ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karur Stampede: ಕರೂರ್ ಕಾಲ್ತುಳಿತ ಪ್ರಕರಣ: ತಮಿಳಗ ವೆಟ್ರಿ ಕಳಗಂನಿಂದ ನಾಳೆ ಸಂತಾಪ ಸಭೆ

ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕರೂರಿನಲ್ಲಿ ಸೆಪ್ಟೆಂಬರ್ 27ರಂದು ನಟ, ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಅವರ ರ‍್ಯಾಲಿ ವೇಳೆ ಉಂಟಾದ ಕಾಲ್ತುಳಿತದಲ್ಲಿ 41 ಮಂದಿ ಸಾವನ್ನಪ್ಪಿದ ಬಳಿಕ ಇದೀಗ ಪಕ್ಷದಿಂದ ಭಾನುವಾರ ಸಂತಾಪ ಸೂಚಿಸುವ ಸಭೆ ನಡೆಯಲಿದೆ.

ಚೆನ್ನೈ: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕರೂರಿನಲ್ಲಿ ಸೆಪ್ಟೆಂಬರ್ 27ರಂದು ನಟ ವಿಜಯ್ (Actor Vijay) ಅವರ ನೇತೃತ್ವದ ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷವು ಆಯೋಜಿಸಿದ್ದ ರ‍್ಯಾಲಿಯ ವೇಳೆ ಉಂಟಾದ ಕಾಲ್ತುಳಿತದಿಂದ (Karur Stampede) 41 ಮಂದಿ ಸಾವನ್ನಪ್ಪಿದ್ದರು. ಇದರ ಬಳಿಕ ಇದೀಗ ಭಾನುವಾರ (ಅಕ್ಟೋಬರ್‌ 12) ಸಂತಾಪ ಸೂಚಿಸುವ ಸಭೆಯನ್ನು (TVK Condolence meet) ನಡೆಸುವುದಾಗಿ ಪಕ್ಷ ಹೇಳಿದೆ. ಕರೂರ್ ಕಾಲ್ತುಳಿತದ ತನಿಖೆಗೆ ಸಂಬಂಧಿಸಿ ತಮಿಳಗ ವೆಟ್ರಿ ಕಳಗಂ ಪಕ್ಷವು ಇಬ್ಬರು ಮೃತರ ಕುಟುಂಬಗಳ ಅರ್ಜಿಗಳನ್ನು ಸೇರಿಸಿ ಇತರ ಪಕ್ಷಗಳು ಸಲ್ಲಿಸಿರುವ ಅರ್ಜಿಗಳನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.

ಕರೂರ್ ಕಾಲ್ತುಳಿತ ಪ್ರಕರಣದ ತನಿಖೆಗೆ ಸಂಬಂಧಿಸಿ ಅನುಮಾನ ವ್ಯಕ್ತವಾದ ಬಳಿಕ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆಗೆ ಆದೇಶಿಸಿರುವ ಮದ್ರಾಸ್ ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿರುವ ಟಿವಿಕೆ ತನ್ನ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ಮೂಲಕ ಅರ್ಜಿ ಸಲ್ಲಿಸಿದೆ.

ಈ ಕುರಿತು ಶುಕ್ರವಾರ ಮಾತನಾಡಿದ ಆಧವ್ ಅರ್ಜುನ, ಪಕ್ಷದ ಮೇಲೆ ಹಲವು ಆರೋಪಗಳನ್ನು ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಅನಂತರ ಸತ್ಯ ಹೊರಬರಲಿದೆ. ಶೋಕಾಚರಣೆಯ ಸಮಯದಲ್ಲಿ ಪಕ್ಷ ಗುರಿಯನ್ನು ಅಡ್ಡಿಪಡಿಸಲು ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ. ಪಕ್ಷವು ಕಾನೂನು ಮಾರ್ಗಗಳ ಮೂಲಕ ನ್ಯಾಯವನ್ನು ಪಡೆಯುತ್ತದೆ ಎಂದು ತಿಳಿಸಿದ್ದಾರೆ.

ಸಾಮಾನ್ಯ ನಾಗರಿಕರಾಗಿ ನಾವು ಸುಪ್ರೀಂ ಕೋರ್ಟ್‌ನ ತೀರ್ಪಿಗಾಗಿ ಕಾಯುತ್ತಿದ್ದೇವೆ. ಜಿಲ್ಲಾ ಕಾರ್ಯದರ್ಶಿಗಳನ್ನು ಬಂಧಿಸಲಾಗುತ್ತಿದೆ. ಅವರಿಗೆ ನ್ಯಾಯ ಒದಗಿಸಲು ನಾವು ಕಾನೂನನ್ನು ಬಳಸುತ್ತೇವೆ. 16 ದಿನಗಳ ಶೋಕಾಚರಣೆಯ ಆಚರಣೆಗಳು ಪೂರ್ಣಗೊಂಡ ಅನಂತರ ನಾವು ಸತ್ಯವನ್ನು ಬಹಿರಂಗಪಡಿಸುತ್ತೇವೆ ಎಂದು ಹೇಳಿದರು.

ಕರೂರು ಕಾಲ್ತುಳಿತದ ತನಿಖೆಗೆ ಸಂಬಂಧಿಸ ಸಲ್ಲಿಸಿರುವ ಅರ್ಜಿಗಳ ಮೇಲಿನ ಆದೇಶವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎನ್ವಿ ಅಂಜಾರಿಯಾ ಅವರನ್ನೊಳಗೊಂಡ ಪೀಠವು ಕಾಯ್ದಿರಿಸಿದೆ. ಯಾಕೆಂದರೆ ಇದಕ್ಕೂ ಮೊದಲು ಸಂತ್ರಸ್ತರ ಪರವಾಗಿ ಸಲ್ಲಿಸಲಾದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಪ್ರತಿ ಅಫಿಡವಿಟ್ ಸಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ.

ಕರೂರ್ ಕಾಲ್ತುಳಿತದ ಬಗ್ಗೆ ನಿವೃತ್ತ ಉನ್ನತ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಕೋರಿ ತಮಿಳಗ ವೆಟ್ರಿ ಕಳಗಂ ತನ್ನ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ಮೂಲಕ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸಿತು.

ಇದನ್ನೂ ಓದಿ: Sabarimala temple: ಶಬರಿಮಲೆ ದೇವಸ್ಥಾನ ಚಿನ್ನ ಕಳವು ವಿವಾದ- ವಿಜಯ್ ಮಲ್ಯ ಹೆಸರು ಕೇಳಿ ಬಂದಿದ್ದು ಏಕೆ?

ಕಾಲ್ತುಳಿತದ ತನಿಖೆಗಾಗಿ ಪೊಲೀಸ್ ಜನರಲ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಮದ್ರಾಸ್ ಹೈಕೋರ್ಟ್ ಅಕ್ಟೋಬರ್ 3ರಂದು ನೀಡಿದ ಆದೇಶವನ್ನು ವಿಜಯ್ ಪರ ವಕೀಲರು ಪ್ರಶ್ನಿಸಿದ್ದರು.

ವಿದ್ಯಾ ಇರ್ವತ್ತೂರು

View all posts by this author