ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ಪೀಕರ್ ಸಭಾತ್ಯಾಗ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ 'ಕೈ' ಗನ್ನಡಿ: ಜೋಶಿ ಕಿಡಿ

Pralhad Joshi: ಸದನದಲ್ಲಿ ಶಾಸಕರ ಪ್ರಶ್ನೆಗಳಿಗೆ ಸಚಿವರು ಸಮರ್ಪಕ ಉತ್ತರ ನೀಡದ ಹಾಗೂ ಕೆಲ ಸಚಿವರು ಗೈರು ಇರುವುದನ್ನು ಕಂಡು ಸ್ಪೀಕರ್ ಯು.ಟಿ. ಖಾದರ್ ಅವರು 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆದುರೇ ಸಭಾತ್ಯಾಗ ಮಾಡಿರುವುದು ಈ ಸರ್ಕಾರದ ಅಧೋಗತಿಗೆ ಹಿಡಿದ ಕೈಗನ್ನಡಿ' ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಟೀಕಿಸಿದ್ದಾರೆ.

ಸ್ಪೀಕರ್ ಸಭಾತ್ಯಾಗ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ 'ಕೈ' ಗನ್ನಡಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (ಸಂಗ್ರಹ ಚಿತ್ರ) -

Profile
Siddalinga Swamy Mar 17, 2026 10:19 PM

ನವದೆಹಲಿ, ಮಾ.17: ರಾಜ್ಯ ಕಾಂಗ್ರೆಸ್ ಸರ್ಕಾರ ಆಗಾಗ ತನ್ನ ಆಡಳಿತ ವೈಫಲ್ಯವನ್ನು ಪ್ರದರ್ಶಿಸುತ್ತಲೇ ಇದ್ದು, ಇದೀಗ ಖುದ್ದು ವಿಧಾನಸಭೆ ಸ್ಪೀಕರ್ ಅವರೇ ಸಿಟ್ಟಿಗೆದ್ದು ಸದನದಿಂದ ಹೊರ ನಡೆದು ಆಡಳಿತದ ಅಸಮರ್ಥತೆಯನ್ನು ಮತ್ತೊಮ್ಮೆ ತೆರೆದಿಟ್ಟಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಟೀಕಿಸಿದ್ದಾರೆ. ಸದನದಲ್ಲಿ ಶಾಸಕರ ಪ್ರಶ್ನೆಗಳಿಗೆ ಸಚಿವರು ಸಮರ್ಪಕ ಉತ್ತರ ನೀಡದ ಹಾಗೂ ಕೆಲ ಸಚಿವರು ಗೈರು ಇರುವುದನ್ನು ಕಂಡು ಸ್ಪೀಕರ್ ಯು.ಟಿ. ಖಾದರ್ ಅವರು 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆದುರೇ ಸಭಾತ್ಯಾಗ ಮಾಡಿರುವುದು ಈ ಸರ್ಕಾರದ ಅಧೋಗತಿಗೆ ಹಿಡಿದ ಕೈಗನ್ನಡಿ' ಎಂದು ಅವರು ಹೇಳಿದ್ದಾರೆ.

ಸದನದಲ್ಲಿ ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ಅನೇಕ ಸಚಿವರು ವಿಫಲರಾಗಿದ್ದಾರೆ ಎಂದರೆ ರಾಜ್ಯ ಸರ್ಕಾರದ ಕಾರ್ಯ ವೈಖರಿ ನಿಜಕ್ಕೂ ಶೋಚನೀಯ. ಸಿಎಂಗೆ ಸಚಿವರು ಮತ್ತು ಆಡಳಿತದ ಮೇಲೆ ಹಿಡಿತವೇ ಇಲ್ಲ ಎನ್ನಬೇಕಾಗುತ್ತದೆ ಎಂದಿದ್ದಾರೆ ಜೋಶಿ.

ಸರ್ಕಾರ ನಡೆಸುವಲ್ಲಿ ನಿರಾಸಕ್ತಿಯೇ?

ರಾಜ್ಯದ ಸಚಿವರುಗಳು ಬಜೆಟ್ ಕಲಾಪದಲ್ಲೂ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಲಾರದ ಸ್ಥಿತಿ ತಲುಪಿದ್ದಾರೆ. ಅಲ್ಲದೆ, ಸಕಾಲಕ್ಕೆ ಆಧಿವೇಶನಕ್ಕೆ ಹಾಜರಾಗುವುದೂ ಇಲ್ಲ ಎಂದರೆ ಇವರಿಗೆ ಆಡಳಿತದ ಮೇಲೆ ಆಸಕ್ತಿಯೇ ಇಲ್ಲ. ಬಹುಶಃ ಸರ್ಕಾರ ನಡೆಸುವುದರ ಬಗೆಗೆ ನಿರಾಸಕ್ತಿ ಇದ್ದಂತಿದೆ ಎಂದು ಪ್ರಲ್ಹಾದ್‌ ಜೋಶಿ ಚಾಟಿ ಬೀಸಿದ್ದಾರೆ.

ಪ್ರಸ್ತುತದಲ್ಲಿ ಕೆಲ ಸಚಿವರು, ಶಾಸಕರುಗಳು 'ಸಿಎಂ ಬದಲಾವಣೆ" ವಿಚಾರದಲ್ಲಿಯೇ ಹೆಚ್ಚು ಸಕ್ರಿಯರಾದಂತೆ ಕಾಣುತ್ತದೆ. ಇವರಿಗೆ ರಾಜ್ಯದ ಜನರ ಹಿತ, ರಾಜ್ಯದ ಅಭಿವೃದ್ಧಿಗಿಂತ ಗುಂಪುಗಾರಿಕೆ, ದೆಹಲಿ ಮತ್ತು ಫಾರೆನ್ ಪ್ರವಾಸವೇ ಪ್ರಮುಖವಾದಂತಿದೆ. ಎಲ್ಲಿ ಬೇಕಲ್ಲಿ ಪ್ರವಾಸಕ್ಕೆ ಸಮಯವಿರುವ ಮಂತ್ರಿಗಳಿಗೆ ಸದನಕ್ಕೆ ಬರಲು ಸಮಯ ಇಲ್ಲವೇ? ಜೋಶಿ ಪ್ರಶ್ನಿಸಿದ್ದಾರೆ.

ʼಮಂತ್ರಿಗಳು ಸದನಕ್ಕೆ ಬರದಿರುವ ಬಗ್ಗೆ ಅದಾಗಲೆ ನಾಲ್ಕು ಭಾರಿ ಸೂಚನೆ ನೀಡಿದ್ದೇನೆ. ಇದು 5ನೇ ಬಾರಿ! ಕೊನೆಗೂ ಸುಧಾರಣೆ ಕಾಣಲೇ ಇಲ್ಲ' ಎನ್ನುವ ಮೂಲಕ ಖುದ್ದು ಸ್ಪೀಕರ್ ಅವರೇ ರಾಜ್ಯ ಸಚಿವರುಗಳ ಅಸಮರ್ಪಕ ಕಾರ್ಯ ವೈಖರಿ ಮತ್ತು ಎರಡೂವರೆ ವರ್ಷ ರಾಜ್ಯ ಕಾಂಗ್ರೆಸ್ ಸರ್ಕಾರದ ಅಸಮರ್ಥ ಆಡಳಿತವನ್ನು ಮನಗಂಡು 'ಫೇಲ್ ' ಮಾರ್ಕ್ಸ್ ನೀಡಿದ್ದಾರೆ' ಎಂದು ಪ್ರಲ್ಹಾದ್‌ ಜೋಶಿ ಟೀಕಿಸಿದ್ದಾರೆ.

ಸಭಾಧ್ಯಕ್ಷರು ಸದನದಿಂದ ಹೊರನಡೆದಿರುವುದು ವಿಧಾನಸಭೆ ಇತಿಹಾಸದಲ್ಲೇ ಕರಾಳ ಅಧ್ಯಾಯ: ವಿಜಯೇಂದ್ರ

ಅಧಿಕಾರಿಗಳ ತಲೆದಂಡ ಅಭ್ಯಾಸ ಆಗಿಬಿಟ್ಟಿದೆ

ಇನ್ನು, ಈ ಸರ್ಕಾರಕ್ಕೆ ಸಚಿವರುಗಳ ತಪ್ಪಿಗೆ ಹಿರಿಯ ಅಧಿಕಾರಿಗಳ ತಲೆದಂಡ ಕೊಡುವುದು ಅಭ್ಯಾಸವಾಗಿಬಿಟ್ಟಿದೆ. ಮಂತ್ರಿಗಳ ವಿರುದ್ಧ ಸ್ಪೀಕರ್ ಗುಡುಗಿದ್ದಕ್ಕೆ ಈಗಲೂ ಹಿರಿಯ ಐಎಎಸ್ ಅಧಿಕಾರಿಗಳ ಸಸ್ಪೆಂಡ್ ಮತ್ತು ಕೆಲವರಿಗೆ ಶೋಕಾಸ್ ನೋಟಿಸ್ ಕೊಟ್ಟಿರುವುದು ಸರ್ಕಾರದ ದುರಾಡಳಿತವನ್ನು ಪ್ರದರ್ಶಿಸುತ್ತದೆ. ಅಲ್ಲದೇ, ಸಿಎಂ-ಡಿಸಿಎಂ "ಮುಖ್ಯಮಂತ್ರಿ" ಕುರ್ಚಿ ಕದನದಲ್ಲಿ ಆಡಳಿತದ ಮೇಲೆ ಹಿಡಿತ ಕಳೆದುಕೊಂಡಿರುವುದಕ್ಕೆ 'ಸ್ಪೀಕರ್ ಸಭಾತ್ಯಾಗ' ಸಾಕ್ಷಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.