಿಸಬಹುದು ಎಂಬುದು ಕಾಂಗ್ರೆಸ್ನ ಭ್ರಮೆ. ಮುಖ್ಯಮಂತ್ರಿಗಳೇ ನಿಮ್ಮ ಯಾವ ಷಡ್ಯಂತ್ರಗಳೂ ಇಲ್ಲಿ ನಡೆಯುವುದಿಲ್ಲ. ಈ ಕ್ರಿಮಿನಲ್ʼಗಳು ಹಾಗೂ ಕಾಂಗ್ರೆಸ್ ನಾಯಕರ ನಡುವಿನ ಒಳಒಪ್ಪಂದವೇನು ಎಂಬುದನ್ನು ಡಿಕೆ ಶಿವಕುಮಾರ್ ಸರ್ಕಾರ ನಾಡಿನ ಜನತೆಗೆ ಸ್ಪಷ್ಟಪಡಿಸಬೇಕು. #CongressExposed #DirtyPolitics
— Janata Dal Secular (@JanataDal_S) October 15, 2026
ಸ್ಟಿಂಗ್ ಆಪರೇಷನ್ ವಿಚಾರ ಆರಂಭಿಸಿದ್ದು ನಾನು ಅಲ್ಲ. ಈ ವಿಷಯ ಸಂಪುಟದಲ್ಲಿ ಚರ್ಚೆಯಾಗಿತ್ತು. ಸಂಪುಟದ ಚರ್ಚೆಗಳು ರಹಸ್ಯವಾಗಿರಬೇಕಾದ ಸಂದರ್ಭದಲ್ಲಿ ಅದರ ಮಾಹಿತಿ ಮಾಧ್ಯಮಗಳಿಗೆ ಸೋರಿಕೆಯಾಗಿದ್ದು ಹೇಗೆ ಎಂಬುದು ಪ್ರಶ್ನೆ? ಮುಖ್ಯಮಂತ್ರಿಗಳು ತಮಗೆ ಬೇಕಾದವರಿಗೆ ಸ್ಟಿಂಗ್ ಆಪರೇಷನ್ ಫೈಲ್ನ ವಿಷಯವನ್ನು ಪೂರ್ವನಿಯೋಜಿತವಾಗಿ ಸೋರಿಕೆ ಮಾಡಿದರು. ಅಂದು ನಾನು ಬೆಳಗ್ಗೆ 11 ಗಂಟೆಗೆ ಮಾಧ್ಯಮಾಗೋಷ್ಠಿ ಕರೆದು ನೈಸ್ ಅಕ್ರಮಗಳ ಕುರಿತು ಕೆಲ ದಾಖಲೆಗಳನ್ನು ಬಹಿರಂಗ ಮಾಡಲು ನಿರ್ಧಾರ ಮಾಡಿದ್ದೆ. ಆದರೆ, ಪ್ರಧಾನಿಗಳು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಸಂದರ್ಭ ಅದಾಗಿದ್ದರಿಂದ ನಾನು ನನ್ನ ಮಾಧ್ಯಮಗೋಷ್ಠಿಯನ್ನು ಹನ್ನೆರಡು ಗಂಟೆಗೆ ಮುಂದಕ್ಕೆ ಹಾಕಿ ಮಾಧ್ಯಮಗಳಿಗೆ ಸಂದೇಶ ಕಳಿಸಲಾಯಿತು. ಅದನ್ನೇ ಕಾದು ಕುಳಿತಿದ್ದ ಮುಖ್ಯಮಂತ್ರಿ ಸಿಂಡಿಕೇಟ್ ನನ್ನ ಮಾಧ್ಯಮಗೋಷ್ಠಿ ಆರಂಭಕ್ಕೆ ಕೆಲ ನಿಮಿಷಗಳ ಮೊದಲು ಸಂಪುಟದಲ್ಲಿ ಸ್ಟಿಂಗ್ ವಿಷಯ ಚರ್ಚೆಯಾಗಿದೆ ಎಂಬ ವಿಷಯವನ್ನು ಮಾಧ್ಯಮಗಳಲ್ಲಿ ತೇಲಿಬಿಟ್ಟಿತು. ಅದರ ಮೂಲಕ ಮಾಜಿ ಮುಖ್ಯಮಂತ್ರಿಗಳ ವಿರುದ್ಧ ನಡೆಸಿದ ಸ್ಟಿಂಗ್ ಸಂಚು ಕೂಡ ಚರ್ಚೆಗೆ ಬಂತು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಇಷ್ಟಕ್ಕೂ ಸ್ಟಿಂಗ್ ಫೈಲ್ ಅನ್ನು ಸಂಪುಟಕ್ಕೆ ತೆಗೆದುಕೊಂಡು ಹೋಗಿದ್ದು ಏಕೆ? ಅದರಲ್ಲಿ ಏನೇನು ವಿಷಯ ಇತ್ತು? ಎಂಬುದನ್ನು ಮುಖ್ಯಮಂತ್ರಿ ಜನತೆಗೆ ಹೇಳಬೇಕು. ಸಂಪುಟದಲ್ಲಿಯೇ ಸಚಿವರ ಗುಟ್ಟು ರಟ್ಟು ಮಾಡಿದ ವಿಷಯವನ್ನೇ ಮೀಡಿಯಾಗೆ ಬಿಟ್ಟು ಪಂಚಾಯಿತಿ ಮಾಡಿದ್ದು ಈ ಮುಖ್ಯಮಂತ್ರಿ. ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿರುವ ವ್ಯಕ್ತಿಗೆ ಸಚಿವರನ್ನು ಹೇಗೆ ನಡೆಸಿಕೊಳ್ಳಬೇಕು? ಸಂಪುಟ ಸಭೆಯ ಪಾವಿತ್ರತೆ ಏನು? ಎಂಬುದು ಗೊತ್ತಿರಬೇಕು. ಈ ಮುಖ್ಯಮಂತ್ರಿಗೆ ಅಂತಹ ಯಾವುದೇ ಶಿಷ್ಟಾಚಾರ ನಿಯಮ ಬದ್ಧತೆಗಳು ಇಲ್ಲ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಜೆಡಿಎಸ್ ಹುಡುಗರನ್ನು ಬಂಧಿಸಿದ್ದಕ್ಕೆ ಸಚಿವರ ಆಕ್ರೋಶ:
ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಯುವಕ ಶಂಕರ್ ಅವರನ್ನು ಬುಧವಾರ ಬೆಳಗ್ಗೆ ಅವರ ಮನೆಯಿಂದ ಕರೆದುಕೊಂಡು ಹೋಗಲಾಗುತ್ತದೆ. ಆಮೇಲೆ ಈ ಬಗ್ಗೆ ನಮ್ಮ ಪಕ್ಷದ ಕಾನೂನು ಘಟಕ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತದೆ. ತದನಂತರ ಶಂಕರ್ ನಿಂದ ಪೊಲೀಸರೇ ಕಾಲ್ ಮಾಡಿಸಿ ನನ್ನನ್ನು ಸಿಸಿಬಿ ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿಸಿ ಕರೆ ಕಟ್ ಮಾಡಿಸುತ್ತಾರೆ. ರಾತ್ರಿ ನಮ್ಮ ತಂಡದ ಇನ್ನೊಬ್ಬ ಯುವಕ ಮೋಹನ್ ಎಂಬಾತನ ಮನೆ ಮುಂದೆ ಪೊಲೀಸರು ಗಲಾಟೆ ಮಾಡುತ್ತಾರೆ. ಅಕ್ಕ ಪಕ್ಕದಆನೆಗಳಲ್ಲಿ ವಾಸ ಮಾಡುವ ಜನರಿಗೆ ಇದರಿಂದ ತೊಂದರೆಯಾಗುತ್ತದೆ ಎಂದು ಸಚಿವರು ಹೇಳಿದರು.
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ನಾನಿದ್ದೇನೆ. ತಾಕತ್ತಿದ್ದರೆ ನನ್ನನ್ನು ಬಂದನ ಮಾಡಿ, ಈಗಲೂ ಕಚೇರಿಯಲ್ಲಿಯೇ ಕೂತಿದ್ದೇನೆ. ಒಂದು ನೋಟಿಸ್ ನೀಡಲಿ, ಉತ್ತರ ಕೊಡುತ್ತೇನೆ. ಬಂಧಿಸುವುದಾದರೆ ಬಂದು ನನ್ನನ್ನು ಕರೆದುಕೊಂಡು ಹೋಗಲಿ ಎಂದು ಕೇಂದ್ರ ಸಚಿವರು ಸರ್ಕಾರಕ್ಕೆ ಸವಾಲು ಹಾಕಿದರು.
ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಟಿ.ಎನ್. ಜವರಾಯಿಗೌಡ, ಮಾಜಿ ಶಾಸಕರಾದ ಚೌಡರೆಡ್ಡಿ, ಎ.ಮಂಜುನಾಥ್, ಸುರೇಶ್ ಗೌಡ, ಪಕ್ಷದ ರಾಜ್ಯ ವಕ್ತಾರರಾದ ದೇವರಾಜು, ನಾಗೇಂದ್ರ ಬಾಬು ಮುಂತಾದವರು ಉಪಸ್ತಿತರಿದ್ದರು.