ಕಲಬುರಗಿ: ಇಲ್ಲಿನ ಕಲಬುರಗಿ ಮಹಾನಗರ ಪಾಲಿಕೆ 23ನೇ ಅವಧಿಗೆ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಗದ್ದುಗೆಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ವರ್ಷಾ ಜಾನೇ ಮೇಯರ್ ಆಗಿ, ತೃಪ್ತಿ ಅಲ್ಲದ್ (ಲಾಖೆ) ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. (Kalaburagi News) ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ ವರ್ಷಾ ಜಾನೆ 36 ಮತ ಪಡೆಯುವ ಮೂಲಕ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ ತೃಪ್ತಿ ಅಲ್ಲದ್ (ಲಾಖೆ) 33 ಮತ ಪಡೆದು ಪಾಲಿಕೆ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಮೇಯರ್ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದ ಬಿಜೆಪಿ ಅಭ್ಯರ್ಥಿ ಗಂಗಮ್ಮ ಮನ್ನೋಳಿ 27 ಮತಗಳನ್ನು ಪಡೆದಿದ್ದಾರೆ.
ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಪಾರ್ವತಿ 27 ಮತ, ಜೆಡಿಎಸ್ ಅಭ್ಯರ್ಥಿ ವಿಜಯಲಕ್ಷ್ಮಿ ರೆಡ್ಡಿ 3 ಮತ ಪಡೆದು ಪರಾಭವಗೊಂಡಿದ್ದಾರೆ. ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನ ಎರಡನ್ನೂ ಗೆಲ್ಲುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಪಾಲಿಕೆ ವಿಜಯ ಕಾಂಗ್ರೆಸ್ ಪಕ್ಷದ ತಳಮಟ್ಟದ ಕಾರ್ಯಕರ್ತರಲ್ಲಿ ಹೊಸ ಆತ್ಮವಿಶ್ವಾಸ ತುಂಬಿದೆ.
ಈ ಸುದ್ದಿಯನ್ನೂ ಓದಿ | CSA Recruitment 2025: ದೇಶಾದ್ಯಂತ ಬರೋಬ್ಬರಿ 10,277 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ IBPS; ಪದವಿ ಪೂರೈಸಿದವರು ಅಪ್ಲೈ ಮಾಡಿ
ಇಲ್ಲಿನ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳ ಚುನಾವಣೆಗೆ ಮೇಯರ್ ಹುದ್ದೆಗೆ 2 ಹಾಗೂ ಉಪಮೇಯರ್ ಸ್ಥಾನಕ್ಕೆ 3 ನಾಮಪತ್ರಗಳು ಸಲ್ಲಿಕೆಯಾಗಿದ್ದವು.
ಮೇಯರ್ ಸ್ಥಾನಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ವರ್ಷ ಜಾನೆ ಹಾಗೂ ಬಿಜೆಪಿ ಕಡೆಯಿಂದ ಗಂಗಮ್ಮ ಮನ್ನೋಳಿ ನಾಮಪತ್ರ ಸಲ್ಲಿಸಿದ್ದಾರೆ. ಉಪಮೇಯರ್ ಹುದ್ದೆಗೆ ಮೂರು ಪಕ್ಷಗಳಿಂದ ತಲಾ ಒಂದು ನಾಮಪತ್ರ ಸಲ್ಲಿಸಲಾಗಿತ್ತು. ಕಾಂಗ್ರೆಸ್‌ನಿಂದ ತೃಪ್ತಿ ಅಲ್ಲದ್ (ಲಾಖೆ), ಜೆಡಿಎಸ್‌ನಿಂದ ವಿಜಯಲಕ್ಷ್ಮಿ ರೆಡ್ಡಿ ಹಾಗೂ ಬಿಜೆಪಿಯಿಂದ ಪಾರ್ವತಿ ನಾಮಪತ್ರ ಸಲ್ಲಿಸಿದ್ದರು.