ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜ್ಯಕ್ಕೆ ದಿಸೆ ತೋರದ ಬಜೆಟ್‌ ಕನ್ನಡಿಗರ ಪಾಲಿನ ಆರ್ಥಿಕ ಮರಣ ಶಾಸನ: ಅರವಿಂದ ಬೆಲ್ಲದ್‌ ಟೀಕೆ

ಇದೊಂದು ಬಜೆಟ್‌ ಅಲ್ಲ, ಸಾಲದ ಹೇಳಿಕೆ. ಇದು ಕರ್ನಾಟಕವನ್ನು ಎತ್ತ ಕೊಂಡೊಯ್ಯುತ್ತಿದೆ? ಅಭಿವೃದ್ಧಿ ಕಡೆಗಾ ಅಥವಾ ಸಾಲದ ಕೂಪಕ್ಕೋ? ಎಂದು ಪ್ರಶ್ನಿಸಿದ ವಿಧಾನಸಭೆ ವಿಪಕ್ಷ ಉಪ ನಾಯಕ ಹಾಗೂ ಹು-ಧಾ ಪಶ್ಚಿಮ ವಿಧಾನಸಭೆ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಈ ಬಜೆಟ್‌ ಕಾಂಗ್ರೆಸ್ಸಿಗರ ಪಾಲಿನ ಅಕ್ಷಯ ಪಾತ್ರೆಯಾಗಿದ್ದರೆ, ಕನ್ನಡಿಗರ ಪಾಲಿನ ಖಾಲಿ ಚೊಂಬು ಎಂದು ಟೀಕಿಸಿದ್ದಾರೆ.

ವಿಧಾನಸಭೆಯಲ್ಲಿ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಮಾತನಾಡಿದರು.

ಬೆಂಗಳೂರು, ಮಾ.18: ರಾಜ್ಯದ ಆಯವ್ಯಯ ಎಂದರೆ ಬರೀ ಕೂಡಿ ಕಳೆಯುವ ಅಂಕಿ ಸಂಖ್ಯೆಗಳ ನಿರ್ಜೀವ ಆಟವಲ್ಲ. ರಾಜ್ಯದ 7 ಕೋಟಿ ಜನರ ಬದುಕಿನ ಭರವಸೆಯ ಉಸಿರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah)‌ ಹೇಳಿದ್ದಾರೆ. ಆದರೆ ಈ ಬಾರಿ ಮಂಡಿಸಿದ ಅವರ ದಾಖಲೆಯ 17ನೇ ಬಜೆಟ್‌ ಗಮನಿಸಿದರೆ ಬರೀ ಅಂಕಿ -ಅಂಶಗಳೇ ಇದ್ದು, ರಾಜ್ಯಕ್ಕೆ ದಿಸೆ ನೀಡುವಲ್ಲಿ ವಿಫಲವಾಗಿದೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಹಾಗೂ ಹು-ಧಾ ಪಶ್ಚಿಮ ವಿಧಾನಸಭೆ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ (Aravind Bellad) ಟೀಕಿಸಿದ್ದಾರೆ.

ವಿಧಾನಸಭೆಯಲ್ಲಿ ಬುಧವಾರ ಬಜೆಟ್‌ ವಿಶ್ಲೇಷಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ವಸತಿ ಇಲಾಖೆ, ಶಿಕ್ಷಣ ಕ್ಷೇತ್ರ, ನೀರಾವರಿ, ಕೃಷಿ, ಕೈಗಾರಿಕೆ, ಆರೋಗ್ಯ, ಇತರ ಇಲಾಖೆಗಳು ಸೇರಿ ಆಡಳಿತ ಸುಧಾರಣೆ ಹೀಗೆ ಎಲ್ಲ ಆಯಾಮಗಳ ಬಗ್ಗೆ ಅಂಕಿ-ಅಂಶಗಳ ಸಮೇತ ಸವಿಸ್ತಾರ ವಿವರ ನೀಡಿದ ಅವರು, ಒಟ್ಟಾರೆಯಾಗಿ ಇದೊಂದು ಬಜೆಟ್‌ ಅಲ್ಲ, ಸಾಲದ ಹೇಳಿಕೆ. ಇದು ಕರ್ನಾಟಕವನ್ನು ಎತ್ತ ಕೊಂಡೊಯ್ಯುತ್ತಿದೆ? ಅಭಿವೃದ್ಧಿ ಕಡೆಗಾ ಅಥವಾ ಸಾಲದ ಕೂಪಕ್ಕೋ? ಎಂದು ಪ್ರಶ್ನಿಸಿದರು. ಈ ಬಜೆಟ್‌ ಕಾಂಗ್ರೆಸ್ಸಿಗರ ಪಾಲಿನ ಅಕ್ಷಯ ಪಾತ್ರೆಯಾಗಿದ್ದರೆ, ಕನ್ನಡಿಗರ ಪಾಲಿನ ಖಾಲಿ ಚೊಂಬು ಎಂದು ಆರೋಪಿಸಿದರು.

ಸ್ಪೀಕರ್ ಸಭಾತ್ಯಾಗ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ 'ಕೈ' ಗನ್ನಡಿ: ಜೋಶಿ ಕಿಡಿ

ಲಕ್ಷಾಂತರ ಮನೆಗಳನ್ನು ನಿರ್ಮಿಸಿ ಬಡವರಿಗೆ ನೀಡಿದ್ದೇವೆ ಎಂದು ವಸತಿ ಸಚಿವರು ಹೇಳುತ್ತಿದ್ದಾರೆ. ಆದರೆ ಇದು ಸುಳ್ಳು. ಕಳೆದ 3 ವರ್ಷಗಳಲ್ಲಿ ಸರ್ಕಾರದ ಮಾಹಿತಿ ಪ್ರಕಾರ ಪಿಎಂಎವೈ ಅಡಿ 7,03,000 ಗುರಿ ಇದ್ದು, 313140 ಮನೆಗಳನ್ನು ಮಾತ್ರ ಮಂಜೂರು ಮಾಡಿದ್ದು, 9757 ಮನೆಗಳನ್ನಷ್ಟೇ ನಿರ್ಮಿಸಿದ್ದಾರೆ. ಈವರೆಗೆ ಸಚಿವರ ಮಾಹಿತಿ ಪ್ರಕಾರ 4,19,454 ಮನೆಗಳ ನಿರ್ಮಾಣಕ್ಕೆ 13,500 ಕೋಟಿ ರೂ. ಅನುದಾನ ಬೇಕು. ಆದರೆ ಬಜೆಟ್‌ನಲ್ಲಿ ಅಷ್ಟೊಂದು ಹಣ ಇಟ್ಟಿಲ್ಲ. ಇದನ್ನು ಗಮನಿದರೆ ಸರ್ಕಾರ ಬರೀ ಸುಳ್ಳು ಹೇಳಿ ದಲಿತರು, ಹಿಂದುಳಿದ ಹಾಗೂ ಬಡ ಜನರಿಗೆ ಅನ್ಯಾಯ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ದೂರಿದರು.

ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ನೀಡಿದರೂ ಸಾಧನೆ ಮಾತ್ರ ಶೂನ್ಯ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಉದ್ಯೋಗ, ಹೊಸ ದಿಕ್ಕು ನೀಡಲು ಕೇಂದ್ರ ಸರ್ಕಾರ ಶಿಕ್ಷಣ ನೀತಿ ತಂದಿದೆ. ಆದರೆ ರಾಜ್ಯ ಸರ್ಕಾರ ಅದನ್ನು ಅನುಷ್ಠಾನಕ್ಕೆ ತರದೆ ಒಂದು ಪಕ್ಷದ ಬಣ್ಣ ಬಳೆದು ಕೈ ಬಿಟ್ಟರು. ಶಿಕ್ಷಣ ಇಲಾಖೆ ಅಧಿಕಾರಿಗಳು ಖಾಸಗಿ ಶಾಲೆಗಳಿಗೆ ಭೇಟಿ ನೀಡುತ್ತಾರೆ ಹೊರತು, ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಪ್ರಯತ್ನ ಮಾಡುತ್ತಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸರ್ಕಾರಿ ಶಾಲೆಗಳನ್ನು ನೋಡಿಕೊಳ್ಳುವ ಅಧಿಕಾರ ಮಾತ್ರ ನೀಡಿದಾಗಲೇ ಅಭಿವೃದ್ಧಿಯಾಗಲಿದೆ. ಕಳೆದ ಆಯವ್ಯಯದಲ್ಲಿ 500 ಹೊಸ ಕೆಪಿಎಸ್‌ ಶಾಲೆ ತೆರೆಯುವ ಘೋಷಣೆ ಆಗಿತ್ತು. ಆದರೆ ಒಂದೂ ಶಾಲೆ ಆರಂಭವಾಗಿಲ್ಲ. ಈ ವರ್ಷ ಮತ್ತೆ ಘೋಷಣೆ ಮಾಡಿದ್ದಾರೆ. ಹೀಗಾಗಿ ಸರ್ಕಾರ ಬರೀ ಘೋಷಣೆ ಮಾಡುತ್ತಿದೆ ಹೊರತು ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ಟೀಕಿಸಿದರು.

ಮಲೆನಾಡು ಹಾಗೂ ಕರಾವಳಿಯಲ್ಲಿ 4.5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆ ಬೆಳೆಯುತ್ತಾರೆ. ಇದರಲ್ಲಿ ಸುಮಾರು 1 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದ ಬೆಳೆಗೆ ಎಲೆ ಚುಕ್ಕಿ ಹಾಗೂ ಹಳದಿ ರೋಗ ಬಂದಿದೆ. ಈ ರೈತರಿಗೆ ಪರಿಹಾರ ನೀಡಲು 500 ಕೋಟಿ ರೂ. ವಿಶೇಷ ಪ್ಯಾಕೇಜ್‌ ಬೇಕು. ಆದರೆ ಸರ್ಕಾರ 10 ಕೋಟಿ ರೂ. ನೀಡುವ ಮೂಲಕ ರೈತರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಗೆ 75000 ಕೋಟಿ ರೂ. ಹೆಚ್ಚುವರಿಗೆ ಅನುದಾನ ಬೇಕಿದೆ. ಆದರೆ ಕೃಷ್ಣೆಯ ಉಳಿವಿಗೆ ಯಾತ್ರೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದು ಅಲ್ಪ ಮಾತ್ರ. ಇದರಿಂದ 20 ವರ್ಷವಾದರೂ ಯೋಜನೆ ಪೂರ್ಣಗೊಳ್ಳುತ್ತಿಲ್ಲ. ಮಹಾದಾಯಿ ಹಾಗೂ ಮೇಕೆದಾಟು ಯೋಜನೆಗೆ 1000 ಕೋಟಿ ರೂ. ಅನುದಾನವನ್ನು ಹೆಸರಿಗೆ ಮೀಸಲಿಟ್ಟಿರುವ ಸರ್ಕಾರ, ಅನುಮೋದನೆಗಾಗಿ ಕಾಯುವ ಪ್ರಕ್ರಿಯೆಯಲ್ಲೇ ಕಾಲಹರಣ ಮಾಡುತ್ತಿದೆ. ಹೀಗೆ ರೈತರಿಗೆ ಅನುಕೂಲವಾಗುವಂತಹ ಯಾವುದೇ ನೀರಾವರಿ ಯೋಜನೆ ತರುವುದಿರಲಿ ಸೂಕ್ತ ಅನುದಾನ ನೀಡುವ ಕೆಲಸವೂ ಆಗಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ 77,11,374 ಇಪಿಎಫ್‌ ಖಾತೆದಾರರಿದ್ದಾರೆ. ಇದರಲ್ಲಿ ಶೇ.78 ಜನರು ಬೆಂಗಳೂರಿನವರೇ. ಇದನ್ನು ಗಮನಿಸಿದರೆ ಎಲ್ಲ ಉದ್ಯೋಗದ ಸೃಷ್ಟಿ ಬೆಂಗಳೂರು ಹಾಗೂ ಅದರ ಸುತ್ತಲಿನ ಜಿಲ್ಲೆಗಳಲ್ಲೇ ಎಂಬುದು ಸ್ಪಷ್ಟ. ಇದು ಸರ್ಕಾರ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಾಕ್ಷಿ. ಯುವ ನಿಧಿ ಯೋಜನೆಯಲ್ಲಿ ಪದವೀಧರರಿಗೆ ಹಣ ನೀಡಲು ವರ್ಷಕ್ಕೆ 2290 ಕೋಟಿ ರೂ. ಬೇಕು. ಆದರೆ ಸರ್ಕಾರ 3 ವರ್ಷದಲ್ಲಿ 910 ಕೋಟಿ ರೂ. ಮಾತ್ರ ನೀಡಿದ್ದಾರೆ. ಈ ಬಜೆಟ್‌ನಲ್ಲಿ ಹಣ ನೀಡಿಲ್ಲ. ಸರ್ಕಾರ ಯುವಕರಿಗೆ ಉದ್ಯೋಗವನ್ನೂ ನೀಡುತ್ತಿಲ್ಲ. ತಿಂಗಳ ಹಣವನ್ನೂ ನೀಡದೆ ಅವರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಜಿಬಿಎ ವೆಬ್‍ಸೈಟ್‍ ಸರಿಪಡಿಸಲು ಮುಖ್ಯ ಆಯುಕ್ತರಿಗೆ ಬಿಜೆಪಿ ಮನವಿ

ರಾಜ್ಯದ ಕೈಗಾರಿಕಾ ನೀತಿ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಗಳಿಂದ ಈಗಾಗಲೇ 629 ಕಂಪೆನಿಗಳು ರಾಜ್ಯ ಬಿಟ್ಟು ಬೇರೆ ರಾಜ್ಯಗಳಿಗೆ ಸ್ಥಳಾಂತರಗೊಂಡಿವೆ. ಸರ್ಕಾರ ನೀಡಿದ ಭರವಸೆಯಂತೆ ಉದ್ಯೋಗ ಸೃಷ್ಟಿಸಿಲ್ಲ. ಸರ್ಕಾರ ಈವರೆಗೆ 2157 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿದೆ. ಅದೂ ಹಿಂದಿನ ಸರ್ಕಾರದಲ್ಲಿ ನೋಟಿಫಿಕೇಷನ್‌ ಮಾಡಿದ್ದು. ಹೀಗಾಗಿ ಸರ್ಕಾರ ಕೆಲ ದಿನಗಳ ಹಿಂದೆ ಹೇಳಿದಂತೆ 56000 ಹುದ್ದೆಗಳನ್ನು ನಿಗದಿತ ಅವಧಿಯಲ್ಲಿ ಭರ್ತಿ ಮಾಡಲಿ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಹಾಗೂ ಹು-ಧಾ ಪಶ್ಚಿಮ ವಿಧಾನಸಭೆ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ತಿಳಿಸಿದರು.