ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MB Patil: ಕಿರ್ಲೋಸ್ಕರ್‌ನಿಂದ ರಾಜ್ಯದಲ್ಲಿ 3,000 ಕೋಟಿ ರೂ. ಹೂಡಿಕೆ: ಎಂ.ಬಿ. ಪಾಟೀಲ್‌

Kirloskar Ferrous: ಕಿರ್ಲೋಸ್ಕರ್ ಫೆರೋಸ್ ಈಗಾಗಲೇ ಹಿರಿಯೂರಿನಲ್ಲಿ ತನ್ನ ಘಟಕ ಹೊಂದಿದ್ದು, ಅದನ್ನು ಮೇಲ್ದರ್ಜೆಗೇರಿಸಲು ಮುಂದಾಗಿದೆ. ಇಲ್ಲಿ ಸ್ಪಾಂಜ್ ಪೈಪ್ ಉತ್ಪಾದನೆ ಆರಂಭಿಸಲಿದೆ. ಜತೆಗೆ ತನ್ನ ಉಕ್ಕು ಉತ್ಪಾದನೆ ಘಟಕದ ಸಾಮರ್ಥ್ಯ ಹೆಚ್ಚಳ, ಕಬ್ಬಿಣದ ಅದಿರು ಸಂಸ್ಕರಣೆ ಹೆಚ್ಚಳ, ಫೌಂಡ್ರಿ ಘಟಕದ ಅಭಿವೃದ್ಧಿ ಮುಂತಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಪುಣೆ‌, ನ.4: ಕಿರ್ಲೋಸ್ಕರ್ ಫೆರೋಸ್ ಇಂಡಸ್ಟ್ರೀಸ್ ಕರ್ನಾಟಕದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 3,000 ಕೋಟಿ ರೂ. ಬಂಡವಾಳ ಹೂಡಲಿದೆ. ಇದರ ಜತೆಗೆ ವಿಪ್ರೋ ಪ್ಯಾರಿ, ಅಟ್ಲಾಸ್ ಕಾಪ್ಕೋ, ಬೆಲ್-ರೈಸ್ ಇಂಡಸ್ಟ್ರೀಸ್, ಫಿನೋಲೆಕ್ಸ್ ಮತ್ತು ಫ್ಲೂಯಿಡ್ ಕಂಟ್ರೋಲ್ಸ್ ಲಿಮಿಟೆಡ್ ಉದ್ಯಮಗಳು ರಾಜ್ಯದಲ್ಲಿ ಹೂಡಿಕೆಗೆ (Invest Karnataka) ಆಸಕ್ತಿ ತೋರಿಸಿವೆ. ಬಂಡವಾಳ ತೊಡಗಿಸಲು ಮುಂದಾಗಿರುವ ಈ ಕಂಪನಿಗಳಿಗೆ ಭೂಮಿ, ಮೂಲಸೌಕರ್ಯ ಮುಂತಾದ ಅನುಕೂಲಗಳ ಜತೆಗೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ (MB Patil) ಹೇಳಿದ್ದಾರೆ. ರಾಜ್ಯದ ಕೈಗಾರಿಕೆ ಮತ್ತು ವಾಣಿಜ್ಯ ಉನ್ನತ ಮಟ್ಟದ ನಿಯೋಗದೊಂದಿಗೆ ಮಂಗಳವಾರ ಇಲ್ಲಿ ರೋಡ್ ಶೋ ನಡೆಸಿದ ಅವರು, ಹೂಡಿಕೆ ಕುರಿತು ಹತ್ತಕ್ಕೂ ಹೆಚ್ಚು ಗಣ್ಯ ಉದ್ಯಮಿಗಳನ್ನು ಭೇಟಿಯಾಗಿ, ಮಾತುಕತೆ ನಡೆಸಿದರು.

ಬಳಿಕ ಮಾತನಾಡಿದ ಸಚಿವರು, `ಕಿರ್ಲೋಸ್ಕರ್ ಫೆರೋಸ್ ಈಗಾಗಲೇ ಹಿರಿಯೂರಿನಲ್ಲಿ ತನ್ನ ಘಟಕ ಹೊಂದಿದ್ದು, ಅದನ್ನು ಮೇಲ್ದರ್ಜೆಗೇರಿಸಲು ಮುಂದಾಗಿದ್ದು, ಇಲ್ಲಿ ಸ್ಪಾಂಜ್ ಪೈಪ್ ಉತ್ಪಾದನೆ ಆರಂಭಿಸಲಿದೆ. ಜತೆಗೆ ತನ್ನ ಉಕ್ಕು ಉತ್ಪಾದನೆ ಘಟಕದ ಸಾಮರ್ಥ್ಯ ಹೆಚ್ಚಳ, ಕಬ್ಬಿಣದ ಅದಿರು ಸಂಸ್ಕರಣೆ ಹೆಚ್ಚಳ, ಫೌಂಡ್ರಿ ಘಟಕದ ಅಭಿವೃದ್ಧಿ ಮುಂತಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ’ ಎಂದಿದ್ದಾರೆ.

ಈ ಕಂಪನಿಯ ಉದ್ಯೋಗಿಗಳಲ್ಲಿ ಶೇಕಡ 99ರಷ್ಟು ಕನ್ನಡಿಗರೇ ಇದ್ದಾರೆ. ಇದರಿಂದ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ ಮತ್ತು ಎಲ್ಲರನ್ನೂ ಒಳಗೊಂಡ ಪ್ರಗತಿ ಸಾಧ್ಯವಾಗಲಿದೆ. ಕಿರ್ಲೋಸ್ಕರ್ ಕಂಪನಿಯು 20 ವರ್ಷಗಳಿಂದಲೂ ತನ್ನ ಆದಾಯದಲ್ಲಿ ಶೇಕಡ 2ರಷ್ಟು ಲಾಭಾಂಶವನ್ನು ಸಿಎಸ್ಆರ್ ನಿಧಿಗೆ ಕೊಡುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿ ಇದೆ ಎಂದು ಅವರು ತಿಳಿಸಿದ್ದಾರೆ.

ವಿಪ್ರೋ ಪ್ಯಾರಿ ಕಂಪನಿಯು ರಾಜ್ಯದಲ್ಲಿ ಎಲೆಕ್ಟ್ರಾನಿಕ್ಸ್ ಕಾಪರ್ ಲ್ಯಾಮಿನೇಟ್ ಉತ್ಪಾದನಾ ಘಟಕವನ್ನು ಆರಂಭಿಸಿದೆ. ದೊಡ್ಡಬಳ್ಳಾಪುರದ ಸಮೀಪ ಇರುವ ಆದಿನಾರಾಯಣ ಹೊಸಹಳ್ಳಿಯಲ್ಲಿರುವ ಕೆಐಎಡಿಬಿ ನಿವೇಶನದಲ್ಲಿ ಎರಡು ದಿನಗಳ ಹಿಂದೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇಲ್ಲಿ ಕಂಪನಿಯು ಸ್ಮಾರ್ಟ್ ರೋಬೋಟಿಕ್ಸ್ ಪ್ರಯೋಗಾಲಯ ಸ್ಥಾಪಿಸಲಿದೆ ಎಂದು ವಿವರಿಸಿದ್ದಾರೆ.

ಸುಸ್ಥಿರ ಮಾದರಿಯ ಕೈಗಾರಿಕಾ ಉತ್ಪಾದನೆಗೆ ಹೆಸರಾಗಿರುವ, ಸ್ವೀಡನ್ ಮೂಲದ ಅಟ್ಲಾಸ್ ಕಾಪ್ಕೋ, ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಚ್.ಎಚ್.ವಿ. ಪಂಪ್ಸ್ ಕಂಪನಿಯನ್ನು 2021ರಲ್ಲೇ ಸ್ವಾಧೀನ ಪಡಿಸಿಕೊಂಡಿದೆ. ಈಗ ಕಂಪನಿಯು ರಾಜ್ಯದಲ್ಲಿ ತನ್ನ ಉತ್ಪಾದನಾ ಚಟುವಟಿಕೆಯನ್ನು ವಿಸ್ತರಿಸಿಕೊಳ್ಳಲು ಬಯಸಿದೆ. ಹೀಗಾಗಿ ಕಂಪನಿಯ ಉನ್ನತಾಧಿಕಾರಿಗಳಿಗೆ ರಾಜ್ಯದ ಕೈಗಾರಿಕಾ ಕಾರ್ಯಪರಿಸರ, ನೀತಿ ನಿಯಮಗಳನ್ನು ಮನದಟ್ಟು ಮಾಡಿಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.

ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೆಸರು ಮಾಡಿರುವ ಬೆಲ್-ರೈಸ್ ಇಂಡಸ್ಟ್ರೀಸ್, ಈಗಾಗಲೇ ಕೋಲಾರದ ನರಸಾಪುರ ಮತ್ತು ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶಗಳಲ್ಲಿ ಘಟಕಗಳನ್ನು ಹೊಂದಿದೆ. ಇತ್ತೀಚೆಗೆ ಇದು ಎಚ್-ಒನ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ರಾಜ್ಯದಲ್ಲಿ ತನ್ನ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸಿಕೊಳ್ಳಲು ತೀರ್ಮಾನಿಸಿದ್ದು ಮೈಸೂರಿನಲ್ಲಿ 25 ಎಕರೆ ಭೂಮಿ ಕೇಳಿದೆ. ಇದನ್ನು ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಫಿನೋಲೆಕ್ಸ್ ಕಂಪನಿಯು ಪಿವಿಸಿ ಪೈಪ್, ಬಿಡಿಭಾಗಗಳ ಉತ್ಪಾದನೆಗೆ ಹೆಸರಾಗಿದೆ. ಇದು ರಾಜ್ಯದಲ್ಲಿ ತನ್ನದೊಂದು ಘಟಕ ಸ್ಥಾಪಿಸಬೇಕು ಎನ್ನುವುದು ರಾಜ್ಯ ಸರ್ಕಾರದ ನಿರೀಕ್ಷೆಯಾಗಿದೆ. ಹಾಗೆಯೇ, ಫ್ಲೂಯಿಡ್ ಕಂಟ್ರೋಲ್ಸ್ ಲಿಮಿಟೆಡ್ 90 ಕೋಟಿ ರೂ. ಹೂಡಿಕೆಗೆ ಮುಂದಾಗಿದ್ದು, 5 ಎಕರೆ ಭೂಮಿ ಬೇಕೆಂದು ಕೇಳಿದೆ. ಇದನ್ನು ಕ್ಷಿಪ್ರವಾಗಿ ಈಡೇರಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ವಿವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | MB Patil: ಕೇನ್ಸ್ ಟೆಕ್ನಾಲಜೀಸ್ ವಿಸ್ತರಣೆಗೆ ಚಾಮರಾಜನಗರದಲ್ಲಿ 20 ಎಕರೆ ಭೂಮಿ: ಎಂ.ಬಿ. ಪಾಟೀಲ್‌

ಸಚಿವರು ವಿಪ್ರೋ ಪ್ಯಾರಿ ಕಂಪನಿಯ ಸಿಇಒ ವಿಪುಲ್ ಟಂಡನ್, ಸಿಎಫ್ಒ ಶ್ರೀಪಾದ್ ರಾಮನಾಥನ್, ಬೆಲ್-ರೈಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬಾಡ್ವೆ, ಫ್ಲೂಯಿಡ್ ಕಂಟ್ರೋಲ್ಸ್ ಲಿ.ನ ಸಿಇಒ ಡಾ.ತಾನಸೇನ್ ಚೌಧರಿ, ಫಿನೋಲೆಕ್ಸ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಉದೀಪ್ತ್ ಅಗರವಾಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಸರ್ಕಾರದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಹಾಗೂ ಇತರರು ಇದ್ದರು.